ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶ್ಮೀರದ ವಿಚಾರದಲ್ಲಿ ಮೂರನೆಯವರ ಮಧ್ಯಸ್ಥಿಕೆಗೆ ಅವಕಾಶವೇ ಇಲ್ಲ: ಮೋದಿ

Last Updated 26 ಆಗಸ್ಟ್ 2019, 17:19 IST
ಅಕ್ಷರ ಗಾತ್ರ

ಬಿಯಾರಿಟ್ಜ್‌/ಲಂಡನ್‌ : 1947ಕ್ಕೆ ಮೊದಲು ಭಾರತ ಮತ್ತು ಪಾಕಿಸ್ತಾನ ಒಂದೇ ದೇಶವಾಗಿತ್ತು. ಹಾಗಾಗಿ, ಪರಸ್ಪರ ಚರ್ಚಿಸಿ ಎಲ್ಲ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಾಧ್ಯವಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಲ್ಲಿ ಹೇಳಿದ್ದಾರೆ.

ಈ ಮೂಲಕ ಕಾಶ್ಮೀರದ ವಿಚಾರದಲ್ಲಿ ಮೂರನೆಯವರ ಮಧ್ಯಸ್ಥಿಕೆಗೆ ಅವಕಾಶವೇ ಇಲ್ಲ ಎಂದು ಮೋದಿ ತಮ್ಮನಿಲುವು ವ್ಯಕ್ತ ಪಡಿಸಿದ್ದಾರೆ.

ಜಿ–7 ದೇಶಗಳ ಶೃಂಗಸಭೆಯ ಸಂದರ್ಭದಲ್ಲಿ ಮೋದಿ ಅವರನ್ನು ಭೇಟಿಯಾದಾಗ ಕಾಶ್ಮೀರ ವಿಚಾರ ಚರ್ಚಿಸುವುದಾಗಿ ಟ್ರಂಪ್‌ ಹೇಳಿದ್ದರು. ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದು ಇತ್ತೀಚೆಗೆ ಅವರು ಹೇಳಿದ್ದರು. ಈಗ, ಟ್ರಂಪ್‌ ಅವರ ಸಮ್ಮುಖದಲ್ಲಿಯೇ ಮೂರನೆಯವರ ಹಸ್ತಕ್ಷೇಪಕ್ಕೆ ಅವಕಾಶ ಇಲ್ಲ ಎಂದು ಮೋದಿ ಸ್ಪ‍ಷ್ಟಪಡಿಸಿದ್ದಾರೆ.

ಬಿಯಾರಿಟ್ಜ್‌ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಟ್ರಂಪ್ ಕಳೆದ ರಾತ್ರಿ ನಾವು ಕಾಶ್ಮೀರದ ಬಗ್ಗೆ ಮಾತನಾಡಿದೆವು. ಕಾಶ್ಮೀರದ ನಿಯಂತ್ರಣ ತಮ್ಮ ಕೈಯಲ್ಲಿಯೇ ಇದೆ ಎಂಬ ಭಾವನೆ ನರೇಂದ್ರ ಮೋದಿಯವರದ್ದುಎಂದಿದ್ದಾರೆ.

‘ಮೋದಿ ಚೆನ್ನಾಗಿ ಇಂಗ್ಲಿಷ್‌ ಮಾತಾಡ್ತಾರೆ’

ಮೋದಿ–ಟ್ರಂಪ್‌ ನಡುವಣ ಸ್ನೇಹ ಜಂಟಿ ಮಾಧ್ಯಮಗೋಷ್ಠಿಯ ವೇಳೆಯಲ್ಲಿ ಕಾಣಿಸಿಕೊಂಡಿತು. ಇಬ್ಬರು ನಾಯಕರ ನಡುವಣ ಮಾತುಕತೆಯ ಬಗೆಗಿನ ಪ್ರಶ್ನೆಯೊಂದಕ್ಕೆ ‘ಮೊದಲು ನಾವು ಚರ್ಚೆ ಮಾಡಲು ಬಿಡಿ. ನಂತರ ಅದರ ಬಗ್ಗೆ ಏನು ಹೇಳಬೇಕೋ ಹೇಳುತ್ತೇವೆ’ ಎಂದು ಮೋದಿ ಹಿಂದಿಯಲ್ಲಿ ಉತ್ತರಿಸಿದರು.

ಮಧ್ಯಪ್ರವೇಶಿಸಿದ ಟ್ರಂಪ್‌, ‘ಅವರು (ಮೋದಿ) ಬಹಳ ಚೆನ್ನಾಗಿ ಇಂಗ್ಲಿಷ್‌ ಮಾತನಾಡುತ್ತಾರೆ. ಆದರೆ, ಅವರಿಗೆ ಇಂಗ್ಲಿಷ್‌ನಲ್ಲಿ ಮಾತನಾಡುವ ಇಚ್ಛೆ ಇಲ್ಲ’ ಎಂದರು. ಇಬ್ಬರೂ ನಾಯಕರು ಕೈ ಕೈ ಹಿಡಿದು ನಕ್ಕರು. ಸಭಾಂಗಣದಲ್ಲಿದ್ದ ಇತರ ಹಲವರು ಕೂಡ ಜೋರಾಗಿ ನಕ್ಕರು.

ಸುಸ್ಥಿರ ಭವಿಷ್ಯದ ಪ್ರತಿಪಾದನೆ

ಒಂದೇ ಬಾರಿ ಬಳಕೆಯ ಪ್ಲಾಸ್ಟಿಕ್‌ ನಿರ್ಮೂಲನೆ, ನೀರು ಉಳಿಸುವುದು, ಸೌರಶಕ್ತಿ ಬಳಕೆ ಸೇರಿದಂತೆ ಸುಸ್ಥಿರ ಭವಿಷ್ಯಕ್ಕಾಗಿ ಪರಿಸರ ಸಂರಕ್ಷಣೆ ಕುರಿತ ಹಲವು ವಿಚಾರಗಳನ್ನು ಜಿ7 ಅಧಿವೇಶನದಲ್ಲಿ ಮೋದಿ ಮುಂದಿಟ್ಟರು. ಈ ನಿಟ್ಟಿನಲ್ಲಿ ಭಾರತದ ಪ್ರಯತ್ನಗಳನ್ನು ಅವರು ವಿವರಿಸಿದರು.

ಫ್ರಾನ್ಸ್‌ ಅಧ್ಯಕ್ಷ ಇಮ್ಯಾನುವೆಲ್‌ ಮ್ಯಾಕ್ರನ್‌ ಅವರ ವಿಶೇಷ ಆಹ್ವಾನದಿಂದಾಗಿ ಬಿಯಾರಿಟ್ಜ್‌ನ ಜಿ7 ಶೃಂಗಸಭೆಯಲ್ಲಿ ಭಾಗವಹಿಸಿದರು. ಜಿ7ನಲ್ಲಿ ಭಾರತಕ್ಕೆ ಸದಸ್ಯತ್ವ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT