ಸೋಮವಾರ, ಜನವರಿ 20, 2020
20 °C
ಇರಾಕ್‌ನಲ್ಲಿರುವ ಅಮೆರಿಕದ ಎರಡು ನೆಲೆಗಳಿಗೆ ಕ್ಷಿಪಣಿ ದಾಳಿ

ಇರಾನ್‌ ಪ್ರತೀಕಾರ: ಸೇನಾನೆಲೆಗೆ ದಾಳಿ

ರಾಯಿಟರ್ಸ್‌ Updated:

ಅಕ್ಷರ ಗಾತ್ರ : | |

prajavani

ಬಾಗ್ದಾದ್‌/ವಾಷಿಂಗ್ಟನ್‌: ಇರಾಕ್‌ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಇರಾನ್‌ ಬುಧವಾರ ಬೆಳಿಗ್ಗಿನ ಜಾವ ಕ್ಷಿಪಣಿ ದಾಳಿ ನಡೆಸಿದೆ. ಇರಾನ್‌ನ ಕಮಾಂಡರ್‌ ಖಾಸಿಂ ಸುಲೇಮಾನಿಯ ಹತ್ಯೆಗೆ ಪ್ರತೀಕಾರವಾಗಿ ಈ ದಾಳಿ ನಡೆದಿದೆ. ಮಧ್ಯ ಪ್ರಾಚ್ಯದಲ್ಲಿನ ಬಿಕ್ಕಟ್ಟು ತೀವ್ರಗೊಳ್ಳುವ ಅಪಾಯ ಈಗ ದಟ್ಟವಾಗಿದೆ.

ಈ ಕ್ಷಿಪಣಿ ದಾಳಿಯಲ್ಲಿ ‘ಅಮೆರಿಕದ 80 ಉಗ್ರರ ಹತ್ಯೆಯಾಗಿದೆ’ ಎಂದು ಇರಾನ್‌ನ ಸರ್ಕಾರಿ ಸ್ವಾಮ್ಯದ ಸುದ್ದಿ ವಾಹಿನಿ ವರದಿ ಮಾಡಿದೆ. ‘ಈ ದಾಳಿಯು ಅಮೆರಿಕದ ಮುಖದ ಮೇಲೆ ಕೊಟ್ಟ ಹೊಡೆತ. ಅಮೆರಿಕದ ಪಡೆಗಳು ತಕ್ಷಣವೇ ಈ ಪ್ರದೇಶವನ್ನು ತೊರೆಯಬೇಕು’ ಎಂದು ಇರಾನ್‌ನ ಸರ್ವೋಚ್ಚ ನಾಯಕ ಅಯಾತ್‌ ಉಲ್ಲಾ ಖೊಮೇನಿ ಹೇಳಿದ್ದಾರೆ. 

ಅಮೆರಿಕದ ಮುಂದಿನ ನಡೆಯು ಬಿಕ್ಕಟ್ಟು ಯಾವ ಸ್ಥಿತಿ ತಲುಪಬಹುದು ಎಂಬುದನ್ನು ನಿರ್ಧರಿಸಲಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು, ಕ್ಷಿಪಣಿ ದಾಳಿಯ ಬಳಿಕ ಟ್ವೀಟ್‌ ಮಾಡಿ ‘ಎಲ್ಲವೂ ಸರಿ ಇದೆ. ಕ್ಷಿಪಣಿ ದಾಳಿಯಿಂದಾದ ಸಾವು ನೋವು ಮತ್ತು ನಷ್ಟದ ಅಂದಾಜು ಮಾಡಲಾಗುತ್ತಿದೆ’ ಎಂದು ಹೇಳಿದ್ದಾರೆ. ಸುಲೇಮಾನಿಯ ಹತ್ಯೆಗೆ ಇರಾನ್‌ ಯಾವುದೇ ಪ್ರತೀಕಾರಕ್ಕೆ ಮುಂದಾದರೆ ದಾಳಿ ನಡೆಸುವುದಕ್ಕಾಗಿ ಆ ದೇಶದ 52 ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ಟ್ರಂಪ್‌ ಅವರು ಕಳೆದ ವಾರವೇ ಎಚ್ಚರಿಕೆ ನೀಡಿದ್ದರು. 

ಇರಾಕ್‌ನಲ್ಲಿರುವ ಅಮೆರಿಕದ ಅಲ್‌ ಅಸದ್‌ ವಾಯುನೆಲೆ ಮತ್ತು ಎರ್ಬಿಲ್‌ ಸೇನಾ ನೆಲೆಯ ದಾಳಿ ನಡೆದಿದೆ. 20ಕ್ಕೂ ಹೆಚ್ಚು ಕ್ಷಿಪಣಿಗಳನ್ನು ಉಡಾಯಿಸಲಾಗಿದೆ. ‘ಅಮೆರಿಕದ 80 ಉಗ್ರರು, ಹೆಲಿಕಾಪ್ಟರ್‌ಗಳು ಮತ್ತು ಸೇನಾ ಸಲಕರಣೆಗಳು ಹಾನಿಗೊಂಡಿವೆ’ ಎಂದು ಇರಾನ್‌ನ ಸುದ್ದಿವಾಹಿನಿ ವರದಿ ಮಾಡಿದೆ. ಆದರೆ, ಇದಕ್ಕೆ ಯಾವುದೇ ಪುರಾವೆಯನ್ನು ಒದಗಿಸಲಾಗಿಲ್ಲ. 

ಸೇನಾ ನೆಲೆಗಳಲ್ಲಿ ಸಾವು ನೋವು ಉಂಟಾಗಿಲ್ಲ ಎಂದು ಒಂದು ಮೂಲ ಹೇಳಿದೆ. ಆದರೆ, ಅಮೆರಿಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದೇ ನೆಲೆಯಲ್ಲಿ ಜರ್ಮನಿ, ಡೆನ್ಮಾರ್ಕ್‌, ನಾರ್ವೆ ಮತ್ತು ಪೋಲೆಂಡ್‌ ಯೋಧರೂ ಇದ್ದಾರೆ. ತಮ್ಮ ಪಡೆಗಳಿಗೆ ಯಾವುದೇ ಹಾನಿ ಆಗಿಲ್ಲ ಎಂದು ಈ ದೇಶಗಳು ಹೇಳಿವೆ. ದಾಳಿಯನ್ನು ಬ್ರಿಟನ್‌ ಖಂಡಿಸಿದೆ.  

ಇರಾಕ್‌ನಲ್ಲಿ ಅಮೆರಿಕದ ಐದು ಸಾವಿರಕ್ಕೂ ಹೆಚ್ಚು ಯೋಧರು ಇದ್ದಾರೆ. ಐಎಸ್‌ ಉಗ್ರರ ವಿರುದ್ಧ ಹೋರಾಡಲು ಇರಾಕ್‌ನ ಪಡೆಗೆ ತರಬೇತಿ ನೀಡುವುದಕ್ಕಾಗಿ ಅಮೆರಿಕ ನೇತೃತ್ವದಲ್ಲಿ ಮಿತ್ರಕೂಟವೊಂದನ್ನು ರೂಪಿಸಲಾಗಿದೆ. ಹಾಗಾಗಿ, ಈ ಮಿತ್ರಕೂಟಕ್ಕೆ ಸೇರಿದ ದೇಶಗಳ ಯೋಧರೂ ಇಲ್ಲಿ  ಇದ್ದಾರೆ. 

ಶಮನ ಹೇಗೆ?

ಸೇನಾ ನೆಲೆಯ ಮೇಲಿನ ದಾಳಿಯಲ್ಲಿ ಅಮೆರಿಕದ ಯೋಧರಲ್ಲಿ ಸಾವು ನೋವು ಉಂಟಾಗದಿದ್ದರೆ ಮತ್ತು ಸುಲೇಮಾನಿಯ ಹತ್ಯೆಯ ಪ್ರತೀಕಾರವನ್ನು ಇರಾನ್‌ ಇಲ್ಲಿಗೆ ಕೊನೆಗೊಳಿಸಿದರೆ ಎರಡೂ ದೇಶಗಳ ನಡುವಣ ಬಿಕ್ಕಟ್ಟು ಶಮನದತ್ತ ಸಾಗಬಹುದು. 

ಪ್ರತೀಕಾರದ ಮಾತನ್ನು ಇರಾನ್‌ ಜೋರಾಗಿ ಆಡುತ್ತಿದ್ದರೂ ಪ್ರಬಲ ಸೇನೆಯನ್ನು ಹೊಂದಿರುವ ಅಮೆರಿಕದ ಜತೆಗೆ ಸೇನಾ ಸಂಘರ್ಷಕ್ಕೆ ಇಳಿಯುವ ಇಚ್ಛೆ ಇರಾನ್‌ಗೆ ಇಲ್ಲ ಎಂದು ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ. ಹಿಂದೆ ಕೂಡ ಇರಾನ್‌ ಅಸಾಂಪ್ರದಾಯಿಕ ಅಥವಾ ಪರೋಕ್ಷ ಸಂಘರ್ಷದಲ್ಲಷ್ಟೇ ಇರಾನ್‌ ತೊಡಗಿತ್ತು ಎಂಬುದನ್ನು ಅವರು ನೆನಪಿಸಿಕೊಂಡಿದ್ದಾರೆ.

***

ನಮ್ಮ ಪ್ರತಿಕ್ರಿಯೆ ಏನಿರಬೇಕು ಎಂಬ ಬಗ್ಗೆ ಚಿಂತನೆ ನಡೆಯುತ್ತಿದೆ. ಅಮೆರಿಕದ ಯೋಧರು, ಪಾಲುದಾರರು ಮತ್ತು ಈ ಪ್ರದೇಶದಲ್ಲಿರುವ ಮಿತ್ರರ ರಕ್ಷಣೆಗಾಗಿ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತೇವೆ

-ಜೊನಾಥನ್‌ ಹಾಫ್‌ಮನ್‌, ಅಮೆರಿಕದ ವಕ್ತಾರ

ಈ ರೀತಿಯ ದಾಳಿ ಸಾಲದು. ಈ ಪ್ರದೇಶದಲ್ಲಿ ಅಮೆರಿಕದ ಭ್ರಷ್ಟ ಉಪಸ್ಥಿತಿ ಕೊನೆಗೊಳ್ಳಬೇಕು. ಈ ಪ್ರದೇಶವು ಅಮೆರಿಕದ ಉಪಸ್ಥಿತಿಯನ್ನು ಒಪ್ಪಿಕೊಳ್ಳುವುದಿಲ್ಲ

-ಹಯಾತ್‌ ಉಲ್ಲಾ ಖೊಮೇನಿ, ಇರಾನ್‌ನ ಸರ್ವೋಚ್ಚ ನಾಯಕ

ನಮಗೆ ಪರಿಸ್ಥಿತಿ ಇನ್ನಷ್ಟು ಹದಗೆಡುವುದು ಅಥವಾ ಯುದ್ಧ ನಡೆಯುವುದು ಬೇಕಾಗಿಲ್ಲ. ಆದರೆ, ಯಾವುದೇ ಅತಿಕ್ರಮಣದಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳುತ್ತೇವೆ

-ಮೊಹಮ್ಮದ್‌ ಜವಾದ್‌ ಝರೀಫ್‌, ಇರಾನ್‌ನ ವಿದೇಶಾಂಗ ಸಚಿವ

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು