ಗುರುವಾರ , ಜನವರಿ 23, 2020
28 °C

ಬಾಜ್ವಾ ಅಧಿಕಾರ ವಿಸ್ತರಣೆಗೆ ಅಂಗೀಕಾರ

ಪಿಟಿಐ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್: ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಖಮರ್ ಜಾವೇದ್ ಬಾಜ್ವಾ ಅವರಿಗೆ ಇನ್ನೂ ಮೂರು ವರ್ಷಗಳ ಕಾಲ ಅಧಿಕಾರಾವಧಿ ವಿಸ್ತರಿಸಲು ಇಲ್ಲಿನ ಸಂಸತ್ತು ಮಂಗಳವಾರ ಮೂರು ಮಸೂದೆಗಳನ್ನು ಅಂಗೀಕರಿಸಿದೆ. 

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಆಪ್ತವಲಯದಲ್ಲಿ ಗುರುತಿಸಿಕೊಂಡಿರುವ ಬಾಜ್ವಾ ಕಳೆದ ವರ್ಷ ನ. 29ಕ್ಕೆ ನಿವೃತ್ತರಾಗಬೇಕಿತ್ತು. ಆದರೆ, ಪ್ರಧಾನಿ ಪ್ರಾದೇಶಿಕ ಭದ್ರತಾ ಸ್ಥಿತಿ ಉಲ್ಲೇಖಿಸಿ ಬಾಜ್ವಾ ಅವರ ಅಧಿಕಾರಾವಧಿಯನ್ನು ಒಂದು ವರ್ಷ ಕಾಲ ವಿಸ್ತರಿಸಿ ಆಗಸ್ಟ್ 19ರಂದು ಅಧಿಸೂಚನೆ ಹೊರಡಿಸಿದ್ದರು. 

ಆದರೆ, ಸೇನಾ ಮುಖ್ಯಸ್ಥರ ಅಧಿಕಾರಾವಧಿ ವಿಸ್ತರಣೆಗೆ ಯಾವುದೇ ಕಾನೂನು ಇಲ್ಲ ಎಂದು ಹೇಳಿ ಸುಪ್ರೀಂ ಕೋರ್ಟ್‌ ನ. 28ರಂದು ಸರ್ಕಾರದ ಆದೇಶವನ್ನು ಅಮಾನತುಗೊಳಿಸಿತ್ತು. ಆರು ತಿಂಗಳೊಳಗೆ ಸೇನಾ ಮಖ್ಯಸ್ಥರ ಅಧಿಕಾರಾವಧಿ ವಿಸ್ತರಣೆ ಹಾಗೂ ಮರು ನೇಮಕಾತಿ ಕುರಿತು ಸಂಸತ್ತು ಶಾಸನವನ್ನು ಅಂಗೀಕರಿಸಲಿದೆ ಎಂದು ಸರ್ಕಾರ ಭರವಸೆ ನೀಡಿದ ನಂತರ ಕೋರ್ಟ್ ಬಾಜ್ವಾ ಅವರಿಗೆ ಆರು ತಿಂಗಳ ಅಧಿಕಾರಾವಧಿಯನ್ನು ವಿಸ್ತರಣೆಗೆ ಒಪ್ಪಿಗೆ ನೀಡಿತ್ತು. 

ಸೇನಾ ಪಡೆ, ನೌಕಾ ಪಡೆ ಮತ್ತು ವಾಯುಪಡೆಯ ಮುಖ್ಯಸ್ಥರ ನಿವೃತ್ತಿ ವಯಸ್ಸನ್ನು 60ರಿಂದ 64ಕ್ಕೆ ಏರಿಸುವ ಮೂರು ಮಸೂದೆಗಳಿಗೆ ಸಂಸತ್ತು ಅಂಗೀಕಾರ ನೀಡಿದ್ದರಿಂದ ಬಾಜ್ವಾ ಅವರ ಅಧಿಕಾರಾವಾಧಿ ಇನ್ನೂ ಮೂರು ವರ್ಷಗಳ ಕಾಲ ಮುಂದುವರಿಯಲಿದೆ. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು