ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರೀ ಮಳೆ, ಪ್ರವಾಹಕ್ಕೆ ತತ್ತರಿಸಿದ ಬಿಹಾರ: ಮೃತರ ಸಂಖ್ಯೆ 29ಕ್ಕೆ ಏರಿಕೆ

ಜನಜೀವನ ಅಸ್ತವ್ಯಸ್ತ * ಉತ್ತರ ಪ್ರದೇಶದಲ್ಲಿಯೂ ಪ್ರವಾಹ
Last Updated 30 ಸೆಪ್ಟೆಂಬರ್ 2019, 5:33 IST
ಅಕ್ಷರ ಗಾತ್ರ

ಪಟ್ನಾ/ಲಖನೌ:ಬಿಹಾರದಾದ್ಯಂತ ಕಳೆದ ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ, ಪ್ರವಾಹದಿಂದಾಗಿ ಮೃತಪಟ್ಟವರ ಸಂಖ್ಯೆ ಸೋಮವಾರ 29ಕ್ಕೆ ಏರಿಕೆಯಾಗಿದೆ.

ರಾಜಧಾನಿ ಪಟ್ನಾವೂ ಸೇರಿದಂತೆರಾಜ್ಯದಾದ್ಯಂತ ಇಂದೂ ಸಹ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಶಾಲೆ–ಕಾಲೇಜುಗಳಿಗೆ ರಜೆ ಘೋಷಿಸಲಾಗಿದ್ದು, ರೆಡ್ ಅಲರ್ಟ್‌ ಘೋಷಿಸಲಾಗಿದೆ. ನೆರೆ ರಾಜ್ಯ ಉತ್ತರ ಪ್ರದೇಶದಲ್ಲಿಯೂ ಮಳೆ ಸಂಬಂಧಿತ ಹಾನಿ ಹೆಚ್ಚಾಗಿದ್ದು, ಕಳೆದ ಐದು ದಿನಗಳಲ್ಲಿ 87 ಜನ ಮೃತಪಟ್ಟಿದ್ದಾರೆ.

ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಐಷಾರಾಮಿ ಕಾಲೊನಿ ರಾಜೇಂದ್ರ ನಗರ ಸೇರಿದಂತೆ ಪಟ್ನಾದ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಸೋಮವಾರ ಬೆಳಿಗ್ಗೆ ಪರಿಶೀಲನೆ ನಡೆಸಿದ್ದು ರಕ್ಷಣೆ, ಪರಿಹಾರ ಕಾರ್ಯಗಳಿಗೆ ಸಲಹೆ ಸೂಚನೆ ನೀಡಿದ್ದಾರೆ.

ರಕ್ಷಣಾ ಕಾರ್ಯಾಚರಣೆ, ಪರಿಹಾರ ಸಾಮಗ್ರಿ ವಿತರಣೆಗಾಗಿ ಎರಡು ಹೆಲಿಕಾಪ್ಟರ್‌ಗಳನ್ನು ಒದಗಿಸುವಂತೆ ಭಾರತೀಯ ವಾಯುಪಡೆಗೆ ಬಿಹಾರ ಸರ್ಕಾರ ಮನವಿ ಮಾಡಿದೆ.

ಪ್ರವಾಹಪೀಡಿತ ಪ್ರದೇಶಗಳಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ (ಎನ್‌ಡಿಆರ್‌ಎಫ್) 19 ತಂಡಗಳನ್ನು ನಿಯೋಜನೆ ಮಾಡಲಾಗಿದೆ.

ಉತ್ತರ ಪ್ರದೇಶದ ಬಲಿಯಾ, ವಾರಾಣಸಿ, ಜಾನ್‌ಪುರ ಜಿಲ್ಲೆಗಳಲ್ಲಿಯೂ ಮಳೆ, ಪ್ರವಾಹದಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಬಾಲಿಯಾದ ಜಿಲ್ಲಾ ಕಾರಾಗೃಹಕ್ಕೆ ನೀರುನುಗ್ಗಿದ ಕಾರಣ 500 ಕೈದಿಗಳನ್ನು ಮತ್ತೊಂದು ಜೈಲಿಗೆ ಸ್ಥಳಾಂತರಿಸಲಾಗಿದೆ.

ಉತ್ತರ ಪ್ರದೇಶ ಮತ್ತು ಬಿಹಾರಗಳಲ್ಲಿನ ಪ್ರವಾಹ ಪರಿಸ್ಥಿತಿಯನ್ನು ಕೇಂದ್ರ ಗೃಹ ಸಚಿವಾಲಯ ಅವಲೋಕಿಸುತ್ತಿದೆ. ಎಲ್ಲ ನೆರವನ್ನೂ ನೀಡಲಾಗುವುದು ಎಂದು ಗೃಹ ಇಲಾಖೆಯ ರಾಜ್ಯ ಖಾತೆ ಸಚಿವ ನಿತ್ಯಾನಂದ ರೈ ತಿಳಿಸಿದ್ದಾರೆ.

ಮುಂಬೈ–ಲಖನೌ ಮತ್ತು ದೆಹಲಿ–ವಾರಾಣಸಿ ನಡುವಣ ವಿಮಾನ ಹಾರಾಟದಲ್ಲೂ ವ್ಯತ್ಯಯವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT