ಸೋಮವಾರ, ಆಗಸ್ಟ್ 2, 2021
24 °C
ಬ್ರಾಹ್ಮಣ ಚೇತನ ಪರಿಷತ್ತಿನ ಮೂಲಕ ಸಮುದಾಯದ ಹಕ್ಕುಗಳ ಪ್ರತಿಪಾದನೆ

ಉತ್ತರ ಪ್ರದೇಶ: ಬ್ರಾಹ್ಮಣ ಸಮುದಾಯ ಸೆಳೆಯಲು ಜಿತಿನ್ ಪ್ರಸಾದ್ ಸಜ್ಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Jithin Prasad

ನವದೆಹಲಿ: ಉತ್ತರ ಪ್ರದೇಶ ಕಾಂಗ್ರೆಸ್‌ನ ಮುಖ್ಯ ಆಧಾರವಾಗಿದ್ದ ಬ್ರಾಹ್ಮಣ ಸಮುದಾಯವನ್ನು ಸೆಳೆಯಲು ಪಕ್ಷದ ಹಿರಿಯ ಮುಖಂಡ ಜಿತಿನ್ ಪ್ರಸಾದ್ ಸಜ್ಜಾಗಿದ್ದಾರೆ. 

ಉತ್ತರ ಪ್ರದೇಶದಲ್ಲಿ ಬ್ರಾಹ್ಮಣ ಸಮುದಾಯವು ಕಿರುಕುಳವನ್ನು ಅನುಭವಿಸುತ್ತಿದೆ ಎಂದು ಆರೋಪಿಸಿರುವ ಜಿತಿನ್ ಪ್ರಸಾದ್, ಬ್ರಾಹ್ಮಣ ಚೇತನ ಪರಿಷತ್ತಿನ ‘ಬ್ರಹ್ಮ ಚೇತನ್ ಸಂವಾದ’ದ ಮೂಲಕ ಸಮುದಾಯದ ಬೇಡಿಕೆಗಳು, ನಿರೀಕ್ಷೆಗಳು ಮತ್ತು ಸಲಹೆಗಳಿಗೆ ಧ್ವನಿಯಾಗುವುದಾಗಿ ತಿಳಿಸಿದ್ದಾರೆ.

‘ನಾನು ಯಾರ ಪಾಲನ್ನೂ ಹಂಚಿಕೊಳ್ಳುವುದಿಲ್ಲ. ಆದರೆ, ಬ್ರಾಹ್ಮಣ ಸಮುದಾಯವು ಸೂಕ್ತ ಗೌರವ ಮತ್ತು ತನ್ನ ಹಕ್ಕುಗಳನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದನ್ನು ನಾನು ಬಯಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ)ಯ ವಿಶೇಷ ಆಹ್ವಾನಿತರೂ ಆಗಿರುವ ಜಿತಿನ್ ಪ್ರಸಾದ್, ‘ಉತ್ತರ ಪ್ರದೇಶದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಆಡಳಿತಾವಧಿಯಲ್ಲಿ ಬ್ರಾಹ್ಮಣರಿಗೆ ತಮ್ಮ ಹಕ್ಕುಗಳನ್ನು ಪ್ರತಿಪಾದಿಸಲಾಗುತ್ತಿಲ್ಲ, ಅವರನ್ನು ವಿನಾ ಕಾರಣ ಗುರಿಯಾಗಿಸಲಾಗುತ್ತಿದೆ’ ಎಂದು ಆರೋಪಿಸಿದ್ದಾರೆ. 

‘ಕಳೆದ 20 ದಿನಗಳ ಅವಧಿಯಲ್ಲಿ ಸಮುದಾಯದ ಕನಿಷ್ಠ 19 ಮಂದಿ ಸಾವನ್ನಪ್ಪಿದ್ದಾರೆ. ಎಲ್ಲಾ ವೇದಿಕೆಗಳಲ್ಲೂ ಬ್ರಾಹ್ಮಣ ಸಮುದಾಯದ ವಿರುದ್ಧ ಪಕ್ಷಪಾತ ಮಾಡಲಾಗುತ್ತಿದೆ. ಸರ್ಕಾರದಿಂದ ಯಾವುದೇ ಸಹಾಯವೂ ದೊರೆಯುತ್ತಿಲ್ಲ. ಅಷ್ಟೇ ಅಲ್ಲ ಆಡಳಿತಾರೂಢ ಶಾಸಕರು ಮತ್ತು ಸಂಸದರು ಉಸಿರುಗಟ್ಟುವ ವಾತಾವರಣದಲ್ಲಿದ್ದಾರೆ’ ಎಂದೂ ಜಿತಿನ್ ದೂರಿದ್ದಾರೆ. 

‘ರಾಜ್ಯದಲ್ಲಿ 2022ರಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ನಾನು ಸಮುದಾಯದ ಪರ ಮಾತನಾಡುತ್ತಿಲ್ಲ. ಆದರೆ, ಈ ಸರ್ಕಾರದ ಅಡಿಯಲ್ಲಿ ಬ್ರಾಹ್ಮಣ ಸಮುದಾಯ ಕಿರುಕುಳವನ್ನು ಅನುಭವಿಸುತ್ತಿದೆ. ಸಮುದಾಯದ ಹಕ್ಕು ಮತ್ತು ಬೇಡಿಕೆಗಳ ಪರವಾಗಿ ನಾನು ಧ್ವನಿ ಎತ್ತುತ್ತಿದ್ದೇನೆ’ ಎಂದು ಜಿತಿನ್ ಸ್ಪಷ್ಟಪಡಿಸಿದ್ದಾರೆ. 

2017ರ ವಿಧಾನಸಭಾ ಚುನಾವಣೆಗೂ ಮುನ್ನವೇ ಜಿತಿನ್ ಪ್ರಸಾದ್, ‘ಬ್ರಾಹ್ಮಣ ಚೇತನ ಪರಿಷತ್‌’ ಮೂಲಕ ರಾಜ್ಯದಾದ್ಯಂತ ಸರಣಿ ಸಂವಾದಗಳನ್ನು ನಡೆಸುವ ಮೂಲಕ ಬ್ರಾಹ್ಮಣ ಸಮುದಾಯವನ್ನು ತಲುಪಿದ್ದರು. ಆದರೆ, ಇದು ಬಿಜೆಪಿಯ ಗೆಲುವಿನ ಮೇಲೆ ಯಾವುದೇ ಪರಿಣಾಮ ಬೀರಲು ಸಾಧ್ಯವಾಗಿರಲಿಲ್ಲ. 

ಉತ್ತರ ಪ್ರದೇಶದಲ್ಲಿ ಒಟ್ಟು ಮತದಾರದಲ್ಲಿ ಶೇ 13ರಷ್ಟು ಬ್ರಾಹ್ಮಣ ಸಮುದಾಯದ ಮತಗಳಿದ್ದು, ಈ ಸಮುದಾಯ ಅಲ್ಲಿನ ರಾಜಕಾರಣದಲ್ಲಿ ಪ್ರಭಾವ ಬೀರುವ ಸ್ಥಾನದಲ್ಲಿದೆ. 

ಕಾಂಗ್ರೆಸ್ ತನ್ನ ಅಧಿಕಾರದ ಉಚ್ಛ್ರಾಯದ ದಿನಗಳಲ್ಲಿ ಬ್ರಾಹ್ಮಣ ಸಮುದಾಯದವರಾದ ಕಮಲಾಪತಿ ತ್ರಿಪಾಠಿ, ನಾರಾಯಣ ದತ್ತ ತಿವಾರಿ, ಗೋವಿಂದ್ ವಲ್ಲಭ್ ಪಂತ್ ಮತ್ತು ಜಿತಿನ್ ಅವರ ತಂದೆ ಜಿತೇಂದ್ರ ಪ್ರಸಾದ್ ಅವರಂಥ ಪ್ರಭಾವಶಾಲಿ ನಾಯಕರನ್ನು ಹೊಂದಿತ್ತು. 

ಆದರೆ, 1989ರ ನಂತರ ಬ್ರಾಹ್ಮಣ ಸಮುದಾಯವು ಬಿಜೆಪಿಯತ್ತ ವಾಲಿತು. ಪರಿಶಿಷ್ಟ ಜಾತಿಗಳು ಕಾನ್ಷಿರಾಂ ಅವರು ಸ್ಥಾಪಿಸಿದ ಬಿಎಸ್‌ಪಿಯತ್ತ ಆಕರ್ಷಿತವಾದರೆ, ಇತರ ಹಿಂದುಳಿದ ವರ್ಗಗಳು ಮುಲಾಯಂ ಸಿಂಗ್  ಯಾದವ್ ಅವರ ಸಮಾಜವಾದಿ ಪಕ್ಷವನ್ನು ಬೆಂಬಲಿಸಿದವು. 

2017ರ ವಿಧಾನಸಭಾ ಚುನಾವಣೆಯಲ್ಲಿ ಒಟ್ಟು 403 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿಯು 325 ಸ್ಥಾನಗಳನ್ನು ಗಳಿಸುವಲ್ಲಿ ಸಫಲವಾದರೆ, ಕಾಂಗ್ರೆಸ್ ಕೇವಲ ಏಳು ಸ್ಥಾನಗಳನ್ನು ಮಾತ್ರ ಗಳಿಸಿತು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು