ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೀನಾದಲ್ಲಿ ಕೊರೊನಾ ವೈರಸ್‌ ಸೋಂಕು: ಸಾವಿನ ಸಂಖ್ಯೆ 361ಕ್ಕೆ ಏರಿಕೆ

ಸೋಂಕು ಹರಡುವಿಕೆ ತಡೆಗೆ ಮುಖಗವುಸುಗಳು ತುರ್ತು ಅವಶ್ಯ
Last Updated 3 ಫೆಬ್ರುವರಿ 2020, 18:13 IST
ಅಕ್ಷರ ಗಾತ್ರ

ಬೀಜಿಂಗ್: ಕೊರೊನಾ ವೈರಸ್ ಸೋಂಕಿನಿಂದ ದೇಶದಾದ್ಯಂತ ಮೃತಪಟ್ಟವರ ಸಂಖ್ಯೆ ಸೋಮವಾರ 361 ಸಮೀಪಿಸಿದ್ದು, ಸೋಂಕು ಹರಡುವುದನ್ನು ತಡೆಗಟ್ಟಲು ‘ತುರ್ತಾಗಿ ಮುಖಗವುಸುಗಳು’ ಅವಶ್ಯಕವಾಗಿವೆ ಎಂದು ಚೀನಾ ಸೋಮವಾರ ಹೇಳಿದೆ.

‘ಸದ್ಯ ಚೀನಾಗೆ ತುರ್ತಾಗಿ ಅವಶ್ಯ ಇರುವುದು ರಕ್ಷಣಾ ದಿರಿಸು ಹಾಗೂ ಕನ್ನಡಕಗಳು. ದಕ್ಷಿಣ ಕೊರಿಯಾ, ಜಪಾನ್, ಕಜಕಸ್ತಾನ ಹಾಗೂ ಹಂಗೆರಿ ದೇಶಗಳು ವೈದ್ಯಕೀಯ ನೆರವು ನೀಡುತ್ತಿವೆ’ ಎಂದು ವಿದೇಶಾಂಗ ಸಚಿವಾಲಯದ ವಕ್ತಾರೆ ವಾ ಚುನ್ಯಿಂಗ್ ತಿಳಿಸಿದ್ದಾರೆ.

‘ದೇಶದ ಎಲ್ಲಾ ಕಾರ್ಖಾನೆಗಳ ಸಂಪೂರ್ಣ ಸಾಮರ್ಥ್ಯ ಬಳಸಿಕೊಂಡರೂ ದಿನಕ್ಕೆ ಕೇವಲ 20 ಲಕ್ಷ ಮುಖಗವುಸುಗಳನ್ನು ಮಾತ್ರ ಉತ್ಪಾದಿಸಲು ಸಾಧ್ಯವಾಗುತ್ತಿದೆ’ ಎಂದು ಉದ್ದಿಮೆ ಸಚಿವಾಲಯ ಮಾಹಿತಿ ನೀಡಿದೆ.

‘ಯುರೋಪ್, ಜಪಾನ್ ಹಾಗೂ ಅಮೆರಿಕದಿಂದ ಮುಖಗವುಸುಗಳನ್ನು ಆಮದು ಮಾಡಿಕೊಳ್ಳಲು ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿದ್ದಾರೆ’ ಎಂದು ಸಚಿವಾಲಯದ ಟಿಯನ್ ಯುಲಾಂಗ್ ಹೇಳಿದ್ದಾರೆ.

ಅಮೆರಿಕಚೀನಾದ ಪ್ರವಾಸಿಗರಿಗೆ ನಿಷೇಧ ಹೇರಿದ್ದು ಸೇರಿದಂತೆ ಸೋಂಕಿಗೆ ಅಮೆರಿಕ ಪ್ರತಿಕ್ರಿಯಿಸಿದ ರೀತಿ ‘ಗಾಬರಿ’ ಸೃಷ್ಟಿಸಿದೆ ಎಂದು ಚೀನಾ ಆರೋಪಿಸಿದೆ.

ಚೀನಾದ ವಿಮಾನಗಳಿಗೆ ಅನುಮತಿ ನೀಡಿದ ಪಾಕ್

ಇಸ್ಲಾಮಾಬಾದ್: ಕೊರೊನಾ ಸೋಂಕುಪೀಡಿತ ಚೀನಾದ ವಿಮಾನ ಗಳು ಪಾಕಿಸ್ತಾನ ಪ್ರವೇಶಿಸಲು ಇಲ್ಲಿನ ಸರ್ಕಾರ ಅನುಮತಿ ನೀಡಿದ್ದು, ಸೋಮವಾರ ಎರಡು ವಿಮಾನಗಳು ಇಸ್ಲಾಮಾಬಾದ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿವೆ.

ಕೊರೊನಾ ಜಾಗತಿಕ ತುರ್ತು ಪರಿಸ್ಥಿತಿ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಘೋಷಿಸಿದ ಬಳಿಕ ಫೆ.2ರವರೆಗೆ ಚೀನಾದ ವಿಮಾನಗಳು ಪಾಕಿಸ್ತಾನ ಪ್ರವೇಶಿಸುವುದಕ್ಕೆ ನಿಷೇಧ ಹೇರಲಾಗಿತ್ತು.

‘ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸೌಲಭ್ಯ ನಮ್ಮಲ್ಲಿ ಇಲ್ಲದಿರುವುದರಿಂದಾಗಿ, ಪಾಕಿಸ್ತಾನದ ವಿದ್ಯಾರ್ಥಿಗಳನ್ನು ವುಹಾನ್‌ನಿಂದ ತೆರವುಗೊಳಿಸಬಾರದು’ ಎಂದು ಚೀನಾದಲ್ಲಿನ ಪಾಕಿಸ್ತಾನ ರಾಯಭಾರಿ ನಗ್ಮಾನಾ ಹಶ್ಮಿ ಭಾನುವಾರ ಹೇಳಿದ್ದರು.

ಭಾರತದಿಂದ ಪಾಠ ಕಲಿಯಲಿ: ಕೊರೊನಾ ವೈರಸ್‌ ಪೀಡಿತ ವುಹಾನ್‌ ನಗರದಲ್ಲಿ ನೆಲೆಸಿರುವ ಪಾಕಿಸ್ತಾನದ ವಿದ್ಯಾರ್ಥಿಗಳು ಭಾರತ ಸರ್ಕಾರದ ಮಾದರಿಯಲ್ಲಿಯೇ ತಮ್ಮ ಸ್ಥಳಾಂತರಕ್ಕೆ ಕ್ರಮ ವಹಿಸಬೇಕು ಎಂದು ಪಾಕ್‌ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಈ ವಿಷಯದಲ್ಲಿ ಇಮ್ರಾನ್‌ ಸರ್ಕಾರಕ್ಕೆ ಭಾರತದ ಕ್ರಮ ಮಾದರಿಯಾಗಬೇಕು ಎಂದು ವಿದ್ಯಾರ್ಥಿಗಳು ಅಭಿಪ್ರಾಯಪಟ್ಟಿದ್ದಾರೆ.

ಆಗಮನ ವೀಸಾ ಸ್ಥಗಿತ: ಬಾಂಗ್ಲಾದೇಶ

ಢಾಕಾ: ಚೀನಾದ ಪ್ರಜೆಗಳಿಗೆ ಆಗಮನದ ವೇಳೆ ವೀಸಾ ನೀಡುತ್ತಿದ್ದ ಸೌಲಭ್ಯವನ್ನು ಬಾಂಗ್ಲಾದೇಶ ತಾತ್ಕಾಲಿಕವಾಗಿ ಸ್ಥಗಿತ
ಗೊಳಿಸಿದೆ.

‘ಬಾಂಗ್ಲಾದಲ್ಲಿರುವ ಚೀನಾ ಪ್ರಜೆಗಳು ರಜೆ ಮೇಲೆ ತಮ್ಮ ದೇಶಕ್ಕೆ ತೆರಳಬಾರದು. ಚೀನಾದ ಪ್ರಜೆಗಳನ್ನು ಹೊಸ ಉದ್ಯೋಗಕ್ಕೆ ನೇಮಕ ಮಾಡಿ ಕೊಳ್ಳಬಾರದು’ ಎಂದು ವಿದೇಶಾಂಗ ಸಚಿವಾಲಯ ಸೂಚನೆ ನೀಡಿದೆ.

ಸುಳ್ಳುಸುದ್ದಿ ತಡೆಗೆ ಶ್ರಮ: ಡಬ್ಲ್ಯುಎಚ್‌ಒ

‘ಕೊರೊನಾ ವೈರಸ್ ಸೋಂಕು ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹರಡುತ್ತಿರುವುದನ್ನು ತಡೆಯಲು 24X7 ಶ್ರಮಿಸಲಾಗುತ್ತಿದೆ’ ಎಂದು ಡಬ್ಲ್ಯುಎಚ್‌ಒ ಸೋಮವಾರ ಹೇಳಿದೆ.

ಸುಳ್ಳು ಮಾಹಿತಿಗಳು ಹರಡುತ್ತಿರುವುದು ತೀವ್ರ ಅಪಾಯ ಸೃಷ್ಟಿಸುತ್ತಿದೆ ಎಂದು ಡಬ್ಲ್ಯುಎಚ್‌ಒ ಮುಖ್ಯಸ್ಥ ಟೆಡ್ರಾಸ್ ಅದನಾಂ ಗೆಬ್ರೆಯಾಸಸ್‌ ಅವರು ಎಚ್ಚರಿಕೆ ನೀಡಿದ್ದಾರೆ.

‘ಜನರು ಅಂತರ್ಜಾಲದಲ್ಲಿ ಕೊರೊನಾ ಕುರಿತು ಹುಡುಕಾಟ ನಡೆಸಿದಾಗ ಡಬ್ಲ್ಯುಎಚ್‌ಒ ಮಾಹಿತಿಯೇ ಮೊದಲು ಕಾಣಿಸುವಂತೆ ಮಾಡಬೇಕು ಎಂದುಗೂಗಲ್‌ ಜತೆಗೂಡಿ ಕ್ರಮ ಕೈಗೊಳ್ಳಲಾಗಿದೆ. ಸುಳ್ಳು ಮಾಹಿತಿ ತಡೆಗೆ ಟ್ವಿಟರ್‌, ಫೇಸ್‌ಬುಕ್, ಟಿಕ್‌ಟಾಕ್ ಹಾಗೂ ಟೆನ್ಸೆಂಟ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳು ಕ್ರಮ ಕೈಗೊಂಡಿವೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT