ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಿರುವನಂತಪುರ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಆಡಳಿತ ರಾಜಮನೆತನಕ್ಕೆ: ಸುಪ್ರೀಂ

ಕೇರಳ ಹೈಕೋರ್ಟ್‌ ಆದೇಶ ರದ್ದುಪಡಿಸಿದ ಸುಪ್ರೀಂ ಕೋರ್ಟ್‌
Last Updated 14 ಜುಲೈ 2020, 2:28 IST
ಅಕ್ಷರ ಗಾತ್ರ

ನವದೆಹಲಿ: ಕೇರಳದ ಪ್ರಸಿದ್ಧ ಅನಂತಪದ್ಮನಾಭಸ್ವಾಮಿ ದೇವಸ್ಥಾನದ ಆಡಳಿತದಲ್ಲಿ ತಿರುವಾಂಕೂರು ರಾಜಮನೆತನದ ಹಕ್ಕನ್ನು ಸುಪ್ರೀಂ ಕೋರ್ಟ್‌ ಸೋಮವಾರ ಎತ್ತಿಹಿಡಿದಿದೆ.

ದೇವಸ್ಥಾನದ ನಿರ್ವಹಣೆಯ ಮೇಲೆ ಹಿಡಿತ ಸಾಧಿಸಲು, ಟ್ರಸ್ಟ್‌ ಒಂದನ್ನು ಸ್ಥಾಪಿಸುವಂತೆ ಕೇರಳ ಹೈಕೋರ್ಟ್‌ 2011ರಲ್ಲಿ ಕೇರಳ ಸರ್ಕಾರಕ್ಕೆ ನೀಡಿದ್ದ ಆದೇಶವನ್ನು ಕೋರ್ಟ್‌ ರದ್ದುಪಡಿಸಿದೆ.

‘ಈ ಮನೆತನದ ಹಿಂದಿನ ರಾಜರುಗಳು ಸತ್ತಿದ್ದಾರೆ ಎಂದಮಾತ್ರಕ್ಕೆ, ಆ ಮನೆತನದವರು ದೇವಸ್ಥಾನದ ಆಡಳಿತ ಹಾಗೂ ದೇವರ ನಿರ್ವಹಣೆಯ ಮೇಲಿನ ಹಕ್ಕನ್ನು ಕಳೆದುಕೊಳ್ಳುವುದಿಲ್ಲ. ವಾರಸುದಾರರಿಲ್ಲದ ಆಸ್ತಿ ನಿಯಮವು ಇಲ್ಲಿಗೆ ಅನ್ವಯವಾಗುವುದಿಲ್ಲವಾದ್ದರಿಂದ ದೇವಸ್ಥಾನವನ್ನು ಸ್ವಾಧೀನಪಡಿಸುವ ಹಕ್ಕು ಸರ್ಕಾರಕ್ಕೆ ಇರುವುದಿಲ್ಲ. ಆದ್ದರಿಂದ ದೇವಸ್ಥಾನದ ನಿರ್ವಹಣೆಯ ಹಕ್ಕು ಈ ಮನೆತನದವರು ನೇಮಿಸಿದ ಸಮಿತಿಯಲ್ಲಿಯೇ ಇರುತ್ತದೆ’ ಎಂದು ಕೋರ್ಟ್‌ ಹೇಳಿದೆ.

ದೇಶದ ಅತಿ ಶ್ರೀಮಂತ ದೇವಸ್ಥಾನಗಳಲ್ಲಿ ಒಂದೆನಿಸಿರುವ ಅನಂತಪದ್ಮನಾಭ ದೇವಸ್ಥಾನದ ಆಡಳಿತ ವ್ಯವಸ್ಥೆ ನೋಡಿಕೊಳ್ಳಲು ತಾತ್ಕಾಲಿಕ ವ್ಯವಸ್ಥೆಯಾಗಿ ತಿರುವನಂತಪುರ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಒಂದು ಸಮಿತಿ ರಚಿಸಬೇಕು. ಸಮಿತಿಯಲ್ಲಿ ಎಲ್ಲರೂ ಹಿಂದೂಗಳೇ ಇರಬೇಕು. ಹೊಸ ಸಮಿತಿ ನೇಮಕಗೊಳ್ಳುವವರೆಗೆ ಮಾತ್ರ ಈ ಸಮಿತಿ ಅಸ್ತಿತ್ವದಲ್ಲಿ ಇರುತ್ತದೆ ಎಂದು ನ್ಯಾಯಮೂರ್ತಿ ಯು.ಯು. ಲಲಿತ್‌ ನೇತೃತ್ವದ ಪೀಠವು ಹೇಳಿದೆ.

ಗ್ರಾನೈಟ್‌ನ ವಾಸ್ತುಶಿಲ್ಪ ವೈಭವ ಹೊಂದಿರುವ ಈ ದೇವಸ್ಥಾನವನ್ನು 18ನೇ ಶತಮಾನದಲ್ಲಿ ಕೇರಳವನ್ನು ಆಳಿದ್ದ ತಿರುವಾಂಕೂರು ರಾಜಮನೆತನದವರು ಮರುನಿರ್ಮಾಣ ಮಾಡಿದ್ದರು. ಅನಂತಪದ್ಮನಾಭ ಸ್ವಾಮಿಯು (ವಿಷ್ಣು) ತಿರುವಾಂಕೂರು ರಾಜಮನೆತನದ ಕುಲದೇವರಾಗಿದ್ದರು. ಸ್ವಾತಂತ್ರ್ಯಾ ನಂತರವೂ ಈ ಮನೆತನದ ಟ್ರಸ್ಟ್‌, ಈ ದೇವಸ್ಥಾನದ ಆಡಳಿತ ನಡೆಸುತ್ತಿತ್ತು. 2011ರಲ್ಲಿ ಕೇರಳ ಹೈಕೋರ್ಟ್‌ ಈ ದೇವಸ್ಥಾನವನ್ನು ಸ್ವಾಧೀನಕ್ಕೆ ತೆಗೆದುಕೊಂಡು, ಆಡಳಿತಕ್ಕೆ ಟ್ರಸ್ಟ್‌ ಒಂದನ್ನು ರಚಿಸುವಂತೆ ಕೇರಳ ಸರ್ಕಾರಕ್ಕೆ ಸೂಚಿಸಿತ್ತು. ಇದನ್ನು ಪ್ರಶ್ನಿಸಿ ತಿರುವಾಂಕೂರು ರಾಜಮನೆತನದವರೂ ಸೇರಿದಂತೆ ಹಲವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್‌ ಸೂಚನೆಗೆ ಸುಪ್ರೀಂ ಕೋರ್ಟ್‌ ತಡೆಯಾಜ್ಞೆ ನೀಡಿತ್ತು.

ದೇವಸ್ಥಾನದ ನೆಲಮಾಳಿಗೆಯ ಕೊಠಡಿಯಿಂದ ಸಂಗ್ರಹಿಸಲಾಗಿರುವ ಚಿನ್ನಾಭರಣ ಹಾಗೂ ಇತರ ಬೆಲೆಬಾಳುವ ಸೊತ್ತುಗಳ ಸಂಪೂರ್ಣ ವಿವರಗಳನ್ನುಳ್ಳ ಯಾದಿಯನ್ನು ರಚಿಸಬೇಕು, ‘ಬಿ’ ಕೊಠಡಿಯನ್ನು ಸದ್ಯಕ್ಕೆ ತೆರೆಯಬಾರದು ಎಂದು 2011ರ ಜುಲೈ 8ರಂದು ಸುಪ್ರೀಂ ಕೋರ್ಟ್‌ ಸೂಚಿಸಿತ್ತು. ‘ಬಿ’ ಕೊಠಡಿಯಲ್ಲಿ ಅತಿಮಾನುಷ ಶಕ್ತಿ ಹಾಗೂ ಅಗಾಧವಾದ ನಿಧಿ ಇದೆ ಎಂಬ ನಂಬಿಕೆಯಿಂದ ಅದನ್ನು ತೆರೆದಿರಲಿಲ್ಲ. ಅದನ್ನು ತೆರೆಯುವಂತೆ 2017ರಲ್ಲಿ ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT