ಗುರುವಾರ , ಸೆಪ್ಟೆಂಬರ್ 23, 2021
27 °C

ಹೆಚ್ಚಿನ ಸಂಖ್ಯೆಯಲ್ಲಿ ಬಾಲಿವುಡ್‌ ಸಿನಿಮಾಗಳ ಪ್ರದರ್ಶನಕ್ಕೆ ಚೀನಾ ಚಿಂತನೆ

ಏಜೆನ್ಸಿ Updated:

ಅಕ್ಷರ ಗಾತ್ರ : | |

ಬೀಜಿಂಗ್‌:  ಅಮೆರಿಕ ಮತ್ತು ಚೀನಾ ನಡುವಿನ ವಾಣಿಜ್ಯ ಸಂಬಂಧ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ಹಾಲಿವುಡ್ ಸಿನಿಮಾಗಳ ಬದಲಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಾಲಿವುಡ್‌ ಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂಬ ಅಭಿಪ್ರಾಯವನ್ನು ಇಲ್ಲಿನ ಸಿನಿಮಾ ಮಾರುಕಟ್ಟೆ ವಿಶ್ಲೇಷಕರು ವ್ಯಕ್ತಪಡಿಸಿದ್ದಾರೆ ಎಂದು ಚೀನಾ ಮಾಧ್ಯಗಳು ವರದಿ ಮಾಡಿವೆ. 

ಚೀನಾದಲ್ಲಿ ಅಮೆರಿಕ ಸಿನಿಮಾಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆದರೆ ಇತ್ತೀಚಿನ ದಿನಗಳಲ್ಲಿ ಭಾರತೀಯ ಸಿನಿಮಾಗಳು ಜನಪ್ರಿಯವಾಗುತ್ತಿರುವುದರಿಂದ ಹಾಲಿವುಡ್ ಚಿತ್ರಗಳಿಗೆ ಕೊಡುವಷ್ಟೇ ಆದ್ಯತೆಯನ್ನು ಬಾಲಿವುಡ್‌ ಚಿತ್ರಗಳಿಗೂ ನೀಡುಬೇಕು ಎಂದು ನ್ಯಾಷನಲ್ ಇನ್ಸ್‌ಟ್ಯೂಟ್‌ ಆಫ್ ಇಂಟರ್‌ನ್ಯಾಷನಲ್‌ ಸ್ಟ್ಯಾಟರ್ಜಿಯ ಸಹಾಯಕ ಸಂಶೋಧಕ ಟಿಯಾನ್‌ ಗುಂಗ್ಯಾಗ್ ತಿಳಿಸಿದ್ದಾರೆ. 

2017ರಲ್ಲಿ ಚೀನಾದ ಬಾಕ್ಸ್‌ ಆಫೀಸ್‌ ಗಳಿಕೆ 58 ಸಾವಿರ ಕೋಟಿ ರೂಪಾಯಿ ಆಗಿದೆ. 2016ಕ್ಕೆ ಹೋಲಿಕೆ ಮಾಡಿದರೆ ಇದು ಶೇ.13.45ರಷ್ಟು ಏರಿಕೆ ಕಂಡಿದೆ. ಅಮೆರಿಕವನ್ನು ಹೊರತುಪಡಿಸಿದರೆ ಚೀನಾ ಸಿನಿಮಾ ಮಾರುಕಟ್ಟೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಚೀನಾದಲ್ಲಿ ಪ್ರಸ್ತುತ 41 ಸಾವಿರ ಬೆಳ್ಳಿ ಪರದೆಗಳಿದ್ದು, ಬಹುತೇಕ ಭಾರತದ ಎರಡರಷ್ಟು ಬೆಳ್ಳಿ ಪರದೆಗಳು ಇಲ್ಲಿ ಇವೆ. 

2017ರಲ್ಲಿ ತೆರೆಕಂಡ ದಂಗಲ್‌ ಸಿನಿಮಾದ ಪೋಸ್ಟರ್ ಮುಂದೆ ಚೀನಿ ಮಹಿಳೆಯರು ಸೆಲ್ಫೀ ತೆಗೆದುಕೊಂಡ ಚಿತ್ರಗಳು ಸಾಕಷ್ಟು ವೈರಲ್‌ ಆಗಿದ್ದವು. ಇದು ಭಾರತೀಯ ಸಿನಿಮಾಗಳಿಗೂ ಬೇಡಿಕೆ ಇದೆ ಎಂಬುದನ್ನು ತೋರಿಸುತ್ತದೆ ಎಂದು ಟಿಯಾನ್‌ ಗುಂಗ್ಯಾಗ್ ಹೇಳಿದ್ದಾರೆ. ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಶೇ 46 ರಷ್ಟು ಆದಾಯ ವಿದೇಶಿ ಸಿನಿಮಾಗಳಿಂದ ಬರುತ್ತದೆ. ಚೀನಿ ಸಿನಿಮಾಗಳು ಹಾಗೂ ಅಲ್ಲಿನ ಸ್ಥಳೀಯ ಭಾಷೆ ಸಿನಿಮಾಗಳಿಂದ ಶೇ 40ರಷ್ಟು ಆದಾಯ ಬರುತ್ತಿದೆ. ಕಳೆದ ಎರಡು ಮೂರು ವರ್ಷಗಳಲ್ಲಿ  ತೆರೆಕಂಡಿದ್ದ ಭಜರಂಗಿ ಬಾಯಿಜಾನ್‌, ದಂಗಲ್ ಸೇರಿದಂತೆ ಇತರೆ 8 ಚಿತ್ರಗಳ ಗಳಿಕೆ 2784 ಕೋಟಿ ರೂಪಾಯಿ ಆಗಿತ್ತು. ಇದರಲ್ಲಿ ಅಮೀರ್ ಖಾನ್ ಅಭಿನಯದ  ದಂಗಲ್‌ ಸಿನಿಮಾದ ಗಳಿಕೆಯೇ 1300 ಕೋಟಿ ರೂಪಾಯಿ.  

ಹಾಲಿವುಡ್‌ ಸಿನಿಮಾಗಳ ಪ್ರದರ್ಶನ ಸಂಖ್ಯೆಯನ್ನು ಕಡಿಮೆ ಮಾಡಿ, ಭಾರತೀಯ ಸಿನಿಮಾಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಿಡುಗಡೆ ಮಾಡುವ ಬಗ್ಗೆ ಚೀನಾ ಸರ್ಕಾರ ಗಮನ ಹರಿಸಬೇಕು ಎಂದು ವಿಶ್ಲೇಷಕರು ಮನವಿ ಮಾಡಿದ್ದಾರೆ. 2016 ರಿಂದ 2018ರ ಮಾರ್ಚ್‌ವರೆಗೂ ಚೀನಾದಲ್ಲಿ 8 ಭಾರತಿಯ ಸಿನಿಮಾಗಳು ತೆರೆಕಂಡಿವೆ. ಇದೇ ಅವಧಿಯಲ್ಲಿ ಅಮೆರಿಕದ 156 ಸಿನಿಮಾಗಳು ಬಿಡುಗಡೆಯಾಗಿವೆ. ಚೀನಾದ ಅಂತರಿಕ ಕಾನೂನಿನ ಪ್ರಕಾರ ವರ್ಷಕ್ಕೆ ಭಾರತದ 5 ಸಿನಿಮಾಗಳು ಮಾತ್ರ ಪ್ರದರ್ಶನ ಕಾಣಬಹುದಾಗಿದೆ. ಈ ಕಾನೂನಿಗೆ ತಿದ್ದುಪಡಿ ತಂದು ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯ ಸಿನಿಮಾಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಮಾರುಕಟ್ಟೆ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. 

ಅಮೆರಿಕ–ಚೀನಾದ ವಾಣಿಜ್ಯ ಸಂಬಂಧ ಹದಗೆಡುತ್ತಿರುವ ಹಿನ್ನಲೆಯಲ್ಲಿ ಭಾರತೀಯ ಸಿನಿಮಾಗಳಿಗೆ ಚೀನಾದಲ್ಲಿ ಬೇಡಿಕೆ ಉಂಟಾಗುವ ಎಲ್ಲ ಸಾಧ್ಯತೆಗಳಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು