80 ಲಕ್ಷ ದಾಟಿದ ವಾಹನಗಳ ಸಂಖ್ಯೆ

ಬುಧವಾರ, ಏಪ್ರಿಲ್ 24, 2019
32 °C

80 ಲಕ್ಷ ದಾಟಿದ ವಾಹನಗಳ ಸಂಖ್ಯೆ

Published:
Updated:

ಬೆಂಗಳೂರು: ನಗರದಲ್ಲಿ ಏರುತ್ತಿರುವ ವಾಹನಗಳ ಸಂಖ್ಯೆಯು ಪರಿಸರ ತಜ್ಞರು ಮತ್ತು  ಸ್ಥಳೀಯ ವಾಸಿಗಳ ದುಗುಡವನ್ನು ಇನ್ನಷ್ಟು ಹೆಚ್ಚಿಸಿದೆ. ಕಳೆದ ಒಂದು ವರ್ಷದಲ್ಲಿ 6 ಲಕ್ಷ ಹೊಸ ವಾಹನಗಳು ರಸ್ತೆಗಿಳಿಯುವುದರೊಂದಿಗೆ ವಾಹನಗಳ ಸಂಖ್ಯೆ 80 ಲಕ್ಷ ದಾಟಿದೆ.

ಕಳೆದ ವರ್ಷ ನಗರದಲ್ಲಿ 74.06 ಲಕ್ಷ ವಾಹನಗಳಿದ್ದವು. ಅಲ್ಲದೆ, ರಾಜ್ಯದ ವಾಹನಗಳ ಸಂಖ್ಯೆ 2.10 ಕೋಟಿಗೆ ಏರಿದೆ ಎಂದು ಸಾರಿಗೆ ಆಯುಕ್ತ ವಿ.ಪಿ. ಇಕ್ಕೇರಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ತಿಳಿಸಿದರು.

ನಗರದಲ್ಲಿ ವಾಹನಗಳ ಸಂಖ್ಯೆ ಪ್ರತಿ ವರ್ಷ ಇದೇ ಪ್ರಮಾಣದಲ್ಲಿ ಏರಿಕೆಯಾದರೆ ಮುಂದಿನ ಮೂರು ವರ್ಷಗಳಲ್ಲಿ 1 ಕೋಟಿಗೆ ಏರಲಿದೆ. ವಾಹನಗಳ ಹೆಚ್ಚಳದಿಂದ ಸಾರಿಗೆ ಇಲಾಖೆ ರಾಜಸ್ವ ಸಂಗ್ರಹ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಿದ್ದರೂ ವಾಯು ಮಾಲಿನ್ಯದ ದೃಷ್ಟಿಯಿಂದ ಇದು ಆತಂಕಕಾರಿ ಬೆಳವಣಿಗೆ ಎಂದೇ ಪರಿಸರ ತಜ್ಞರು ಭಾವಿಸಿದ್ದಾರೆ.

ನಗರದಲ್ಲಿ ಹೆಚ್ಚುತ್ತಿರುವ ವಾಯು ಮಾಲಿನ್ಯಕ್ಕೆ ಕಟ್ಟಡ ನಿರ್ಮಾಣ ಚಟುವಟಿಕೆಗಳ ಜೊತೆಗೆ ವಾಹನಗಳು ಹೊರಬಿಡುವ ಹೊಗೆಯೂ ಕಾರಣವಾಗಿದೆ.

ವಾಹನಗಳ ಸಂಖ್ಯೆ ನಿಯಂತ್ರಿಸುವ ಉದ್ದೇಶದಿಂದ ಹೊಸ ವಾಹನಗಳ ನೋಂದಣಿಯನ್ನು ರದ್ದು ಮಾಡಲು ಸಾಧ್ಯವಿಲ್ಲ. ಬದಲಾಗಿ ಎಲೆಕ್ಟ್ರಿಕ್‌ ವಾಹನಗಳನ್ನು ಪ್ರೋತ್ಸಾಹಿಸಲು ಸಾರಿಗೆ ಇಲಾಖೆ ಪ್ರಯತ್ನಿಸುತ್ತಿದೆ ಎಂದು ಇಕ್ಕೇರಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದರು.

ವಾಹನಗಳ ದಟ್ಟಣೆ ಹಾಗೂ ಅವು ಹೊರಬಿಡುವ ಹೊಗೆ ಶೇ 60ರಷ್ಟು ವಾಯು ಮಾಲಿನ್ಯಕ್ಕೆ ಕಾರಣವಾಗಿದೆ. ಈ ಹೊಗೆಯು ಮನುಷ್ಯನ ಶ್ವಾಸಕೋಶಕ್ಕೆ ತೀವ್ರ ಹಾನಿ ಉಂಟುಮಾಡುತ್ತಿದೆ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹೇಳಿತ್ತು.

‘ಜಗತ್ತಿನಲ್ಲಿ ಸುಮಾರು 70 ಲಕ್ಷ ಜನ ಮಾಲಿನ್ಯದಿಂದ ಸಾಯುತ್ತಿದ್ದಾರೆ. ಇವರಲ್ಲಿ ಶೇ 20ರಷ್ಟು ಭಾರತಿಯರು. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸರ್ಕಾರ ವಾಯು ಮಾಲಿನ್ಯ ನಿಯಂತ್ರಿಸಲು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದು ಪರಿಸರ ತಜ್ಞ ಲಿಯೊ ಸಲ್ಡಾನಾ ಅಭಿಪ್ರಾಯಪಟ್ಟಿದ್ದಾರೆ.

‘ನಗರದಲ್ಲಿ ಓಡಾಡುತ್ತಿರುವ 6000 ಬಿಎಂಟಿಸಿ ಬಸ್ಸುಗಳು ಸಂಚರಿಸುತ್ತಿವೆ. ಇದು ಒಟ್ಟು ವಾಹನ ಸಂಖ್ಯೆಯಲ್ಲಿ ಶೇ ಒಂದು ಭಾಗ ಮಾತ್ರ. ಉಳಿದವು ಖಾಸಗಿ ವಾಹನಗಳು. ಇವುಗಳಲ್ಲಿ ಶೇ 90ರಷ್ಟು ಕಾರುಗಳು. ಖಾಸಗಿ ವಾಹನಗಳ ಸಂಖ್ಯೆ ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಮುಂದುವರಿದ ರಾಷ್ಟ್ರಗಳಲ್ಲಿ ಈಗಾಗಲೇ ದಟ್ಟಣೆ ತೆರಿಗೆ, ನೋಂದಣಿ ಶುಲ್ಕ ಮತ್ತು ನಿಲುಗಡೆ ಶುಲ್ಕ ಹೆಚ್ಚಿಸುವ ಮೂಲಕ ವಾಹನಗಳನ್ನು ನಿಯಂತ್ರಿಸಲಾಗುತ್ತಿದೆ. ನಾವು ಅದನ್ನು ಅನುಸರಿಸಬೇಕು. ಜನಪ್ರತಿನಿಧಿಗಳು ಸಾಲುಸಾಲು ವಾಹನಗಳ ನಡುವೆ ಪ್ರಯಾಣಿಸುತ್ತಿದ್ದಾರೆ. ಇದನ್ನು ಬಿಟ್ಟು ಮೆಟ್ಟೋದಲ್ಲಿ ಪ್ರಯಾಣಿಸಬೇಕು’ ಎಂದು ಸಲ್ಡಾನ ಕಿವಿಮಾತು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !