ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ಲಿನಿಕಲ್‌ ಟ್ರಯಲ್‌ಗೆ ಒಳಗಾಗಿರುವ ನಾಲ್ವರ ಆರೋಗ್ಯ ಸ್ಥಿರ

ಬೆಳಗಾವಿಯ ಜೀವನ್‌ರೇಖಾ ಆಸ್ಪತ್ರೆಯಲ್ಲಿ ಚಾಲನೆ
Last Updated 4 ಆಗಸ್ಟ್ 2020, 7:44 IST
ಅಕ್ಷರ ಗಾತ್ರ

ಬೆಳಗಾವಿ: ಇಲ್ಲಿನ ಜೀವನ್‌ರೇಖಾ ಆಸ್ಪತ್ರೆಯಲ್ಲಿ ಕೋವಿಡ್-19 ಲಸಿಕೆ ‘ಕೋವ್ಯಾಕ್ಸಿನ್’ ಕ್ಲಿನಿಕಲ್ ಟ್ರಯಲ್ ಆರಂಭವಾಗಿದೆ. ಲಸಿಕೆ ನೀಡಲಾಗಿರುವ ಎಲ್ಲ ನಾಲ್ವರ ಆರೋಗ್ಯವೂ ಸ್ಥಿರವಾಗಿದೆ. ಯಾವುದೇ ಅಡ್ಡ ಪರಿಣಾಮ ಉಂಟಾಗಿಲ್ಲ.

‘ಪ್ರಜಾವಾಣಿ’ಗೆ ಈ ಬಗ್ಗೆ ಮಾಹಿತಿ ನೀಡಿದ ಆಸ್ಪತ್ರೆಯ ನಿರ್ದೇಶಕ ಡಾ.ಅಮಿತ್ ಭಾತೆ, ‘ಮೊದಲ ಹಂತದಲ್ಲಿ 18ರಿಂದ 55 ವರ್ಷದ ಇಬ್ಬರು ಪುರುಷರು ಮತ್ತು ಇಬ್ಬರು ಮಹಿಳೆಯರ ಮೇಲೆ ಟ್ರಯಲ್ ನಡೆಸಲಾಗುತ್ತಿದೆ. ಸ್ವಯಂಸೇವಕರಾದ ಅವರಿಗೆ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ (ಐಸಿಎಂಆರ್) ಸಹಯೋಗದಲ್ಲಿ ಹೈದರಾಬಾದ್‌ನ ಭಾರತ್ ಬಯೊಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ ಕೋವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ಅನ್ನು ಶುಕ್ರವಾರ ನೀಡಲಾಗಿದೆ. ಅವರೆಲ್ಲರೂ ಅವರವರ ಮನೆಗಳಲ್ಲೇ ಇದ್ದಾರೆ. ಅವರ ಆರೋಗ್ಯದ ಮೇಲೆ ನಿಗಾ ವಹಿಸಲಾಗುತ್ತಿದೆ. ದೇಶದಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಒಟ್ಟು 375 ಮಂದಿಯನ್ನು ಟ್ರಯಲ್ ಗೆ ಒಳಪಡಿಸಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕೋವಿಡ್ ನೆಗೆಟಿವ್ ಬಂದಿರುವುದು ಹಾಗೂ ರಕ್ತ ಸೇರಿದಂತೆ ಇತರ ಪರೀಕ್ಷೆಗಳಲ್ಲಿ ನಾರ್ಮಲ್ ಬಂದಿದ್ದನ್ನು ಖಚಿತಪಡಿಸಿಕೊಂಡು ನಾಲ್ವರನ್ನು ಆಯ್ಕೆ ಮಾಡಿ, ಡೋಸ್ ಕೊಡಲಾಗಿದೆ. ಮಾದರಿಗಳನ್ನು ನವದೆಹಲಿಯ ಐಸಿಎಂಆರ್ ಕೇಂದ್ರ ಪ್ರಯೋಗಾಲಯಕ್ಕೆ ಕಳುಹಿಸಿ ಅಲ್ಲಿಂದ ಪರೀಕ್ಷಾ ವರದಿ ಪಡೆಯಲಾಗಿದೆ. ವೈದ್ಯಕೀಯ ಶಿಷ್ಟಾಚಾರದ ಪ್ರಕಾರ 14 ದಿನಗಳ ನಂತರ ಅವರಿಗೆ 2ನೇ ಡೋಸ್ ಕೊಡಲಾಗುವುದು. ಆ್ಯಂಟಿಬಾಡಿ (ಪ್ರತಿಕಾಯ) ಪರೀಕ್ಷೆಯನ್ನು 28 ದಿನಗಳ ನಂತರ ಆರಂಭಿಸಲಾಗುವುದು. ಅವರ ಆರೋಗ್ಯದ ಸ್ಥಿತಿಗತಿಯ ಮೇಲೆ ನಿಗಾ ವಹಿಸಿ ವರದಿ ಸಿದ್ಧಪಡಿಸಲಾಗುವುದು’ ಎಂದು ಮಾಹಿತಿ ನೀಡಿದರು.

‘2ನೇ ಹಂತದ ಕ್ಲಿನಿಕಲ್ ಟ್ರಯಲ್ 20 ದಿನಗಳ ನಂತರ ಆರಂಭಗೊಳ್ಳಲಿದೆ. ಆಗ ಹೊಸದಾಗಿ ಮತ್ತಷ್ಟು ಸ್ವಯಂಸೇವಕರನ್ನು ಆಯ್ಕೆ ಮಾಡಲಾಗುವುದು’ ಎಂದು ತಿಳಿಸಿದರು.

‘ಕೋವ್ಯಾಕ್ಸಿನ್’ ಲಸಿಕೆ ಕ್ಲಿನಿಕಲ್ ಟ್ರಯಲ್‌ಗೆ ಐಸಿಎಂಆರ್‌ನಿಂದ ಆಯ್ಕೆಯಾಗಿರುವ ದೇಶದ 12 ಆಸ್ಪತ್ರೆಗಳಲ್ಲಿ ಬೆಳಗಾವಿಯ ಜೀವನ್‌ರೇಖಾ ಒಂದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT