ಶನಿವಾರ, ಜುಲೈ 31, 2021
25 °C

ಪೆರಿಯಾರ್‌ ಪ್ರತಿಮೆ ಮೇಲೆ ಕೇಸರಿ ಬಣ್ಣ ಸುರಿದು ವಿರೂಪ; ತಮಿಳುನಾಡಿನಲ್ಲಿ ಆಕ್ರೋಶ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

Prajavani

 

ಕೊಯಮತ್ತೂರು: ಇಲ್ಲಿನ ಸುಂದರಂ ಪ್ರದೇಶದಲ್ಲಿದ್ದ ಸಮಾಜ ಸುಧಾರಕ ಇ.ವಿ.ರಾಮಸ್ವಾಮಿ 'ಪೆರಿಯಾರ್' ಅವರ ಪ್ರತಿಮೆಗೆ ಕೇಸರಿ ಬಣ್ಣ ಬಳದಿರುವ ಘಟನೆ ಶುಕ್ರವಾರ ನಡೆದಿದೆ. ಈ ಕೃತ್ಯವನ್ನು ಖಂಡಿಸಿರುವ ವಿವಿಧ ರಾಜಕೀಯ ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದರು.

ಡಿಎಂಕೆ, ಎಂಡಿಎಂಕೆ, ವಿಸಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪ್ರತಿಮೆಯನ್ನು ಸ್ವಚ್ಛಗೊಳಿಸಿದ ಅವರು, ತಪ್ಪಿತಸ್ಥರ ವಿರುದ್ಧ ಕಟ್ಟುನಿಟ್ಟಿನ ಕ್ರಮಜರುಗಿಸಬೇಕು. ಇಂಥ ಕೃತ್ಯ ಮರುಕಳಿಸಿದಲ್ಲಿ ಪ್ರತಿಭಟನೆ ಚುರುಕುಗೊಳಿಸಲಾಗುವುದು ಎಂದು ಒತ್ತಾಯಿಸಿದರು.

1995ರಲ್ಲಿ ಇಲ್ಲಿ ಪ್ರತಿಷ್ಠಾಪಿಸಲಾಗಿದ್ದ ಪೆರಿಯಾರ್ ಅವರ ಮೂರು ಪ್ರತಿಮೆಗಳಲ್ಲಿ ಇದೂ ಒಂದು. ಕಿಡಿಗೇಡಿಗಳ ವಿರುದ್ಧ ಕ್ರಮಕೈಗೊಳ್ಳುವ ಭರವಸೆ ನೀಡಿದ ನಂತರ ಪ್ರತಿಭಟನಾಕಾರರು ಚದುರಿಹೋದರು ಎಂದು ಪೊಲೀಸರು ತಿಳಿಸಿದರು.

ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ.ಎಸ್‍.ಸುಂದರಂ ಅವರು, ಪೆರಿಯಾರ್ ಪ್ರತಿಮೆ ವಿರೂಪಗೊಳಿಸುವುದನ್ನು ಸಹಿಸಲಾಗದು. ಇಂಥ ಸಮಾಜವಿರೋಧಿ ಶಕ್ತಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಪಡಿಸಿದರು.

ಡಿಎಂಕೆ ಶಾಸಕ ಎನ್‍.ಕಾರ್ತಿಕ್ ಅವರು ಕೃತ್ಯವನ್ನು ಖಂಡಿಸಿದ್ದು, ಇಂಥ ಬೆಳವಣಿಗೆಗಳು ಸಮಾಜದ ಶಾಂತಿಯನ್ನು ಕದಡಲಿವೆ ಎಂದು ಅಭಿಪ್ರಾಯಪಟ್ಟರು.

ಪ್ರತಿಮೆ ವಿರೂಪಕ್ಕೆ ಸಾಮಾಜಿಕ ಜಾಲತಾಣ ಟ್ವಿಟರ್‌ನಲ್ಲಿಯೂ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

'ನಿಧನಗೊಂಡ ದಶಕಗಳ ನಂತರವೂ ಪೆರಿಯಾರ್ ನಿರೂಪಣೆಯೊಂದನ್ನು ಕಟ್ಟಿಕೊಡುತ್ತಿದ್ದಾರೆ. ಅವರು ಕೇವಲ ಪ್ರತಿಮೆಯಲ್ಲ, ಬಣ್ಣ ಬಳಿದವರನ್ನೂ ಸೇರಿದಂತೆ ಎಲ್ಲರಿಗೂ ಸ್ವಾಭಿಮಾನ ಮತ್ತು ಸಾಮಾಜಿಕ ನ್ಯಾಯದ ಮಾರ್ಗವಾಗಿದ್ದಾರೆ' ಎಂದು ಡಿಎಂಕೆ ನಾಯಕಿ, ಸಂಸದೆ ಕನ್ನಿಮೋಳಿ ಟ್ವೀಟ್‌ ಮಾಡಿದ್ದಾರೆ.

'ಸಣ್ಣ ಮನಸ್ಸಿನ ದುಷ್ಕರ್ಮಿಗಳು ಕೊಯಮತ್ತೂರಿನಲ್ಲಿರುವ ಪೆರಿಯಾರ್ ಪ್ರತಿಮೆಯ ಮೇಲೆ ಬಣ್ಣವನ್ನು ಸುರಿದಿದ್ದಾರೆ. ಆ ಮನುಷ್ಯ ಬಣ್ಣಗಳಿಗಿಂತ ಮೇಲಿದ್ದಾರೆಂದು ಮರೆಯಬೇಡಿ' ಎಂದು ಪ್ರಮೋದ್‌ ಮಾದವ್‌ ಎಂಬುವವರು ಟ್ವೀಟಿಸಿದ್ದಾರೆ.

'ಪೆರಿಯಾರ್ ಕೇವಲ ಹೆಸರಲ್ಲ. ಅದು ಸ್ವಾಭಿಮಾನವನ್ನು ಕಲಿಸುವ ಒಂದು ಸಿದ್ಧಾಂತ ಮತ್ತು ತುಳಿತಕ್ಕೊಳಗಾದ ಜನರ ಸಂಕೇತವಾಗಿದೆ' ಎಂದು ಪ್ರಭಾ ಎಂಬುವವರು ಹೇಳಿದ್ದಾರೆ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು