ಭಾನುವಾರ, ಆಗಸ್ಟ್ 1, 2021
23 °C
ಮುಂಬೈ ವೈದ್ಯರಿಗೆ ಹೊಸ ಸವಾಲು

ಕೊರೊನೊ ಸೋಂಕಿತ ಮಕ್ಕಳಲ್ಲಿ ‘ಕಾವಾಸಾಕಿ’ ರೋಗಲಕ್ಷಣ ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಇಲ್ಲಿನ ಕೊರೊನಾ ಸೋಂಕಿತ ಮಕ್ಕಳಲ್ಲಿ ಹೊಸ ರೋಗಲಕ್ಷಣಗಳು ಗೋಚರಿಸುತ್ತಿರುವುದು ಚಿಕಿತ್ಸೆ ನೀಡುತ್ತಿರುವ ವೈದ್ಯರಿಗೆ ಸವಾಲಾಗಿ ಪರಿಣಮಿಸಿದೆ.

ಈ ಮಹಾನಗರದ  ಕೋವಿಡ್‌–19 ಆಸ್ಪತ್ರೆಗಳಲ್ಲಿ ದಾಖಲಾದ ಮಕ್ಕಳಲ್ಲಿ ‘ಕಾವಾಸಾಕಿ’ ಎಂಬ ರೋಗಲಕ್ಷಣಗಳ ಹೋಲಿಕೆ ಕಂಡುಬರುತ್ತಿರುವುದು ವೈದ್ಯರ ಆತಂಕಕ್ಕೆ ಕಾರಣವಾಗಿದೆ.

‘ಕಾವಾಸಾಕಿ’ ಐದು ವರ್ಷದೊಳಗಿನ ಮಕ್ಕಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಆರಂಭದಲ್ಲಿ ಜ್ವರ ಮತ್ತು ಚರ್ಮದ ಮೇಲೆ ಕೆಂಪು ಮತ್ತು ಗುಲಾಬಿ ಬಣ್ಣದ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ಸೂಕ್ತ ಸಮಯದಲ್ಲಿ ಚಿಕಿತ್ಸೆ ದೊರೆಯದಿದ್ದರೆ ರಕ್ತನಾಳಗಳಲ್ಲಿ ತೀವ್ರ ಬಾವು ಬಂದು ಹೃದಯದ ರಕ್ತನಾಳಗಳು ತೀವ್ರ ಹಾನಿಗೊಳಗಾಗುತ್ತವೆ. ಇದನ್ನೇ ಹೋಲುವಂತಹ ಲಕ್ಷಣಗಳು ಈಗ ಕೊರೊನಾ ಸೋಂಕು ತಗುಲಿದ ಮಕ್ಕಳಲ್ಲೂ ಕಾಣಿಸಿಕೊಂಡಿದೆ. ಆದರೆ ಅದು ಇನ್ನೂ ಖಚಿತವಾಗಬೇಕಿದೆ‘ ಎನ್ನುತ್ತಾರೆ ಮುಂಬೈನ್ ಮಕ್ಕಳ ರೋಗ ತಜ್ಞರು.

ಮಕ್ಕಳಲ್ಲಿ ಗೋಚರಿಸದ ರೋಗ ಲಕ್ಷಣ

ಕೊರೊನಾ ಸೋಂಕಿಗೆ ತುತ್ತಾಗುತ್ತಿರುವ ಹೆಚ್ಚಿನ ಮಕ್ಕಳಲ್ಲಿ ಕೊರೊನಾ ರೋಗ ಲಕ್ಷಣಗಳೇ ಗೋಚರಿಸುತ್ತಿಲ್ಲ. ಹಾಗಾಗಿ ಸೋಂಕಿತ ಮಕ್ಕಳಿಗೆ ಆರಂಭದಲ್ಲಿಯೇ ಚಿಕಿತ್ಸೆ ದೊರೆಯುತ್ತಿಲ್ಲ.   

ಮುಂಬೈನಲ್ಲಿ ವರದಿಯಾದ ಶೇ 85ರಷ್ಟು ಪ್ರಕರಣಗಳಲ್ಲಿ ಮಕ್ಕಳಿಗೆ ರೋಗಲಕ್ಷಣಗಳೇ ಇರಲಿಲ್ಲ. ಶೇ 10ರಷ್ಟು ಮಕ್ಕಳಲ್ಲಿ  ಕೆಮ್ಮು, ಶೀತ, ಜ್ವರ ಮತ್ತು ಉಸಿರಾಟ ತೊಂದರೆಯಂತಹ ಸಮಸ್ಯೆಗಳು ಕಾಣಿಸಿಕೊಂಡಿದ್ದವು. ಕೆಲವು ಮಕ್ಕಳು ಅತಿಸಾರದಿಂದ ಬಳಲುತ್ತಿ ದ್ದರು. ಇದು ವೈದ್ಯರಿಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎನ್ನುತ್ತಾರೆ ಮಹಾರಾಷ್ಟ್ರದ ಆರೋಗ್ಯ ಸರ್ವೇಕ್ಷಣಾ ವೈದ್ಯಾಧಿಕಾರಿ ಡಾ. ಪ್ರದೀಪ್‌ ಆವ್ಟೆ.

10 ವರ್ಷದ ಮಕ್ಕಳಲ್ಲಿ ಹೆಚ್ಚಿದ ಸೋಂಕು

ದೇಶದಲ್ಲಿ ಕೊರೊನಾ ಸೋಂಕಿನ ಪ್ರಕರಣದಲ್ಲಿ ಮಕ್ಕಳ ಪ್ರಮಾಣ ಶೇ 1ಕ್ಕಿಂತ ಕಡಿಮೆ. ಆದರೂ, ಮಹಾರಾಷ್ಟ್ರದಲ್ಲಿ ಮಕ್ಕಳೂ ಹೆಚ್ಚಿನ ಪ್ರಮಾಣದಲ್ಲಿ ಸೋಂಕಿಗೆ ತುತ್ತಾಗುತ್ತಿದ್ದಾರೆ. ಇದು ಸ್ಥಳೀಯ ಆಡಳಿತವನ್ನು ಚಿಂತೆಗೀಡುಮಾಡಿದೆ.

’ಮಾರ್ಚ್‌ನಿಂದ ಇಲ್ಲಿಯವರೆಗೆ ಮಹಾರಾಷ್ಟ್ರದಲ್ಲಿ ಒಟ್ಟು 6 ಸಾವಿರ ಮತ್ತು ಮುಂಬೈ ನಗರವೊಂದರಲ್ಲೇ 1,311 ಮಕ್ಕಳಿಗೆ ಕೋವಿಡ್‌–19 ವೈರಸ್‌ ತಗುಲಿದೆ‘ ಎನ್ನುತ್ತವೆ ಬೃಹನ್‌ ಮುಂಬೈ ಮುನ್ಸಿಪಲ್‌ ಕಾರ್ಪೊರೇಷನ್‌ (ಬಿಎಂಸಿ) ಅಂಕಿ, ಅಂಶಗಳು. ಇಷ್ಟು ಸೋಂಕಿತರಲ್ಲಿ 10 ವರ್ಷದೊಳಗಿನ ಮಕ್ಕಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆ ಪೈಕಿ ಶೇ 54ರಷ್ಟು ಬಾಲಕರು ಮತ್ತು ಶೇ 46ರಷ್ಟು ಬಾಲಕಿಯರು. ಹತ್ತು ನವಜಾತ ಶಿಶುಗಳಿಗೂ ಸೋಂಕು ತಗುಲಿದೆ. ಇದುವರೆಗೂ ಏಳು ಮಕ್ಕಳು ಕೋವಿಡ್‌–19ಕ್ಕೆ ಬಲಿಯಾಗಿದ್ದಾರೆ. 

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಗೆ (ಐಸಿಎಂಆರ್) ಮೇ ತಿಂಗಳ ಮಧ್ಯ ಭಾಗದಲ್ಲಿ ಮಹಾರಾಷ್ಟ್ರ ಆರೋಗ್ಯ ಸಚಿವಾಲಯ ಸಲ್ಲಿಸಿದ ವರದಿಯಲ್ಲಿ ಈ ಎಲ್ಲ ಅಂಶಗಳನ್ನೂ ಪ್ರಸ್ತಾಪ ಮಾಡಲಾಗಿದೆ. 

ರೋಗನಿರೋಧಕ ಶಕ್ತಿ ಕೊರತೆ ಮತ್ತು ಇತರ ರೋಗಗಳಿಂದ ಬಳಲುತ್ತಿರುವ ಮಕ್ಕಳು ಬೇಗ ಸೋಂಕಿಗೆ ತುತ್ತಾಗುತ್ತಿದ್ದಾರೆ.  ದೊಡ್ಡವರಿಗೆ ಹೋಲಿಸಿದರೆ ಮಕ್ಕಳಲ್ಲಿ ಸೋಂಕು ಪತ್ತೆ ಹಚ್ಚುವುದು ಸವಾಲಿನ ಕೆಲಸ ಎನ್ನುತ್ತಾರೆ ಕಿಂಗ್‌ ಎಡ್ವರ್ಡ್‌ ಹಾಸ್ಪಿಟಲ್‌ (ಕೆಇಎಂ) ವೈದ್ಯಾಧಿಕಾರಿ ಡಾ.ಮುಖೇಶ್‌ ಅಗರವಾಲ್‌.  

ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಮತ್ತು ಶ್ವಾಸಕೋಶ ಆರೋಗ್ಯ ಚೆನ್ನಾಗಿರುತ್ತದೆ. ವಯಸ್ಕರರಿಗೆ ಹೋಲಿಸಿದರೆ ಸ್ಥೂಲಕಾಯ, ಸಕ್ಕರೆ ಕಾಯಿಲೆ, ಅಧಿಕ ರಕ್ತದೊತ್ತಡದಂತಹ ಸಮಸ್ಯೆಗಳು ಇರುವುದಿಲ್ಲ. ಮಕ್ಕಳ ಚೇತರಿಕೆ ಪ್ರಮಾಣವೂ ಚೆನ್ನಾಗಿದೆ ಎಂದು ಹೇಳುತ್ತಾರೆ. 

ಮಹಾರಾಷ್ಟ್ರದ ಗ್ರಾಮಾಂತರ ಪ್ರದೇಶಗಳಲ್ಲಿ ವೆಂಟಿಲೇಟರ್‌ ಸೌಲಭ್ಯ ದೊರೆಯದ ಕಾರಣ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳನ್ನು ಮುಂಬೈ ಆಸ್ಪತ್ರೆಗಳಿಗೆ ಕರೆ ತರಲಾಗುತ್ತದೆ. ಹಾಗಾಗಿ ಸದ್ಯ ಮುಂಬೈನಲ್ಲಿರುವ ಮಕ್ಕಳ ಮತ್ತು ನವಜಾತ ಶಿಶುಗಳ ಪ್ರತ್ಯೇಕ ಕೋವಿಡ್‌–19 ವಾರ್ಡ್‌ಗಳಲ್ಲಿ ಮಹಾರಾಷ್ಟ್ರದ ಇತರ ಭಾಗಗಳಿಂದ ಬಂದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದರಿಂದ ಮುಂಬೈನ ಮಕ್ಕಳಿಗೆ ತಕ್ಷಣಕ್ಕೆ ಚಿಕಿತ್ಸೆ ಸಿಗುವುದು ದುಸ್ತರವಾಗುತ್ತಿದೆ ಎಂದು ಪಾಲಿಕೆಯ ಆರೋಗ್ಯ ಅಧಿಕಾರಿಗಳು ಹೇಳುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು