ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಸ್ಥಾನ ರಾಜಕೀಯ: ಸುಪ್ರೀಂ ಮೊರೆಹೋಗಲು ಸ್ಪೀಕರ್‌ ತೀರ್ಮಾನ

Last Updated 22 ಜುಲೈ 2020, 8:32 IST
ಅಕ್ಷರ ಗಾತ್ರ

ನವದೆಹಲಿ:ಕಾಂಗ್ರೆಸ್‌ನ ಬಂಡಾಯ ಶಾಸಕರ ವಿರುದ್ಧ ಶುಕ್ರವಾರದವರೆಗೆ ಯಾವುದೇ ಕ್ರಮ ಕೈಗೊಳ್ಳದಂತೆ ಹೈಕೋರ್ಟ್‌ ನೀಡಿರುವ ‘ನಿರ್ದೇಶನ’ವನ್ನು ಪ್ರಶ್ನಿಸಿ ರಾಜಸ್ಥಾನ ವಿಧಾನಸಭಾ ಸ್ಪೀಕರ್‌ ಸಿ.ಪಿ.ಜೋಶಿ ಅವರು ಬುಧವಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದಾರೆ. ಸಾಂವಿಧಾನಿಕ ಬಿಕ್ಕಟ್ಟು ಸೃಷ್ಟಿಯಾಗುವುದನ್ನು ತಪ್ಪಿಸಲು ಹೀಗೆ ಮಾಡಿದ್ದಾಗಿ ಅವರು ಹೇಳಿದ್ದಾರೆ.

ಸ್ಪೀಕರ್‌ ತಮಗೆ ನೀಡಿರುವ ನೋಟಿಸ್‌ ಅನ್ನು ಪ್ರಶ್ನಿಸಿ ಬಂಡಾಯ ಶಾಸಕ ಸಚಿನ್‌ ಪೈಲಟ್‌ ಅವರ ಬೆಂಬಲಿಗ ಶಾಸಕರು ಹೈಕೋರ್ಟ್‌ ಮೊರೆಹೋಗಿದ್ದರು. ಪ್ರಕರಣವನ್ನು ವಿಚಾರಣೆಗೆ ಎತ್ತಿಕೊಂಡ ಕೋರ್ಟ್‌, ಶುಕ್ರವಾರ ಈ ಕುರಿತ ಆದೇಶ ನೀಡುವುದಾಗಿ ಹೇಳಿದ್ದಲ್ಲದೆ, ಅಲ್ಲಿಯವರೆಗೆ ಈ ಶಾಸಕರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಸ್ಪೀಕರ್‌ಗೆ ನಿರ್ದೇಶನ ನೀಡಿತ್ತು.

‘ಶಾಸಕರ ಅನರ್ಹತೆಯು ವಿಧಾಸನಭಾ ಕಲಾಪದ ಭಾಗ. ಆದ್ದರಿಂದ ಈ ವಿಚಾರದಲ್ಲಿ ಹೈಕೋರ್ಟ್‌ ಮಧ್ಯಪ್ರವೇಶಿಸಬಾರದಾಗಿತ್ತು. ಸಂಸ್ಥೆಯೊಂದರ ವ್ಯಾಖ್ಯಾನಿತ ಅಧಿಕಾರವನ್ನು ಮೊಟಕುಗೊಳಿಸುವುದು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ’ ಎಂದು ಸ್ಪೀಕರ್‌ ವಾದಿಸಿದ್ದಾರೆ.

ಶಾಸಕರಿಗೆ ನೀಡಿದ್ದ ನೋಟಿಸ್‌ಗೆ ಪ್ರತಿಕ್ರಿಯೆ ನೀಡಲು ನಿಗದಿ ಮಾಡಿದ್ದ ಗಡುವನ್ನು ವಿಸ್ತರಿಸುವಂತೆ ಎರಡು ಬಾರಿ ಕೋರ್ಟ್‌ ಮಾಡಿದ್ದ ಮನವಿಯನ್ನು ಸ್ಪೀಕರ್‌ ಪರ ವಕೀಲರು ಒಪ್ಪಿಕೊಂಡಿದ್ದರು. ಮಂಗಳವಾರವೂ ವಿಚಾರಣೆ ಮುಗಿಯದ ಕಾರಣ ಇನ್ನೊಮ್ಮೆ ಗಡುವು ವಿಸ್ತರಿಸುವಂತೆ ಕೋರ್ಟ್‌ ಮನವಿ ಮಾಡಿತ್ತು. ಆದರೆ ಈ ಬಾರಿ ಕೋರ್ಟ್‌ ಲಿಖಿತವಾಗಿ ‘ನಿರ್ದೇಶನ’ ನೀಡಿರುವುದು ಸಮಸ್ಯೆಗೆ ಕಾರಣವಾಗಿದೆ.

ಕೋರ್ಟ್‌ ಮನವಿಯಂತೆ ಎರಡು ಬಾರಿ ಗಡುವನ್ನು ವಿಸ್ತರಿಸಲಾಗಿದೆ. ಅದರ ಹೊರತಾಗಿಯೂ ಈಗ ‘ನಿರ್ದೇಶನ’ ನೀಡುವ ಅಗತ್ಯವೇನಿತ್ತು? ‘ನಿರ್ದೇಶನ’ ಎಂಬ ಪದದ ಬಗ್ಗೆಯೇ ಸ್ಪೀಕರ್‌ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗುವಂತೆ ಸೂಚಿಸಿ ನೀಡಲಾಗಿದ್ದ ವಿಪ್‌ ಅನ್ನು ಈ 19 ಶಾಸಕರು ಉಲ್ಲಂಘಿಸಿದ್ದಾರೆ ಎಂದು ಕಾಂಗ್ರೆಸ್‌ ನೀಡಿರುವ ದೂರಿನ ಆಧಾರದಲ್ಲಿ ಶಾಸಕರಿಗೆ ನೋಟಿಸ್‌ ಜಾರಿ ಮಾಡಲಾಗಿತ್ತು. ಸಂವಿಧಾನದ 10ನೇ ವಿಧಿಯ ಪ್ಯಾರ 2(1)(ಎ) ಅಡಿ ಈ ಶಾಸಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್‌ ಸ್ಪೀಕರ್‌ಗೆ ನೀಡಿದ್ದ ದೂರಿನಲ್ಲಿ ಒತ್ತಾಯಿಸಿತ್ತು. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಪೀಕರ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT