ಸೋಮವಾರ, ಏಪ್ರಿಲ್ 19, 2021
31 °C

ಮೂತ್ರಪಿಂಡ ಶಸ್ತ್ರಚಿಕಿತ್ಸೆ ಯಶಸ್ವಿ: ಸಚಿವಾಲಯಕ್ಕೆ ಮರಳಲಿರುವ ಜೇಟ್ಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಮೂತ್ರಪಿಂಡ ಕಸಿ ಯಶಸ್ವಿ ಶಸ್ತ್ರಚಿಕಿತ್ಸೆ ಬಳಿಕ ಮೂರು ತಿಂಗಳು ಸುದೀರ್ಘ ಬಿಡುವು ಪಡೆದಿದ್ದ ಕೇಂದ್ರ ಸಚಿವ ಅರುಣ್‌ ಜೇಟ್ಲಿ ಅವರು ಹಣಕಾಸು ಹಾಗೂ ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯಕ್ಕೆ ಗುರುವಾರ ಮರಳಲಿದ್ದಾರೆ.

ಈ ಬಗ್ಗೆ ರಾಷ್ಟ್ರಪತಿ ಭವನ ಮಾಹಿತಿ ನೀಡಿದ್ದು, ‘ಅರುಣ್‌ ಜೇಟ್ಲಿ ಅವರಿಗೆ ಹಣಕಾಸು ಮತ್ತು ಕಾರ್ಪೊರೇಟ್‌ ವ್ಯವಹಾರಗಳ ಸಚಿವಾಲಯದ ಜವಾಬ್ದಾರಿಯನ್ನು ನಿಯೋಜಿಸಲು ಪ್ರಧಾನ ಮಂತ್ರಿಗಳು ಸಲಹೆ ನೀಡಿದ್ದಾರೆ’ ಎಂದು ತಿಳಿಸಿದೆ.

ಇದೇ ವರ್ಷದ ಮೇ ತಿಂಗಳಿನಲ್ಲಿ  ಆಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ(ಏಮ್ಸ್‌) ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದ ಜೇಟ್ಲಿ ಮೂರು ವಾರಗಳ ಬಳಿಕ ಆಸ್ಪತ್ರೆಯಿಂದ ವಾಪಸ್‌ ಆಗಿದ್ದರು. ಕಳೆದ ಕೆಲವು ದಿನಗಳಿಂದ ಮನೆಯಿಂದಲೇ ಸಚಿವಾಲಯದ ಕೆಲಸ ನಿರ್ವಹಿಸುತ್ತಿದ್ದರು.

ರಾಜ್ಯಸಭೆಯ ಉಪಸಭಾಪತಿ ಸ್ಥಾನಕ್ಕಾಗಿ ಆಗಸ್ಟ್‌ 9ರಂದು ನಡೆದ ಚುನಾವಣೆಯಲ್ಲಿ ಮತದಾನ ಮಾಡಲು ಆಗಮಿಸಿದ ಜೇಟ್ಲಿ ಬಳಿಕ ಯಾವುದೇ ಸಾರ್ವಜನಿಕ ಸಭೆ, ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿಲ್ಲ. 2019ರ ಸಾರ್ವತ್ರಿಕ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಹೊತ್ತಿನಲ್ಲಿ ಜೇಟ್ಲಿ ಸಚಿವಾಲಯಕ್ಕೆ ಹಾಜರಾಗುತ್ತಿರುವುದು ಸರ್ಕಾರಕ್ಕೆ ಬಲ ತುಂಬಲಿದೆ ಎನ್ನಲಾಗಿದೆ.

ಜೇಟ್ಲಿ ಅವರ ಅನುಪಸ್ಥಿತಿಯಲ್ಲಿ ರೈಲ್ವೇ ಸಚಿವ ಪಿಯೂಷ್‌ ಗೋಯಲ್‌ ಅವರು ಹೆಚ್ಚುವರಿ ಜವಾಬ್ದಾರಿ ನಿಭಾಯಿಸುತ್ತಿದ್ದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು