ಗುರುವಾರ , ಅಕ್ಟೋಬರ್ 1, 2020
25 °C
ಜನಪ್ರತಿನಿಧಿಗಳಿಗೆ ಹಾರೈಕೆಯೊಂದಿಗೆ ಜವಾಬ್ದಾರಿ ನೆನಪಿಸಿದ ಸಾರ್ವಜನಿಕರು

‘ಖಾಸಗಿ ಆಸ್ಪತ್ರೆ’ ವಾಸ್ತವ್ಯಕ್ಕೆ ವಾಗ್ಬಾಣ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆಗಾಗಿ ಬೆಡ್‌ ಸಿದ್ಧಪಡಿಸಿರುವುದು–ಸಂಗ್ರಹ ಚಿತ್ರ

ಬೆಂಗಳೂರು: ‘ಕೊರೊನಾ ಸೋಂಕಿಗೆ ತುತ್ತಾಗಿರುವ ಕೇಂದ್ರ ಗೃಹ ಸಚಿವರನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸದೆ ಖಾಸಗಿ ಆಸ್ಪತ್ರೆಗೆ ದಾಖಲಿಸಿರುವುದು ಏಕೆ? ಸಾರ್ವಜನಿಕ ಸಂಸ್ಥೆಗಳ ಬಗ್ಗೆ ಜನರಲ್ಲಿ ಆತ್ಮವಿಶ್ವಾಸ ತುಂಬಲು ನಿಮ್ಮಂತಹ ‘ಪ್ರಭಾವಿ‘ಗಳ ಪ್ರೋತ್ಸಾಹವೂ ಬೇಕಲ್ಲವೇ..?‘

ಕೊರೊನಾ ಸೋಂಕು ತಗುಲಿರುವ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗಿರುವುದಕ್ಕೆ ಕೇರಳದ ಸಂಸದ ಶಶಿ ತರೂರ್‌ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದು ಹೀಗೆ.

ಕೇಂದ್ರ ಗೃಹ ಸಚಿವರಿಗಷ್ಟೇ ಅಲ್ಲ, ಮುಖ್ಯಮಂತ್ರಿ ಯಡಿಯೂರಪ್ಪ, ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಸೇರಿದಂತೆ ಖಾಸಗಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತ ಅನೇಕ ಜನಪ್ರತಿನಿಧಿಗಳನ್ನು ಜಾಲತಾಣಗಳಲ್ಲಿ ಅಭಿಮಾನಿಗಳು ಹೀಗೆ ಪ್ರಶ್ನಿಸಿದ್ದಾರೆ. ಕೆಲವು ನೆಟ್ಟಿಗರು ಟೀಕಿಸಿದ್ದಾರೆ. ಕೆಲವರು ‘ಬೇಗ ಗುಣ ಮುಖರಾಗಿ‘ ಎಂದು ಹಾರೈಸುತ್ತಾ ನೆಚ್ಚಿನ ನಾಯಕನ ನಡೆಯನ್ನು ಸಣ್ಣ ದಾಗಿ ಕುಟುಕಿದ್ದಾರೆ. ಈ ಎರಡು ದಿನ ಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ನಾಯಕರ ಈ ‘ಖಾಸಗಿ ಆಸ್ಪತ್ರೆ’ಯದ್ದೇ ಚರ್ಚೆಯಾಗುತ್ತಿದೆ.

ಅಮಿತ್‌ ಶಾ ಕುರಿತ ಶಶಿತರೂರ್ ಅವರ ಟ್ವೀಟ್‌ಗೆ ನೆಟ್ಟಿಗರೊಬ್ಬರು ‘ಸೋನಿಯಾ ಗಾಂಧಿಯವರು ಚಿಕಿತ್ಸೆಗಾಗಿ ಅಮೆರಿಕಕ್ಕೆ ಹೋಗಲಿಲ್ಲವಾ‘ ಎಂದು ಪ್ರತಿಕ್ರಿಯಿಸಿದ್ದಾರೆ. 

ನೈತಿಕತೆ ಇರುವುದಿಲ್ಲ: ‘ಎಲ್ಲರಿಗೂ ಸರ್ಕಾರಿ ಆಸ್ಪತ್ರೆಯಲ್ಲಿ ಉತ್ತಮ, ಉಚಿತ ಚಿಕಿತ್ಸೆ ನೀಡುವುದಾಗಿ ಜನಪ್ರತಿನಿಧಿ ಗಳು ಹೇಳುತ್ತಾರೆ. ಈ ರೀತಿ ಹೇಳಿ ಸೋಂಕು ಬಂದಾಗ ಖಾಸಗಿ ಆಸ್ಪತ್ರೆಗೆ ದಾಖಲಾದರೆ ಹೇಗೆ? ಇದರಿಂದ ತಪ್ಪು ಸಂದೇಶ ರವಾನೆಯಾಗುತ್ತದೆ. ಮತ್ತೆ ಆ ರೀತಿ ಹೇಳುವ ನೈತಿಕತೆ ಇವರಿಗೆ ಇರುವುದಿಲ್ಲ. ರಾಮಮನೋಹರ ಲೋಹಿಯಾ ಕಾಯಿಲೆ ಪೀಡಿತರಾಗಿದ್ದಾಗ ಸರ್ಕಾರವೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲು ಪ್ರಯತ್ನಿಸುತ್ತದೆ. ಆದರೆ, ಅವರು ಸರ್ಕಾರಿ ಆಸ್ಪತ್ರೆಗೆ ದಾಖಲಾಗುತ್ತಾರೆ. ಈ ರೀತಿಯ ಸಾಮಾನ್ಯ ಪ್ರಜ್ಞೆ ಇರಬೇಕು’ ಎಂದು ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಘಟಕದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಪ್ರತಿಕ್ರಿಯಿಸಿದ್ದಾರೆ.

‘ಜನಪ್ರತಿನಿಧಿಗಳು ಸರ್ಕಾರಿ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ಜನಸಾಮಾನ್ಯರಲ್ಲಿ ಧೈರ್ಯ ಹೆಚ್ಚುತ್ತದೆ’ ಎನ್ನುತ್ತಾರೆ ಚಿಕ್ಕಮಗಳೂರಿನ ವನ್ಯಜೀವಿ ಕಾರ್ಯಕರ್ತ ಜಿ.ವೀರೇಶ್.

‘ಸರ್ಕಾರಿ ಆಸ್ಪತ್ರೆಗಳಲ್ಲಿನ ಸೌಲಭ್ಯ, ಚಿಕಿತ್ಸೆಗಳ ಬಗ್ಗೆ ನಂಬಿಕೆ ಇದ್ದಿದ್ದರೆ ಜನಪ್ರತಿನಿಧಿಗಳು ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರು. ಕೇಂದ್ರ ಸಚಿವರು, ಮುಖ್ಯಮಂತ್ರಿ, ಸರ್ಕಾರವನ್ನು ಪ್ರಶ್ನಿಸ ಬೇಕಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೂ ಖಾಸಗಿ ಆಸ್ಪತ್ರೆ ಯನ್ನೇ ನಂಬಿಕೊಂಡಿದ್ದಾರೆ. ಅಂದರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರತೆಗಳಿವೆ ಎಂಬುದು ಇವರೆಲ್ಲರಿಗೂ ಗೊತ್ತಿದೆ ಎಂದಾಯಿತು’ ಎಂದು ಕಾರ್ಮಿಕ ಮುಖಂಡ ಎಚ್‌.ಕೆ. ರಾಮಚಂದ್ರಪ್ಪ ಅಭಿಪ್ರಾಯಪಟ್ಟಿದ್ದಾರೆ.

ಕೋವಿಡ್‌ ಆಸ್ಪತ್ರೆಯಲ್ಲೇ ಚಿಕಿತ್ಸೆಪಡೆದವರು

ಹುಬ್ಬಳ್ಳಿ–ಧಾರವಾಡ ಪೂರ್ವ ಕ್ಷೇತ್ರದ ಶಾಸಕ ಪ್ರಸಾದ್‌ ಅಬ್ಬಯ್ಯ, ಹಾಸನ ಜಿಲ್ಲೆ ಅರಸಿಕೆರೆ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ಪತ್ನಿ ಪುಷ್ಪಾವತಿ ಹಾಗೂ ವಿಧಾನ ಪರಿಷತ್ ಸದಸ್ಯ ಚಿಕ್ಕಮಗಳೂರಿನ ಎಂ.ಕೆ.ಪ್ರಾಣೇಶ್‌ ಕೋವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಸರ್ಕಾರಿ ಆಸ್ಪತ್ರೆ ಸ್ಥಿತಿ ಬಹಿರಂಗ

‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಮತ್ತು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ನಡೆ ರಾಜ್ಯದ ಸಾರ್ವಜನಿಕ ಆರೋಗ್ಯ ಕ್ಷೇತ್ರದ ಸ್ಥಿತಿಯನ್ನು ಬಹಿರಂಗಪಡಿಸಿವೆ’

- ಮುನೀರ್‌ ಕಾಟಿಪಳ್ಳ, ಡಿವೈಎಫ್‌ಐ ರಾಜ್ಯ ಘಟಕದ ಅಧ್ಯಕ್ಷ

ತಕ್ಷಣ ಬೆಡ್ ಮತ್ತು ಆಸ್ಪತ್ರೆ ಸಿಕ್ಕಿದೆ

ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ, ‘ನೋಡಿ ನಿಮಗೆ ಕೊರೊನ ಪಾಸಿಟಿವ್ ಅಂತ ಗೊತ್ತಾಗಿದ ತಕ್ಷಣ ಬೆಡ್ ಮತ್ತು ಆಸ್ಪತ್ರೆ ಸಿಕ್ಕಿದೆ. ಸಾಮಾನ್ಯ ಜನರಿಗೆ ಸಿಗೋದು ತುಂಬಾ ಕಷ್ಟ ಆಗಿದೆ. ನೀವು ಕೂಡ ಸರ್ಕಾರಿ ಆಸ್ಪತ್ರೆ ಯಲ್ಲಿ ಚಿಕಿತ್ಸೆ ಪಡೆದು ಅಲ್ಲಿನ ಅವ್ಯವಸ್ಥೆ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಬಹುದಿತ್ತು. ಪರವಾಗಿಲ್ಲ ಬೇಗ ಗುಣಮುಖರಾಗಿ ಬನ್ನಿ

- ಬಿ.ಎಸ್. ಯಡಿಯೂರಪ್ಪ ಅವರ ಅಭಿಮಾನಿ

ಗೌರವ ಹೆಚ್ಚಾಗುತ್ತಿತ್ತು...

ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ‘ನೀವು ಸಮಾಜವಾದಿ (ಸಿದ್ಧಾಂತದಲ್ಲಿ ನಂಬಿಕೆಯಿರಿಸಿದ) ರಾಜಕಾರಣಿಯಾಗಿ ಸರ್ಕಾರಿ ಆಸ್ಪತ್ರೆ ಸೇರಿದ್ದರೆ ನಿಮ್ಮ ಮೇಲಿನ ಗೌರವ ಹೆಚ್ಚಾಗುತ್ತಿತ್ತು, ಸರ್‌’

- ಸಿದ್ದರಾಮಯ್ಯ ಅವರ ಅಭಿಮಾನಿ

ಚಿಕಿತ್ಸೆ ಪಡೆದ/ಪಡೆಯುತ್ತಿರುವ ಕೊರೊನಾ ಸೋಂಕಿತ ಜನಪ್ರತಿನಿಧಿಗಳ ಪಟ್ಟಿ

* ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ – ಮಣಿಪಾಲ್ ಆಸ್ಪತ್ರೆ

* ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ – ಮಣಿಪಾಲ್ ಆಸ್ಪತ್ರೆ

* ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಕುಟುಂಬದ ಸದಸ್ಯರು – ಮಣಿಪಾಲ್ ಆಸ್ಪತ್ರೆ

* ಸಾಗರದ ಶಾಸಕ ಹರತಾಳು ಹಾಲಪ್ಪ ಹಾಗೂ ಅವರ ಕುಟುಂಬದ ಸದಸ್ಯರು – ಖಾಸಗಿ ಆಸ್ಪತ್ರೆ

* ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ – ಖಾಸಗಿ ಆಸ್ಪತ್ರೆ

* ಕುಣಿಗಲ್ ಶಾಸಕ ಡಾ. ರಂಗನಾಥ್– ಮಣಿಪಾಲ್ ಆಸ್ಪತ್ರೆ

* ವಿಧಾನ ಪರಿಷತ್ ಸದಸ್ಯ ಸಂದೇಶ್‌ ನಾಗರಾಜು – ಮೈಸೂರಿನ ಶಾಂತವೇರಿ ಗೋಪಾಲಗೌಡ ಆಸ್ಪತ್ರೆ

* ನಾಗಮಂಗಲ ಶಾಸಕ ಕೆ.ಸುರೇಶ್‌ಗೌಡ – ಮಣಿಪಾಲ್‌ ಆಸ್ಪತ್ರೆ

* ವಿಧಾನ ಪರಿಷತ್ತಿನ ಸದಸ್ಯ ಎಸ್‌.ಎಲ್‌. ಭೋಜೇಗೌಡ – ಬೆಂಗಳೂರಿನ ಖಾಸಗಿ ಆಸ್ಪತ್ರೆ

* ವಿಧಾನ ಪರಿಷತ್ ಸದಸ್ಯ ಪ್ರಸನ್ನ ಕುಮಾರ್ – ಮನೆಯಲ್ಲೇ ಚಿಕಿತ್ಸೆ

*ವಿಧಾನಪರಿಷತ್ ಮಾಜಿ ಸದಸ್ಯ ಭಾನುಪ್ರಕಾಶ್– ಶಿವಮೊಗ್ಗದ ಖಾಸಗಿ ಆಸ್ಪತ್ರೆ

* ದಾವಣಗೆರೆ ಮೇಯರ್ ಬಿ.ಜಿ.ಅಜಯ್‌ ಕುಮಾರ್ – ಮನೆಯಲ್ಲೇ ಚಿಕಿತ್ಸೆ

‘ಕಿಮ್ಸ್‌ ಒಳ್ಳೆಯ ಆಸ್ಪತ್ರೆ. ಇಲ್ಲಿ ಅನುನುಭವಿ ಹಾಗೂ ತಜ್ಞ ವೈದ್ಯರು ಇದ್ದಾರೆ. ಆರು ದಿನಗಳ ಕಾಲ ಉಳಿದ ರೋಗಿಗಳಿಗೆ ನೀಡುವ ಆಹಾರವನ್ನೇ ನಾನೂ ಸೇವಿಸಿದ್ದೇನೆ. ಕೆಲವು ಸೌಲಭ್ಯಗಳ ಕೊರತೆ ಇರುವುದು ಗಮನಕ್ಕೆ ಬಂದಿದೆ. ಸಚಿವರ ಗಮನಕ್ಕೆ ತಂದಿದ್ದೇನೆ

–ಪ್ರಸಾದ್‌ ಅಬ್ಬಯ್ಯ, ಹುಬ್ಬಳ್ಳಿ – ಧಾರವಾಡ ಪೂರ್ವ ಕ್ಷೇತ್ರದ ಶಾಸಕ.

‘ಉಸಿರಾಟದಂತಹ ಗಂಭೀರ ಸಮಸ್ಯೆಯಿದ್ದರೆ ಆಸ್ಪತ್ರೆಗೆ ದಾಖಲಾಗುವುದು ಉತ್ತಮ. ಆದರೆ, ನನಗೆ ಅಂತಹದ್ದೇನೂ ಇಲ್ಲ. ಆರೋಗ್ಯವಾಗಿದ್ದೇನೆ. ಯಾವುದೇ ರೋಗ ಲಕ್ಷಣಗಳು ಇಲ್ಲ. ವೈದ್ಯರ ಸಲಹೆ ಮೇರೆಗೆ ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆದುಕೊಳ್ಳುತ್ತಿರುವೆ.

– ಅರಣ್ಯ ಸಚಿವ ಆನಂದ್‌ ಸಿಂಗ್‌

ಶಾಸಕ ಹಾಲಪ್ಪಗೆ ಕೋವಿಡ್‌ ದೃಢ

ಬೆಂಗಳೂರು: ಎಂಎಸ್‌ಐಎಲ್ ಅಧ್ಯಕ್ಷ ಹಾಗೂ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಅವರಿಗೆ ಕೋವಿಡ್‌ ಪಾಸಿಟಿವ್ ಆಗಿರುವುದು ದೃಢಪಟ್ಟಿದೆ.

ಅಲ್ಲದೆ, ಅವರ ಪತ್ನಿ, ಕಾರು ಚಾಲಕ, ಒಬ್ಬ ಸಿಬ್ಬಂದಿಗೂ ಪಾಸಿಟಿವ್ ಎಂದು ದೃಢಪಟ್ಟಿದ್ದು, ಎಲ್ಲರೂ ನಗರದ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿದ್ದು, ‘ಇತ್ತೀಚೆಗೆ ನನ್ನನ್ನು ಸಂಪರ್ಕಿಸಿದವರಿಗೆ ಸೋಂಕಿನ ಲಕ್ಷಣ ಕಂಡುಬಂದಲ್ಲಿ ಕೂಡಲೇ ಪರೀಕ್ಷೆಗೆ ಒಳಗಾಗಬೇಕು’ ಎಂದು ಅವರು ಕೋರಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು