ಬುಧವಾರ, ಜುಲೈ 28, 2021
28 °C
ಪೂರ್ವ ಲಡಾಖ್‌ಗೆ ರಕ್ಷಣಾ ಸಚಿವರ ಭೇಟಿ

ಗಡಿ ಸಂಘರ್ಷ | ಬಿಕ್ಕಟ್ಟು ಶಮನದ ಖಾತರಿ ಇಲ್ಲ: ರಾಜನಾಥ್‌ ಸಿಂಗ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಚೀನಾದ ಜತೆಗಿನ ಗಡಿ ಬಿಕ್ಕಟ್ಟು ಶಮನಕ್ಕೆ ಮಾತುಕತೆ ನಡೆಯುತ್ತಿದೆ. ಸಮಸ್ಯೆಯು ಎಷ್ಟರ ಮಟ್ಟಿಗೆ ಪರಿಹಾರ ಆಗಬಹುದು ಎಂಬುದಕ್ಕೆ ಯಾವುದೇ ಖಾತರಿ ಇಲ್ಲ. ಆದರೆ, ಮಾತುಕತೆಯ ಮೂಲಕವೇ ಬಿಕ್ಕಟ್ಟಿಗೆ ಪರಿಹಾರ ದೊರೆತರೆ ಉತ್ತಮ’ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಶುಕ್ರವಾರ ಹೇಳಿದ್ದಾರೆ. 

ಮಾತುಕತೆ ಯಾವಾಗ ಪೂರ್ಣಗೊಳ್ಳಬಹುದು ಮತ್ತು ಅದರ ಫಲಿತಾಂಶ ಏನಾಗಬಹುದು ಎಂಬುದನ್ನೂ ಹೇಳಲಾಗದು ಎಂದು ಲೇಹ್‌ ಸಮೀಪದಲ್ಲಿ ಯೋಧರನ್ನು ಉದ್ದೇಶಿಸಿ ಮಾತನಾಡುತ್ತಾ ಅಭಿಪ್ರಾಯಪಟ್ಟಿದ್ದಾರೆ. 

ಸಂಘರ್ಷಕ್ಕೆ ಕಾರಣವಾಗಿರುವ ಪಾಂಗಾಂಗ್‌ ಸರೋವರದ ಪಶ್ಚಿಮ ಭಾಗದಲ್ಲಿರುವ ಲುಕುಂಗ್‌ನಲ್ಲಿ ರಕ್ಷಣಾ ಸಚಿವರು ಭಾರತೀಯ ಸೇನೆ ಮತ್ತು ಇಂಡೊ–ಟಿಬೆಟನ್‌ ಗಡಿ ಪೊಲೀಸರನ್ನು ಉದ್ದೇಶಿಸಿ ಮಾತನಾಡಿದರು. ಸಂಘರ್ಷ ನಡೆದ ಫಿಂಗರ್‌–4 ಪ್ರದೇಶದಿಂದ 43 ಕಿ.ಮೀ. ದೂರದಲ್ಲಿ ಈ ಪ್ರದೇಶ ಇದೆ.

ಪೂರ್ವ ಲಡಾಖ್‌ನ ಸಂಘರ್ಷದ ಸ್ಥಳದಿಂದ ಸೈನಿಕರ ವಾಪಸಾತಿಯ ಮಾತುಕತೆಗೆ ಅಡ್ಡಿ ಎದುರಾಗಿದೆ ಎಂಬುದನ್ನು ರಾಜನಾಥ್‌ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ಮೂಲಗಳು ಹೇಳಿವೆ. ಸೈನಿಕರ ವಾಪಸಾತಿ ಮಾತುಕತೆಯು ‘ಜಟಿಲವಾಗಿದ್ದು ನಿರಂತರ ದೃಢೀಕರಣ’ದ ಅಗತ್ಯ ಇದೆ ಎಂದು ಸೇನೆಯು ಗುರುವಾರ ಹೇಳಿತ್ತು. ಅದರ ಮರುದಿನವೇ ರಕ್ಷಣಾ ಸಚಿವರು ಇದೇ ಅರ್ಥದ ಮಾತನ್ನು ಆಡಿದ್ದಾರೆ. 

ಗಾಲ್ವನ್‌, ಹಾಟ್‌ ಸ್ಪ್ರಿಂಗ್ಸ್‌ ಮತ್ತು ಗೋಗ್ರಾ ಪ್ರದೇಶದಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ, ಪಾಂಗಾಂಗ್‌ ಸರೋವರ ಮತ್ತು ದೆಪ್ಸಾಂಗ್‌–ದೌಲತ್ ‌ಬೇಗ್‌ ಓಲ್ಡಿ ವಲಯದಲ್ಲಿ ಬಿಕ್ಕಟ್ಟು ಶಮನದ ಮಾತುಕತೆ ಹೆಚ್ಚು ಸವಾಲಿನದ್ದಾಗಿದೆ. 

ಎಲ್‌ಎಸಿಯ ಗ್ರಹಿಕೆಯನ್ನೇ ಬದಲಾಯಿಸುವ ಮೂಲಕ ಭಾರತವು ಸಂಧಾನಕ್ಕೆ ಬರುವಂತೆ ಚೀನಾ ಮಾಡಿದೆ ಎಂದು ರಕ್ಷಣಾ ಪರಿಣತರಲ್ಲಿ ಕೆಲವರು ಹೇಳಿದ್ದಾರೆ. ಆದರೆ, ವಿದೇಶಾಂಗ ಸಚಿವಾಲಯವು ಇದನ್ನು ತಳ್ಳಿ ಹಾಕಿದೆ.

ಸಮರ ಸನ್ನದ್ಧತೆ ಪ್ರದರ್ಶನ
ರಾಜನಾಥ್‌ ಅವರು ಲೇಹ್‌ಗೆ ಒಂದು ದಿನದ ಭೇಟಿ ನೀಡಿದ್ದಾರೆ. ಪಾಂಗಾಂಗ್‌ ಸರೋವರ ಪ್ರದೇಶಕ್ಕೆ ತಲುಪುವುದಕ್ಕೆ ಮುನ್ನ ಅವರು ಸ್ತಕ್ನಾ ಎಂಬಲ್ಲಿ ಲಡಾಖ್‌ ಸ್ಕೌಟ್ಸ್‌ ಪಡೆಯ ಯುದ್ಧ ಸನ್ನದ್ಧತೆಯ ಪ್ರದರ್ಶನಕ್ಕೆ ಸಾಕ್ಷಿಯಾದರು.

ವಿಮಾನಗಳೂ ಸೇರಿ ವಿವಿಧ ಯುದ್ಧೋಪಕರಣಗಳನ್ನು ಕೂಡ ಪ್ರದರ್ಶನದಲ್ಲಿ ಬಳಸಲಾಯಿತು.

ಎರಡೂ ದೇಶಗಳು ಗಡಿ ಸಮೀಪದಲ್ಲಿ ಮಾಡಿರುವ ಸನ್ನಾಹಗಳ ಬಗ್ಗೆ ರಾಜನಾಥ್‌ ಮಾಹಿತಿ ಪಡೆದರು. ಸೇನಾ ಪಡೆಗಳ ಮುಖ್ಯಸ್ಥ ಜ. ಬಿಪಿನ್‌ ರಾವತ್‌ ಮತ್ತು ಭೂಸೇನಾ ಮುಖ್ಯಸ್ಥ ಜ. ಎಂ.ಎಂ. ನವರಣೆ ಅವರೂ ಸಚಿವರ ಜತೆಗಿದ್ದರು. ಸಂಜೆಯ ಹೊತ್ತಿಗೆ ಸಚಿವರು ಶ್ರೀನಗರಕ್ಕೆ ತಲುಪಿದರು.

**

ಭಾರತವು ದುರ್ಬಲ ದೇಶ ಅಲ್ಲ ಎಂದು ನಾನು ನಿಮಗೆ ಮಾತು ಕೊಡಬಲ್ಲೆ. ಜಗತ್ತಿನ ಯಾವುದೇ ಶಕ್ತಿ ಕೂಡ ಭಾರತದ ಒಂದು ಇಂಚು ನೆಲವನ್ನೂ ಮುಟ್ಟಲಾಗದು.
-ರಾಜನಾಥ್‌ ಸಿಂಗ್‌, ರಕ್ಷಣಾ ಸಚಿವ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು