ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಬಿಎಸ್‌ಸಿ ಫಲಿತಾಂಶ ಪ್ರಕಟ: ಬೆಂಗಳೂರು ಪ್ರಾಂತ್ಯಕ್ಕೆ ದೇಶದಲ್ಲಿ 3ನೇ ಸ್ಥಾನ

ಹತ್ತನೇ ತರಗತಿ ಪರೀಕ್ಷೆ
Last Updated 15 ಜುಲೈ 2020, 17:23 IST
ಅಕ್ಷರ ಗಾತ್ರ

ಬೆಂಗಳೂರು: ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು (ಸಿಬಿಎಸ್ಇ) ಹತ್ತನೇ ತರಗತಿ ಪರೀಕ್ಷೆ ಫಲಿತಾಂಶವನ್ನು ಬುಧವಾರ ಪ್ರಕಟಿಸಿದ್ದು, ರಾಜ್ಯದ ಶಾಲೆಗಳ ವಿದ್ಯಾರ್ಥಿಗಳು ಉತ್ತಮ ಸಾಧನೆ ಪ್ರದರ್ಶಿಸಿದ್ದಾರೆ. ಬೆಂಗಳೂರು ಪ್ರಾಂತ್ಯ ಶೇ 98.23 ರಷ್ಟು ಫಲಿತಾಂಶ ಪಡೆಯುವ ಮೂಲಕ ದೇಶದಲ್ಲಿ ಮೂರನೇ ಸ್ಥಾನ ಪಡೆದಿದೆ.

ಒಟ್ಟು 208 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಶೇ 99.28ರಷ್ಟು ಫಲಿತಾಂಶ ಪಡೆದಿರುವ ತಿರುವನಂತಪುರ ಪ್ರಾಂತ್ಯವು ದೇಶದಲ್ಲಿ ಮೊದಲ ಸ್ಥಾನದಲ್ಲಿದೆ. ಶೇ 98.95ರಷ್ಟು ಫಲಿತಾಂಶ ದಾಖಲಿಸಿರುವ ಚೆನ್ನೈ ಪ್ರಾಂತ್ಯ ಎರಡನೇ ಸ್ಥಾನದಲ್ಲಿದೆ.

ಬೆಂಗಳೂರಿನ ಶಾಲೆಗಳು ಈ ಹಿಂದೆ ದಕ್ಷಿಣ ವಲಯದ ಚೆನ್ನೈ ಪ್ರಾಂತ್ಯದ ವ್ಯಾಪ್ತಿಗೆ ಸೇರಿದ್ದವು. ಈ ವರ್ಷದಿಂದ ಬೆಂಗಳೂರನ್ನು ಪ್ರತ್ಯೇಕ ಪ್ರಾಂತ್ಯ ಎಂದು ಗುರುತಿಸಲಾಗಿದೆ. ಇಲ್ಲಿನ 971 ಶಾಲೆಗಳಿಂದ 56,226 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಅವರಲ್ಲಿ 55,230 ಮಂದಿ ತೇರ್ಗಡೆಯಾಗಿದ್ದಾರೆ.

ಈ ಬಾರಿಯ ಫಲಿತಾಂಶದಲ್ಲೂ ಹುಡುಗಿಯರದೇ ಮೇಲುಗೈ. ಈ ಸಲ ಪರೀಕ್ಷೆ ಬರೆದ ಶೇ 93.31ರಷ್ಟು ಹುಡುಗಿಯರು ಹಾಗೂ ಶೇ 90.14ರಷ್ಟು ಹುಡುಗರು ಉತ್ತೀರ್ಣರಾಗಿದ್ದಾರೆ. ಬೆಂಗಳೂರು ಪ್ರಾಂತ್ಯದ ಫಲಿತಾಂಶದಲ್ಲೂ ಹುಡುಗಿಯರೇ ಮೇಲುಗೈ ಸಾಧಿಸಿದ್ದಾರೆ. ಇಲ್ಲಿ ಹುಡುಗಿಯರು ಶೇ 98.94ರಷ್ಟು ಹಾಗೂ ಹುಡುಗರು ಶೇ 97.66ರಷ್ಟು ಫಲಿತಾಂಶ ಪಡೆದಿದ್ದಾರೆ.

ಬೆಂಗಳೂರು ಪ್ರಾಂತ್ಯದ ಸರ್ಕಾರಿ ಶಾಲೆಗಳು ಶೇ 100 ರಷ್ಟು ಫಲಿತಾಂಶ ದಾಖಲಿಸಿವೆ. ಸ್ವತಂತ್ರ ಸಂಸ್ಥೆಗಳು ಶೇ 98.06ರಷ್ಟು, ಜವಹರಲಾಲ್‌ ನೆಹರೂ ವಿದ್ಯಾಸಂಸ್ಥೆಗಳು ಶೇ 99.60ರಷ್ಟು ಹಾಗೂ ಕೇಂದ್ರೀಯ ವಿದ್ಯಾಲಯಗಳು ಶೇ 99.59ರಷ್ಟು ಫಲಿತಾಂಶ ಪಡೆದಿವೆ.

ಪರೀಕ್ಷೆಗೆ ಹಾಜರಾಗಿದ್ದ 276 ವಿಶೇಷ ಮಕ್ಕಳಲ್ಲಿ 264 ಮಂದಿ (ಶೇ 95.65) ಉತ್ತೀರ್ಣರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT