ಬುಧವಾರ, ಆಗಸ್ಟ್ 4, 2021
21 °C

ಪೂರ್ವ ಲಡಾಕ್‌ನಲ್ಲಿ ಸೇನಾ ಹಿಂತೆಗೆತಕ್ಕೆ ಭಾರತ–ಚೀನಾ ಸಮ್ಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಪೂರ್ವ ಲಡಾಕ್‌ನ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಭಾರತ ಮತ್ತು ಚೀನಾ ಸೈನಿಕರನ್ನು ಹಿಂತೆಗೆದುಕೊಳ್ಳುತ್ತಿರುವ ಪ್ರಕ್ರಿಯೆಯನ್ನು ಎರಡೂ ದೇಶಗಳ ಹಿರಿಯ ರಾಜತಾಂತ್ರಿಕರು ವಿಡಿಯೊ ಕಾನ್ಫರೆನ್ಸ್‌ ಮೂಲಕ ಪರಾಮರ್ಶೆ ನಡೆಸಿದ್ದಾರೆ.

ಎಲ್‌ಎಸಿ ಉದ್ದಕ್ಕೂ ಸೈನ್ಯವನ್ನು ಹಿಂತೆಗೆದುಕೊಳ್ಳುವ ವಿಚಾರವಾಗಿ ಭಾರತೀಯ ಸೇನೆಯ ಹಿರಿಯ ಕಮಾಂಡರ್‌ಗಳು ಮತ್ತು ಚೀನಾ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ನಡುವೆ ಆದ ಒಪ್ಪಂದಗಳನ್ನು ಎರಡೂ ಕಡೆಯವರು ಪ್ರಾಮಾಣಿಕವಾಗಿ ಜಾರಿಗೆ ತರುವುದು ಅಗತ್ಯವೆಂದು ಉಭಯ ರಾಷ್ಟ್ರಗಳು ಒಪ್ಪಿಕೊಂಡಿವೆ ಎಂದು ವಿದೇಶಾಂಗ ಸಚಿವಾಲಯ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

2013 ರಲ್ಲಿ ಸ್ಥಾಪನೆಯಾದ ಭಾರತ-ಚೀನಾ ಗಡಿ ವ್ಯವಹಾರಗಳ (ಡಬ್ಲ್ಯುಎಂಸಿಸಿ) ಸಮಾಲೋಚನೆ ಮತ್ತು ಸಮನ್ವಯ ಕಾರ್ಯವಿಧಾನದ 16 ನೇ ಸಭೆ ಈ ವಿಡಿಯೊ ಕಾನ್ಫರೆನ್ಸ್‌ ಆಗಿತ್ತು.

ವಿದೇಶಾಂಗ ಇಲಾಖೆಯಲ್ಲಿ ಪೂರ್ವ ಏಷ್ಯಾ ವಿಭಾಗದ ಮುಖ್ಯಸ್ಥರಾಗಿರುವ ನವೀನ್ ಶ್ರೀವಾಸ್ತವ ಅವರು ವಿಡಿಯೊ ಕಾನ್ಫರೆನ್ಸ್‌ನಲ್ಲಿ ಭಾರತ ಸರ್ಕಾರದ ನಿಯೋಗದ ನೇತೃತ್ವ ವಹಿಸಿದ್ದರು. ಚೀನಾ ಸರ್ಕಾರದ ನಿಯೋಗದ ನೇತೃತ್ವವನ್ನು ವಿದೇಶಾಂಗ ಸಚಿವಾಲಯದ ಗಡಿ ಮತ್ತು ಸಾಗರ ವ್ಯವಹಾರಗಳ ಮಹಾನಿರ್ದೇಶಕ ಹಾಂಗ್ ಲಿಯಾಂಗ್ ವಹಿಸಿದ್ದರು. ಅವರು ಈ ಮೊದಲು ಜೂನ್ 24 ರಂದು ಡಬ್ಲ್ಯುಎಂಸಿಸಿಯ ಚೌಕಟ್ಟಿನೊಳಗೆ ವಿಡಿಯೊ ಕಾನ್ಫರೆನ್ಸ್ ನಡೆಸಿದ್ದರು. 

ಶುಕ್ರವಾರ ನಡೆದ ಡಬ್ಲ್ಯುಎಂಸಿಸಿ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಗಡಿ ಪ್ರದೇಶಗಳಲ್ಲಿ ನಿರಂತರ ಶಾಂತಿ ಸ್ಥಾಪನೆ ಮತ್ತು ಶಾಂತಿ ಕಾಪಾಡಿಕೊಳ್ಳುವುದು ದ್ವಿಪಕ್ಷೀಯ ಸಂಬಂಧಗಳ ಒಟ್ಟಾರೆ ಅಭಿವೃದ್ಧಿಗೆ ಅಗತ್ಯ ಎಂದು ಭಾರತದ ನವೀನ್ ಶ್ರೀವಾಸ್ತವ ಮತ್ತು ಚೀನಾದ ಹಾಂಗ್ ಲಿಯಾಂಗ್ ಒಪ್ಪಿಕೊಂಡರು.

ಜೂನ್ 6, 22 ಮತ್ತು 30ರಂದು ನಡೆದ ಮೂರು ಸುತ್ತಿನ ಮಾತುಕತೆಗಳನ್ನು ಅನುಸರಿಸಲು ಉಭಯ ದೇಶಗಳ ಮಿಲಿಟರಿ ಕಮಾಂಡರ್‌ಗಳು ಮತ್ತೊಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಈ ಬಗ್ಗೆ ಎರಡೂ ದೇಶಗಳ ವಿಶೇಷ ಪ್ರತಿನಿಧಿಗಳೂ ಒಪ್ಪಿಗೆ ಸೂಚಿಸಿದ್ದಾರೆ. 

ಈ ಕುರಿತು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರು ಭಾನುವಾರ ಎರಡು ಗಂಟೆಗಳ ಕಾಲ ದೂರವಾಣಿ ಸಂಭಾಷಣೆಯಲ್ಲಿ ಚರ್ಚಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು