ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಲ್ಲರಿಗೂ ಇಲ್ಲ ಕೋವಿಡ್‌ ಅಪಾಯ

ಕುಟುಂಬದ ಒಳಗೆ ಕೊರೊನಾ ವೈರಾಣು ಹರಡುವಿಕೆ ಪ್ರಮಾಣ ಶೇ 20 ಮಾತ್ರ: ಅಧ್ಯಯನ
Last Updated 2 ಆಗಸ್ಟ್ 2020, 23:20 IST
ಅಕ್ಷರ ಗಾತ್ರ

ನವದೆಹಲಿ: ಎಲ್ಲರೂ ಕೊರೊನಾ ವೈರಾಣು ಸೋಂಕಿಗೆ ಒಳಗಾಗುವ ಅಪಾಯ ಇದೆ ಎಂಬುದು ನಿಜವಲ್ಲ. ಕೋವಿಡ್‌ ರೋಗಿಯ ಕುಟುಂಬದ ಸದಸ್ಯರಲ್ಲಿ ಶೇ 80ರಿಂದ 90ರಷ್ಟು ಮಂದಿಗೆ ಸೋಂಕು ತಗಲುತ್ತಿಲ್ಲ ಎಂದು ಗಾಂಧಿನಗರದ ಇಂಡಿಯನ್‌ ಇನ್ಸ್‌ಟಿಟ್ಯೂಟ್‌ ಆಫ್‌ ಪಬ್ಲಿಕ್‌ ಹೆಲ್ತ್‌ ನಡೆಸಿದ ಅಧ್ಯಯನವು ಹೇಳಿದೆ.

ಹೊರ ಪ್ರದೇಶದಲ್ಲಿ ಕೆಲವೇ ಕ್ಷಣ ಕೊರೊನಾ ವೈರಾಣುವಿಗೆ ತೆರೆದುಕೊಂಡರೆ ಸೋಂಕು ಬರುತ್ತದೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ, ಕುಟುಂಬದ ಒಬ್ಬ ವ್ಯಕ್ತಿಗೆ ಸೋಂಕು ತಗುಲಿದರೆ ಎಲ್ಲರಿಗೂ ತಗುಲಲೇಬೇಕು. ಆದರೆ ಪರಿಸ್ಥಿತಿ ಹಾಗಿಲ್ಲ. ಕುಟುಂಬದ ಸದಸ್ಯರಲ್ಲಿ ಪ್ರತಿರೋಧ ಅಥವಾ ರೋಗ ನಿರೋಧಕ ಶಕ್ತಿ ಸೃಷ್ಟಿ ಆಗುತ್ತಿದೆ ಎಂದು ಸಂಸ್ಥೆಯ ನಿರ್ದೇಶಕ ದಿಲೀಪ್‌ ಮವಲಣ್‌ಕರ್‌ ಹೇಳಿದ್ದಾರೆ.

ಕುಟುಂಬದ ಎಲ್ಲ ಸದಸ್ಯರಿಗೂ ಸೋಂಕು ತಗುಲಿದ ಪ್ರಕರಣಗಳು ಇವೆ. ಆದರೆ, ಅಂತಹ ಕುಟುಂಬಗಳ ಸಂಖ್ಯೆ ಕಡಿಮೆ. ಕೋವಿಡ್‌ನಿಂದಾಗಿ ಒಬ್ಬ ವ್ಯಕ್ತಿ ಮೃತಪಟ್ಟಿದ್ದರೂ ಮನೆಯಲ್ಲಿದ್ದ ಇತರ ಯಾರಿಗೂ ಸೋಂಕು ತಗುಲದ ನಿದರ್ಶನಗಳು ಹಲವಾರಿವೆ ಎಂದು ಅವರು ವಿವರಿಸಿದ್ದಾರೆ.

ಕುಟುಂಬದೊಳಗೆ ಕೋವಿಡ್‌ ಹರಡುವಿಕೆಗೆ ಸಂಬಂಧಿಸಿ ಜಾಗತಿಕ ಮಟ್ಟದಲ್ಲಿ ಪ್ರಕಟವಾದ 13 ಪ್ರಬಂಧಗಳನ್ನು ವಿಶ್ಲೇಷಣೆಗೆ ಒಳಪಡಿಸಿ ಈ ಅಧ್ಯಯನ ನಡೆಸಲಾಗಿದೆ. ಮನೆಯೊಳಗೆ ಎರಡನೇ ಹಂತದ ಸೋಂಕು ಹರಡುವಿಕೆಯ ಪ್ರಮಾಣವು ಶೇ 10ರಿಂದ 15 ಮಾತ್ರ ಎಂದು ಹೆಚ್ಚಿನ ಪ್ರಬಂಧಗಳು ಅಭಿಪ್ರಾಯಪಟ್ಟಿವೆ. ಮೂರು ಪ್ರಬಂಧಗಳಲ್ಲಿ ಮಾತ್ರ ಈ ಪ್ರಮಾಣವು ಶೇ 30, ಶೇ 35 ಮತ್ತು ಶೇ 50ರಷ್ಟಿದೆ ಎಂದು ಹೇಳಲಾಗಿದೆ. ಈ ವಿಶ್ಲೇಷಣೆಯು ಆಕ್ಸ್‌ಫರ್ಡ್‌ನ ‘ಕ್ವಾರ್ಟರ್‌ಲಿ ಜರ್ನಲ್‌ ಆಫ್‌ ಮೆಡಿಸಿನ್’‌ನಲ್ಲಿ ಇತ್ತೀಚೆಗೆ ಪ್ರಕಟವಾಗಿದೆ.

ಕುಟುಂಬದ ಸದಸ್ಯರ ಪೈಕಿ ಶೇ 8ರಷ್ಟು ಮಂದಿಗೆ ಮಾತ್ರ ಸೋಂಕು ತಗುಲಿದೆ ಎಂಬ ಅಂಶವನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ನ (ಐಸಿಎಂಆರ್‌) ಅಧ್ಯಯನವು ಗುರುತಿಸಿದೆ ಎಂಬುದನ್ನೂ ದಿಲೀಪ್ ಉಲ್ಲೇಖಿಸಿದ್ದಾರೆ.

ಗಂಡ–ಹೆಂಡತಿ ನಡುವೆ ಸೋಂಕು ಹರಡುವಿಕೆಯು ಶೇ 45ರಿಂದ 65ರಷ್ಟಿದೆ. ಒಂದೇ ಹಾಸಿಗೆ ಹಂಚಿಕೊಳ್ಳುವವರ ನಡುವೆ ಕೂಡ ಶೇ ನೂರರಷ್ಟು ಹರಡುವಿಕೆ ದಾಖಲಾಗಿಲ್ಲ ಎಂದು ಅವರು ಹೇಳಿದ್ದಾರೆ.

‘ಬೇರೆ ಬೇರೆ ವ್ಯಕ್ತಿಗಳಲ್ಲಿ ವೈರಾಣು ನಿರೋಧಕ ಶಕ್ತಿಯು ಭಿನ್ನವಾಗಿರುತ್ತದೆ. ಮನೆಯೊಳಗೆ ಮಾಸ್ಕ್‌ ಬಳಕೆ ಇರುವುದಿಲ್ಲ ಮತ್ತು ಅಂತರ ಕಾಯ್ದುಕೊಳ್ಳುವುದು ಸಾಧ್ಯವಿಲ್ಲ. ಲಕ್ಷಣಗಳು ಕಾಣಿಸಿಕೊಂಡು ಪರೀಕ್ಷೆ ಮಾಡಿಸಿಕೊಳ್ಳುವುದರ ನಡುವೆ ಮೂರರಿಂದ ಐದು ದಿನಗಳ ಅಂತರ ಇರುತ್ತದೆ. ಈ ಅವಧಿಯಲ್ಲಿ ಕುಟುಂಬದ ಎಲ್ಲ ಸದಸ್ಯರೂ ವೈರಾಣುವಿಗೆ ತೆರೆದುಕೊಂಡಿರುತ್ತಾರೆ. ಹಾಗಿದ್ದರೂ ಎಲ್ಲರಿಗೂ ರೋಗ ಬರುವುದಿಲ್ಲ’ ಎಂದು ದಿಲೀಪ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT