ಮಂಗಳವಾರ, ಸೆಪ್ಟೆಂಬರ್ 21, 2021
21 °C

ಸುಶಾಂತ್ ಆತ್ಮಹತ್ಯೆ ಪ್ರಕರಣ: ಸಿಬಿಐ ತನಿಖೆಗೆ ಬಿಹಾರ ಶಾಸಕರ ಒತ್ತಾಯ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಪಟ್ನಾ/ಮುಂಬೈ: ಬಾಲಿವುಡ್‌ ನಟ ಸುಶಾಂತ್‌ ಸಿಂಗ್‌ ರಜಪೂತ್‌ ಆತ್ಮಹತ್ಯೆ ಪ್ರಕರಣವನ್ನು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ಒಪ್ಪಿಸಬೇಕೆಂಬ ಕೂಗು ಸೋಮವಾರ ಬಿಹಾರ ವಿಧಾನಸಭೆಯಲ್ಲೂ ಪ್ರತಿಧ್ವನಿಸಿತು.

ಅಧಿವೇಶನದಲ್ಲಿ ಸುಶಾಂತ್‌ ಆತ್ಮಹತ್ಯೆ ಪ್ರಕರಣದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಬಿಜೆಪಿ ಶಾಸಕ ನೀರಜ್‌ ಕುಮಾರ್‌ ಸಿಂಗ್‌ ಬಬ್ಲು, ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುವಂತೆ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ಗೆ ಮನವಿ ಮಾಡಿದರು.

‘ಪ್ರಕರಣದ ವಿಚಾರಣೆ ನಡೆಸುತ್ತಿರುವ ಬಿಹಾರದ ವಿಶೇಷ ಪೊಲೀಸ್‌ ತಂಡಕ್ಕೆ ಮಹಾರಾಷ್ಟ್ರ ಸರ್ಕಾರವು ಅಡಚಣೆ ಉಂಟುಮಾಡುತ್ತಿದೆ. ಅಲ್ಲಿನ ಸರ್ಕಾರವು ತನಿಖೆಯ ದಾರಿ ತಪ್ಪಿಸುತ್ತಿದೆ’ ಎಂದು ಅವರು ಆರೋಪಿಸಿದರು.

ಬಬ್ಲು ಅವರ ಪತ್ನಿ, ಬಿಜೆಪಿಯ ವಿಧಾನ ಪರಿಷತ್‌ ಸದಸ್ಯೆ ನೂತನ್ ಸಿಂಗ್‌ ಅವರೂ ಈ ವಿಷಯವನ್ನು ಮೇಲ್ಮನೆಯಲ್ಲಿ ಪ್ರಸ್ತಾಪಿಸಿದರು. ಬಬ್ಲು ಅವರು ಸುಶಾಂತ್‌ ಅವರ ಸಹೋದರ ಸಂಬಂಧಿಯಾಗಿದ್ದಾರೆ.

ವಿರೋಧ ಪಕ್ಷದ ನಾಯಕ ತೇಜಸ್ವಿ ಯಾದವ್‌ ಕೂಡ ಬಬ್ಲು ಮಾತಿಗೆ ಧ್ವನಿಗೂಡಿಸಿದರು. 

‘ಸುಶಾಂತ್‌ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮೊದಲು ಒತ್ತಾಯಿಸಿದ್ದೇ ನಮ್ಮ ಪಕ್ಷ. ಈ ಸಂಬಂಧ ನಾನು ಸಿಬಿಐಗೆ ಪತ್ರವನ್ನೂ ಬರೆದಿದ್ದೆ. ರಾಜಗಿರಿಯಲ್ಲಿ ನಿರ್ಮಾಣವಾಗಲಿರುವ ಚಿತ್ರನಗರಿಗೆ ಸುಶಾಂತ್‌ ಹೆಸರು ಇಡುವಂತೆಯೂ ಮನವಿ ಮಾಡಿದ್ದೆ’ ಎಂದು ತೇಜಸ್ವಿ ಹೇಳಿದರು.

ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸದಾನಂದ ಸಿಂಗ್‌, ಪ್ರಕರಣವನ್ನು ಸಿಬಿಐಗೆ ವಹಿಸುವ ಕುರಿತ ನಿರ್ಣಯವನ್ನು ಅಂಗೀಕರಿಸುವಂತೆ ಸಲಹೆ ನೀಡಿದರು.

ಎಲ್‌ಜೆಪಿಯ ಶಾಸಕ ರಾಜು ತಿವಾರಿ, ಕಾಂಗ್ರೆಸ್‌ ಶಾಸಕ ಅವದೇಶ್‌ ಕುಮಾರ್‌ ಸಿಂಗ್‌ ಸೇರಿದಂತೆ ಇತರರೂ ಸಿಬಿಐ ತನಿಖೆ ಪರ ಧ್ವನಿ ಎತ್ತಿದರು.

ಬಿಹಾರ ಪೊಲೀಸರಿಗೆ ಸಹಕಾರ

‘ಸುಶಾಂತ್‌ ಪ್ರಕರಣದ ತನಿಖೆ ನಡೆಸುತ್ತಿರುವ ಬಿಹಾರ ಪೊಲೀಸರ ತಂಡಕ್ಕೆ ನಾವು ಸೂಕ್ತ ಸಹಕಾರ ನೀಡುತ್ತಿಲ್ಲ ಎಂದು ಹೇಳಲಾಗಿದೆ. ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ’ ಎಂದು ಮುಂಬೈ ಪೊಲೀಸ್‌ ಕಮಿಷನರ್‌ ಪರಮ್‌ ವೀರ್‌ ಸಿಂಗ್‌ ಸೋಮವಾರ ಹೇಳಿದ್ದಾರೆ.

‘ಮುಂಬೈ ಪೊಲೀಸರು ಎಲ್ಲಾ ಆಯಾಮಗಳಿಂದಲೂ ತನಿಖೆ ನಡೆಸುತ್ತಿದ್ದಾರೆ. ಸುಶಾಂತ್‌ ಖಿನ್ನತೆಯಿಂದ ಬಳಲುತ್ತಿದ್ದರು, ಅದಕ್ಕಾಗಿ ಚಿಕಿತ್ಸೆಯನ್ನೂ ಪಡೆಯುತ್ತಿದ್ದರು ಎಂದು ಹೇಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 56 ಮಂದಿಯನ್ನು ವಿಚಾರಣೆ ನಡೆಸಿ ಅವರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಸುಶಾಂತ್‌ ಅವರ ಸಹೋದರಿಯ ಹೇಳಿಕೆಯನ್ನೂ ಪಡೆಯಲಾಗಿದೆ’ ಎಂದು ಅವರು ತಿಳಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು