ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಧಾನಿ ನರೇಂದ್ರ ಮೋದಿ ಪ್ರಮಾದದಿಂದ ದೇಶ ದುರ್ಬಲ: ರಾಹುಲ್ ಗಾಂಧಿ ಆರೋಪ

ಚೀನಾ ಅತಿಕ್ರಮಣಕ್ಕೆ ವಿದೇಶಾಂಗ ನೀತಿ, ಆರ್ಥಿಕ ಸ್ಥಿತಿ ಕಾರಣ: ರಾಹುಲ್ ಗಾಂಧಿ ಆರೋಪ
Last Updated 17 ಜುಲೈ 2020, 21:13 IST
ಅಕ್ಷರ ಗಾತ್ರ

ನವದೆಹಲಿ: ‘ಪ್ರಧಾನಿ ಅವರು 2014ರಿಂದ ಎಸಗಿದ ನಿರಂತರ ಪ್ರಮಾದಗಳ ಕಾರಣ ಭಾರತ ದುರ್ಬಲವಾಯಿತು. ಹೀಗಾಗಿಯೇ ಚೀನಾ ನಮ್ಮ ನೆಲವನ್ನು ಅತಿಕ್ರಮಿಸುವ ಹೆಜ್ಜೆ ಇರಿಸಿತು’ ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ.

ಶುಕ್ರವಾರ ಟ್ವೀಟ್ ಮಾಡಿರುವ ವಿಡಿಯೊದಲ್ಲಿ ರಾಹುಲ್ ಈ ಬಗ್ಗೆ ಮಾತನಾಡಿದ್ದಾರೆ.

‘ವಾಸ್ತವ ನಿಯಂತ್ರಣ ರೇಖೆಯನ್ನು ಉಲ್ಲಂಘಿಸಲು ಚೀನಾ ಇದೇ ಸಮಯವನ್ನು ಆಯ್ಕೆ ಮಾಡಿಕೊಂಡದ್ದು ಏಕೆ ಎಂಬುದೇ ಪ್ರಶ್ನೆ. ಚೀನಾ ಇಂತಹ ಅತಿಕ್ರಮಣಕಾರಿ ವರ್ತನೆ ತೋರಲು ಅವಕಾಶ ಮಾಡಿಕೊಟ್ಟಂತಹ ಅಂಶಗಳು ಯಾವುವು? ಭಾರತದಂತಹ ರಾಷ್ಟ್ರದ ಮೇಲೆ ಹೀಗೆ ಆಕ್ರಮಣ ಮಾಡಲು ಅವರಿಗೆ ಧೈರ್ಯ ಬಂದದ್ದಾದರೂ ಹೇಗೆ’ ಎಂದು ರಾಹುಲ್ ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗಳಿಗೆ ಉತ್ತರವನ್ನೂ ನೀಡಿದ್ದಾರೆ.

‘ಆರು ವರ್ಷಗಳಲ್ಲಿ ಭಾರತವು ಎಲ್ಲಾ ಕ್ಷೇತ್ರಗಳಲ್ಲೂ ವಿಚಲಿತವಾಗಿದೆ. ನಮ್ಮದು ಬಹುರಾಷ್ಟ್ರಗಳ ಜತೆಗಿನ ಸಂಬಂಧವಾಗಿತ್ತು. ಅಮೆರಿಕ, ರಷ್ಯಾ ಮತ್ತು ಐರೋಪ್ಯ ರಾಷ್ಟ್ರಗಳ ಜತೆಗೆ ನಮ್ಮ ಸಂಬಂಧವಿತ್ತು. ಜಾಗತಿಕ ಮಟ್ಟದಲ್ಲಿ ಈ ಸಂಬಂಧಗಳು ಭಾರತಕ್ಕೆ ನೆರವಾಗುತ್ತಿದ್ದವು. ಅಮೆರಿಕದ ಜತೆ ಈಗ ವಾಣಿಜ್ಯ ಸಂಬಂಧ ಮಾತ್ರ ಇದೆ. ಯೂರೋಪ್‌ ಜತೆ ಇದೇ ರೀತಿ ಆಗಿದೆ. ರಷ್ಯಾ ಜತೆಗೂ ಸಂಬಂಧ ಹದಗೆಟ್ಟಿದೆ’ ಎಂದು ಆರೋಪಿಸಿದ್ದಾರೆ.

‘ನಮ್ಮ ನೆರೆಯ ರಾಷ್ಟ್ರಗಳ ಜತೆಗೂ ಹೀಗೇ ಆಗಿದೆ. ಈ ಮೊದಲು ಪಾಕಿಸ್ತಾನದ ಬಿಟ್ಟು ನೆರೆಯ ನೇಪಾಳ, ಭೂತಾನ್, ಶ್ರೀಲಂಕಾ ಎಲ್ಲವೂ ನಮ್ಮ ಸ್ನೇಹಿತರಾಗಿದ್ದವು. ಇವತ್ತು ನೇಪಾಳವು ಭಾರತದ ಮೇಲೆ ಸಿಟ್ಟಾಗಿದೆ. ಶ್ರೀಲಂಕಾವು ಚೀನಾಗೆ ಬಂದರು ಬಿಟ್ಟುಕೊಟ್ಟಿದೆ. ಮಾಲ್ಡೀವ್ಸ್‌ ಮತ್ತು ಭೂತಾನ್‌ ಜತೆಗೂ ಸಂಬಂಧ ಹದಗೆಟ್ಟಿದೆ. ನಮ್ಮ ವಿದೇಶಿ ಗೆಳೆಯರ ಜತೆ ಮತ್ತು ನೆರೆಯ ದೇಶಗಳ ಜತೆ ಸಂಬಂಧ ಹದಗೆಟ್ಟಿದೆ’ ಎಂದಿದ್ದಾರೆ.

‘ನಮ್ಮ ಆರ್ಥಿಕತೆಯೂ ಈಗ ನೆಲಕಚ್ಚಿದೆ. ದುರ್ಬಲ ವಿದೇಶಾಂಗ ನೀತಿ, ದುರ್ಬಲ ಆರ್ಥಿಕತೆ, ನೆರೆರಾಷ್ಟ್ರಗಳ ಜತೆ ಸಂಬಂಧ ದುರ್ಬಲವಾದ ಕಾರಣದಿಂದಲೇ ಭಾರತದಂತಹ ರಾಷ್ಟ್ರದ ಮೇಲೆ ಅತಿಕ್ರಮಣ ಮಾಡಲು ಚೀನಾ ಧೈರ್ಯಮಾಡಿತು’ ಎಂದು ರಾಹುಲ್‌ ಅಭಿಪ್ರಾಯಪಟ್ಟಿದ್ದಾರೆ.

**

ಭೌಗೋಳಿಕ ರಾಜಕಾರಣದ ಇಂದಿನ ಈ ಜಗತ್ತಿನಲ್ಲಿ ಕೇವಲ ಒಣಮಾತುಗಳು ಯಾವುದಕ್ಕೂ ಸಾಲುವುದಿಲ್ಲ.
-ರಾಹುಲ್ ಗಾಂಧಿ, ಕಾಂಗ್ರೆಸ್‌ ನಾಯಕ, ಸಂಸದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT