ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬಾಲ ವಾಯುನೆಲೆಯಲ್ಲಿ ರಫೇಲ್: ವಾಯುಪಡೆಗೆ ಭೀಮಬಲ

Last Updated 29 ಜುಲೈ 2020, 10:15 IST
ಅಕ್ಷರ ಗಾತ್ರ

ಹರಿಯಾಣ: ಫ್ರಾನ್ಸ್‌ನಿಂದ ಸೋಮವಾರ ಹೊರಟಿದ್ದ ಮೊದಲ ಹಂತದ ಐದು ರಫೇಲ್‌ ಯುದ್ಧ ವಿಮಾನಗಳು ಬುಧವಾರ ಮಧ್ಯಾಹ್ನ ಅಂಬಾಲ ವಾಯುನೆಲೆಗೆ ಬಂದಿಳಿದಿವೆ.

ಭಾರತೀಯ ವಾಯುಪಡೆಯ ಮುಖ್ಯಸ್ಥ ಏರ್ ಮಾರ್ಷಲ್ ರಾಕೇಶ್ ಕುಮಾರ್ ಸಿಂಗ್ ಬಧೌರಿಯಾ(ಆರ್‌ಕೆಎಸ್ ಭದೌರಿಯಾ) ವಿಮಾನಗಳನ್ನು ಸ್ವಾಗತಿಸಲೆಂದು ವಾಯುನೆಲೆಗೆ ಬಂದಿದ್ದಾರೆ.

ವಾಯುನೆಲೆ ಸುತ್ತ ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಪೊಲೀಸ್‌ ಭದ್ರತೆ ಕಲ್ಪಿಸಲಾಗಿತ್ತು. ಪಕ್ಕದ ನಾಲ್ಕು ಹಳ್ಳಿಗಳಲ್ಲಿ ಸೆಕ್ಷನ್‌ 144 ಜಾರಿಗೊಳಿಸಲಾಗಿದ್ದು, ಯುದ್ಧ ವಿಮಾನಗಳು ಬಂದಿಳಿಯುವ ದೃಶ್ಯ ಸೆರೆ ಹಿಡಿಯುವುದನ್ನು ನಿಷೇಧಿಸಲಾಗಿದೆ.

ಯುದ್ಧವಿಮಾನ ಖರೀದಿಗೆ ಫ್ರಾನ್ಸ್–ಭಾರತದ ನಡುವೆ ಒಪ್ಪಂದ ಏರ್ಪಟ್ಟ ನಾಲ್ಕು ವರ್ಷಗಳ ಬಳಿಕ ಮೊದಲ ಹಂತವಾಗಿ ಐದು ಯುದ್ಧ ವಿಮಾನಗಳು ಭಾರತಕ್ಕೆ ಬಂದಿವೆ. ಇನ್ನೂ ಐದು ವಿಮಾನಗಳನ್ನು ಫ್ರಾನ್ಸ್‌ನಲ್ಲಿ ತರಬೇತಿಗೆ ಬಳಸಿಕೊಳ್ಳಲಾಗುತ್ತಿದೆ.

ವಿಮಾನಗಳಿಗೆ ಶಸ್ತ್ರಾಸ್ತ್ರ ಅಳವಡಿಸುವ ಬಗ್ಗೆ ಈಗಾಗಲೇ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಂದಿನ ಕೆಲವೇ ದಿನಗಳಲ್ಲಿ ರಫೇಲ್ ಯುದ್ಧವಿಮಾನಗಳನ್ನು ಭಾರತೀಯ ವಾಯುಪಡೆ ಸಮರಾಭ್ಯಾಸಗಳಿಗೆ ನಿಯೋಜಿಸಲಿದೆ.

ಅಂಬಾಲ ವಾಯುನೆಲೆಯು ಮಿಲಿಟರಿ ಇತಿಹಾಸದ ದೃಷ್ಟಿಯಿಂದಲೂ ಮಹತ್ವವಾದುದು. ಸ್ವಾತಂತ್ರ್ಯ ನಂತರ ಎರಡು ಬಾರಿ ಈ ವಾಯುನೆಲೆಯ ಮೇಲೆ ವಾಯುದಾಳಿಯಾಗಿತ್ತು. ಶತ್ರು ದೇಶಗಳ ಗಡಿಯ ಸನಿಹದಲ್ಲಿರುವ ಈ ವಾಯುನೆಲೆಯ ವಾಯುರಕ್ಷಣಾ ವ್ಯವಸ್ಥೆಯನ್ನು ರಕ್ಷಣಾ ಇಲಾಖೆ ಸೂಕ್ಷ್ಮವಾಗಿ ಗಮನಿಸುತ್ತಿರುತ್ತದೆ ಮತ್ತು ಕಾಲಕ್ಕೆ ತಕ್ಕಂತೆ ಆದ್ಯತೆಯ ಮೇಲೆ ಸುಧಾರಿಸುತ್ತಿರುತ್ತದೆ.

ನಮ್ಮ ದೇಶದಲ್ಲಿ ಅತ್ಯಂತ ಸುಸಜ್ಜಿತ ವಾಯುರಕ್ಷಣಾ ವ್ಯವಸ್ಥೆ ಇರುವ ವಾಯುನೆಲೆ ಎಂಬ ಶ್ರೇಯವೂ ಅಂಬಾಲಕ್ಕೆ ಇದೆ. ಇದೇ ಕಾರಣಕ್ಕೆ ರಫೇಲ್‌ ಜೆಟ್‌ಗಳನ್ನುಅಂಬಾಲದಲ್ಲಿಯೇ ಮೊದಲ ಬಾರಿಗೆ ಭಾರತದ ನೆಲಸ್ಪರ್ಶ ಮಾಡಿಸಲು ಯೋಜಿಸಲಾಯಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಚೀನಾ ಗಡಿಯ ಲಡಾಖ್ ವಲಯದ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ರಫೇಲ್ ವಿಮಾನವನ್ನು ನಿಯೋಜಿಸಲಾಗುತ್ತದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಒಟ್ಟು 36 ರಫೇಲ್‌ ವಿಮಾನಗಳ ಪೈಕಿ 30 ವಿಮಾನಗಳು ಯುದ್ಧ ಸನ್ನದ್ಧ ಸ್ಥಿತಿಯಲ್ಲಿರಲಿವೆ ಹಾಗೂ ಉಳಿದ 6 ವಿಮಾನಗಳು ತರಬೇತಿ ನೀಡಲಿವೆ.

ಈಗಾಗಲೇ ವಾಯುಪಡೆ ಪೈಲಟ್‌ಗಳು ಹಾಗೂ ಸಹಾಯಕ ಸಿಬ್ಬಂದಿ ವಿಮಾನ ಹಾಗೂ ಅದು ಒಳಗೊಂಡಿರುವ ಶಸ್ತ್ರಾಸ್ತ್ರ ‌ವ್ಯವಸ್ಥೆಯ ಬಗ್ಗೆ ಸಂಪೂರ್ಣ ತರಬೇತಿ ಪಡೆದಿದ್ದಾರೆ. ರಫೇಲ್ ವಿಮಾನಗಳ ಮತ್ತೊಂದು ಪಡೆಯು ಪಶ್ಚಿಮ ಬಂಗಾಳದ ಹಾಶಿಮಾರ ವಾಯುನೆಲೆಯಲ್ಲಿ ನೆಲೆಗೊಳ್ಳಲಿದ್ದು, ಒಂಬತ್ತು ತಿಂಗಳ ತರಬೇತಿ ಬಳಿಕ ಭಾರತಕ್ಕೆ ಬರಲಿದೆ. ಅಂಬಾಲ, ಹಾಶಿಮಾರದಲ್ಲಿ ₹400 ಕೋಟಿ ವೆಚ್ಚದಲ್ಲಿ ನಿರ್ವಹಣಾ ಸೌಲಭ್ಯ ಕಲ್ಪಿಸಲಾಗಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಕಳೆದ ಡಿಸೆಂಬರ್‌ನಲ್ಲಿ ಫ್ರಾನ್ಸ್‌ಗೆ ಭೇಟಿ ನೀಡಿದ್ದ ವೇಳೆ ಮೊದಲ ರಫೇಲ್ ಯುದ್ಧವಿಮಾನವನ್ನು ಹಸ್ತಾಂತರ ಮಾಡಲಾಗಿತ್ತು. ಭಾರತ–ಫ್ರಾನ್ಸ್ ನಡುವೆ ಯುದ್ಧವಿಮಾನ ಖರೀದಿ ಒಪ್ಪಂದಕ್ಕೆ ಸುದೀರ್ಘ ಇತಿಹಾಸವಿದೆ. ತೂಫಾನಿಸ್, ಮಿಸ್ಟರೆ, ಜಾಗ್ವಾರ್, ಮಿರಾಜ್ ಯುದ್ಧವಿಮಾನಗಳ ಬಳಿಕ ಇದೀಗ ರಫೇಲ್‌ ಸೇರ್ಪಡೆಯಾಗಿದೆ.

ಗೇಮ್ ಚೇಂಜರ್ ರಫೇಲ್‌

* ಜಗತ್ತಿನ ಅತ್ಯಾಧುನಿಕ ಯುದ್ಧವಿಮಾನ ಎಂಬ ಖ್ಯಾತಿ

* ಅತ್ಯಂತ ಶಕ್ತಿಶಾಲಿ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ

* ಹಲವು ಗುರಿಗಳನ್ನು ಏಕಕಾಲದಲ್ಲಿ ನಾಶಪಡಿಸುವ ಶಕ್ತಿ

* ಅಣ್ವಸ್ತ್ರ ಸಿಡಿತಲೆಯ ಕ್ಷಿಪಣಿಗಳನ್ನು ಉಡ್ಡಯನ ಮಾಡುವ ಬಲ

* ಒಂದು ರಫೇಲ್‌, ವೈರಿಪಡೆಯ ಹಲವು ಯುದ್ಧವಿಮಾನಗಳಿಗೆ ಸಮ

ಉಪಕರಣಗಳು ಏನೇನಿವೆ?

* ಆಗಸದಿಂದ ನೆಲಕ್ಕೆ ದಾಳಿಯಿಡುವ ಸಾಮರ್ಥ್ಯದ ಫ್ರೆಂಚ್ ಹ್ಯಾಮರ್ (Highly Agile and Manoeuvrable Munition Extended Range)

* ಆಗಸದಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿ, ಕ್ರೂಸ್ ಕ್ಷಿಪಣಿ

* ಇಸ್ರೇಲ್ ನಿರ್ಮಿತ ಹೆಲ್ಮೆಟ್‌

* ರೇಡಾರ್ ಮುನ್ನೆಚ್ಚರಿಕೆ ರಿಸೀವರ್‌

* ಜಾಮರ್‌

* 10-ಗಂಟೆಗಳ ಹಾರಾಟದ ದತ್ತಾಂಶ ರೆಕಾರ್ಡಿಂಗ್

* ಇನ್ಫ್ರಾ-ರೆಡ್ ಸರ್ಚ್ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆ

* ಇಸ್ರೇಲ್‌ ಸ್ಪೈಸ್ 2000 ಬಾಂಬ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT