ಬುಧವಾರ, ನವೆಂಬರ್ 30, 2022
17 °C

ಕರಾವಳಿ ಬಂಗಲೆಯಲ್ಲಿ ಕಿಮ್; ಉಪಗ್ರಹ ಚಿತ್ರಗಳಲ್ಲಿ ಐಷಾರಾಮಿ ದೋಣಿಗಳ ಯಾನ ಸೆರೆ

ಏಜೆನ್ಸೀಸ್ Updated:

ಅಕ್ಷರ ಗಾತ್ರ : | |

ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌

ಸೋಲ್‌: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಆಗಾಗ್ಗೆ ಬಳಸುವ ಐಷಾರಾಮಿ ದೋಣಿಗಳು ಯಾನ ನಡೆಸಿರುವುದು ಉಪಗ್ರಹದ ಚಿತ್ರಗಳಿಂದ ಕಂಡು ಬಂದಿದೆ. ನಾಯಕನ ಕಾಯುವ ಸಿಬ್ಬಂದಿ ವೋನ್‌ಸನ್‌‌ ಸಮೀಪ ಕಂಡು ಬಂದಿರುವುದು, ಕಿಮ್‌ ಕರಾವಳಿ ರೆಸಾರ್ಟ್‌ನಲ್ಲಿ ಇರುವ ಸುಳಿವು ನೀಡಿರುವುದಾಗಿ ತಜ್ಞರು ಹೇಳಿದ್ದಾರೆ. 

ಉತ್ತರ ಕೊರಿಯಾದ ಸಂಸ್ಥಾಪಕ, ಕಿಮ್‌ ಜಾಂಗ್‌ ಉನ್‌ ಅವರ ಅಜ್ಜ ದಿವಂಗತ ಕಿಮ್‌ ಇಲ್‌ ಸಂಗ್‌ ಹುಟ್ಟು ಹಬ್ಬದ ಆಚರಣೆ ಕಾರ್ಯಕ್ರಮಗಳಲ್ಲಿ ಏಪ್ರಿಲ್‌ 15ರಂದು ಭಾಗಿಯಾಗಿರಲಿಲ್ಲ. ಬಹಳ ದಿನಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಅವರ ಆರೋಗ್ಯ ಹಾಗೂ ಇರುವ ಸ್ಥಳದ ಬಗ್ಗೆ ಹಲವು ಊಹಾಪೋಹಗಳು ವರದಿಯಾಗಿವೆ. ಕಿಮ್ ಆಗಾಗ್ಗೆ ಬಳಸುವ ದೋಣಿಗಳು ಯಾನ ನಡೆಸಿರುವುದು ವಾಣಿಜ್ಯ ಬಳಕೆ ಉಪಗ್ರಹದಿಂದ ಪಡೆಯಲಾಗಿರುವ ಚಿತ್ರಗಳಿಂದ ಕಂಡು ಬಂದಿರುವುದಾಗಿ ಉತ್ತರ ಕೊರಿಯಾ ವೆಬ್‌ಸೈಟ್‌ NK PRO ವರದಿ ಮಾಡಿದೆ. 

ಈ ಚಿತ್ರಗಳು ವೋನ್‌ಸನ್ ಪ್ರದೇಶದಲ್ಲಿ ಕಿಮ್‌ ಅಥವಾ ಅವರ ಸಹಚರರು ಇರುವುದನ್ನು ತಿಳಿಸುತ್ತಿವೆ ಎನ್ನಲಾಗಿದೆ. ವೋನ್‌ಸನ್‌ ವಲಯದಲ್ಲಿನ ಬಂಗಲೆಯೊಂದರ ಸಮೀಪದ ನಿಲ್ದಾಣದಲ್ಲಿ ಕಿಮ್‌ ಬಳಕೆಗಾಗಿಯೇ ಇರುವ ರೈಲು ಕಾಯ್ದಿರಸಲಾಗಿದೆ ಎಂದು ಉಪಗ್ರಹ ಚಿತ್ರಗಳ ಆಧಾರದ ಮೇಲೆ ಕಳೆದ ವಾರ ಅಮೆರಿಕ ಮೂಲದ ಉತ್ತರ ಕೊರಿಯಾ ಮಾನಿಟರಿಂಗ್‌ ಪ್ರಾಜೆಕ್ಟ್‌ '38 ನಾರ್ಥ್‌' ವರದಿ ಮಾಡಿತ್ತು.


ಉಪಗ್ರಹದಲ್ಲಿ ಸೆರೆಯಾಗಿರುವ ವೋನ್‌ಸ್ಯಾನ್‌ ಕರಾವಳಿ ಭಾಗದಲ್ಲಿರುವ ಕಿಮ್‌ ಬಂಗಲೆ ಪ್ರದೇಶ

ಕಿಮ್‌ ಅದೇ ಸ್ಥಳದಲ್ಲಿ ಉಳಿದಿರುವ ಸಾಧ್ಯತೆ ಹೆಚ್ಚಿದೆ ಎಂದು ದಕ್ಷಿಣ ಕೊರಿಯಾ ಹಾಗೂ ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಕೊರೊನಾ ವೈರಸ್‌ ಸೋಂಕಿನಿಂದ ರಕ್ಷಿಸಿಕೊಳ್ಳಲು ಅಲ್ಲಿರಬಹುದು, ಆದರೆ ಮಾಧ್ಯಮಗಳಲ್ಲಿ ವರದಿಯಾಗಿರುವ ಗಂಭೀರ ಕಾಯಿಲೆಯ ವರದಿಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಕಿಮ್‌ ಆರೋಗ್ಯ ಸ್ಥಿತಿ ಹಾಗೂ ಇರುವ ಸ್ಥಳದ ಬಗ್ಗೆ ಸರಿಯಾದ ಮಾಹಿತಿ ಪಡೆಯುವುದು ಕಠಿಣವಾಗಿದ್ದು, ಅದನ್ನು ಅತ್ಯಂತ ಗೌಪ್ಯವಾಗಿಡಲಾಗಿದೆ ಎಂದಿದ್ದಾರೆ. 

ಏಪ್ರಿಲ್ 11ರಂದು ಸಭೆಯೊಂದರಲ್ಲಿ ಕಿಮ್‌ ಭಾಗಿಯಾಗಿದ್ದರ ಕುರಿತು ಉತ್ತರ ಕೊರಿಯಾದ ಅಧಿಕೃತ ಮಾಧ್ಯಮ ವರದಿ ಮಾಡಿತ್ತು. ಅದಾದ ನಂತರದಲ್ಲಿ ಕಿಮ್‌ ಆಡಳಿತಾತ್ಮ ಸಂದೇಶಗಳು ಹಾಗೂ ಪತ್ರಗಳನ್ನು ಕಳುಹಿಸುತ್ತಿರುವುದು ವರದಿಯಾಗಿದೆ. 

ಉತ್ತರ ಕೊರಿಯಾದ ಪೂರ್ವ ಕರಾವಳಿ ಭಾಗದಲ್ಲಿ ಕಿಮ್‌ ಬಂಗಲೆ, ಅತಿಥಿ ಗೃಹಗಳು, ಖಾಸಗಿ ಬೀಚ್, ಬ್ಯಾಸ್ಕೆಟ್‌ಬಾಲ್‌ ಕೋರ್ಟ್‌ ಹಾಗೂ ಖಾಸಗಿ ರೈಲ್ವೆ ನಿಲ್ದಾಣವನ್ನು ಉಪಗ್ರಹದ ಚಿತ್ರಗಳಿಂದ ತಜ್ಞರು ಗುರುತಿಸಿದ್ದಾರೆ. ಕುದುರೆ ಸವಾರಿ ಟ್ರ್ಯಾಕ್‌ ನಿರ್ಮಾಣಕ್ಕಾಗಿ ಕಳೆದ ವರ್ಷ ವಿಮಾನ ಇಳಿಯುವ ಸ್ಥಳವನ್ನು ಪರಿವರ್ತಿಸಲಾಗಿದೆ. ಕಿಮ್‌ ಬಳಸುವ ಪ್ರಿನ್ಸೆಸ್ 95 ಐಷಾರಾಮಿ ದೋಣಿ ಮೌಲ್ಯ 2013ರಲ್ಲಿ 7 ಮಿಲಿಯನ್‌ ಡಾಲರ್‌ (ಸುಮಾರು 52 ಕೋಟಿ ರೂಪಾಯಿ). 

ಕಿಮ್‌ಗೆ ಈ ನಿವಾಸ ಪ್ರಿಯವಾದ ಸ್ಥಳಗಳಲ್ಲಿ ಒಂದು ಎಂದು ಉತ್ತರ ಕೊರಿಯಾ ನಾಯಕತ್ವದಲ್ಲಿ ತಜ್ಞತೆ ಹೊಂದಿರುವ ಅಮೆರಿಕ ಮೂಲದ ಮಿಷೆಲ್‌ ಮೇಡನ್‌ ಹೇಳಿದ್ದಾರೆ. 

ದೇಶದಾದ್ಯಂತ ಕಿಮ್‌ ಇಂಥದ್ದೇ 13 ಕಟ್ಟಡಗಳನ್ನು ಹೊಂದಿದ್ದಾರೆ. ಅವುಗಳ ಪೈಕಿ ಅರ್ಧದಷ್ಟು ಮಾತ್ರ ನಿಯಮಿತ ಬಳಕೆಯಲ್ಲಿದೆ. ನಾಯಕರ ಕೇಂದ್ರ ಸ್ಥಳಗಳಾಗಿ ಬಳಸಿಕೊಳ್ಳಲು ಅವುಗಳನ್ನು ನಿರ್ಮಿಸಲಾಗಿದ್ದು, ಅಲ್ಲಿಂದ ಕಿಮ್‌ ಆಡಳಿತ ಕಾರ್ಯಾಚರಣೆಗಳನ್ನು ನಡೆಸುತ್ತಾರೆ ಎಂದಿದ್ದಾರೆ. 

ವೋನ್‌ಸನ್ ಅತ್ಯಂತ ವಿಸ್ತಾರವಾದ ಹಾಗೂ ಉತ್ತಮ ವ್ಯವಸ್ಥೆಗಳನ್ನು ಹೊಂದಿರುವ ಸ್ಥಳವಾಗಿದೆ. ಇಲ್ಲಿಂದ ಕರಾವಳಿ ಭಾಗದಲ್ಲಿಯೇ ಇತರೆ ಸ್ಥಳಗಳಿಗೆ ಕಿಮ್‌ ಸುಲಭವಾಗಿ ಪ್ರಯಾಣಿಸಲು ಸಹಕಾರಿಯಾಗಿದೆ. ಪ್ಯಾಂಗ್ಯಾಂಗ್‌ಗೆ ಖಾಸಗಿ ರೈಲಿನಲ್ಲಿ ಬಹುಬೇಗ ತೆರಳಬಹುದು ಅಥವಾ ಕಿಮ್‌ ಕುಟುಂಬ, ಇಲ್ಲವೇ ಉನ್ನತ ಅಧಿಕಾರಿಗಳ ಸಂಚಾರಕ್ಕೆ ಮಾತ್ರವೇ ಮೀಸಲಾಗಿರುವ ಹೆದ್ದಾರಿಯಲ್ಲಿ ಪ್ರಯಾಣಿಸಬಹುದಾಗಿದೆ. 

ವೋನ್‌ಸನ್​ ವಿಶೇಷ: 

1945, ಜಪಾನಿಯರ ವಸಾಹತುಶಾಹಿ ಆಡಳಿತ ಕೊನೆಯಾದ ಸಮಯದಲ್ಲಿ ಕಿಮ್‌ ಇಲ್‌ ಸಂಗ್‌ ಉತ್ತರ ಕೊರಿಯಾ ಸ್ಥಾಪನೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಅವರು ವೋನ್‌ಸನ್ನಿಂದ ಸೋವಿಯತ್‌ ಪಡೆಯೊಂದಿಗೆ ದೇಶವನ್ನು ವಶಪಡಿಸಿಕೊಳ್ಳಲು ಮುಂದಾದರು. ಇದೇ ಸ್ಥಳ ಕಿಮ್‌ ಜಾಂಗ್‌ ವುನ್ ಹುಟ್ಟಿದ ಸ್ಥಳವೆಂದು ನಂಬಲಾಗಿದೆ. ಕುಟುಂಬದೊಂದಿಗೆ ಹೆಚ್ಚಿನ ಸಮಯವನ್ನು ಇಲ್ಲೇ ಕಳೆದಿರುವುದಾಗಿ ಹೇಳಲಾಗಿದೆ. ಆದರೆ, ಅಧಿಕೃತವಾಗಿ ಕಿಮ್‌ ಹುಟ್ಟಿದ ಸ್ಥಳದ ಬಗ್ಗೆ ಮಾಹಿತಿ ಇಲ್ಲ. 

ಅಮೆರಿಕದ ಬ್ಯಾಸ್ಕೆಟ್‌ಬಾಲ್‌ ಆಟಗಾರ ಡೆನ್ನಿಸ್‌ ರೋಡ್‌ಮ್ಯಾನ್‌ 2013ರಲ್ಲಿ ಉತ್ತರ ಕೊರಿಯಾ ಭೇಟಿ ನೀಡಿದ್ದಾಗ, ಕಿಮ್‌ ಮತ್ತು ಡೆನ್ನಿಸ್‌ ಬಹು ಸಮಯ ಮಾತುಕತೆಯಲ್ಲಿ ಕಳೆದಿದ್ದರು. ಇದು ಕಿಮ್‌ಗೆ ಬ್ಯಾಸ್ಕೆಟ್‌ಬಾಲ್‌ ಮೇಲಿನ ಒಲವನ್ನು ತೋರುತ್ತದೆ ಎಂದು ತಜ್ಞರು ವಿಶ್ಲೇಷಿಸುತ್ತಾರೆ. 

ಆರ್ಥಿಕ ಅಭಿವೃದ್ಧಿ, ಪ್ರವಾಸ ಹಾಗೂ ಪರಮಾಣು ಶಸ್ತ್ರಾಸ್ತ್ರ ಎಲ್ಲವನ್ನು ವೋನ್‌ಸನ್ ಒಳಗೊಂಡಿದೆ. ಇಲ್ಲಿ 3,60,000 ಜನರು ವಾಸಿಸುತ್ತಿರುವ ನಗರವನ್ನು ಕಟ್ಟುತ್ತಿದ್ದು, ಬಿಲಿಯನ್‌ ಡಾಲರ್‌ ಪ್ರವಾಸಿ ತಾಣವಾಗಿ ರೂಪಿಸುವ ಯೋಜನೆ ಹಾಕಿಕೊಳ್ಳಲಾಗಿದೆ. ಪರಮಾಣು ಶಸ್ತ್ರಾಸ್ತ್ರಗಳ ಪರೀಕ್ಷೆಗಳಿಂದಾಗಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತರ ಕೊರಿಯಾ ಹಿನ್ನೆಡೆ ಅನುಭವಿಸಿದ್ದು, ಪ್ರವಾಸಿ ತಾಣದ ಯೋಜನೆ ಪೂರ್ಣಗೊಳಿಸಲು ವಿದೇಶಿ ಹೂಡಿಕೆ ಸೆಳೆಯಲು ನಿರ್ಬಂಧ ಏರ್ಪಟ್ಟಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು