ಶನಿವಾರ, ಜುಲೈ 31, 2021
24 °C
ದಾದರ್‌ನಲ್ಲಿರುವ ‘ರಾಜಗೃಹ’ದಲ್ಲಿ ಘಟನೆ

ಮುಂಬೈ: ಅಂಬೇಡ್ಕರ್‌ ನಿವಾಸದಲ್ಲಿ ವಿಧ್ವಂಸಕ ಕೃತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಇಲ್ಲಿನ ದಾದರ್‌ನ ಹಿಂದೂ ಕಾಲೊನಿಯಲ್ಲಿರುವ, ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಮನೆ ‘ರಾಜಗೃಹ’ದ ಉದ್ಯಾನದತ್ತ ದುಷ್ಕರ್ಮಿಗಳು ಮಂಗಳವಾರ ರಾತ್ರಿ ಕಲ್ಲುಗಳನ್ನು ತೂರಿ, ವಿಧ್ವಂಸಕ ಕೃತ್ಯ ಎಸಗಿದ್ದಾರೆ. 

ಕಿಟಕಿ ಗಾಜುಗಳು ಒಡೆದಿದ್ದು, ಸಿಸಿ ಟಿವಿ ಕ್ಯಾಮೆರಾಗಳು, ಹೂಕುಂಡಗಳಿಗೆ ಹಾನಿಯಾಗಿದೆ ಎಂದು ಮಾತುಂಗ ಪೊಲೀಸರು ತಿಳಿಸಿದ್ದು, ಘಟನೆಗೆ ಸಂಬಂಧಿಸಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ. 

ಮೂರು ಅಂತಸ್ತಿನ ಈ ಮನೆಯನ್ನು ವಸ್ತುಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿದೆ. ‘ಅಂಬೇಡ್ಕರ್‌ ಮ್ಯೂಸಿಯಂ’ ಎಂದೇ ಕರೆಯಲಾಗುವ ಇಲ್ಲಿ, ಬಾಬಾಸಾಹೇಬ್‌ ಅವರ ಪುಸ್ತಕಗಳು, ಅಪರೂಪದ ಚಿತ್ರಗಳು, ಹೂವಿನ ಕುಂಡಗಳು, ಹಲವಾರು ಕಲಾಕೃತಿಗಳನ್ನು ಸಂಗ್ರಹಿಸಿ ಇಡಲಾಗಿದೆ. 

ಈ ಮನೆಯಲ್ಲಿ ಬಾಬಾಸಾಹೇಬ್‌ ಅವರ ಸೊಸೆ, ಮೊಮ್ಮಕ್ಕಳಾದ ವಂಚಿತ್‌ ಬಹುಜನ ಆಘಾಡಿಯ ಮುಖಂಡ ಪ್ರಕಾಶ್‌ ಅಂಬೇಡ್ಕರ್‌, ಆನಂದರಾವ್‌ ಹಾಗೂ ಭೀಮ್‌ರಾವ್‌ ವಾಸಿಸುತ್ತಿದ್ದಾರೆ. 

‘ಇಬ್ಬರು ಮನೆಯ ಉದ್ಯಾನದತ್ತ ಕಲ್ಲುಗಳನ್ನು ತೂರಿ, ಸಿಸಿ ಟಿವಿ ಕ್ಯಾಮೆರಾಕ್ಕೆ ಹಾನಿ ಮಾಡಿದ್ದಾರೆ. ಪೊಲೀಸರು ಈ ವಿಷಯದಲ್ಲಿ ಉತ್ತಮವಾಗಿ ತಮ್ಮ ಕಾರ್ಯ ಮಾಡುತ್ತಿದ್ದು, ಎಲ್ಲರೂ ಶಾಂತತೆಯನ್ನು ಕಾಪಾಡಬೇಕು. ಮನೆ ಮುಂದೆ ಜಮಾಯಿಸಬಾರದು’ ಎಂದು ಪ್ರಕಾಶ್‌ ಅಂಬೇಡ್ಕರ್‌ ಅವರು ಬೆಂಬಲಿಗರಲ್ಲಿ ಮನವಿ ಮಾಡಿದ್ದಾರೆ.

ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಅನಿಲ್‌ ದೇಶಮುಖ್‌ ಹೇಳಿದ್ದಾರೆ.

ಆಲ್‌ಇಂಡಿಯಾ ಪ್ರೊಫೇಷನಲ್‌ ಕಾಂಗ್ರೆಸ್‌ ಸೇರಿದಂತೆ ಹಲವಾರು ಘಟನೆಯನ್ನು ಖಂಡಿಸಿದ್ದು, ಕಠಿಣ ಕ್ರಮಕ್ಕೆ ಒತ್ತಾಯಿಸಿವೆ.

ಕಠಿಣ ಕ್ರಮ: ಈ ಕೃತ್ಯ ಎಸಗಿರುವ ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೊಲೀಸರಿಗೆ ಸೂಚಿಸಿರುವುದಾಗಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

‘ರಾಜಗೃಹ’ ಪ್ರವೇಶಿಸಿ ವಿಧ್ವಂಸಕ ಕೃತ್ಯ ನಡೆಸಿರುವುದು ಆಘಾತಕಾರಿ. ಅಂಬೇಡ್ಕರ್‌ ವಾದವನ್ನು ಒಪ್ಪುವವರಷ್ಟೇ ಅಲ್ಲದೆ ಇತರರೂ ಈ ಸ್ಥಳದ ಬಗ್ಗೆ ಗೌರವ ಭಾವನೆ ಹೊಂದಿದ್ದಾರೆ.

‘ನನ್ನ ಪ್ರಕಾರ ಈ ಪ್ರದೇಶ ರಾಜ್ಯದ ಜನರಿಗೆಲ್ಲರಿಗೂ ಪುಣ್ಯಕ್ಷೇತ್ರವಿದ್ದಂತೆ. ಇಲ್ಲಿ ಇಂತಹ ಘಟನೆ ನಡೆಯುವುದನ್ನು ಸಹಿಸುವುದಿಲ್ಲ‘ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು