ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ | ಲಾಕ್‌ಡೌನ್‌ ವಿಸ್ತರಣೆಗೆ ಪ್ರಧಾನಿ ನಿರ್ಧಾರ; ಕೇಜ್ರಿವಾಲ್‌ ಟ್ವೀಟ್‌ 

Last Updated 11 ಏಪ್ರಿಲ್ 2020, 10:56 IST
ಅಕ್ಷರ ಗಾತ್ರ

ನವದೆಹಲಿ: 'ಕೊರೊನಾ ವೈರಸ್‌ ಸೋಂಕು ವ್ಯಾಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ದೇಶದಾದ್ಯಂತ ಲಾಕ್‌ಡೌನ್‌ ವಿಸ್ತರಿಸಲು ಪ್ರಧಾನಿ ನರೇಂದ್ರ ಮೋದಿ ತೆಗೆದುಕೊಂಡಿರುವ ನಿರ್ಧಾರ ಸರಿಯಾದುದು' ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಶನಿವಾರ ಟ್ವೀಟ್‌ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಇಂದು ವಿಡಿಯೊ ಕಾನ್ಫರೆನ್ಸ್‌ ಮೂಲಕ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಕೋವಿಡ್‌–19 ಮತ್ತು ಲಾಕ್‌ಡೌನ್‌ಗೆ ಸಂಬಂಧಿಸಿದ ವಿಚಾರಗಳನ್ನು ಚರ್ಚಿಸಿದ್ದಾರೆ. ಸಭೆಯ ನಂತರದಲ್ಲಿ ಟ್ವೀಟ್‌ ಮಾಡಿರುವ ಅರವಿಂದ್‌ ಕೇಜ್ರಿವಾಲ್‌, ಏಪ್ರಿಲ್‌ 14ರ ನಂತರವೂ ಲಾಕ್‌ಡೌನ್‌ ವಿಸ್ತರಣೆಯಾಗುವ ನಿರ್ಧಾರ ಕೈಗೊಂಡಿರುವ ಬಗ್ಗೆ ಸೂಚನೆ ನೀಡಿದ್ದಾರೆ.

'ಅಭಿವೃದ್ಧಿ ಹೊಂದಿರುವ ರಾಷ್ಟ್ರಗಳಿಗಿಂತಲೂ ಇಂದು ಭಾರತದ ಸ್ಥಿತಿ ಉತ್ತಮವಾಗಿದೆ, ಏಕೆಂದರೆ ನಾವು ಮುಂಚಿತವಾಗಿಯೇ ಲಾಕ್‌ಡೌನ್‌ ಕೈಗೊಂಡೆವು. ಅದನ್ನು ಈಗಲೇ ಏನಾದರೂ ಅಂತ್ಯಗೊಳಿಸಿದರೆ, ಈವರೆಗೆ ಗಳಿಸಿದ್ದೆಲ್ಲವೂ ಕೊಚ್ಚಿ ಹೋಗುತ್ತದೆ. ಅದನ್ನು ಉಳಿಸಿಕೊಳ್ಳಲು ಲಾಕ್‌ಡೌನ್‌ ವಿಸ್ತರಿಸುವುದು ಮುಖ್ಯವಾಗಿದೆ' ಎಂದು ಅವರು ಟ್ವೀಟಿಸಿದ್ದಾರೆ.

ಕಳೆದ 24 ಗಂಟೆಗಳಲ್ಲಿ 40 ಮಂದಿ ಕೊರೊನಾ ಸೊಂಕಿತರು ಮೃತಪಟ್ಟಿರುವುದಾಗಿ ಆರೋಗ್ಯ ಇಲಾಖೆ ಶನಿವಾರ ಬೆಳಿಗ್ಗೆ ಮಾಹಿತಿ ನೀಡಿದೆ. ದೇಶದಾದ್ಯಂತ ದಾಖಲಾಗಿರುವ ಒಟ್ಟು ಕೋವಿಡ್–19 ಪ್ರಕರಣಗಳು 7,447 ಹಾಗೂ 239 ಮಂದಿ ಸಾವಿಗೀಡಾಗಿದ್ದಾರೆ.

ಏಪ್ರಿಲ್‌ 14ರ ನಂತರ ಕನಿಷ್ಠ ಎರಡು ವಾರಗಳ ವರೆಗೂ ಲಾಕ್‌ಡೌನ್‌ ವಿಸ್ತರಣೆಯಾಗುವ ಸಾಧ್ಯತೆ ಇರುವುದಾಗಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಪ್ರಧಾನಿ ನಾಲ್ಕು ಗಂಟೆಗಳ ವಿಡಿಯೊ ಕಾನ್ಫರೆನ್ಸ್‌ನಲ್ಲಿ ಕನಿಷ್ಠ 13 ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಬಹುತೇಕ ರಾಜ್ಯಗಳಿಂದ ಲಾಕ್‌ಡೌನ್‌ ವಿಸ್ತರಣೆ ಮಾಡುವ ಅಭಿಪ್ರಾಯ ವ್ಯಕ್ತವಾಗಿದೆ. ಈಗಾಗಲೇ ಒಡಿಶಾ ಹಾಗೂ ಪಂಜಾಬ್‌ ಏಪ್ರಿಲ್‌ 30ರ ವರೆಗೂ ಲಾಕ್‌ಡೌನ್‌ ಮುಂದುವರಿಸುವುದಾಗಿ ಘೋಷಿಸಿವೆ.

ಬಹುತೇಕರಾಜ್ಯಗಳು ಎರಡು ವಾರ ಲಾಕ್‌ಡೌನ್‌ ವಿಸ್ತರಣೆ ಮನವಿ ಮಾಡಿವೆ. ಕೇಂದ್ರ ಸರ್ಕಾರವು ಮನವಿ ಸ್ವೀಕರಿಸಿದೆ ಎಂದು ಪಿಐಬಿ ಪ್ರಧಾನ ನಿರ್ದೇಶಕ ಕೆ.ಎಸ್‌.ಧತವಾಲಿಯಾ ಟ್ವೀಟ್‌ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT