ಗುರುವಾರ , ಮಾರ್ಚ್ 4, 2021
23 °C
ದಾವೋಸ್ ಶೃಂಗಸಭೆ

Explainer | ಮಹಿಳೆಯೇ ವಿಶ್ವ ಆರ್ಥಿಕತೆಯ ಚಾಲನಾ ಶಕ್ತಿ: ಆಕ್ಸ್‌ಫಾಮ್ ವರದಿ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ದಾವೋಸ್: ‘ಮನೆಯೊಂದರ ಆಧಾರ ಸ್ತಂಭವಾಗಿರುವ ಮಹಿಳೆ ವಿಶ್ವದ ಅರ್ಥವ್ಯವಸ್ಥೆ ಮುನ್ನಡೆಸುವ ಚಾಲನಾ ಶಕ್ತಿಯೂ ಹೌದು’ ಎಂದು ವಿಶ್ವ ಆರ್ಥಿಕ ವೇದಿಕೆ (ಡಬ್ಲ್ಯುಇಎಫ್) ಶೃಂಗಸಭೆಗೂ ಮೊದಲು  ಬಿಡುಗಡೆಯಾದ ಪ್ರತಿಷ್ಠಿತ ಸರ್ಕಾರೇತರ ಸಂಸ್ಥೆ ‘ಆಕ್ಸ್‌ಫಾಮ್’ನ ವರದಿ ‘ಟೈಂ ಟು ಕೇರ್’ ತಿಳಿಸಿದೆ.

ಮಕ್ಕಳ ಶಿಕ್ಷಣ, ಮಹಿಳೆಯರ ಸ್ವಾವಲಂಬನೆ ಮತ್ತು ಲಿಂಗಸಮಾನತೆಗೆ ಶ್ರಮಿಸುತ್ತಿರುವ ಆಕ್ಸ್‌ಫಾಮ್ ವರದಿಯು ಸಂಪತ್ತಿನ ಅಸಮಾನ ಹಂಚಿಕೆ ಮತ್ತು ಲಿಂಗ ಅಸಮಾನತೆಯು ಹೇಗೆ ಆರ್ಥಿಕ ವೈರುಧ್ಯಗಳನ್ನು ಪೋಷಿಸುತ್ತಿದೆ ಎಂಬುದರ ಬಗ್ಗೆಯೂ ಈ ವರದಿಯ ಮೂಲಕ ಹೊಸ ಬೆಳಕು ಚೆಲ್ಲಿದೆ. ಈ ಮೂಲಕ ಶೃಂಗಸಭೆಯಲ್ಲಿ ಸಂಪತ್ತಿನ ಅಸಮಾನ ಹಂಚಿಕೆ ಕುರಿತ ಚರ್ಚೆಗೆ ಮುನ್ನುಡಿ ಬರೆದಿದೆ.

ಜನಸಾಮಾನ್ಯರು ಮತ್ತು ಬಡವರ್ಗದ ಮಹಿಳೆಯರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗದಿರುವ ವ್ಯವಸ್ಥೆ ಇರುವುದರಿಂದಲೇ ಜಗತ್ತಿನಲ್ಲಿ ಕೆಲವೇ ಶ್ರೀಮಂತರು ಅಪಾರ ಸಂಪತ್ತನ್ನು ಸಂಗ್ರಹಿಸಲು ಸಾಧ್ಯವಾಗಿದೆ ಎನ್ನುವುದು ಆಕ್ಸ್‌ಫ್ಯಾಮ್ ವರದಿಯ ಒಟ್ಟಾರೆ ವಾದ.

ಭಾರತದಲ್ಲಿರುವ ಒಟ್ಟು 63 ಶತಕೋಟ್ಯಾಧಿಪತಿಗಳ ಒಟ್ಟು ಸಂಪತ್ತು 2018-19ರ ಆರ್ಥಿಕ ವರ್ಷದ ಒಟ್ಟು ಕೇಂದ್ರ ಬಜೆಟ್‌ಗಿಂತಲೂ (₹24,42,200 ಕೋಟಿ) ಹೆಚ್ಚು ಎನ್ನುವ ಅಚ್ಚರಿಯ ಮಾಹಿತಿಯನ್ನೂ ಈ ವರದಿ ಬಹಿರಂಗಪಡಿಸಿದೆ.

ಅವರ ಗಳಿಕೆ ಅಷ್ಟು, ಇವರದ್ದು ಇಷ್ಟೇ ಇಷ್ಟು

ಕಳೆದ ಮೂರು ದಶಕಗಳಲ್ಲಿ ಜಾಗತಿಕ ಮಟ್ಟದಲ್ಲಿ ಅಸಮಾನತೆ ಪ್ರಮಾಣ ತುಸು ಕಡಿಮೆಯಾಗಿದೆ. ಆದರೆ ಮುಂದುವರಿದ ದೇಶಗಳಲ್ಲಿ ಕುಟುಂಬಗಳ ಸರಾಸರಿ ಆದಾಯದ ಅಸಮಾನತೆಯಲ್ಲಿ ಭಾರೀ ಅಂತರ ಸೃಷ್ಟಿಯಾಗಿದೆ.

ಲಿಂಗ ಅಸಮಾನತೆಯನ್ನು ಅರ್ಥ ವ್ಯವಸ್ಥೆಯ ಭಾಗವಾಗಿ ಪೋಷಿಸುವ ಇಂಥ ದೇಶಗಳಲ್ಲಿ ಬಡ ಮಹಿಳೆಯರು, ಯುವತಿಯರು ಮತ್ತು ಹುಡುಗಿಯರ ಶ್ರಮಕ್ಕೆ ಬೆಲೆಯೇ ಸಿಗುತ್ತಿಲ್ಲ. ತಂತ್ರಜ್ಞಾನ ಕಂಪನಿಯ ಒಬ್ಬ ಸಿಇಒ ಒಂದು ವರ್ಷದಲ್ಲಿ ಗಳಿಸುವಷ್ಟು ಆದಾಯ ಸಂಪಾದಿಸಲು ಓರ್ವ ಮನೆ ಕೆಲಸದಾಕೆಗೆ 22,277 ವರ್ಷಗಳೇ ಬೇಕಾಗುತ್ತವೆ! ಇನ್ನು ಪ್ರತಿ ಸೆಕೆಂಡ್‌ಗೆ ₹106 ಗಳಿಸುವ ಒಬ್ಬ ಸಿಇಒ 10 ನಿಮಿಷಗಳಲ್ಲಿ ಸಂಪಾದಿಸುವ ಹಣವು ಓರ್ವ ಮನೆಕೆಲಸದಾಕೆಯ ಒಂದು ವರ್ಷದ ಗಳಿಕೆಗಿಂತಲೂ ಹೆಚ್ಚು.

ಈ ಶ್ರಮಕ್ಕೆ ಸಂಬಳ ಸಿಗುವಂತಿದ್ದರೆ...

ಮಹಿಳೆಯರ ಶ್ರಮಕ್ಕೆ ಆರ್ಥಿಕವಾಗಿ ಪ್ರತಿಫಲ ಸಿಗುವಂತಿದ್ದರೆ ಅದು ಜಗತ್ತಿನ ಒಟ್ಟಾರೆ ಟೆಕ್ ಉದ್ಯಮದ ವಾರ್ಷಿಕ ಆದಾಯದ ಮೂರು ಪಟ್ಟು ಹೆಚ್ಚು ಗಳಿಕೆಯಾಗುತ್ತಿತ್ತು ವರದಿ ಹೇಳುತ್ತದೆ.

ಆರ್ಥಿಕ ಪ್ರತಿಫಲವಿಲ್ಲದೆ ಭಾರತದಲ್ಲಿ ಮಹಿಳೆಯರು ಮತ್ತು ಯುವತಿಯರು ಪ್ರತಿದಿನ 3.26 ಶತಕೋಟಿ ಗಂಟೆಗಳಷ್ಟು ಅವಧಿ ಆರೈಕೆಯಲ್ಲಿ (ಮಕ್ಕಳ ಪಾಲನೆ, ಗೃಹಕೃತ್ಯದ ಕೆಲಸ ಇತ್ಯಾದಿ) ತೊಡಗಿಸಿಕೊಳ್ಳುತ್ತಾರೆ. ಈ ಕೆಲಸಗಳ ಮೂಲಕ ಮಹಿಳೆಯರು ಭಾರತದ ಆರ್ಥಿಕತೆಗೆ ವರ್ಷಕ್ಕೆ ಕನಿಷ್ಠ ₹19 ಲಕ್ಷ ಕೋಟಿಯಷ್ಟು ಕೊಡುಗೆ ನೀಡುತ್ತಿದ್ದಾರೆ. ಜಾಗತಿಕವಾಗಿ ಮಹಿಳೆಯರು ಮತ್ತು ಯುವತಿಯರು ಪ್ರತಿದಿನ 12.5 ಶತಕೋಟಿ ಗಂಟೆ ವೇತನವಿಲ್ಲದ ಆರೈಕೆ ಕೆಲಸ ಮಾಡುತ್ತಾರೆ. ಜಾಗತಿಕ ಆರ್ಥಿಕತೆಗೆ ಇದರಿಂದ ವರ್ಷಕ್ಕೆ ಕನಿಷ್ಠ10.8 ಲಕ್ಷ ಕೋಟಿ ಡಾಲರ್‌ಗಳಷ್ಟು ಕೊಡುಗೆ ಸಿಗುತ್ತಿದೆ.

‘ಇಂದಿನ ಆರ್ಥಿಕ ವ್ಯವಸ್ಥೆಯಲ್ಲಿ ಮಹಿಳೆಯರು ಮತ್ತು ಯುವತಿಯರು ಕನಿಷ್ಠ ಲಾಭ ಪಡೆಯುವವರಾಗಿದ್ದಾರೆ. ಅಡುಗೆ ಮಾಡಲು, ಸ್ವಚ್ಛಗೊಳಿಸಲು, ಮಕ್ಕಳು ಮತ್ತು ವೃದ್ಧರನ್ನು ಆರೈಕೆ ಮಾಡಲು ತಮ್ಮ ದಿನದ ದುಡಿಯುವ ಅವಧಿಯ ಬಹುಪಾಲು ಶ್ರಮ ವ್ಯಯಿಸುತ್ತಾರೆ. ಯಾವುದೇ ಪ್ರತಿಫಲ ಬಯಸದೇ ಅವರು ಇಂಥ ಪಾತ್ರಗಳನ್ನು ನಿರ್ವಹಿಸುತ್ತಿರುವುದರಿಂದಲೇ ನಮ್ಮ ಆರ್ಥಿಕತೆ, ವ್ಯವಹಾರ ಮತ್ತು ಸಮಾಜಗಳ ಚಕ್ರಗಳು ಚಲಿಸುತ್ತಿವೆ. ನಮ್ಮ ಆರ್ಥಿಕತೆಯನ್ನು ಮುನ್ನಡೆಸುತ್ತಿರುವ ರಹಸ್ಯ ಎಂಜಿನ್‌ಗಳು ಅವರು’ ಎಂದು ಆಕ್ಸ್‌ಫ್ಯಾಮ್ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಬೆಹರ್ ವಿಶ್ಲೇಷಿಸುತ್ತಾರೆ.


ಗಾರ್ಮೆಂಟ್ಸ್‌ ಕಾರ್ಮಿಕರು (ಸಂಗ್ರಹ ಚಿತ್ರ)

ಇದ್ಯಾವ ನ್ಯಾಯ?

ಸಮಾಜದ ಅತಿ ಶ್ರೀಮಂತರು ಮತ್ತು ಅತಿಶ್ರೀಮಂತ ಕಂಪನಿಗಳ ಮೇಲೆ ಸರ್ಕಾರಗಳು ನಗಣ್ಯ ಎನ್ನುವಷ್ಟು ತೆರಿಗೆಗಳನ್ನು ವಿಧಿಸುತ್ತಿವೆ. ಇದೇ ಕಾರಣದಿಂದಾಗಿ ಮಹಿಳೆಯರ ಅಭ್ಯುದಯ ಮತ್ತು ಬಡತನ, ಅಸಮಾನತೆ ತೊಡೆದುಹಾಕಲು ಬೇಕಿರುವಷ್ಟು ಸಂಪನ್ಮೂಲ ಸಂಗ್ರಹಿಸಲು ಸರ್ಕಾರಗಳಿಗೆ ಸಾಧ್ಯವಾಗುತ್ತಿಲ್ಲ. ಪ್ರಮುಖ ಸಾರ್ವಜನಿಕ ಸೇವೆಗಳು ಮತ್ತು ಮೂಲಸೌಕರ್ಯಗಳಿಗೆ ಸರ್ಕಾರಗಳೂ ಅಗತ್ಯ ಪ್ರಮಾಣದ ಹಣಕಾಸು ಒದಗಿಸುತ್ತಿಲ್ಲ. ಜಾಗತಿಕ ಸಮೀಕ್ಷೆಯ ಪ್ರಕಾರ, ವಿಶ್ವದ 22 ಶ್ರೀಮಂತ ಪುರುಷರು ಆಫ್ರಿಕಾದ ಎಲ್ಲ ಮಹಿಳೆಯರಿಗಿಂತ ಹೆಚ್ಚಿನ ಸಂಪತ್ತನ್ನು ಹೊಂದಿದ್ದಾರೆ.

ನಮ್ಮ ಆರ್ಥಿಕತೆಯ ಚಾಲನಾಶಕ್ತಿ ಮಹಿಳೆಯರೇ ಆಗಿದ್ದಾರೆ. ಅವರಿಗೆ ಶಿಕ್ಷಣ ಪಡೆದುಕೊಳ್ಳಲು, ಉತ್ತಮ ಬದುಕು ನಿರ್ವಹಿಸುವಷ್ಟು ಸಂಪಾದನೆ ಮಾಡಲು ಹೆಚ್ಚು ಅವಕಾಶವೇ ಸಿಗುವುದಿಲ್ಲ. ಹೀಗಾಗಿ ಆರ್ಥಿಕ ವ್ಯವಸ್ಥೆಯ ತಳದಲ್ಲಿ ಅವರು ಸಿಲುಕಿರುತ್ತಾರೆ ಎಂದು ವರದಿ ಹೇಳಿದೆ.

ಅಸಮಾನತೆಯ ಈ ಪರಿ

ಬಡವರು, ಮಧ್ಯಮ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಭಾರತದಲ್ಲಿ ಶೇ 1ರಷ್ಟಿರುವ ಶ್ರೀಮಂತರು ದೇಶದ ಜನಸಂಖ್ಯೆಯ ಶೇ 70 ಪ್ರತಿಶತ ಅಂದರೆ 95.3 ಕೋಟಿ ಜನರು ಹೊಂದಿರುವ ಸಂಪತ್ತಿಗಿಂತಲೂ ನಾಲ್ಕು ಪಟ್ಟು ಹೆಚ್ಚಿನ  ಸಂಪತ್ತನ್ನು ಹೊಂದಿದ್ದಾರೆ. ಭಾರತದಲ್ಲಿರುವ ಶತಕೋಟಿ ಒಡೆಯರ ಒಟ್ಟು ಸಂಪತ್ತಿನ ಮೌಲ್ಯವು ಕೇಂದ್ರ ಸರ್ಕಾರದ ಒಂದು ವರ್ಷದ ಪೂರ್ಣ ಬಜೆಟ್‌ಗಿಂತ ಹೆಚ್ಚು.

ವಿಶ್ವದ 2,153 ಶತಕೋಟ್ಯಾಧಿಪತಿಗಳು 406 ಕೋಟಿ ಜನರಿಗಿಂತ ಹೆಚ್ಚಿನ ಸಂಪತ್ತನ್ನು ಹೊಂದಿದ್ದಾರೆ. ಕಳೆದ ದಶಕದಲ್ಲಿ ಶತಕೋಟ್ಯಾಧಿಪತಿಗಳ ಸಂಖ್ಯೆ ದ್ವಿಗುಣಗೊಂಡಿದೆ. ಅಸಮಾನತೆಯನ್ನು ಹೋಗಲಾಡಿಸುವ ನೀತಿಗಳಿಗೆ ಕೆಲವೇ ಕೆಲವು ಸರ್ಕಾರಗಳು ಮಾತ್ರ ಬದ್ಧವಾಗಿವೆ. ದೊಡ್ಡ ಆರ್ಥಿಕತೆಗಳಲ್ಲಿರುವ ಒಡಕು ಮತ್ತು ಸಮಾಜದಲ್ಲಿ ಎದ್ದು ಕಾಣುವ ಆರ್ಥಿಕ ಅಸಮಾನತೆಗಳು 2019ರಲ್ಲಿ ಮತ್ತಷ್ಟು ಹೆಚ್ಚಾಯಿತು. ಹಿಂಜರಿತದ ಒತ್ತಡ ಅನುಭವಿಸುತ್ತಿದ್ದ ಜಾಗತಿಕ ಆರ್ಥಿಕತೆಯ ಮೇಲೆ ಈ ಬೆಳವಣಿಗೆಗಳು ಇನ್ನಷ್ಟು ಭಾರ ಹೇರಿದವು.

ಅಸಮಾನತೆ ಹೆಚ್ಚಾದರೆ ಅಪಾಯ

ವಿಶ್ವದೆಲ್ಲೆಡೆ ಈಚೆಗೆ ಹೆಚ್ಚುತ್ತಿರುವ ಸಾಮಾಜಿಕ ಅಶಾಂತಿಗೆ ಆರ್ಥಿಕ ಅಸಮಾನತೆಯೇ ಕಾರಣ. ಭ್ರಷ್ಟಾಚಾರ, ಸರ್ಕಾರಗಳಿಂದ ಸಾಂವಿಧಾನಿಕ ಆಶಯಗಳ ಉಲ್ಲಂಘನೆಗಳು, ಮೂಲ ಸರಕು ಮತ್ತು ಸೇವೆಗಳ ಬೆಲೆ ಏರಿಕೆಯಂತಹ ಕಾರಣಗಳಿಂದಲೂ ಅಶಾಂತಿಯ ವಾತಾವರಣ ಹುಟ್ಟಿಕೊಳ್ಳಬಹುದು ಎಂದು ಆಕ್ಸ್‌ಫಾಮ್ ವರದಿ ಹೇಳಿದೆ.

ಕ್ರೆಡಿಟ್ ಸ್ಯೂಸ್ ರಿಸರ್ಚ್ ಇನ್‌ಸ್ಟಿಟ್ಯೂಟ್‌ನ ಗ್ಲೋಬಲ್ ವೆಲ್ತ್ ಡೇಟಾಬುಕ್ 2019 ಮತ್ತು ಫೋರ್ಬ್ಸ್‌ನ 2019 ಶತಕೋಟಿ ಒಡೆಯರ ಪಟ್ಟಿ ಸೇರಿದಂತೆ ಲಭ್ಯವಿರುವ ಇತ್ತೀಚಿನ ದತ್ತಾಂಶಗಳನ್ನು ಆಧರಿಸಿ ವರದಿಯನ್ನು ತಯಾರಿಸಿದೆ ಎಂದು ಆಕ್ಸ್‌ಫಾಮ್ ಹೇಳಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು