ಗುರುವಾರ , ಮೇ 6, 2021
25 °C
2018 ಆಗಸ್ಟ್‌ 14ರಂದು ಮಹದಾಯಿ ನ್ಯಾಯಮಂಡಳಿ ನೀಡಿದ್ದ ತೀರ್ಪು ಪ್ರಶ್ನಿಸಿರುವ ಅರ್ಜಿಗಳು

ಮಹದಾಯಿ: ಆಗಸ್ಟ್‌ನಲ್ಲಿ ವಿಚಾರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮಹದಾಯಿ ಜಲ ವಿವಾದದ ನ್ಯಾಯಮಂಡಳಿಯು 2018 ಆಗಸ್ಟ್‌ 14ರಂದು ನೀಡಿದ್ದ ತೀರ್ಪು ಪ್ರಶ್ನಿಸಿ, ಮಹಾರಾಷ್ಟ್ರ, ಗೋವಾ ಹಾಗೂ ಕರ್ನಾಟಕವ ರಾಜ್ಯಗಳು ಸಲ್ಲಿಸಿರುವ ಪ್ರತ್ಯೇಕ ಅರ್ಜಿಗಳನ್ನು ಆಗಸ್ಟ್‌ನಲ್ಲಿ ವಿಚಾರಣೆಗೆ ಕೈಗೆತ್ತಿಕೊಳ್ಳುವುದಾಗಿ ಬುಧವಾರ ಸುಪ್ರೀಂ ಕೋರ್ಟ್‌ ತಿಳಿಸಿದೆ. 

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ, ಕೆ.ಎಂ.ಜೋಸೆಫ್‌ ಅವರಿದ್ದ ನ್ಯಾಯಪೀಠವು, ವಿವಾದಾಸ್ಪದವಾಗಿರುವ ಮಹದಾಯಿ ನೀರು ಹಂಚಿಕೆ ವಿಷಯದಲ್ಲಿ ನಿರ್ದೇಶನ ನೀಡಲು ಆಗಸ್ಟ್‌ 24ರಿಂದ ಆರಂಭವಾಗುವ ವಾರದಲ್ಲಿ ವಿಚಾರಣೆ ಕೈಗೆತ್ತಿಕೊಳ್ಳುವುದಾಗಿ ತಿಳಿಸಿತು.

ಕಳಸಾ–ಬಂಡೂರಿ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ಮೀಸಲಿರಿಸಿರುವುದನ್ನು ಘೋಷಿಸಿದ್ದ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಹೇಳಿಕೆಯ ವಿರುದ್ಧ ಕಳೆದ ಮಾರ್ಚ್‌ನಲ್ಲಿ ಗೋವಾ ಸರ್ಕಾರ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಆದರೆ ಈ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿತ್ತು. 

ನ್ಯಾಯಮಂಡಳಿಯು 2018ರ ಆಗಸ್ಟ್‌ನಲ್ಲಿ ನೀಡಿದ ತೀರ್ಪಿನ ಅನುಷ್ಠಾನಕ್ಕೆ ಕೇಂದ್ರ ಸರ್ಕಾರವು 2020ರ ಫೆಬ್ರುವರಿ 27ರಂದು ಅಧಿಸೂಚನೆ ಹೊರಡಿಸಿದೆ. ಇದನ್ನು ಆಧರಿಸಿಯೇ ಕರ್ನಾಟಕ ಸರ್ಕಾರ ಯೋಜನೆಗೆ ಅನುದಾನ ಮೀಸಲಿರಿಸಿತ್ತು. ಯೋಜನೆಗೆ ವಿರೋಧಿಸುತ್ತಿರುವ ಗೋವಾ, ನೀರು ತಿರುಗಿಸುವುದರಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತದೆ ಎಂದು ವಾದಿಸುತ್ತಿದೆ.

ತನ್ನ ಅಂತಿಮ ಆದೇಶದಲ್ಲಿ ನ್ಯಾಯಮಂಡಳಿಯು ಕರ್ನಾಟಕಕ್ಕೆ 13.42 ಟಿಎಂಸಿ ಅಡಿ, ಗೋವಾಗೆ 24 ಟಿಎಂಸಿ ಅಡಿ ಹಾಗೂ ಮಹಾರಾಷ್ಟ್ರಕ್ಕೆ 1.3 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು