ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನೀರಿನ ಮಿತಬಳಕೆ ಅರಿವು ಮೂಡಿಸಿ’

ವಂಡರ್‌ಲಾ ಪರಿಸರ, ಇಂಧನ ಸಂರಕ್ಷಣೆ ಪ್ರಶಸ್ತಿ
Last Updated 16 ಫೆಬ್ರುವರಿ 2019, 19:51 IST
ಅಕ್ಷರ ಗಾತ್ರ

ಬಿಡದಿ: ಪರಿಸರ ಮಾಲಿನ್ಯದ ದುಷ್ಪರಿಣಾಮ ಕುರಿತು ವಿದ್ಯಾರ್ಥಿ, ಯುವಜನರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ವಂಡರ್‌ಲಾ‌ ಅಮ್ಯೂಸ್‌ಮೆಂಟ್ ಪಾರ್ಕ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಜೋಸ್‌ ಹೇಳಿದರು.

ಇಲ್ಲಿನ ವಂಡರ್‌ಲಾ ಹಾಲಿಡೇಸ್ ಅಮ್ಯೂಸ್‌ಮೆಂಟ್ ಪಾರ್ಕ್‌ನಲ್ಲಿ‌ ನಡೆದ 2018ನೇ ಸಾಲಿನ ವಂಡರ್‌ಲಾ ಪರಿಸರ ಮತ್ತು ಇಂಧನ ಸಂರಕ್ಷಣೆ ಪ್ರಶಸ್ತಿ (ವೀಕಾ 2018) ವಿಜೇತರಿಗೆ ಏರ್ಪಡಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗಾಳಿ, ನೀರು ಮಲಿನಗೊಂಡಿದೆ. ನೀರಿಗೆ ದುಡ್ಡು ಕೊಟ್ಟು ಖರೀದಿಸುವ ಪರಿಸ್ಥಿತಿ ಇದೆ ಎಂದು ವಿಷಾದಿಸಿದರು.

ವಂಡರ್‌ಲಾ ಸಂಸ್ಥೆ ಮಕ್ಕಳ ಮನಸ್ಸಿಗೆ ಅರ್ಥವಾಗುವಂತೆ ಪರಿಸರ, ತ್ಯಾಜ್ಯ ವಿಲೇವಾರಿ, ನೀರಿನ ಮಿತಬಳಕೆ, ಉತ್ತಮ ಇಂಧನ ನಿರ್ವಹಣೆ ವಿಚಾರದಲ್ಲಿ ಸ್ಪರ್ಧೆಯನ್ನು ಕಳೆದ ಎಂಟು ವರ್ಷಗಳಿಂದ ಏರ್ಪಡಿಸುತ್ತಿದೆ. ಈ‌ ಮೂಲಕ ಅವರಲ್ಲಿ ಪರಿಸರ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮ ಉದ್ಘಾಟಿಸಿದ ಮಿಸ್ ಯೂನಿವರ್ಸ್ ಇಂಡಿಯಾ-2016 ರೋಷ್ಮಿತಾ ಹರಿಮೂರ್ತಿ ಮಾತನಾಡಿ, ಪರಿಸರ ಉಳಿಸುವುದರ ಮೂಲಕ ನಮ್ಮನ್ನು ನಾವು ಉಳಿಸಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗಿದೆ ಇದೆ ಎಂದು ಹೇಳಿದರು.

ವಂಡರ್‌ಲಾದ ಸಲಹೆಗಾರ ರಾಜಗೋಪಾಲನ್ ಮಾತನಾಡಿ, ತೀವ್ರಗತಿಯಲ್ಲಿ ಸಾಗುತ್ತಿರುವ ನಗರೀಕರಣದಿಂದ ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಪ್ರಶಸ್ತಿ ವಿಜೇತರು: ಸ್ಪರ್ಧೆ ವಿಜೇತ ಶಾಲಾ ಮಕ್ಕಳಿಗೆ 'ವೀಕಾ 2018' ಪ್ರಶಸ್ತಿಯನ್ನು ರೋಶ್ಮಿತಾ ಹರಿಮೂರ್ತಿ ವಿತರಿಸಿದರು. ತಮಿಳುನಾಡಿನ ಹೊಸೂರಿನ ಮಹರ್ಷಿ ವಿದ್ಯಾಮಂದಿರ ಸೆಕೆಂಡರಿ ಶಾಲೆ ಪ್ರಥಮ ಬಹುಮಾನವಾಗಿ ₹50 ಸಾವಿರ ನಗದು ಬಹಮಾನ ಪಡೆಯಿತು. ದ್ವಿತೀಯ ಬಹುಮಾನ ದಕ್ಷಿಣ ಕನ್ನಡದ ಶ್ರೀಸತ್ಯಸಾಯಿ ಲೋಕ ಸೇವಾ ಶಾಲೆ ಹಾಗೂ ಬೆಂಗಳೂರಿನ ಸಾತನೂರು ಗ್ರಾಮದ ದೆಹಲಿ ಪಬ್ಲಿಕ್ ಶಾಲೆ ಪಾಲಾಯಿತು. ಈ ಶಾಲೆಗಳು ತಲಾ ₹25 ಸಾವಿರ ನಗದು ಪುರಸ್ಕಾರ ಪಡೆದವು.

ತೃತೀಯ ಬಹುಮಾನವನ್ನು ಗದಗ ಜಿಲ್ಲೆ ಗೋಜನೂರಿನ ಸರ್ಕಾರಿ ಪ್ರೌಢಶಾಲೆ, ದಾವಣಗೆರೆ ಅನ್ಮೋಲ್ ಪಬ್ಲಿಕ್ ಶಾಲೆ, ಬೆಂಗಳೂರಿನ ಕ್ರೈಸ್ಟ್ ಶಾಲೆ ಹಂಚಿಕೊಂಡವು. ಈ ಮೂರು ಶಾಲೆಗಳಿಗೆ ತಲಾ ₹15 ಸಾವಿರ ನಗದು ಬಹುಮಾನ ವಿತರಿಸಲಾಯಿತು.

ವಂಡರ್‌ಲಾದ ಬಿಸಿನೆಸ್ ಡೆವೆಲಪ್‌ಮೆಂಟ್ ವ್ಯವಸ್ಥಾಪಕ ನಿಕೋಲಸ್ ಜಿರಾಲ್ಡ್ ನಿರೂಪಿಸಿದರು. ಮಾರ್ಕೆಟಿಂಗ್ ವಿಭಾಗದ ಬಾಲಕೃಷ್ಣ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT