ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ| ಭಾರತದಲ್ಲಿ ಮುಸ್ಲಿಮರ ವಿರುದ್ಧ ಕಿರುಕುಳ ದುರದೃಷ್ಟಕರ: ಅಮೆರಿಕದ ಅಧಿಕಾರಿ

Last Updated 15 ಮೇ 2020, 15:38 IST
ಅಕ್ಷರ ಗಾತ್ರ

ವಾಷಿಂಗ್ಟನ್: ಕೋವಿಡ್‌–19 ಸೋಂಕು ಹರಡುವಿಕೆ ಸಂಬಂಧ ಭಾರತದಲ್ಲಿ ಮುಸ್ಲಿಂ ಸಮುದಾಯದವರ ವಿರುದ್ಧ ಆರೋಪ ಮತ್ತು ಕಿರುಕುಳದ ವರದಿಗಳು ಪ್ರಕಟವಾಗುತ್ತಿರುವುದು ದುರದೃಷ್ಟಕರಎಂದು ಅಮೆರಿಕದ ರಾಜತಾಂತ್ರಿಕ ಅಧಿಕಾರಿ ಸ್ಯಾಮ್‌ ಬ್ರೌನ್‌ಬ್ಯಾಕ್‌ ಹೇಳಿದ್ದಾರೆ. ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ರಾಯಭಾರಿಯಾಗಿರುವ ಅವರು, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಸುಳ್ಳು ಸುದ್ದಿಗಳು ಮತ್ತು ತಪ್ಪು ಮಾಹಿತಿಯಿಂದಾಗಿ ಹೀಗಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ವೈರಸ್‌ ಸೋಂಕಿನಿಂದಾಗಿ ವಿಶ್ವದಾದ್ಯಂತ ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಉಂಟಾಗಿರುವ ಪರಿಣಾಮದ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಕೋವಿಡ್‌–19 ಸೋಂಕಿಗೆ ಸಂಬಂಧಿಸಿದಂತೆ ಮುಸ್ಲಿಂ ಸಮದಾಯದವರ ವಿರುದ್ಧ ಆರೋಪ ಮಾಡಿರುವುದುಮತ್ತು ಅವರಿಗೆ ಕಿರುಕುಳ ನೀಡಿರುವುದಕ್ಕೆ ಸಂಬಂಧಿಸಿದ ವರದಿಗಳು ಪ್ರಕಟವಾಗಿವೆ. ಇದು ದುರದೃಷ್ಟಕರ. ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ ಸುಳ್ಳು ಸುದ್ದಿಗಳು ಮತ್ತು ತಪ್ಪು ಮಾಹಿತಿಯಿಂದಾಗಿ ಇಂತಹ ಸಮಸ್ಯೆಗಳು ಉಲ್ಬಣಿಸಿವೆ. ಕೊರೊನಾವೈರಸ್‌ ಹರಡುತ್ತಿದ್ದಾರೆ ಎಂದು ಆರೋಪಿಸಿ ಮುಸ್ಲಿಮರ ಮೇಲೆ ಹಲ್ಲೆ ನಡೆಸಿದ ಉದಾಹರಣೆಗಳೂ ಇವೆ’ ಎಂದು ಅವರು ಹೇಳಿದ್ದಾರೆ.

ಈ ಹೇಳಿಕೆ ಹೊರತಾಗಿಯೂ ಬ್ರೌನ್‌ಬ್ಯಾಕ್‌, ‘ಒಗ್ಗಟ್ಟಿಗಾಗಿ ಒತ್ತಾಯಿಸಿ ಭಾರತದ ಹಿರಿಯ ಅಧಿಕಾರಿಗಳು ನೀಡಿರುವ ಹೇಳಿಕೆಗಳಿಂದ ನಾವು ಉತ್ತೇಜಿತರಾಗಿದ್ದೇವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೋವಿಡ್‌–19 ಯಾವುದೇ ಧರ್ಮವನ್ನು ನೋಡುವುದಿಲ್ಲ. ಅದಕ್ಕೆ ಭಾಷೆ ಅಥವಾ ಗಡಿ ಇಲ್ಲ ಎಂದು ಹೇಳಿದ್ದರು. ಅದು ಖಂಡಿತವಾಗಿಯೂ ನಿಜ’ ಎಂದು ಅಭಿಪ್ರಾಯಪಟ್ಟಿದ್ದಾರೆ.

ಭಾರತದಲ್ಲಿ ಮುಸ್ಲಿಮರಿಗೆ ಕಿರುಕುಳ ನೀಡಲಾಗುತ್ತಿದೆ ಎಂದು ಆರೋಪಿಸಿಅರಬ್‌ ರಾಷ್ಟ್ರಗಳ ಪ್ರಮುಖರು ಮತ್ತು ಮಾನವ ಹಕ್ಕು ಕಾರ್ಯಕರ್ತರು ಟ್ವಿಟರ್‌ನಲ್ಲಿ ಈ ಮೊದಲು ವ್ಯಾಪಕವಾಗಿ ಟೀಕಿಸಿದ್ದರು. ಆದರೆ, ಭಾರತ ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿತ್ತು. ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್‌ ಶ್ರೀವಾಸ್ತವ ಅವರು, ‘ಸಾಮಾಜಿಕ ಮಾಧ್ಯಮಗಳಲ್ಲಿ ನೀವು ಗಮನಿಸಿರುವ ಪೋಸ್ಟ್‌ಗಳು ನಿರ್ದಿಷ್ಟ ಪಕ್ಷಗಳವು. ಇಂತಹ ಟ್ವೀಟ್‌ಗಳು ಮುಸ್ಲಿಂ ದೇಶಗಳೊಂದಿಗಿನ ನಮ್ಮ ದ್ವಿಪಕ್ಷೀಯ ಸಂಬಂಧಕ್ಕೆ ತೊಡಕಾಗಲಾರವು’ ಎಂದು ಕಳೆದ ತಿಂಗಳು ಹೇಳಿದ್ದರು.

ಮಾರ್ಚ್‌ ತಿಂಗಳಲ್ಲಿ ದೆಹಲಿಯ ನಿಜಾಮುದ್ದೀನ್‌ ಪ್ರದೇಶದಲ್ಲಿ ತಬ್ಲೀಗಿ ಜಮಾತ್‌ ಕಾರ್ಯಕರ್ತರು ಧರ್ಮಸಭೆ ನಡೆಸಿದ್ದರು. ಅದಾದ ಬಳಿಕ ದೇಶದಾದ್ಯಂತ ಸೋಂಕು ಪ್ರಕರಣಗಳು ಹೆಚ್ಚಾಗಿದ್ದವು.

ಕೋವಿಡ್‌–19 ಸಂದರ್ಭದಲ್ಲಿ ಹಲವು ದೇಶಗಳಲ್ಲಿ ಲಾಕ್‌ಡೌನ್‌ ಘೋಷಿಸಲಾಗಿದ್ದರೂ ಅಲ್ಪಸಂಖ್ಯಾತರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಬ್ರೌನ್‌ಬ್ಯಾಕ್‌ ಹೇಳಿದ್ದಾರೆ. ‘ಟಿಬೆಟ್‌ನಲ್ಲಿ ಟಿಬೆಟಿಯನ್ನರ ಮೇಲೆ ಚೀನಾ ನಡೆಸುತ್ತಿರುವ ದೌರ್ಜನ್ಯದ ನಿರ್ದಿಷ್ಟ ಮುಖಗಳನ್ನು ನಾವು ಕಾಣುತ್ತಿದ್ದೇವೆ’ ಎಂದು ಆರೋಪಿಸಿದ್ದಾರೆ.

ಮುಂದುವರಿದು, ಹಲವು ಪ್ರದೇಶಗಳಲ್ಲಿ ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಜಾರಿಯಲ್ಲಿದ್ದ ಸಂದರ್ಭದಲ್ಲಿಯೂ ಟಿಬೆಟಿಯನ್ನರ ಮೇಲೆಹೆಚ್ಚಿನ ನಿರ್ಬಂಧಗಳನ್ನು ಹೇರುವ ಸಲುವಾಗಿ, ಸುಮಾರು 1 ಕೋಟಿ ಮನೆಗಳಿರುವ ಟಿಬೆಟ್‌ಗೆ 10 ಲಕ್ಷ ಪೊಲೀಸರನ್ನು ಚೀನಾ ನಿಯೋಜಿಸಿತ್ತು ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT