ಸೋಮವಾರ, ಫೆಬ್ರವರಿ 17, 2020
28 °C
ರಾಜಕೀಯ ಹಾದಿ

ದೆಹಲಿ ರಾಜಕೀಯ ಅಖಾಡದಲ್ಲಿ ಮತ್ತೆ ಗೆಲುವಿನ ನಗೆ ಬೀರಿದ ಕೇಜ್ರಿವಾಲ್

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಆಮ್ ಆದ್ಮಿ ಪಕ್ಷವನ್ನು (ಎಎಪಿ) ದೆಹಲಿ ಜನ ಮತ್ತೊಮ್ಮೆ ಗೆಲ್ಲಿಸುವುದು ಬಹುತೇಕ ಖಚಿತವಾಗಿದೆ. ಇದರೊಂದಿಗೆ, ಎಂಟು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಎಎಪಿ ಈಗ ಮೂರನೇ ಬಾರಿ ರಾಷ್ಟ್ರ ರಾಜಧಾನಿಯಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದೆ. ಈ ಗೆಲುವಿನ ಹಾಗೂ ಎಎಪಿ ಸಾಧನೆಯ ಹಿಂದೆ ಪಕ್ಷದ ಮುಖ್ಯಸ್ಥ, ಹಾಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಪಾತ್ರ ಹಿರಿದು.

ಓದಿದ್ದು ಎಂಜಿನಿಯರಿಂಗ್, ಕೆಲಸ ಮಾಡಿದ್ದು ಆದಾಯ ತೆರಿಗೆ ಇಲಾಖೆಯಲ್ಲಿ. ನಡುವೆ ಭ್ರಷ್ಟಾಚಾರದ ವಿರುದ್ಧ ಹೋರಾಟ–ಪ್ರತಿಭಟನೆ, ಕೊನೆಗೆ ರಾಜಕೀಯ ಪಕ್ಷ ಸ್ಥಾಪನೆ, ಕಾಂಗ್ರೆಸ್ ಜತೆ ಮೈತ್ರಿ ಸರ್ಕಾರ, 49 ದಿನಗಳಲ್ಲೇ ರಾಜೀನಾಮೆ, ಬಳಿಕ ಸ್ವಂತ ಬಲದಿಂದ ಅಧಿಕಾರಕ್ಕೆ... ಇದು ಕೇಜ್ರಿವಾಲ್ ಬದುಕಿನ ಪ್ರಮುಖ ಘಟ್ಟಗಳು. ದಶಕಗಳಿಂದ ಹೋರಾಟದ ಹಿನ್ನೆಲೆಯಲ್ಲೇ ಗುರುತಿಸಿಕೊಂಡು ಬಂದಿದ್ದ ಕೇಜ್ರಿವಾಲ್ ಕೊನೆಗೂ ಗೆದ್ದದ್ದು ರಾಜಕೀಯದಲ್ಲಿ!

ಹರಿಯಾಣದ ಭಿವಾನಿ ಜಿಲ್ಲೆಯ ಸಿವಾನಿ ಎಂಬಲ್ಲಿನ ಮೇಲ್ಮಧ್ಯಮ ವರ್ಗದ ಕುಟುಂಬದ ಗೋಬಿಂದ್ ರಾಮ್ ಕೇಜ್ರಿವಾಲ್ ಮತ್ತು ಗೀತಾ ದೇವಿ ದಂಪತಿಯ ಮೂವರು ಮಕ್ಕಳಲ್ಲಿ ಮೊದಲನೆಯವರು ಅರವಿಂದ ಕೇಜ್ರಿವಾಲ್. 1968ರ ಆಗಸ್ಟ್ 16ರಂದು ಜನಿಸಿದ ಕೇಜ್ರಿವಾಲ್ ಬಾಲ್ಯದ ಶಿಕ್ಷಣ ಹಿಸಾರ್‌ ಮತ್ತು ಸೋನಿಪತ್‌ನಲ್ಲಾಯಿತು. 1985ರಲ್ಲಿ ಐಐಟಿ–ಜೆಇಇ ಪರೀಕ್ಷೆಯಲ್ಲಿ 563ನೇ ರ್‍ಯಾಂಕ್ ಗಳಿಸಿದರು. ಬಳಿಕ ಖರಗ್‌ಪುರ ಐಐಟಿ ಸೇರಿದ ಅವರು ಮೆಕಾನಿಕಲ್ ಎಂಜಿನಿಯರಿಂಗ್‌ ಪದವಿ ಪಡೆದರು. 1989ರಲ್ಲಿ ಟಾಟಾ ಸ್ಟೀಲ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿದ ಅವರು ನಾಗರಿಕ ಸೇವಾ ಪರೀಕ್ಷೆಗೆ ಸಿದ್ಧತೆ ನಡೆಸುವ ಸಲುವಾಗಿ 1992ರಲ್ಲಿ ರಾಜೀನಾಮೆ ನೀಡಿದರು.

ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಅವರು 1995ರಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಕಮಿಷನರ್ ಆಗಿ ಅಧಿಕಾರ ವಹಿಸಿಕೊಂಡರು.

ಸರ್ಕಾರಿ ಸೇವೆಯಲ್ಲಿದ್ದಾಗಿನಿಂದಲೇ ಹೋರಾಟದ ಬದುಕು: ಸರ್ಕಾರಿ ಸೇವೆಯಲ್ಲಿದ್ದುಕೊಂಡೇ ಭ್ರಷ್ಟಾಚಾರದ ವಿರುದ್ಧದ ಹೋರಾಟ ಆರಂಭಿಸಿದವರು ಕೇಜ್ರಿವಾಲ್. 1999ರಲ್ಲಿ ಮನೀಶ್ ಸಿಸೋಡಿಯಾ (ದೆಹಲಿಯ ಈಗಿನ ಉಪಮುಖ್ಯಮಂತ್ರ) ಜತೆ ಸೇರಿ ‘ಪರಿವರ್ತನ್’ ಎಂಬ ಸಂಘಟನೆಯೊಂದನ್ನು ಸ್ಥಾಪಿಸಿದರು. ಪಡಿತರ ವಿತರಣೆಯಲ್ಲಿನ ಅಕ್ರಮದ ವಿರುದ್ಧ ಧ್ವನಿಯೆತ್ತುವ ಸಲುವಾಗಿ ಆರಂಭವಾದ ಈ ಸಂಘಟನೆ 2001ರಲ್ಲಿ ದೆಹಲಿ ಸರ್ಕಾರ ಜಾರಿಗೊಳಿಸಿದ ರಾಜ್ಯ ಮಟ್ಟದ ಆರ್‌ಟಿಐ (ಮಾಹಿತಿ ಹಕ್ಕು) ಸಹಾಯದಿಂದ ವ್ಯವಸ್ಥೆಯಲ್ಲಿನ ಅಕ್ರಮವನ್ನು ಬಯಲಿಗೆಳೆಯಿತು. 2003ರಲ್ಲಿ ದೆಹಲಿ ಪಡಿತರ ಹಗರಣ ಬಯಲಾಯಿತು.

ಮನೀಶ್ ಸಿಸೋಡಿಯಾ ಜತೆ ಕೇಜ್ರಿವಾಲ್

ಈ ನಡುವೆ ಕೇಜ್ರಿವಾಲ್ ಅವರು ಉನ್ನತ ಅಧ್ಯಯನಕ್ಕೆಂದು ವೇತನ ಸಹಿತ ರಜೆ ಪಡೆದು ಮತ್ತೆ ಕರ್ತವ್ಯಕ್ಕೆ ಹಾಜರಾಗಿದ್ದರು. ಒಂದೆಡೆ ಸರ್ಕಾರದ ಅಕ್ರಮಗಳ ವಿರುದ್ಧದ ಹೋರಾಟ, ಮತ್ತೊಂದೆಡೆ ಸರ್ಕಾರಿ ಸೇವೆ, ಇದು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿತು. ಪರಿಣಾಮವಾಗಿ 2006ರಲ್ಲಿ ಆದಾಯ ತೆರಿಗೆ ಇಲಾಖೆಯಲ್ಲಿನ ಹುದ್ದೆಗೆ ರಾಜೀನಾಮೆ ನೀಡಿದರು. 2005ರಲ್ಲಿ ಕೇಂದ್ರ ಸರ್ಕಾರ ‘ಮಾಹಿತಿ ಹಕ್ಕು ಕಾಯ್ದೆ’ ಜಾರಿಗೆ ತರಲು ಕಾರಣವಾಗಿದ್ದ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದವರ ಪೈಕಿ ಕೇಜ್ರಿವಾಲ್‌ ಕೂಡಾ ಒಬ್ಬರು.

ಬಲ ತುಂಬಿದ ಹಜಾರೆ ನಂಟು: ಭ್ರಷ್ಟಾಚಾರದ ವಿರುದ್ಧ ತಮ್ಮ ಹೋರಾಟವನ್ನು 2010ರಲ್ಲಿ ಇನ್ನಷ್ಟು ಚುರುಕುಗೊಳಿಸಿದ ಕೇಜ್ರಿವಾಲ್, ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ವಿರುದ್ಧ ಪ್ರತಿಭಟನೆ ನಡೆಸಿದರು. ಇಂತಹ ಪ್ರಕರಣಗಳ ತನಿಖೆ ನಡೆಸುವ ಅಧಿಕಾರ ಕೇಂದ್ರ ವಿಚಕ್ಷಣಾ ದಳಕ್ಕಿಲ್ಲ. ನಿಷ್ಪಕ್ಷಪಾತ ತನಿಖೆ ನಡೆಸುವ ಸ್ಥಿತಿಯಲ್ಲಿ ಸಿಬಿಐಯೂ ಇಲ್ಲ. ಹೀಗಾಗಿ ಕೇಂದ್ರದಲ್ಲಿ ಲೋಕಪಾಲ ಮತ್ತು ರಾಜ್ಯಗಳಲ್ಲಿ ಲೋಕಾಯುಕ್ತ ಸ್ಥಾಪನೆಯಾಗಬೇಕೆಂದು ಆಗ್ರಹಿಸಿದರು. ಬಳಿಕ, 2011ರಲ್ಲಿ ಸಾಮಾಜಿಕ ಹೋರಾಟಗಾರ, ಗಾಂಧಿವಾದಿ ಅಣ್ಣಾ ಹಾಜರೆ ನೇತೃತ್ವದಲ್ಲಿ ಆರಂಭವಾದ ಭ್ರಷ್ಟಾಚಾರ ವಿರೋಧಿ ಆಂದೋಲನ ‘ಇಂಡಿಯಾ ಅಗೈನ್ಸ್ಟ್‌ ಕರಪ್ಷನ್’ನಲ್ಲಿ ಸೇರಿಕೊಂಡರು. ಜನಲೋಕಪಾಲ ಸಂಸ್ಥೆ ಅಸ್ತಿತ್ವಕ್ಕೆ ತರಬೇಕೆಂದು ಆಗ್ರಹಿಸಿ ಈ ಆಂದೋನ ನಡೆಯಿತು. ಇದು ಕೇಜ್ರಿವಾಲ್ ಅವರ ಸಾರ್ವಜನಿಕ ಜೀವನದಲ್ಲಿ ಮಹತ್ತರ ಬದಲಾವಣೆಗೆ ನಾಂದಿ ಹಾಡಿತು. ಹಜಾರೆ ಜತೆ ಗುರುತಿಸಿಕೊಂಡ ಫಲವಾಗಿ ದೇಶದಾದ್ಯಂತ ಕೇಜ್ರಿವಾಲ್ ಮನೆಮಾತಾದರು. ಇತರ ಹೋರಾಟಗಾರರ ಜತೆ ಬಂಧನಕ್ಕೂ ಒಳಗಾದರು. ಬಳಿಕ ಜನಲೋಕಪಾಲ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವ ಬಗ್ಗೆ ಸರ್ಕಾರ ಭರವಸೆ ನೀಡಿತು. ಆದರೆ ಮಾತಿನಂತೆ ನಡೆದುಕೊಳ್ಳಲಿಲ್ಲ. 2012ರಲ್ಲಿ ಮತ್ತೆ ಪ್ರತಿಭಟನೆ ಶುರುವಾಯಿತು. ಈ ವೇಳೆ, ಕೇಜ್ರಿವಾಲ್ ಮತ್ತು ಅವರ ನಿಕಟವರ್ತಿಗಳು ಮುಂಚೂಣಿಯಲ್ಲಿ ಕಾಣಿಸಿಕೊಂಡರು.

ಅಣ್ಣಾ ಹಜಾರೆ ಜತೆ ಕೇಜ್ರಿವಾಲ್

ಅಖಾಡಕ್ಕಿಳಿದ ‘ಆಮ್‌ ಆದ್ಮಿ’!: ಚುನಾಯಿತ ಪ್ರತಿನಿಧಿಗಳಿಗೆ ನಿಯಮಗಳ ಕುರಿತು ನಿರ್ದೇಶನ ನೀಡುವ ಹಕ್ಕು ಜನಲೋಕಪಾಲ ಹೋರಾಟಗಾರರಿಗೆ ಇಲ್ಲ ಎಂಬ ಟೀಕೆಗಳೂ ಆಗ ವ್ಯಕ್ತವಾಗಿದ್ದವು. ಇದಕ್ಕುತ್ತರವಾಗಿ ರಾಜಕೀಯ ಪಕ್ಷವನ್ನೇ ಸ್ಥಾಪಿಸಿ ಅಖಾಡಕ್ಕಿಳಿಯಲು ಮನ ಮಾಡಿದರು ಕೇಜ್ರಿವಾಲ್. ಆದರೆ, ಇದಕ್ಕೆ ಅಣ್ಣಾ ಹಜಾರೆ ಒಪ್ಪಿಗೆ ಸೂಚಿಸಲಿಲ್ಲ. ಬಳಿಕ ತಮ್ಮದೇ ಹಾದಿ ಹಿಡಿದ ಕೇಜ್ರಿವಾಲ್ 2012ರ ನವೆಂಬರ್‌ನಲ್ಲಿ ರಾಜಕೀಯ ಪಕ್ಷ (ಎಎಪಿ) ಸ್ಥಾಪಿಸಿದರು. ಇದಕ್ಕೆ ಎದುರಾದ ವ್ಯಾಪಕ ವಿರೋಧ, ಟೀಕೆಗಳನ್ನು ಲೆಕ್ಕಿಸದೆ 2013ರ ಡಿಸೆಂಬರ್‌ 4ರಂದು ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಎಎಪಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರು. ಅದೇ ವರ್ಷ ಡಿಸೆಂಬರ್ 8ರಂದು ಫಲಿತಾಂಶ ಪ್ರಕಟವಾದಾಗ ಎಎಪಿ ಎರಡನೇ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. 70 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 31 ಸ್ಥಾನ ಗಳಿಸಿದ್ದರೆ ಎಎಪಿ 28 ಸ್ಥಾನ ಗಳಿಸಿತ್ತು. ಕಾಂಗ್ರೆಸ್ 8 ಸ್ಥಾನ ಗಳಿಸಿತ್ತು.

ಕಾಂಗ್ರೆಸ್‌ ಜತೆ ಸೇರಿ ಮೈತ್ರಿ ಸರ್ಕಾರ ರಚಿಸಿದ ಕೇಜ್ರಿವಾಲ್ 49 ದಿನಗಳಲ್ಲೇ ರಾಜೀನಾಮೆ ನೀಡಬೇಕಾಗಿ ಬಂತು. ಅಧಿಕಾರ ದೊರೆತರೆ ಜನಲೋಕಪಾಲ ಕಾಯ್ದೆ ರೂಪಿಸುವುದಾಗಿ ನೀಡಿದ್ದ ಭರವಸೆಯೇ ಅವರು ಅಧಿಕಾರ ತ್ಯಜಿಸಲು ಮುಖ್ಯ ಕಾರಣವಾಯಿತು. ಮಿತ್ರ ಪಕ್ಷಗಳ ಸಹಕಾರ ದೊರೆಯದ್ದರಿಂದ ಜನಲೋಕಪಾಲ ಕಾಯ್ದೆ ರೂಪಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿ ರಾಜೀನಾಮೆ ನೀಡಿದ್ದಕ್ಕೆ ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು. ‘ಕೊಟ್ಟ ಭರಸವೆ ಈಡೇರಿಸದವರು, ಪಲಾಯನವಾದಿ’ ಇತ್ಯಾದಿ ಟೀಕೆಗಳಿಗೆ ಅವರು ಗುರಿಯಾಗಬೇಕಾಯಿತು.

‘ಕಾಂಗ್ರೆಸ್ ಜತೆ ಮೈತ್ರಿ ಮಾಡಿ ತಪ್ಪು ಮಾಡಿದೆ, ಕ್ಷಮಿಸಿ. ಮತ್ತೊಮ್ಮೆ ಅವಕಾಶ ನೀಡಿ’ ಎಂದು 2015ರ ಚುನಾವಣೆ ವೇಳೆ ಕೇಜ್ರಿವಾಲ್ ಮಾಡಿದ ಮನವಿಗೆ ಸ್ಪಂದಿಸಿದ ದೆಹಲಿ ಮತದಾರರು ಎಎಪಿಗೆ ಅಭೂತಪೂರ್ವ ಗೆಲುವು ತಂದುಕೊಟ್ಟರು. ಈ ಚುನಾವಣೆಯಲ್ಲಿ ಎಎಪಿ 67 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೆ ಬಿಜೆಪಿಗೆ ಕೇವಲ 3 ಸ್ಥಾನ ದೊರೆತಿತ್ತು. ಕಾಂಗ್ರೆಸ್‌ಗೆ ಖಾತೆ ತೆರೆಯುವುದೇ ಸಾಧ್ಯವಾಗಲಿಲ್ಲ. ಈ ಫಲಿತಾಂಶ ದೆಹಲಿ ರಾಜಕೀಯದ ದಿಕ್ಕನ್ನೇ ಬದಲಿಸಿತು.

ದೆಹಲಿಯಾಚೆಗೆ ವಿಸ್ತರಿಸದ ಪ್ರಭಾವ: ಪಂಜಾಬ್ ಮತ್ತು ಗೋವಾ ವಿಧಾನಸಭೆ ಚುನಾವಣೆಗಳಲ್ಲೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಎಎಪಿಯನ್ನು ಇತರ ರಾಜ್ಯಗಳಿಗೂ ವಿಸ್ತರಿಸಲು ಪಣತೊಟ್ಟಿದ್ದರು ಕೇಜ್ರಿವಾಲ್‌. ದೆಹಲಿಯಂತೆಯೇ ಇತರ ರಾಜ್ಯಗಳಲ್ಲೂ ಕೇಜ್ರಿವಾಲ್ ಮೋಡಿ ನಡೆಯುತ್ತಾ ಎಂಬ ಕುತೂಹಲವೂ ಒಂದು ಹಂತದಲ್ಲಿ ಸೃಷ್ಟಿಯಾಗಿತ್ತು. ಆದರೆ ದೆಹಲಿಯಾಚೆಗೆ ತಮ್ಮ ರಾಜಕೀಯ ವರ್ಚಸ್ಸನ್ನು ವಿಸ್ತರಿಸುವಲ್ಲಿ ಅವರು ನಿರೀಕ್ಷಿತ ಯಶಸ್ಸು ಕಾಣಲಿಲ್ಲ. ಆದರೆ, ದೆಹಲಿ ಮತದಾರ ಅವರ ಕೈಬಿಡಲಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು