ಮಂಗಳವಾರ, ಆಗಸ್ಟ್ 3, 2021
27 °C

ಕಾನ್ಪುರ 8 ಪೊಲೀಸರ ಹತ್ಯೆ ಪ್ರಕರಣ: ವಿಕಾಸ್ ದುಬೆ ಸಹಚರ ಅಮರ್ ದುಬೆ ಎನ್‌ಕೌಂಟರ್

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಕಾರ್ಯಾಚರಣೆಯಲ್ಲಿರುವ ಉತ್ತರ ಪ್ರದೇಶ ಪೊಲೀಸರು–ಸಂಗ್ರಹ ಚಿತ್ರ

ಕಾನ್ಪುರ (ಉತ್ತರಪ್ರದೇಶ): ಎಂಟು ಮಂದಿ ಪೊಲೀಸರನ್ನು ಹತ್ಯೆಗೈದ ಕುಖ್ಯಾತ ರೌಡಿ ಶೀಟರ್ ವಿಕಾಸ್ ದುಬೆ ಸಹಚರ ಅಮರ್‌ ದುಬೆ ಎಂಬಾತನನ್ನು ಉತ್ತರ ಪ್ರದೇಶ ವಿಶೇಷ ಪೊಲೀಸ್‌ ತಂಡ (ಎಸ್‌ಟಿಎಫ್‌) ಎನ್‌ಕೌಂಟರ್‌ ಮಾಡಿದೆ.

ಲಖನೌದಿಂದ 150 ಕಿ.ಮೀ. ದೂರದಲ್ಲಿರುವ ಹಮಿರ್‌ಪುರದಲ್ಲಿ ಬುಧವಾರ ಬೆಳಿಗ್ಗೆ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಅಮರ್‌ ದುಬೆ ಮೃತಪಟ್ಟಿರುವುದಾಗಿ ಎಎನ್‌ಐ ವರದಿ ಮಾಡಿದೆ.

ಹರಿಯಾಣದ ಫರಿದಾಬಾದ್‌ನಲ್ಲಿ ಓಯೊ ಹೊಟೇಲ್‌ವೊಂದರಲ್ಲಿ ವಿಕಾಸ್ ದುಬೆ ಉಳಿದುಕೊಂಡಿರುವ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಅವರು ಹೊಟೇಲ್‌ ತಲುಪುವಷ್ಟರಲ್ಲಿ ಆತ ತಪ್ಪಿಸಿಕೊಂಡಿದ್ದ. ಹೊಟೇಲ್‌ನ ಸಿಸಿಟಿವಿ ದೃಶ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ದೃಶ್ಯಗಳಲ್ಲಿ ಕಂಡಿರುವ ಕಪ್ಪು ಶರ್ಟ್‌, ಜೀನ್ಸ್ ಮತ್ತು ಮಾಸ್ಕ್‌ ಧರಿಸಿರುವ ವ್ಯಕ್ತಿಯ ವಿಕಾಸ್‌ ದುಬೆ ಇರಬಹುದೆಂದು ಗುರುತಿಸಲಾಗಿದೆ. ಗುರುಗ್ರಾಮ, ಹರಿಯಾಣ ಸುತ್ತಮುತ್ತಲು ಹೈಅಲರ್ಟ್‌ ಘೋಷಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ.

ವಿಕಾಸ್‌ ದುಬೆಯ ಮನೆಯಲ್ಲಿ ಹುಡುಕಾಟ ನಡೆಸಿರುವ ಪೊಲೀಸರು 2 ಕೆ.ಜಿಯಷ್ಟು ಸ್ಫೋಟಕ ಸಾಮಗ್ರಿ, ಆರು ನಾಡ ಪಿಸ್ತೂಲ್‌ಗಳು, 15 ಕಚ್ಚಾ ಬಾಂಬ್‌ಗಳು ಹಾಗೂ 25 ಕ್ಯಾಟ್ರಿಜ್‌ಗಳನ್ನು ವಶ ಪಡಿಸಿಕೊಂಡಿದ್ದಾರೆ.

ಇತ್ತೀಚೆಗಷ್ಟೇ ವಿಕಾಸ್ ದುಬೆಯ 18 ಮಂದಿ ಪ್ರಮುಖ ಸಹಚರರಲ್ಲಿ ಒಬ್ಬನಾದ ದಯಾಶಂಕರ್ ಅಗ್ನಿಹೋತ್ರಿಯನ್ನು ಪೊಲೀಸರು ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದರು.

ವಿಕಾಸ್ ದುಬೆ ಹಾಗೂ ಆತನ ಸಹಚರರನ್ನು ಬಂಧಿಸಲು 25 ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ರೌಡಿ ವಿಕಾಸ್ ದುಬೆ ಅಡಗುದಾಣದ ಬಗ್ಗೆ ಮಾಹಿತಿ ನೀಡಿದರೆ ₹50,000 ನಗದು ಬಹುಮಾನ ಘೋಷಿಸಲಾಗಿದೆ.

ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ವಿಕಾಸ್ ದುಬೆಯನ್ನು ಬಂಧಿಸಲು ಪೊಲೀಸರ ತಂಡ ಆತ ಅಡಗಿದ್ದ ಕಾನ್ಪುರದ ಡೆಹತ್‌ನ ಬಿಕ್ರಿ ಗ್ರಾಮಕ್ಕೆ ತೆರಳಿತ್ತು. ಮುಂಚೆಯೇ ವಿಷಯ ತಿಳಿದುಕೊಂಡಿದ್ದ ವಿಕಾಸ್ ದುಬೆ ಹಾಗೂ ಆತನ ಸಹಚರರು ದಾರಿಗೆ ಅಡ್ಡಲಾಗಿ ಕಲ್ಲು ಗುಂಡುಗಳನ್ನು ಜೋಡಿಸಿದ್ದರು. ಅನತಿ ದೂರದಲ್ಲಿಯೇ ಮರೆಯಾಗಿ ನಿಂತು ಪೊಲೀಸರ ಮೇಲೆ ಮನಸೋ ಇಚ್ಛೆ ಗುಂಡು ಹಾರಿಸಿದ್ದರು. ಪರಿಣಾಮ ಒಬ್ಬ ಡಿವೈಎಸ್ಪಿ ಸೇರಿದಂತೆ ಎಂಟು ಮಂದಿ ಪೊಲೀಸರು ಹತ್ಯೆಯಾಗಿದ್ದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು