ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Explainer | ಸಂಸತ್ ಮೇಲೆ ಉಗ್ರರ ದಾಳಿ: 18 ವರ್ಷದ ಹಿಂದೆ ಏನೆಲ್ಲಾ ಆಗಿತ್ತು?

Last Updated 13 ಡಿಸೆಂಬರ್ 2019, 7:53 IST
ಅಕ್ಷರ ಗಾತ್ರ

ನವದೆಹಲಿ: ಸಂಸತ್ ಭವನದ ಮೇಲೆ ದಾಳಿ ನಡೆದು ಇಂದಿಗೆ 18 ವರ್ಷಗಳುಕಳೆದಿವೆ. ಅಂದು ನಡೆದಿದ್ದ ಭೀಕರ ಘಟನೆಯನ್ನು ಡಿ.13 (ಶುಕ್ರವಾರ) ಮತ್ತೆ ನೆನಪಿಸಿದೆ. ಪಾಕಿಸ್ತಾನದೊಂದಿಗೆ ನಂಟು ಹೊಂದಿದ್ದ ‘ಜೈಶ್–ಎ–ಮಹಮ್ಮದ್’ ಉಗ್ರಗಾಮಿಸಂಘಟನೆಯ ಮುಖ್ಯಸ್ಥ ಮೊಹಮ್ಮದ್ ಅಫ್ಜಲ್ ಗುರು‌ದಾಳಿಯ ಪ್ರಮುಖ ರೂವಾರಿಯಾಗಿದ್ದ.

ಡಿಸೆಂಬರ್ 13, 2001ರಂದು ಏನಾಯಿತು?
ಭಾರಿ ಶಸ್ತ್ರಾಸ್ತ್ರಗಳನ್ನು ಹೊಂದಿದ್ದ ಐವರು ಉಗ್ರರು 2001ರ ಡಿಸೆಂಬರ್ 13ರಂದು ಸಂಸತ್ ಭವನದ ಆವರಣದೊಳಕ್ಕೆ ನುಗ್ಗಿ ಸುಮಾರು 30 ನಿಮಿಷಗಳ ಕಾಲ ಗುಂಡು ಹಾರಿಸಿ ಒಂಬತ್ತು ಮಂದಿಯನ್ನು ಹತ್ಯೆ ಮಾಡಿದ್ದರು. ಮೃತರಲ್ಲಿ ಐವರು ದೆಹಲಿ ಪೊಲೀಸರು, ಕೇಂದ್ರ ಮೀಸಲು ಪಡೆಯ ಮಹಿಳಾ ಕಾನ್‌ಸ್ಟೇಬಲ್, ಇಬ್ಬರು ಕಾವಲು ಸಿಬ್ಬಂದಿ ಮತ್ತು ತೋಟದ ಮಾಲಿಯೊಬ್ಬರು ಸೇರಿದ್ದರು. ದಾಳಿಯಲ್ಲಿ ಗಾಯಗೊಂಡಿದ್ದ ಪತ್ರಕರ್ತರೊಬ್ಬರು ಅನಂತರ ಕೊನೆಯುಸಿರೆಳೆದಿದ್ದರು. ತಕ್ಷಣ ಕಾರ್ಯಪ್ರವೃತ್ತರಾದ ಭದ್ರತಾ ಸಿಬ್ಬಂದಿ ಈ ಐವರು ಉಗ್ರರನ್ನು ಸ್ಥಳದಲ್ಲೇ ಗುಂಡಿಕ್ಕಿ ಕೊಂದಿದ್ದರು. ಘಟನೆಯಲ್ಲಿ 15 ಹೆಚ್ಚು ಮಂದಿ ತೀವ್ರವಾಗಿ ಗಾಯಗೊಂಡಿದ್ದರು. ದಾಳಿ ನಡೆದ ಕೆಲವೇ ಗಂಟೆಗಳಲ್ಲಿ ಅಫ್ಜಲ್ ಗುರುವನ್ನು ರಾಜಧಾನಿಯ ಬಸ್ಸೊಂದರಲ್ಲಿ ಬಂಧಿಸಲಾಗಿತ್ತು.


ದಾಳಿಯ ಸಂಚುಕೋರರುಯಾರು?
ಅಂದಿನ ಗೃಹ ಸಚಿವರಾಗಿದ್ದ ಎಲ್.ಕೆ.ಅಡ್ವಾಣಿ ಅವರು ಲೋಕಸಭೆಯಲ್ಲಿ ಮಾತನಾಡಿ, ‘ಸಂಸತ್ ಭವನದ ಮೇಲೆ ನಡೆದದಾಳಿಯ ಹಿಂದೆಪಾಕಿಸ್ತಾನ ಬೆಂಬಲಿತ 'ಲಷ್ಕರ್–ಎ–ತಯಬಾ(ಎಲ್ಇಟಿ)', 'ಜೈಷ್‌ ಎ ಮೊಹಮ್ಮದ್' ಭಯೋತ್ಪಾದಕ ಸಂಘಟನೆಗಳ ಕೈವಾಡಇದೆ’ ಎಂದು ಹೇಳಿದ್ದರು.

ಈ ಎರಡು ಸಂಘಟನೆಗಳುಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆಯಿಂದ (ಐಎಸ್‌ಐ) ಬೆಂಬಲ ಮತ್ತು ಹಣಕಾಸಿನ ನೆರವು ಪಡೆದಿರುವುದು ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ. ಇದೊಂದು ಭಯಾನಕ ಕೃತ್ಯವಾಗಿದ್ದು, ಭಾರತದಲ್ಲಿ ಪಾಕಿಸ್ತಾನ ಪ್ರಾಯೋಜಿತ ಭಯೋತ್ಪಾದನಾ ಸಂಘಟನೆಗಳು ನಡೆಸುವ ದಾಳಿಗಳಿಗೆ ಎರಡು ದಶಕಗಳ ಇತಿಹಾಸ ಇದೆ ಎಂದು ತಿಳಿಸಿದ್ದರು.

ಬಂಧಿತರಿಗೆ ಏನಾಯಿತು?
ಅಫ್ಜಲ್ ಗುರು ನೀಡಿದ ಸುಳಿವು ಆಧರಿಸಿ,ಸಂಚಿನಲ್ಲಿ ಭಾಗಿಯಾದ ಆರೋಪದಲ್ಲಿದೆಹಲಿಯ ಅರೇಬಿಕ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಎಸ್.ಎ.ಆರ್ ಗಿಲಾನಿ, ಶೌಕತ್ ಹುಸೇನ್‌ ಗುರು ಹಾಗೂ ಆತನ ಪತ್ನಿ ಅಫ್ಸಾನ್‌ ಗುರು ಎಂಬುವವರನ್ನು ದೆಹಲಿ ಪೊಲೀಸರು ಬಂಧಿಸಿದ್ದರು. ಬಳಿಕ ಆರೋಪಿಗಳ ವಿಚಾರಣೆ ನಡೆಸಿದ ವಿಶೇಷ ಕೋರ್ಟ್ ಅಫ್ಸಾನ್‌ ಗುರು ಹೊರತುಪಡಿಸಿ ಉಳಿದ ಮೂವರು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಿತ್ತು. ಬಳಿಕ,2003ರಲ್ಲಿ ಹೈಕೋರ್ಟ್ ಗಿಲಾನಿಯನ್ನು ಬಿಡುಗಡೆ ಮಾಡಿತ್ತು. ಅಫ್ಜಲ್‌ ಗುರು ಹಾಗೂ ಶೌಕತ್ ಶಿಕ್ಷೆಯನ್ನು ಎತ್ತಿಹಿಡಿದಿತ್ತು.ಸುಪ್ರೀಂಕೋರ್ಟ್ 2005ರಲ್ಲಿ ಗುರುವಿಗೆ ನೇಣು ಕಾಯಂಗೊಳಿಸಿತ್ತು.ಶೌಕತ್ ಶಿಕ್ಷೆಯನ್ನು ಹತ್ತು ವರ್ಷ ಜೈಲು ಶಿಕ್ಷೆಯಾಗಿ ಪರಿವರ್ತಿಸಲಾಯಿತ್ತು.

2006ರ ಸೆ. 26 ರಂದು ಸುಪ್ರೀಂ ಕೋರ್ಟ್‌ ಅಫ್ಜಲ್‌ ಗುರುವಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು. ಗೃಹಸಚಿವಾಲಯ 2011ರಲ್ಲಿ ಅಫ್ಜಲ್ ಗುರು ಪ್ರಕರಣವನ್ನು ರಾಷ್ಟ್ರಪತಿಗಳಿಗೆ ಕಳುಹಿಸಿತ್ತು. 2012ರಲ್ಲಿ ಹೊಸ ರಾಷ್ಟ್ರಪತಿ ಹಾಗೂ ಹೊಸ ಗೃಹ ಸಚಿವರು ಅಧಿಕಾರ ವಹಿಸಿಕೊಂಡ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನ ಅಫ್ಜಲ್ ಗುರು ಪ್ರಕರಣದ ಕಡತವನ್ನು ಗೃಹ ಸಚಿವಾಲಯಕ್ಕೆ ಹಿಂತಿರುಗಿಸಿತ್ತು. ಅದೇ ವರ್ಷ ಜನವರಿ 21ರಂದು ಗೃಹ ಸಚಿವಾಲಯ ಗುರು ಕಡತವನ್ನು ರಾಷ್ಟ್ರಪತಿಗಳಿಗೆ ಮತ್ತೆ ಕಳುಹಿಸಿತ್ತು. 2013ರ ಫೆ.3ರಂದು ಅಫ್ಜಲ್‌ನ ಕ್ಷಮಾದಾನದ ಅರ್ಜಿಯನ್ನು ಅಂದಿನ ರಾಷ್ಟ್ರಪತಿಪ್ರಣವ್ ಮುಖರ್ಜಿ ತಿರಸ್ಕರಿಸಿ ಗೃಹ ಸಚಿವಾಲಯಕ್ಕೆ ರವಾನಿಸಿದರು. ನಂತರ ಗೃಹ ಸಚಿವಸುಶೀಲ್ ಕುಮಾರ್ ಶಿಂಧೆ,ಅಫ್ಜಲ್ ಗುರುವನ್ನು ನೇಣಿಗೆ ಹಾಕಲು ಅನುಮತಿಸಿದರು.

ದಾಳಿಗೆ ಭದ್ರತಾ ವೈಫಲ್ಯ ಕಾರಣವೇ?
‌‌ಸಂಚುಕೋರರು ಕಾರಿನಲ್ಲಿ ಇಟ್ಟಿದ್ದ ಸುಧಾರಿತ ಬಾಂಬ್ ಖಂಡಿತವಾಗಿಯೂ ಸ್ಫೋಟಿಸುತ್ತದೆ ಎಂದುಕೊಂಡಿದ್ದರು. ದಾಳಿಯ ಹಿಂದಿನ ರಾತ್ರಿ ಕಾರನ್ನು ಪೊಲೀಸರೊಬ್ಬರ ಎದುರಿನಲ್ಲಿಯೇ ಪಾರ್ಕ್ ಮಾಡಿದ್ದರು. ಆದರೆ, ಏಕೆ ಪೊಲೀಸರು ಕಾರನ್ನು ತಪಾಸಣೆ ನಡೆಸಿರಲಿಲ್ಲ. ಇದರ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿತ್ತು.

ಸಂಸತ್ ಭವನದ ದಾಳಿಗೆಂದು ಕಾರಿನಲ್ಲಿ ಇಟ್ಟಿದ್ದ ಬಾಂಬ್ ಯಾಕೆ ಸ್ಫೋಟಿಸಲಿಲ್ಲ? ಹೀಗೊಂದು ಯಕ್ಷಪ್ರಶ್ನೆ ತಮ್ಮಲ್ಲಿ ಉಳಿದಿರುವುದಾಗಿಆರೋಪಿ ಅಫ್ಜಲ್ ಗುರು, ತಿಹಾರ್ ಜೈಲು ಅಧಿಕಾರಿ ಮನೋಜ್ ದ್ವಿವೇದಿ ಅವರೊಂದಿಗೆ ಹೇಳಿಕೊಂಡಿದ್ದ.

ಕಲೆ: ಪ್ರಕಾಶ್‌ ಶೆಟ್ಟಿ
ಕಲೆ: ಪ್ರಕಾಶ್‌ ಶೆಟ್ಟಿ

ಫೆ. 9 ರಂದು ಅಫ್ಜಲ್‌ ಗುರುವನ್ನು ತಿಹಾರ್‌ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು.ಹಣ್ಣಿನ ವ್ಯಾಪಾರದ ದಲ್ಲಾಳಿಯಾಗಿದ್ದ ಅಫ್ಜಲ್ ಮೂಲತಃ ಉತ್ತರ ಕಾಶ್ಮೀರದ ಸೊಪೋರ್‌ನವನು. ಆತನ ಪತ್ನಿ ಮತ್ತು ಮತ್ತು ಮಗ ಈಗಲೂ ಅಲ್ಲಿಯೇ ವಾಸವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT