ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಡಿ ಶಾಂತಿ ಚೀನಾದ್ದೇ ಹೊಣೆ: ಸ್ಪಷ್ಟ ಸಂದೇಶ ನೀಡಿದ ಭಾರತ

Last Updated 15 ಜುಲೈ 2020, 20:44 IST
ಅಕ್ಷರ ಗಾತ್ರ

ನವದೆಹಲಿ: ಪೂರ್ವ ಲಡಾಖ್‌ನ ಗಡಿಯಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲೇಬೇಕು. ಗಡಿಯಲ್ಲಿ ಶಾಂತಿ ಮತ್ತು ಸೌಹಾರ್ದ ನೆಲೆಸಬೇಕಿದ್ದರೆ ಗಡಿ ನಿರ್ವಹಣೆಗಾಗಿ ಪರಸ್ಪರ ಒಪ್ಪಿಕೊಂಡ ಶಿಷ್ಟಾಚಾರ ಮತ್ತು ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು ಎಂದು ಭಾರತೀಯ ಸೇನೆಯು ಚೀನಾಕ್ಕೆ ಸ್ಪ‍ಷ್ಟವಾಗಿ ಹೇಳಿದೆ.ಎರಡೂ ದೇಶಗಳ ಸೇನೆಯ ಲೆಫ್ಟಿನೆಂಟ್‌ ಜನರಲ್‌ ಮಟ್ಟದ ನಾಲ್ಕನೇ ಮಾತುಕತೆಯಲ್ಲಿ ಈ ಸಂದೇಶ ನೀಡಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಮಂಗಳವಾರ ಬೆಳಗ್ಗೆ 11 ಗಂಟೆಗೆ ಆರಂಭವಾದ ಸಭೆಯು ಬುಧವಾರ ಮಧ್ಯಾಹ್ನ 2 ಗಂಟೆಗೆ ಪೂರ್ಣಗೊಂಡಿದೆ. ಎರಡೂ ಸೇನೆಯ ಹಿರಿಯ ಕಮಾಂಡರ್‌ಗಳ ನಡುವೆ ತೀವ್ರ ಮತ್ತು ಸಂಕೀರ್ಣವಾದ ಸಂಧಾನ ಮಾತುಕತೆ ನಡೆಯಿತು. ಗಡಿ ಪ್ರದೇಶದಲ್ಲಿನ ಸ್ಥಿತಿಯನ್ನು ಉತ್ತಮಪಡಿಸುವ ಬಹುಪಾಲು ಹೊಣೆಗಾರಿಕೆ ಚೀನಾದ್ದೇ ಆಗಿದೆ ಎಂಬುದನ್ನು ಭಾರತ ಈ ಸಭೆಯಲ್ಲಿ ತಿಳಿಸಿದೆ.

ಉದ್ವಿಗ್ನ ಸ್ಥಿತಿ ಶಮನಕ್ಕಾಗಿ ಮುಂದಿನ ಹಂತದಲ್ಲಿ ಜಾರಿಗೊಳಿಸಬೇಕಾದ ಕೆಲವು ಕ್ರಮಗಳ ಬಗ್ಗೆ ಒಮ್ಮತಕ್ಕೆ ಬರಲಾಗಿದೆ. ಎರಡೂ ಸೇನೆಯ ಉನ್ನತ ಅಧಿಕಾರಿಗಳ ಜತೆಗೆ ಈ ಬಗ್ಗೆ ಚರ್ಚೆ ನಡೆಸಿ, ಮುಂದಿನ ಮಾತುಕತೆ ನಡೆಯಲಿದೆ. ಮಾತುಕತೆಯ ಫಲಿತದ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.

ಮಾತುಕತೆಯಲ್ಲಿ ಭಾರತದ ನಿಯೋಗದ ನೇತೃತ್ವವನ್ನು 14 ಕೋರ್‌ನ ಮುಖ್ಯಸ್ಥ ಲೆ.ಜ. ಹರಿಂದರ್‌ ಸಿಂಗ್‌ ವಹಿಸಿದ್ದರು. ಚೀನಾದ ನಿಯೋಗಕ್ಕೆ ಮೇ.ಜ. ಲಿಯು ಲಿನ್‌ ಅವರು ನೇತೃತ್ವ ಇತ್ತು.

ಭೂಸೇನೆಯ ಮುಖ್ಯಸ್ಥ ಜ. ಎಂ.ಎಂ. ನರವಣೆ ಅವರಿಗೆ ಸಂಧಾನ ಮಾತುಕತೆಯ ಬಗ್ಗೆ ಮಾಹಿತಿ ನೀಡಲಾಗಿದೆ. ಬಳಿಕ ಅವರು ಸೇನೆಯ ಹಿರಿಯ ಅಧಿಕಾರಿಗಳ ಜತೆಗೆ ಚರ್ಚೆ ನಡೆಸಿದ್ದಾರೆ.

ಕಾಲಮಿತಿಯೊಳಗೆ ಮತ್ತು ದೃಢೀಕರಿಸಬಹುದಾದ ರೀತಿಯಲ್ಲಿ ಗಡಿಯಿಂದ ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವುದಕ್ಕೆ ಈ ಮಾತುಕತೆಯಲ್ಲಿ ಒತ್ತು ನೀಡಲಾಗಿತ್ತು. ಪಾಂಗಾಂಗ್‌ ಸರೋವರ, ದೆಪ್ಸಾಂಗ್‌ ಸೇರಿ ಸಂಘರ್ಷ ಇರುವ ಸ್ಥಳಗಳಿಂದ ಸೈನಿಕರ ವಾಪಸಾತಿಯನ್ನು ಚರ್ಚಿಸಲಾಗಿದೆ. ವಾಸ್ತವ ನಿಯಂತ್ರಣ ರೇಖೆ (ಎಲ್‌ಎಸಿ) ಸಮೀಪದಲ್ಲಿ ಜಮಾಯಿಸಲಾಗಿರುವ ಭಾರಿ ಸಂಖ್ಯೆಯ ಸೈನಿಕರು ಮತ್ತು ಯುದ್ಧೋಪಕರಣಗಳನ್ನು ತೆರವು ಮಾಡುವುದು ಬಿಕ್ಕಟ್ಟು ಶಮನಕ್ಕೆ ಅಗತ್ಯ ಎಂದು ಸಭೆಯಲ್ಲಿ ಪ್ರತಿಪಾದಿಸಲಾಗಿದೆ.

ಪೂರ್ವ ಲಡಾಖ್‌ನ ಗಡಿ ಪ್ರದೇಶದಲ್ಲಿ ಮೇ 5ರ ಹಿಂದಿನ ಸ್ಥಿತಿಯನ್ನು ಮರುಸ್ಥಾಪಿಸಬೇಕು ಎಂದು ಭಾರತ ವಾದಿಸಿದೆ. ಪಾಂಗಾಂಗ್‌ ಸರೋವರದ ಪ್ರದೇಶದಲ್ಲಿ ಎರಡೂ ದೇಶಗಳ ಸೈನಿಕರ ನಡುವೆ ಮೇ 5ರಂದು ಸಂಘರ್ಷ ನಡೆದಿತ್ತು. ಈ ಪ್ರದೇಶದ ಮೇಲೆ ಚೀನಾದ ಹೊಸ ಹಕ್ಕು ಪ್ರತಿಪಾದನೆಯು ಕಳವಳಕಾರಿ. ಈ ಹಿಂದೆ ಪಾಲಿಸುತ್ತಿದ್ದ ಗಸ್ತು ನಿಯಮಗಳಿಗೆ ಚೀನಾ ಬದ್ಧವಾಗಬೇಕು ಎಂದು ಭಾರತ ಒತ್ತಾಯಿಸಿದೆ ಎಂದು ಮೂಲಗಳು ಹೇಳಿವೆ.‌

ಲಡಾಖ್‌ಗೆ ರಾಜನಾಥ್‌
ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ಲಡಾಖ್‌ಗೆ ಶುಕ್ರವಾರ ಭೇಟಿ ನೀಡಲಿದ್ದಾರೆ. ಸೇನೆಯ ಸನ್ನದ್ಧತೆ ಮತ್ತು ಒಟ್ಟಾರೆ ಪರಿಸ್ಥಿತಿಯನ್ನು ಅವರು ಅವಲೋಕಿಸಲಿದ್ದಾರೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ. ರಾಜನಾಥ್‌ ಜತೆಗೆ ಸೇನೆಯ ಮುಖ್ಯಸ್ಥ ಜ. ನರವಣೆ ಅವರೂ ಇರಲಿದ್ದಾರೆ.

ಜುಲೈ 3ರಂದು ರಾಜನಾಥ್‌ ಅವರು ಲಡಾಖ್‌ಗೆ ಹೋಗುವ ಕಾರ್ಯಕ್ರಮ ನಿಗದಿಯಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರೇ ಲಡಾಖ್‌ಗೆ ಅಂದು ಅಚ್ಚರಿಯ ಭೇಟಿ ನೀಡಿದ್ದರು.

ಮೂರು ಕಿ.ಮೀ. ಬಫರ್‌ ವಲಯ
ಗೋಗ್ರಾ, ಹಾಟ್‌ ಸ್ಪ್ರಿಂಗ್ಸ್‌ ಮತ್ತು ಗಾಲ್ವನ್‌ ಕಣಿವೆ ಪ್ರದೇಶಗಳಿಂದ ಚೀನಾದ ಸೈನಿಕರು ಹಿಂದಕ್ಕೆ ಸರಿದಿದ್ದಾರೆ. ಪಾಂಗಾಂಗ್‌ ಸರೋವರ ಪ್ರದೇಶದಲ್ಲಿ ಚೀನಾ ಸೈನಿಕರ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಿದೆ.

ಸಂಘರ್ಷ ನಡೆದ ಎಲ್ಲ ಸ್ಥಳಗಳ ಸುತ್ತಲಿನ ಮೂರು ಕಿ.ಮೀ. ಪ್ರದೇಶವನ್ನು ಬಫರ್‌ ವಲಯ ಎಂದು ಗುರುತಿಸಲಾಗಿದೆ. ಈ ಪ್ರದೇಶಗಳಿಂದ ಎರಡೂ ಕಡೆಯ ಸೈನಿಕರು ಹಿಂದಕ್ಕೆ ಹೋಗಿದ್ದಾರೆ.

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್‌ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್‌ ಯಿ ನಡುವೆ ದೂರವಾಣಿ ಮೂಲಕ ಎರಡು ತಾಸು ಮಾತುಕತೆ ನಡೆದು ಸೈನಿಕರ ವಾಪಸಾತಿಯ ವಿಚಾರದಲ್ಲಿ ಸಹಮತಕ್ಕೆ ಬರಲಾಗಿತ್ತು. ಅದಾಗಿ ಒಂದು ದಿನದ ಬಳಿಕ, ಜೂನ್‌ 6ರಂದು ಸೈನಿಕರು ಹಿಂದಕ್ಕೆ ಸರಿಯುವ ಪ್ರಕ್ರಿಯೆ ಆರಂಭವಾಗಿತ್ತು. ಆದರೆ, ಜೂನ್‌ 15ರಂದು ಭಾರತ–ಚೀನಾ ಸೈನಿಕರ ನಡುವೆ ಗಾಲ್ವನ್‌ ಕಣಿವೆಯಲ್ಲಿ ಹಿಂಸಾತ್ಮಕ ಸಂಘರ್ಷ ನಡೆಯಿತು. ನಂತರದ ದಿನಗಳಲ್ಲಿ, ಎರಡೂ ದೇಶಗಳು ಎಲ್‌ಎಸಿಯ ಉದ್ದಕ್ಕೂ ಭಾರಿ ಸಂಖ್ಯೆಯಲ್ಲಿ ಸೈನಿಕರನ್ನು ನಿಯೋಜಿಸಿದವು. ಇದು ಬಿಕ್ಕಟ್ಟನ್ನು ಇನ್ನಷ್ಟು ಸಂಕೀರ್ಣಗೊಳಿಸಿತ್ತು. ಜೂನ್‌ 22ರಿಂದ ಆರಂಭವಾದ ಎರಡನೇ ಸುತ್ತಿನ ಮಾತುಕತೆಯು ಬಿಕ್ಕಟ್ಟು ಶಮನಕ್ಕೆ ನೆರವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT