ಸೋಮವಾರ, ಡಿಸೆಂಬರ್ 6, 2021
27 °C
ಮಾರ್ಗಸೂಚಿಯ ಅನ್ವಯವೇ ಕ್ವಾರಂಟೈನ್‌ ಮಾಡಲಾಗಿದೆ: ಬಿಎಂಸಿ ಸ್ಪಷ್ಟನೆ

ಸುಶಾಂತ್ ಪ್ರಕರಣ| ಪೊಲೀಸ್‌ ಅಧಿಕಾರಿಗೆ ಮುಂಬೈನಲ್ಲಿ ಕ್ವಾರಂಟೈನ್‌: ನಿತೀಶ್‌ ಕಿಡಿ

ಪಿಟಿಐ Updated:

ಅಕ್ಷರ ಗಾತ್ರ : | |

ಪಟ್ನಾ/ಮುಂಬೈ: ‘ವಿಶೇಷ ತನಿಖಾ ತಂಡದ ಮೇಲುಸ್ತುವಾರಿ ನೋಡಿಕೊಳ್ಳಲು ತೆರಳಿದ್ದ ಪೊಲೀಸ್‌ ಅಧಿಕಾರಿಯನ್ನು ಬಲವಂತವಾಗಿ ಕ್ವಾರಂಟೈನ್‌ ಮಾಡಿರುವ ಬೃಹತ್‌ ಮುಂಬೈ ಮುನ್ಸಿಪಾಲ್‌ ಕಾರ್ಪೋರೇಷನ್‌ (ಬಿಎಂಸಿ) ಅಧಿಕಾರಿಗಳ ಕ್ರಮವು ಅಸಮಂಜಸವಾದುದು’ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಸೋಮವಾರ‌ ಹೇಳಿದ್ದಾರೆ.

ಮುಂಬೈನಲ್ಲಿರುವ ಬಿಹಾರ ಪೊಲೀಸ್‌ ತಂಡವು ಬಾಲಿವುಡ್‌ ನಟ ಸುಶಾಂತ್‌ ಸಿಂಗ್ ರಜಪೂತ್‌‌ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದೆ. ಆ ತಂಡದ ಮೇಲ್ವಿಚಾರಣೆ ನೋಡಿಕೊಳ್ಳುವ ಸಲುವಾಗಿ ಪಟ್ನಾ ನಗರದ ಪೊಲೀಸ್‌ ವರಿಷ್ಠಾಧಿಕಾರಿ ವಿನಯ್‌ ತಿವಾರಿ ಅವರು ಭಾನುವಾರ ರಾತ್ರಿ ಮುಂಬೈಗೆ ಬಂದಿದ್ದರು. 

ಬಿಎಂಸಿ ಅಧಿಕಾರಿಗಳು ವಿನಯ್‌ ಅವರ ಕೈಗೆ ಕ್ವಾರಂಟೈನ್‌ ಮುದ್ರೆ ಹಾಕಿ ಗೋರೆಗಾಂವ್‌ನಲ್ಲಿರುವ ಎಸ್‌ಆರ್‌ಪಿಎಫ್‌ನ ಅತಿಥಿ ಗೃಹದಲ್ಲಿ 14 ದಿನಗಳ ಕಾಲ ಸ್ವಯಂ ಪ್ರತ್ಯೇಕವಾಸದಲ್ಲಿರಲು ಸೂಚಿಸಿದ್ದರು.

ಬಿಎಂಸಿ ಅಧಿಕಾರಿಗಳ ಈ ಕ್ರಮಕ್ಕೆ ಬಿಹಾರದ ಡಿಜಿಪಿ ಗುಪ್ತೇಶ್ವರ ಪಾಂಡೆ ಆಕ್ಷೇಪ ವ್ಯಕ್ತಪಡಿಸಿದ್ದರು. 

‘ಅಧಿಕೃತ ಕೆಲಸದ ಮೇಲೆ ಮುಂಬೈಗೆ ಹೋಗಿದ್ದ ವಿನಯ್‌ ಅವರನ್ನು ಅಲ್ಲಿನ ಬಿಎಂಸಿ ಅಧಿಕಾರಿಗಳು ಬಲವಂತವಾಗಿ ಕ್ವಾರಂಟೈನ್‌ನಲ್ಲಿಟ್ಟಿದ್ದಾರೆ. ಅವರಿಗೆ ಸಮರ್ಪಕ ವಸತಿ ವ್ಯವಸ್ಥೆಯನ್ನೂ ಮಾಡಿಲ್ಲ’ ಎಂದು ಪಾಂಡೆ ಅವರು ಟ್ವೀಟ್‌ ಮೂಲಕ ದೂರಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಪ್ರತಿಕ್ರಿಯೆ ನೀಡಿರುವ ನಿತೀಶ್‌ ‘ವಿನಯ್‌ ಜೊತೆ ಬಿಎಂಸಿ ಅಧಿಕಾರಿಗಳು ನಡೆದುಕೊಂಡ ರೀತಿ ಸರಿಯಲ್ಲ. ಈ ವಿಷಯಕ್ಕೆ ಸಂಬಂಧಿಸಿದಂತೆ ಗುಪ್ತೇಶ್ವರ ಪಾಂಡೆ ಅವರು ಮಹಾರಾಷ್ಟ್ರದ ಅಧಿಕಾರಿಗಳ ಜೊತೆ ಚರ್ಚಿಸಲಿದ್ದಾರೆ’ ಎಂದರು.

ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರೊಂದಿಗೆ ಮಾತನಾಡುತ್ತೀರಾ ಎಂಬ ಪ್ರಶ್ನೆಗೆ ‘ಇದು ರಾಜಕೀಯ ವಿಷಯವಲ್ಲ. ಇದನ್ನು ಅಧಿಕಾರಿಗಳ ಮಟ್ಟದಲ್ಲೇ ಚರ್ಚಿಸಿ ಬಗೆಹರಿಸಿಕೊಳ್ಳಲಾಗುತ್ತದೆ’ ಎಂದು ಹೇಳಿದರು.

‘ಕೋವಿಡ್‌–19 ಸೋಂಕಿನಿಂದಾಗಿ ಮಹಾರಾಷ್ಟ್ರ ಸರ್ಕಾರವು ಜಾರಿಗೊಳಿಸಿರುವ ಮಾರ್ಗಸೂಚಿಗಳ ಅನ್ವಯವೇ ಬಿಹಾರದ ಪೊಲೀಸ್‌ ಅಧಿಕಾರಿಯನ್ನು ಕ್ವಾರಂಟೈನ್‌ ಮಾಡಲಾಗಿದೆ’ ಎಂದು ಬೃಹತ್ ಮುಂಬೈ ಮಹಾನಗರ ಪಾಲಿಕೆಯ (ಬಿಎಂಸಿ) ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

‘ಬೇರೆ ರಾಜ್ಯಗಳಿಂದ ಬರುವವರು 14 ದಿನಗಳ ಕಾಲ ಕ್ವಾರಂಟೈನ್‌ನಲ್ಲಿರಬೇಕೆಂಬ ನಿಯಮವಿದೆ. ಅದನ್ನು ನಾವು ಪಾಲಿಸಿದ್ದೇವೆ. ಇದನ್ನು ವಿನಯ್‌ ಅವರಿಗೂ ಮನವರಿಕೆ ಮಾಡಿಕೊಟ್ಟಿದ್ದೇವೆ. ಕ್ವಾರಂಟೈನ್‌ ಅವಧಿಯನ್ನು ಕಡಿತಗೊಳಿಸುವಂತೆ ಅವರು ಬಿಎಂಸಿಗೆ ಮನವಿ ಮಾಡಬೇಕು. ಅದನ್ನು ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು