ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೂಳು ತುಂಬಿ ಬಯಲು ಶೌಚಾಲಯವಾದ ವಿಭೂತಿಪುರ ಕೆರೆ

ಒತ್ತುವರಿಯಿಂದ ಕುಗ್ಗಿದ ಗಾತ್ರ
Last Updated 8 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ಬೆಂಗಳೂರು: ಒಂದೂವರೆ ದಶಕದ ಹಿಂದಿನವರೆಗೂ ಸುತ್ತಲಿನ ಭತ್ತದ ಗದ್ದೆಗಳಿಗೆ ನೀರುಣಿಸಿ, ಅನ್ನದಾನಿ ಎನಿಸಿಕೊಂಡಿದ್ದ ವಿಭೂತಿಪುರ ಕೆರೆ ಇಂದು ಬಯಲು ಶೌಚಾಲಯವಾಗಿದೆ.

ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದಲ್ಲಿ ಇರುವ ಈ ಕೆರೆಯ ಒಡಲಲ್ಲಿ ಹೂಳು ತುಂಬಿದೆ. ಗೃಹೋತ್ಪತ್ತಿ ಕಸ, ಕಟ್ಟಡ ನಿರ್ಮಾಣ ತ್ಯಾಜ್ಯವನ್ನು ಕೆರೆಯ ಅಂಚಿನ ಅಲ್ಲಲ್ಲಿ ಸುರಿಯಲಾಗಿದೆ. ಕೆರೆಯ ಸುತ್ತಲಿನ ನಿವಾಸಿಗಳು ನಿತ್ಯದ ಶೌಚಕ್ಕಾಗಿ ಕೆರೆಯಂಗಳವನ್ನೆ ಅವಲಂಬಿಸಿದ್ದಾರೆ. ಹಾಗಾಗಿ ದುರ್ವಾಸನೆ ಹೆಚ್ಚಿದೆ.

ಎಲ್‌.ಬಿ.ಶಾಸ್ತ್ರಿ ನಗರ, ಬೃಂದಾವನ ಗಾರ್ಡನ್‌ ಬಡಾವಣೆ, ಬಿಇಎಂಎಲ್‌ ಕಡೆಯಿಂದ ಹರಿದು ಬರುವ ಕೊಳಚೆ ನೀರು ಈ ಹಿಂದೆ ಕೆರೆಗೆ ಸೇರುತ್ತಿತ್ತು. ಕೆರೆಯ ದಕ್ಷಿಣ ಭಾಗದಲ್ಲಿ ಪ್ರತ್ಯೇಕ ಒಳಚರಂಡಿ ಮಾರ್ಗ ನಿರ್ಮಿಸಿ ಆ ಕೊಳಕು ನೀರನ್ನು ಕೋರಮಂಗಲ–ಚಲ್ಲಘಟ್ಟ ಕಣಿವೆಗೆ ಹರಿಸುವ, ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಪಾಲಿಕೆ ಕೈಗೆತ್ತಿಕೊಂಡಿದೆ. ಆದರೆ, ಆ ಕೆಲಸ ತ್ವರಿತವಾಗಿ ನಡೆಯುತ್ತಿಲ್ಲ ಎಂಬುದು ಸ್ಥಳೀಯರ ಆರೋಪ.

ಕೆರೆಯ ಬಯಲಲ್ಲಿ ಜೊಂಡು ಹುಲ್ಲು, ಕಳೆ ಸಸ್ಯಗಳು ಬೆಳೆದಿವೆ. ನಿಂತಿರುವ ಕೊಳಚೆ ನೀರಿನಲ್ಲಿಯೇ ಕೊಕ್ಕರೆ ಜಾತಿಯ ಪಕ್ಷಿಗಳು ತಮ್ಮ ದಿನನಿತ್ಯದ ಆಹಾರವನ್ನು ಹುಡುಕುತ್ತಿವೆ. ಸುರಿಯುವ ಕಸದಿಂದ ಬೀದಿನಾಯಿಗಳ ಕಾಟ ಹೆಚ್ಚಿದೆ. ‘ಆದ್ದರಿಂದ ಸದ್ಯದ ಕಚ್ಚಾ ನಡಿಗೆ ಪಥ
ದಲ್ಲಿ ವಾಯುವಿಹಾರ ಮಾಡಲೂ ಹೆದುರುತ್ತಿದ್ದೇವೆ’ ಎಂದರು ಸ್ಥಳೀಯರೊಬ್ಬರು.

‘ಕೆರೆಯಲ್ಲಿ ಇಷ್ಟುದಿನ ಕೊಳಚೆನೀರು ನಿಂತಿದ್ದರಿಂದ ಅಂತರ್ಜಲವು ಮಲೀನಗೊಂಡಿದೆ. ಕೊಳವೆಬಾವಿ ನೀರನ್ನುಗೃಹ ಬಳಕೆಗೆ ಮಾತ್ರ ಉಪಯೋಗಿಸುತ್ತೇವೆ. ಕುಡಿಯಲು ಮತ್ತು ಅಡುಗೆಗೆ ಕ್ಯಾನ್‌ ನೀರನ್ನೆ ಬಳಸುತ್ತಿದ್ದೇವೆ’ ಎಂದರು ಮತ್ತೊಬ್ಬರು.

‘ಅಂದು ಬೇಕಾದಷ್ಟು ಹಾಲಿತ್ತು, ಇಂದು ನೀರೂ ಇಲ್ಲ’: 70ರ ಹೊಸ್ತಿಲಲ್ಲಿರುವ ರಾಘವಲು ಅವರನ್ನು ಮಾತನಾಡಿಸಿದಾಗ, ‘ವಿಭೂತಿಪುರಕ್ಕೆ40 ವರ್ಷಗಳ ಹಿಂದೆ ಬಂದಾಗ, ಇಲ್ಲಿ ಎತ್ತ ನೋಡಿದರತ್ತ ಭತ್ತದ ಗದ್ದೆಗಳು, ತೆಂಗು, ಸೇಪೆಕಾಯಿ ತೋಟಗಳು, ರಾಗಿ ಹೊಲಗಳು ಇದ್ದವು. ಬೇಕಾದಷ್ಟು ಮೇವಿತ್ತು. ಸಾಕಿದ್ದ ಹಸು–ಕರುಗಳಿಂದ ಬೇರೆಯವರಿಗೆ ಹಂಚುವಷ್ಟುಹಾಲು–ಹೈನು ಮನೆಗಳಲ್ಲಿ ಇರುತ್ತಿತ್ತು’ ಎಂದು ನೆನಪಿಸಿಕೊಂಡರು.

‘ಹತ್ತು–ಹದಿನೈದು ವರ್ಷದಿಂದ ಸಿಟಿ ಬೆಳೆಯುತ್ತ, ಕೆರೆ ಚಿಕ್ಕದಾಯಿತು. ಗಲೀಜು ತುಂಬಿಕೊಂಡಿತು. ಈಗ ಈ ಪ್ರದೇಶದಲ್ಲಿ ಕುಡಿಯುವ ನೀರನ್ನು ಕ್ಯಾನ್‌ಗಳಲ್ಲಿ ಕೊಂಡು ತರಬೇಕಿದೆ. ಎಲ್ಲ ಹಣದ ಮಹಿಮೆ ನೋಡಪ್ಪ ಇದು’ ಎಂದು ವಿಷಾದಿಸಿದರು ಹಿರಿಯ ನಾಗರಿಕರಾದ ನಾಗರಾಜ್‌. ಈ ಕೆರೆ 2017ರ ವರೆಗೂ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿತ್ತು.

ಈಗ ಪಾಲಿಕೆಯಲ್ಲಿದೆ. ಲೋಕಾಯುಕ್ತರ ನಿರ್ದೇಶನದ ಮೇರೆಗೆ ಪಾಲಿಕೆ ₹3 ಕೋಟಿ ವೆಚ್ಚದಲ್ಲಿ ಕೆರೆ ಅಭಿವೃದ್ಧಿ ಕಾಮಗಾರಿಯನ್ನು ಕಳೆದ ಮಾರ್ಚ್‌ನಿಂದ ಆರಂಭಿಸಿದೆ.

ಕೆರೆ ಕುರಿತು

* 45 ಎಕರೆ ಕೆರೆಯ ಒಟ್ಟು ವಿಸ್ತೀರ್ಣ

* ₹ 3 ಕೋಟಿ ಕೆರೆ ಅಭಿವೃದ್ಧಿಗೆ ಪಾಲಿಕೆ ಮೀಸಲಿಟ್ಟ ಮೊತ್ತ

* 3 ಕಿ.ಮೀ. ಕೆರೆ ಸುತ್ತಲಿನ ನಡಿಗೆ ಪಥದ ಉದ್ದ

ಕೆರೆಯಲ್ಲಿನ ಸಮಸ್ಯೆಗಳು

* ದಕ್ಷಿಣ ಭಾಗದಲ್ಲಿ ಹೆಚ್ಚು ಒತ್ತುವರಿಯಾಗಿದೆ

* ಹೂಳು ಮತ್ತು ಕಳೆ ಸಸಿಗಳಿಂದ ತುಂಬಿದೆ

* ಶೌಚ, ತ್ಯಾಜ್ಯದಿಂದ ಅಲ್ಲಲ್ಲಿ ಮಲಿನಗೊಂಡಿದೆ

* ಬೀದಿನಾಯಿಗಳ ಸಂತತಿ ಹೆಚ್ಚುತ್ತಿದೆ

* ಮಕ್ಕಳ ಮೈದಾನ ಹಾಳಾಗಿದೆ

* ಏರಿ ಕೆಳಗೆ ನೆಟ್ಟಿರುವ ಗಿಡಗಳು ಪೋಷಣೆ ಇಲ್ಲದೆ ಒಣಗುತ್ತಿವೆ

ಪಾಲಿಕೆಯ ಕೆರೆ ಅಭಿವೃದ್ಧಿ ಯೋಜನೆ

* ಕೊಳಚೆ ನೀರನ್ನು ಕೆ.ಸಿ.ವ್ಯಾಲಿಗೆ ಹರಿಸುವುದು

* ಹೂಳೆತ್ತಿ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಿಸುವುದು

* ಏರಿ ಸದೃಢಗೊಳಿಸಿ, ಜೌಗು ಪ್ರದೇಶ ನಿರ್ಮಿಸುವುದು

* ಒತ್ತುವರಿ ತಡೆಗೆ ತಂತಿಬೇಲಿ ಅಳವಡಿಸುವುದು

* ವಾಯುವಿಹಾರಕ್ಕೆ ನಡಿಗೆ ಪಥ ನಿರ್ಮಿಸುವುದು

* ಕಲ್ಯಾಣಿ ನಿರ್ಮಾಣ ಮಾಡುವುದು

* ಕೆರೆ ಕಾವಲಿಗೆ ಗೃಹರಕ್ಷಕ ದಳದ ಸಿಬ್ಬಂದಿ ನಿಯೋಜಿಸುವುದು

* ಮಕ್ಕಳ ಆಟದ ಮೈದಾನ ನಿರ್ಮಿಸುವುದು

* ಕೆಲವು ನಿರ್ಗತಿಕರು ಕೆರೆಯ ನಾಲ್ಕೈದು ಎಕರೆ ಜಾಗದಲ್ಲಿ ಶೆಡ್‌ ಕಟ್ಟಿಕೊಂಡಿದ್ದಾರೆ. ಅವರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ ಬಳಿಕವೇ ಒತ್ತುವರಿ ತೆರವುಗೊಳಿಸುತ್ತೇವೆ
-ಬಿ.ಎ.ಬಸವರಾಜು, ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT