ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನ್ಪುರ: ರೌಡಿಶೀಟರ್‌ಗಳಿಂದ ಪೊಲೀಸರ ಮೇಲೆ ಗುಂಡಿನ ದಾಳಿ, 8 ಪೊಲೀಸರ ಹತ್ಯೆ

ಉತ್ತರ ಪ್ರದೇಶದಲ್ಲಿ ಘಟನೆ; ಆರು ಪೊಲೀಸರಿಗೆ ಗಾಯ; ಆರೋಪಿಗಳು ಪರಾರಿ
Last Updated 10 ಜುಲೈ 2020, 10:21 IST
ಅಕ್ಷರ ಗಾತ್ರ

ಲಖನೌ: ಕುಖ್ಯಾತ ರೌಡಿ ವಿಕಾಸ್‌ ದುಬೆ ಎಂಬಾತನನ್ನು ಬಂಧಿಸಲು ಹೋದ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ಎಂಟು ಮಂದಿ ಪೊಲೀಸರು ಗುಂಡಿನ ದಾಳಿಯಲ್ಲಿ ಹತ್ಯೆಯಾಗಿದ್ದಾರೆ. ಮೃತಪಟ್ಟವರಲ್ಲಿ ಒಬ್ಬ ಡಿವೈಎಸ್‌ಪಿ, ಮೂವರು ಸಬ್‌ಇನ್ಸ್‌ಪೆಕ್ಟರ್‌ಗಳೂ ಸೇರಿದ್ದಾರೆ.

ದುಬೆ, ಆತನ ಗ್ಯಾಂಗ್‌ನ ಮಂದಿ ಹಾಗೂ ಪೊಲೀಸರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಒಬ್ಬ ನಾಗರಿಕ ಮತ್ತು ಆರು ಪೊಲೀಸರೂ ಗಾಯಗೊಂಡಿದ್ದಾರೆ. ಅವರಲ್ಲಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಗಾಯಗೊಂಡ ವರನ್ನು ಕಾನ್ಪುರದಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ದುಬೆ ವಿರುದ್ಧ ಈವರೆಗೆ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಕೊಲೆ, ದರೋಡೆ, ಸುಲಿಗೆ, ಅಪಹರಣದಂತಹ ಪ್ರಕರಣಗಳು ಇದರಲ್ಲಿ ಸೇರಿವೆ.

ದುಬೆ ಅಡಗಿಕೊಂಡಿದ್ದ ಸ್ಥಳದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಆತನನ್ನು ಬಂಧಿಸುವುದಕ್ಕಾಗಿ ಪೊಲೀಸರ ತಂಡವು ಬಿಕರು ಗ್ರಾಮಕ್ಕೆ ಹೋಗಿತ್ತು. ಆದರೆ,ಪೊಲೀಸರು ಬರುತ್ತಿದ್ದಾರೆ ಎಂಬ ಮಾಹಿತಿಯು ದುಬೆಗೆ ಸಿಕ್ಕಿತ್ತು. ಹಾಗಾಗಿ, ಪೊಲೀಸರನ್ನು ಎದುರಿಸಲು ಆತನ ಗುಂಪು ಸಿದ್ಧತೆ ಮಾಡಿಕೊಂಡಿತ್ತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರು ಬರುವ ಮಾರ್ಗದ ಹಲವೆಡೆ ತಡೆ ಒಡ್ಡಲಾಗಿತ್ತು. ಜೆಸಿಬಿ ಯಂತ್ರವನ್ನೇ ರಸ್ತೆಗೆ ಅಡ್ಡಲಾಗಿ ನಿಲ್ಲಿಸಲಾಗಿತ್ತು. ಒಂದೆಡೆ, ರಸ್ತೆಗೆ ಅಡ್ಡ ಇರಿಸಲಾಗಿದ್ದ ವಸ್ತುಗಳನ್ನು ತೆರವು ಮಾಡಲು ಪೊಲೀಸರು ವಾಹನಗಳಿಂದ ಕೆಳಗೆ ಇಳಿದಾಗ, ದುಬೆಯ ಗುಂಪಿನ ಜನರು ಕಟ್ಟಡದ ಮಹಡಿಯಲ್ಲಿ ನಿಂತು ಗುಂಡು ಹಾರಾಟ ನಡೆಸಿದ್ದಾರೆ. ಈ ಜನರ ಕೈಯಲ್ಲಿ ಸ್ವಯಂಚಾಲಿತ ಬಂದೂಕುಗಳು ಇದ್ದವು. ಈ ದಾಳಿಯಲ್ಲಿ ಡಿವೈಎಸ್‌ಪಿ ದೇವೇಂದ್ರ ಮಿಶ್ರಾ ಮೃತಪಟ್ಟರು.

ಪೊಲೀಸರೂ ಪ್ರತಿದಾಳಿ ನಡೆಸಿದ್ದಾರೆ.ಆದರೆ, ಆರೋಪಿಗಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು ಎಂದು ಕಾನ್ಪುರದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬಳಿಕ, ಆರೋಪಿಗಳಿಗಾಗಿ ತೀವ್ರ ಶೋಧ ನಡೆಸಲಾಗಿದೆ. ಗುಂಡಿನ ಚಕಮಕಿ ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲಿ ದುಬೆಯ ಜನರು ಮತ್ತು ಪೊಲೀಸರ ನಡುವೆ ಮತ್ತೊಂದು ಸುತ್ತಿನ ಗುಂಡಿನ ಹಾರಾಟ ನಡೆದಿದೆ. ಈ ಎನ್‌ಕೌಂಟರ್‌ರನಲ್ಲಿ ದುಬೆಯ ಗ್ಯಾಂಗ್‌ನ ಇಬ್ಬರು ಸತ್ತಿದ್ದಾರೆ.

ಕಾನ್ಪುರ ಜಿಲ್ಲೆಯಿಂದ ಹೊರಗೆ ಹೋಗುವ ಎಲ್ಲ ರಸ್ತೆಗಳನ್ನು ಬಂದ್‌ ಮಾಡಲಾಗಿದೆ. ಡಿಜಿಪಿ ಸೇರಿ ಹಿರಿಯ ಪೊಲೀಸ್‌ ಅಧಿಕಾರಿಗಳು ಕಾನ್ಪುರಕ್ಕೆ ಧಾವಿಸಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರೂ ಕಾನ್ಪುರಕ್ಕೆ ಭೇಟಿ ನೀಡಿದ್ದಾರೆ.

ದುಬೆಯ ವಿರುದ್ಧದ ಪ್ರಕರಣಗಳಲ್ಲಿ ಬಿಜೆಪಿಯ ಮುಖಂಡ ಮತ್ತು ರಾಜ್ಯ ಖಾತೆಯ ಸಚಿವರೊಬ್ಬರನ್ನು ಹತ್ಯೆ ಮಾಡಿದ ಪ್ರಕರಣವೂ ಸೇರಿದೆ. 2001ರಲ್ಲಿ ಕಾನ್ಪುರದ ಪೊಲೀಸ್‌ ಠಾಣೆಯೊಳಗೆ ನುಗ್ಗಿ ಸಂತೋಷ್‌ ಶುಕ್ಲಾ ಅವರನ್ನು ಕೊಲೆ ಮಾಡಲಾಗಿತ್ತು.

ಆಯುಧ ಕಸಿದರು: ಪೊಲೀಸರ ಆಯುಧಗಳನ್ನು ಕಸಿದುಕೊಂಡ ದಾಳಿಕೋರರು ಸ್ಥಳದಿಂದ ಪರಾರಿಯಾಗಿದ್ಧಾರೆ. ಒಂದು ಎಕೆ–47 ಬಂದೂಕು, ಒಂದು ಐಎನ್‌ಎಸ್‌ಎಎಸ್‌ ಬಂದೂಕು ಮತ್ತು ಮೂರು ಪಿಸ್ತೂಲುಗಳನ್ನು ಕಸಿದುಕೊಳ್ಳಲಾಗಿದೆ.

*
ಆಡಳಿತಗಾರರು ಮತ್ತು ಅಪರಾಧಿಗಳ ನಡುವೆ ಇರುವ ಸಂಬಂಧಕ್ಕೆ ಈ ಪ್ರಕರಣ ಬೆಳಕು ಚೆಲ್ಲಿದೆ... ಈ ನಂಟಿಗೆ ಪೊಲೀಸರು ಬೆಲೆ ತೆರಬೇಕಾಯಿತು.
-ಅಖಿಲೇಶ್‌ ಯಾದವ್‌, ಎಸ್‌ಪಿ ಮುಖ್ಯಸ್ಥ

*
ರಾಜ್ಯದಲ್ಲಿ ಪೊಲೀಸರೇ ಸುರಕ್ಷಿತ ಅಲ್ಲ ಎಂದಾದ ಮೇಲೆ ಸಾಮಾನ್ಯ ಜನರ ಬಗ್ಗೆ ಹೇಳುವುದಕ್ಕೆ ಏನಿದೆ?
-ರಾಹುಲ್‌ ಗಾಂಧಿ, ಕಾಂಗ್ರೆಸ್ ಸಂಸದ

ಕಾನ್ಪುರ್‌ನಲ್ಲಿ ಪೊಲೀಸರ ಹತ್ಯೆಗೈದ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳಳಬೇಕು ಮತ್ತು ಘಟನೆಯ ಬಗ್ಗೆ ತಕ್ಷಣ ವರದಿ ಸಲ್ಲಿಸಲು ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಡಿಜಿಪಿ ಎಚ್‌ಸಿ ಅವಸ್ತಿ ಅವರಿಗೆ ನಿರ್ದೇಶಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT