ಭಾನುವಾರ, ಏಪ್ರಿಲ್ 5, 2020
19 °C

ಸಮಾಜಕ್ಕೆ ಸ್ಫೂರ್ತಿ ತುಂಬಿದ ಮಹಿಳಾ ಶಕ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿವಮೊಗ್ಗ: ನಗರ ಪಾಲಿಕೆಯಲ್ಲಿ ಮೇಯರ್, ಉಪ ಮೇಯರ್ ಇಬ್ಬರೂ ಮಹಿಳೆಯರು. ಇಬ್ಬರೂ ಯಾವ ಪುರುಷರಿಗೂ ಕಡಿಮೆ ಇಲ್ಲದಂತೆ ಆಡಳಿತ ನಡೆಸುವ ಮೂಲಕ ಬಲ ತುಂಬಿದ್ದಾರೆ.

ಪ್ರಥಮ ಪ್ರಜೆ ಅನುಭವಿ ಮಹಿಳೆ

ನಗರ ಪಾಲಿಕೆ ಮೇಯರ್ ಸುವರ್ಣಾ ಶಂಕರ್ ಸಮರ್ಥ ಆಡಳಿತ ನೀಡುವ ಮೂಲಕ ಗಮನ ಸೆಳೆದಿದ್ದಾರೆ. 1996ರಿಂದ ಇಲ್ಲಿಯವರೆಗೆ ಮೂರು ಅವಧಿಗೆ ಪಾಲಿಕೆ ಸದಸ್ಯರಾಗಿ ಕೆಲಸ ಮಾಡಿದ ಅನುಭವವಿದೆ. ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಚಂದ್ರಶೇಖರಪುರ ಅವರ ತವರು. ಪತಿ ಶಂಕರ್ ಉದ್ಯಮಿ.

ಬಿಜೆಪಿ ಕಾರ್ಯಕರ್ತರಾಗಿದ್ದ ಅವರು ಪತ್ನಿಗೆ ರಾಜಕೀಯವಾಗಿ ಬೆಳೆಯಲು ಪ್ರೋತ್ಸಾಹ ನೀಡಿದ್ದಾರೆ. ಸುವರ್ಣಾ ಅವರು ಪಕ್ಷದ ವಿವಿಧ ಮಹಿಳಾ ಘಟಕಗಳ ಅಧ್ಯಕ್ಷರಾಗಿಯೂ ಕಾರ್ಯನಿರ್ವಹಿಸಿದ್ದಾರೆ. 

ಅಪ್ಪನ ಗರಡಿಯಲ್ಲಿ ರಾಜಕಾರಣ

ಪಾಲಿಕೆ ಉಪ ಮೇಯರ್ ಸುರೇಖಾ ಮರಳೀಧರ್ ಅವರು ತಂದೆಯ ಗರಡಿಯಲ್ಲೇ ರಾಜಕಾರಣದ ಪಾಠ ಕಲಿತವರು. ತಂದೆ ರಂಗರಾಜ್ ಅವರು ಎರಡು ಬಾರಿ ಜಗಳೂರಿನ ಪುರಸಭೆಯ ಸದಸ್ಯರಾಗಿದ್ದರು. 2000ದಲ್ಲಿ ಮುರಳೀಧರ್ ಅವರನ್ನು ಮದುವೆಯಾಗಿ ಶಿವಮೊಗ್ಗಕ್ಕೆ ಬಂದು ಗೃಹಿಣಿಯಾಗಿದ್ದ ಅವರು, 2011ರಲ್ಲಿ ಬಿಜೆಪಿ ಕಾರ್ಯಕರ್ತೆಯಾಗಿ ಸಕ್ರಿಯ ರಾಜಕಾರಣ ಶುರು ಮಾಡಿದರು.

ವಿವಿಧ ಸಂಘ–ಸಂಸ್ಥೆಗಳಲ್ಲಿ ಗುರುತಿಸಿಕೊಂಡರು. 2013ರಲ್ಲಿ ಮೊದಲ ಬಾರಿ ಪಾಲಿಕೆ ಸದಸ್ಯೆಯಾಗಿ ಆಯ್ಕೆ. 2018ರಲ್ಲಿ ಪುನರಾಯ್ಕೆ. ಈಗ ಉಪ ಮೇಯರ್ ಜವಾಬ್ದಾರಿ ನಿರ್ವಹಣೆ ಮಾಡುತ್ತಿದ್ದಾರೆ.

ಜಿಲ್ಲಾ ಪಂಚಾಯಿತಿಯ ತ್ರಿಶಕ್ತಿ

ಜಿಲ್ಲಾ ಪಂಚಾಯಿತಿಯ ಅಧ್ಯಕ್ಷೆ, ಉಪಾಧ್ಯಕ್ಷೆ, ಸಿಇಒ ಸ್ಥಾನಗಳಲ್ಲಿ ಮಹಿಳೆಯರೇ ಇದ್ದಾರೆ. ಇವರು ಗ್ರಾಮೀಣ ಮಹಿಳೆಯರಿಗೆ ಸ್ಫೂರ್ತಿಯಾಗಿದ್ದಾರೆ.

ಅಧ್ಯಕ್ಷೆ ಜ್ಯೋತಿ ಕುಮಾರ್ 

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಕುಮಾರ್ ಮೀಸಲು ದಿಸೆಯಿಂದ ಅನಿರೀಕ್ಷಿತವಾಗಿ ರಾಜಕೀಯ ಪ್ರವೇಶಿಸಿದವರು. ಜ್ಯೋತಿ ಅವರು ಭದ್ರಾವತಿ ತಾಲ್ಲೂಕು ಕೆಂಚೇನಹಳ್ಳಿಯ ಎಸ್.ಕುಮಾರ್ ಪತ್ನಿ. ಕುಮಾರ್ ಅವರು ಸಹಕಾರ ಸಂಘಗಳ ಮೂಲಕ ರಾಜಕೀಯ ಪ್ರವೇಶಿಸಿದವರು. ತಾಲ್ಲೂಕು ಪಂಚಾಯಿತಿ ಅಧ್ಯಕ್ಷ, ಎರಡು ಬಾರಿ ಜಿಲ್ಲಾ ಪಂಚಾಯಿತಿ ಸದಸ್ಯರಾಗಿದ್ದರು. ಮೀಸಲಾತಿ ಬದಲಾದ ಕಾರಣಕ್ಕೆ ಹಿರಿಯೂರು ಕ್ಷೇತ್ರದಿಂದ ಪತ್ನಿಯನ್ನು ಜೆಡಿಎಸ್‌ನಿಂದ ಕಣಕ್ಕೆ ಇಳಿಸಿದ್ದರು. ಮೊದಲ ಅವಧಿಯಲ್ಲಿ ಉಪಾಧ್ಯಕ್ಷೆಯಾಗಿದ್ದ ಅವರು 2016ರಿಂದ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಪತಿಯ ಪ್ರೋತ್ಸಾಹದಲ್ಲಿ ಅರಳಿದ ಪ್ರತಿಭೆ

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್ ರಾಜಕೀಯ ಪ್ರವೇಶ ಅನಿರೀಕ್ಷಿತ. ಮೂಲತಃ ಚನ್ನರಾಯಪಟ್ಟಣ ತಾಲ್ಲೂಕಿನ ಅಗ್ರಹಾರದ ವೇದಾ ಅವರು ಸಂತೇಕಡೂರಿನ ವಿಜಯಕುಮಾರ್ ಅವರ ಬಾಳ ಸಂಗಾತಿ. ವಿಜಯಕುಮಾರ್ ಕಾಂಗ್ರೆಸ್ ಮುಖಂಡರು. ಪ್ರಸ್ತುತ ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷರಾಗಿ, ಪೀಕಾರ್ಡ್ ಬ್ಯಾಂಕ್ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಸಿತ್ತಿದ್ದಾರೆ. ವೇದಾ ಅವರು 2016ರಲ್ಲಿ ನಡೆದ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕೆ ಇಳಿದಿದ್ದರು. ಮೊದಲ ಪ್ರಯತ್ನದಲ್ಲೇ ಗೆಲುವು ಕಂಡು ಮೂರು ವರ್ಷಗಳಿಂದ ಉಪಾಧ್ಯಕ್ಷೆಯಾಗಿ ಕೆಲಸ ಮಾಡುತ್ತಿದ್ದಾರೆ.

ಸಿಇಒ ಎಂ.ಎಲ್.ವೈಶಾಲಿ

ಜಿಲ್ಲಾ ಪಂಚಾಯಿತಿ ಸಿಇಒ ಎಂ.ಎಲ್.ವೈಶಾಲಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕಿಯಾಗಿ ವೃತ್ತಿ ಜೀವನ ಆರಂಭಿಸಿದವರು. 2004ರಲ್ಲಿ ಕೆಎಎಸ್ ತೇರ್ಗಡೆಯಾದರು. ಚಿಕ್ಕಮಗಳೂರು ಜಿಲ್ಲೆ ಎನ್‌.ಆರ್.ಪುರದ ಲಕ್ಷ್ಮಣ್–ಲಕ್ಷ್ಮೀದೇವಿ ದಂಪತಿ ಪುತ್ರಿ. ಎಂ.ಎ, ಬಿ.ಇಡಿ ಪದವೀಧರೆ. 

ಭೂ ಸ್ವಾಧೀನ ಅಧಿಕಾರಿ, ಉಪ ವಿಭಾಗಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ಕೆಲಸ ಮಾಡಿದ ಅನುಭವವಿದೆ. ಹಿಂದೆ ಶಿವಮೊಗ್ಗದಲ್ಲಿ ಉಪ ವಿಭಾಗಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಇದೇ ಮೊದಲ ಬಾರಿ ಜಿಲ್ಲಾ ಪಂಚಾಯಿತಿ ಸಿಇಒ ಸ್ಥಾನ ಅಲಂಕರಿಸಿದ್ದಾರೆ. ಜಡ್ಡುಗಟ್ಟಿದ್ದ ಪಂಚಾಯಿತಿಗಳ ಆಡಳಿತ ವ್ಯವಸ್ಥೆಗೆ ಚುರುಕು ಮುಟ್ಟಿಸಿದ್ದಾರೆ. ದಕ್ಷ, ಪಾರದರ್ಶಕ ಆಡಳಿತದಿಂದ ಗಮನ ಸೆಳೆದಿದ್ದಾರೆ.

ಎರಡು ದಶಕಗಳ ನಂತರ ಕೆಎಎಸ್ ಪಟ್ಟ

ಗಾಜನೂರಿನ ಜಯಮ್ಮ–ಕೆಂಚಪ್ಪ ದಂಪತಿ ಪುತ್ರಿ ಡಾ.ಕೆ.ವನಮಾಲ ಹರಿಪ್ರಸಾದ್ ಅವರ ಬದುಕು ಇಂದಿನ ವಿದ್ಯಾರ್ಥಿಗಳಿಗೆ ಸ್ಫೂರ್ತಿ. ಕಷ್ಟದಲ್ಲೇ ಓದಿ, ಎಂ.ಎ, ಎಂ.ಇಡಿ ಪೂರೈಸಿ ಶಿಕ್ಷಕಿಯಾಗಿದ್ದ ಅವರು 1998ರಲ್ಲಿ ಕರ್ನಾಟಕ ಆಡಳಿತ ಸೇವೆಗೆ ಆಯ್ಕೆಯಾಗಿದ್ದರು. ಕಾರಣಾಂತರಗಳಿಂದ ಆಯ್ಕೆ ವಿಳಂಬವಾದ ಕಾರಣ ಕರ್ನಾಟಕ ಶಿಕ್ಷಣ ಸೇವೆಗೆ
ಸೇರಿಕೊಂಡರು.‌

ಡಯಟ್ ಉಪನ್ಯಾಸಕಿಯಾಗಿ ಶಿಕ್ಷಣ ಕ್ಷೇತ್ರಕ್ಕೆ ಅಮೂಲ್ಯ ಸೇವೆ ಸಲ್ಲಿಸಿದ್ದಾರೆ. ಎರಡು ದಶಕಗಳ ನಂತರ ಮತ್ತೆ ಕೆಎಎಸ್ ಒಲಿದು ಬಂದಿದೆ. ಪ್ರಸ್ತುತ ಜಿಲ್ಲಾ ಖಜಾನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ಹೆಚ್ಚುವರಿ ಜಿಲ್ಲಾಧಿಕಾರಿ ಅನುರಾಧ

ಶಿವಮೊಗ್ಗದ ಹೆಚ್ಚುವರಿ ಜಿಲ್ಲಾಧಿಕಾರಿ ಜಿ.ಅನುರಾಧ ಅವರು ಗಾಂಧಿ ಬಜಾರ್‌ನ ಗಣಪತಿ
ನಾರಾಯಣ ಶೇಟ್–ಗಿರಿಜಮ್ಮ ದಂಪತಿ ಪುತ್ರಿ. ಜೀವಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿ, ಡಿವಿಎಸ್ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸಿದ್ದರು.

2008ರಲ್ಲಿ ಕೆಎಎಸ್‌ಗೆ ಆಯ್ಕೆಯಾದರು. ಉಪ ವಿಭಾಗಾಧಿಕಾರಿ, ಹೆಚ್ಚುವರಿ ಜಿಲ್ಲಾಧಿಕಾರಿಯಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ಕ್ರೀಡಾ ಪ್ರತಿಭೆ ಸಾನಿಯಾ,ಶಿಫಾ

ಸಾನಿಯಾ ಎಸ್.ಜುಬೇರ್, ಶಿಫಾ ಎಸ್.ಜುಬೇರ್ ಕ್ರೀಡಾ ಕ್ಷೇತ್ರದ ಸಾಧಕ ಸಹೋದರಿಯರು. ಹಿರಿಯ ಪತ್ರಕರ್ತ ಶಿ.ಜು.ಪಾಶ-ಪರ್ವೀನ್ ದಂಪತಿ ಪುತ್ರಿಯರು. ಶಿವಮೊಗ್ಗದ ಆರ್‌ಎಂಎಲ್‌ ನಗರದ ಮಾನಸ ವಿದ್ಯಾಲಯದ ವಿದ್ಯಾರ್ಥಿನಿಯರು. ಕರಾಟೆ ಗುರುಗಳಾದ ಇರ್ಫಾನ್ ಮತ್ತು ಶಬ್ಬೀರ್ ಅವರ ಕೋಚ್.

ಸಾನಿಯಾ ಎಸ್.ಜುಬೇರ್

ಸಾನಿಯಾ ರಾಜ್ಯಮಟ್ಟದ ವುಶೋ ಚಾಂಪಿಯನ್‌ಷಿಪ್‌, ಇಂಟರ್‌ನ್ಯಾಷನಲ್ ಗೋಸೊಕು ರಿಯ್ಯು ಕರಾಟೆ ಚಾಂಪಿಯನ್‌ಷಿಪ್‌, ಓಪನ್ ಸೌತ್ ಝೋನ್ ಟೇಕ್ವಾಂಡೊ ಮತ್ತು ಕ್ವಾನ್ ಕಿಡೋ ಚಾಂಪಿಯನ್‌ಷಿಪ್‌ (ಹೈದರಾಬಾದ್) ಇಂಟರ್ ನ್ಯಾಷನಲ್ ಗೋಸೊಕು ರಿಯ್ಯು ಚಾಂಪಿಯನ್‌ಷಿಪ್‌, ಕರ್ನಾಟಕ ಕ್ವಾನ್ ಕಿಡೋ ಚಾಂಪಿಯನ್‌ಷಿಪ್‌ನಲ್ಲಿ ಹಲವು ಚಿನ್ನ, ಬೆಳ್ಳಿ ಪದಕಗಳನ್ನು ಜಯಿಸಿದ್ದಾರೆ.

ಶಿಫಾ ಎಸ್.ಜುಬೇರ್

ಬಾಲ್ಯದಿಂದಲೇ ಕರಾಟೆಯಲ್ಲಿ ಆಸಕ್ತಳಾದ ಶಿಫಾ, 2019ರಲ್ಲಿ ನಡೆದ 6ನೇ ಇಂಟರ್ ನ್ಯಾಷನಲ್ ಗೋಸೊಕು ರಿಯ್ಯು ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಮೂರು ಬೆಳ್ಳಿ ಪದಕ ಜಯಿಸಿದ್ದಾರೆ. 2020ರ ಜನವರಿಯಲ್ಲಿ ನಡೆದ ಕ್ವಾನ್ ಕಿಡೋ ಅಸೋಸಿಯೇಷನ್ ಕರಾಟೆ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಪಡೆದಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು