ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಬದುಕಿದ್ದಾಗ ನೆಗೆಟಿವ್‌, ಸತ್ತ ನಂತರ ಪಾಸಿಟಿವ್‌ !

ಅಕ್ಕನಿಗೆ ಚಿಕಿತ್ಸೆ ಕೊಡಿಸಲು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದ ಸಹೋದರ 
Last Updated 20 ಜುಲೈ 2020, 9:43 IST
ಅಕ್ಷರ ಗಾತ್ರ

ಬೆಂಗಳೂರು: ಕೊರೊನಾ ವರದಿಗಾಗಿ ನಾಲ್ಕು ದಿನಗಳಿಂದ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿದರೂ, ಅಕ್ಕನ ಪ್ರಾಣ ಉಳಿಸಿಕೊಳ್ಳಲು ತಮ್ಮನಿಗೆ ಸಾಧ್ಯವಾಗಿಲ್ಲ. ಈ ಕುರಿತು ಕಾಮಾಕ್ಷಿಪಾಳ್ಯದ ರಘು ಎಂಬುವರು ಅವರ ಸಹೋದರಿಯ ಶವದ ಎದುರೇ ವಿಡಿಯೊ ಮಾಡಿ, ಅವರು ಅನುಭವಿಸಿದ ಸಂಕಷ್ಟವನ್ನು ಹೇಳಿಕೊಂಡಿದ್ದಾರೆ.

‘ಅಕ್ಕನಿಗೆ ಜ್ವರ ಮತ್ತು ಎದೆನೋವು ಕಾಣಿಸಿಕೊಂಡಿತ್ತು. ಈಗ ಯಾವುದೇ ಆಸ್ಪತ್ರೆಯಲ್ಲಿ ದಾಖಲಾಗಬೇಕು ಎಂದರೆ ಕೊರೊನಾ ನೆಗೆಟಿವ್‌ ಅಥವಾ ಪಾಸಿಟಿವ್‌ ವರದಿ ಇರಲೇಬೇಕು. ಎರಡರಲ್ಲಿ ಯಾವ ವರದಿ ಇರದಿದ್ದರೂ ಯಾರೂ ಸೇರಿಸಿಕೊಳ್ಳುವುದಿಲ್ಲ. ಮೂರು ದಿನಗಳಿಂದ ನಗರದ ಹಲವು ಆಸ್ಪತ್ರೆಗೆ ಅಲೆದಾಡಿದೆ. ಕೆಲವರು ಬೆಡ್‌ ಇಲ್ಲ, ವೆಂಟಿಲೇಟರ್‌ ಇಲ್ಲ ಎಂದು ಅಲೆದಾಡಿಸಿದರು. ನಾಗರಬಾವಿಯ ಬಿಬಿಎಂಪಿ ಕಚೇರಿಯೊಳಗಿರುವ ಸ್ಕ್ಯಾನ್‌ ಪಾಯಿಂಟ್‌ ಎಂಬ ಲ್ಯಾಬ್‌ನಲ್ಲಿ ಕೊರೊನಾ ಪರೀಕ್ಷೆ ಮಾಡಿಸಿದೆ. ಆದರೆ, ಅವರು ವರದಿ ಬರಲು ಮೂರು ದಿನ ಆಗುತ್ತದೆ ಎಂದರು’ ಎಂದು ರಘು ಹೇಳಿಕೊಂಡಿದ್ದಾರೆ.

‘ವರದಿ ಬಂದ ಮೇಲೆ ನೋಡೋಣ ಎಂದುಕೊಂಡು ಕೆ.ಸಿ. ಜನರಲ್‌ ಆಸ್ಪತ್ರೆಗೆ ದಾಖಲಿಸಿದೆ. ಅಲ್ಲಿ ರ‍್ಯಾಂಡಮ್‌ ಪರೀಕ್ಷೆ ಮಾಡಿಸಿದಾಗ ಕೊರೊನಾ ನೆಗೆಟಿವ್‌ ಎಂಬ ವರದಿ ಬಂದಿತು. ಈ ವರದಿ ತೆಗೆದುಕೊಂಡು ಖಾಸಗಿ ಆಸ್ಪತ್ರೆಗೆ ದಾಖಲಾಗಲು ಹೋದೆವು. ರ‍್ಯಾಂಡಮ್‌ ಪರೀಕ್ಷೆ ಮಾಡಿಸಿದಾಗ ಕೆಲವೊಮ್ಮೆ ನೆಗೆಟಿವ್, ಕೆಲವೊಮ್ಮೆ ಪಾಸಿಟಿವ್‌ ಎಂದು ಬರುತ್ತದೆ. ಲ್ಯಾಬ್‌ನಿಂದ ವರದಿ ಬಂದ ನಂತರವೇ ಕರೆದುಕೊಂಡು ಬನ್ನಿ ಎಂದು ಹೇಳಿದರು. ಈ ವೇಳೆಗೆ ಅಕ್ಕ ಕೊನೆಯುಸಿರೆಳೆದರು’ ಎಂದು ಅವರು ಕಣ್ಣೀರು ಹಾಕಿದರು.

‘ನೆಗೆಟಿವ್‌ ವರದಿ ಬಂದಿದೆಯಲ್ಲ ಎಂದುಕೊಂಡು ನಾವು ಶವವನ್ನು ಮನೆಗೆ ತೆಗೆದುಕೊಂಡು ಬಂದೆವು, ಶವಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದೆವು. ಆಗ, ಲ್ಯಾಬ್‌ ರಿಪೋರ್ಟ್‌ನಲ್ಲಿ ಪಾಸಿಟಿವ್‌ ಎಂದು ಬಂದಿದೆ. ನೀವೆಲ್ಲರೂ ಕ್ವಾರಂಟೈನ್‌ ಆಗಬೇಕಾಗುತ್ತದೆ. ಶವಸಂಸ್ಕಾರದ ವೇಳೆ ಎಲ್ಲ ಮುಂಜಾಗ್ರತೆ ವಹಿಸಬೇಕು ಎಂದು ಬಿಬಿಎಂಪಿಯ ಆರೋಗ್ಯಾಧಿಕಾರಿ ಕರೆ ಮಾಡಿದರು’ ಎಂದು ಹೇಳಿದ್ದಾರೆ.

‘ಶವವನ್ನು ತೆಗೆದುಕೊಂಡು ಹೋಗಲು ಆಂಬುಲೆನ್ಸ್‌ನಲ್ಲಿ ಬಂದ ಬಿಬಿಎಂಪಿ ಸಿಬ್ಬಂದಿ, ಶವವನ್ನು ಸುತ್ತಲು ಪಾಲಿಥಿನ್‌ ಕವರ್‌ ನೀವೇ ತರಬೇಕು, ನೀವೇ ಶವವನ್ನು ಆಂಬುಲೆನ್ಸ್‌ ಒಳಗೆ ಹಾಕಬೇಕು ಎಂದು ಹೇಳಿದರು. ಎಲ್ಲವನ್ನೂ ನಾವೇ ಮಾಡಬೇಕು ಎಂದರೆ ಬಿಬಿಎಂಪಿಗೆ ಮಾಹಿತಿ ಏಕೆ ನೀಡಬೇಕು. ಶವಸಂಸ್ಕಾರದ ವೇಳೆ ಸೋಂಕು ಹರಡಬಾರದು, ನಿರ್ದಿಷ್ಟ ಮಾರ್ಗಸೂಚಿಗಳ ಪ್ರಕಾರವೇ ಕೊರೊನಾ ಸೋಂಕಿತರ ಶವವನ್ನು ಸಾಗಿಸಬೇಕು ಎಂಬ ಕಾರಣಕ್ಕೆ ಬಿಬಿಎಂಪಿಗೆ ನಾವು ಮಾಹಿತಿ ನೀಡುತ್ತೇವಲ್ಲವೇ’ ಎಂದು ಅವರು ಪ್ರಶ್ನಿಸಿದ್ದಾರೆ.

‘ಈಗಿನ ಸಂದರ್ಭದಲ್ಲಿ ಯಾವುದೇ ರೀತಿಯ ಅನಾರೋಗ್ಯ ಉಂಟಾದರೂ ತುಂಬಾ ಸಂಕಷ್ಟ ಅನುಭವಿಸಬೇಕಾಗುತ್ತದೆ. ದಯವಿಟ್ಟು ಅನಾವಶ್ಯಕವಾಗಿ ಯಾರೂ ಹೊರಗೆ ಓಡಾಡಬೇಡಿ’ ಎಂದು ನೋವಿನಲ್ಲಿಯೇ ಅವರು ಸಾರ್ವಜನಿಕರಿಗೆ ಮನವಿ ಮಾಡಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT