ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಂಚಲ ಮೈತ್ರಿಗೆ ಸಮೀಕ್ಷೆ ಬಲ

ಐದು ರಾಜ್ಯಗಳ ಚುನಾವಣೆ: ಬಿಜೆಪಿಯೇತರ ಪಕ್ಷಗಳಿಗೆ ಹುರುಪು
Last Updated 9 ಡಿಸೆಂಬರ್ 2018, 20:15 IST
ಅಕ್ಷರ ಗಾತ್ರ

ನವದೆಹಲಿ: ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಮತಗಟ್ಟೆ ಸಮೀಕ್ಷೆಯ ಫಲಿತಾಂಶ ಬಿಜೆಪಿಯೇತರ ಪಕ್ಷಗಳಲ್ಲಿ ಭಾರಿ ಹುರುಪು ತುಂಬಿದೆ. 2019ರ ಲೋಕಸಭಾ ಚುನಾವಣೆಗೆ ಮೊದಲು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮೈತ್ರಿಕೂಟವೊಂದನ್ನು ಕಟ್ಟಿಕೊಳ್ಳಲು ತಿಣುಕಾಡುತ್ತಿರುವ ಈ ಪಕ್ಷಗಳಿಗೆ ಸಮೀಕ್ಷೆ ಫಲಿತಾಂಶ ದೊಡ್ಡ ವರವಾಗಿದೆ.

ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭದ ಮುನ್ನಾದಿನ ಸೋಮವಾರ ಹತ್ತಕ್ಕೂ ಹೆಚ್ಚು ಪಕ್ಷಗಳು ಸಂಸತ್‌ ಭವನದಲ್ಲಿ ಸಭೆ ನಡೆಸಲಿವೆ. ಅಧಿವೇಶನದಲ್ಲಿ ಸರ್ಕಾರದ ಮೇಲೆ ಹೇಗೆ ಮುಗಿಬೀಳಬಹುದು ಎಂಬ ಕಾರ್ಯತಂತ್ರ ರೂಪಿಸುವುದು ಈ ಸಭೆಯ ಉದ್ದೇಶ. ಬಿಜೆಪಿ ವಿರುದ್ಧ ಇರುವ ಪಕ್ಷಗಳಲ್ಲಿ ಒಗ್ಗಟ್ಟು ಇದೆ ಎಂಬುದನ್ನು ತೋರಿಸುವ ಗುರಿಯನ್ನೂ ಈ ಸಭೆ ಹೊಂದಿದೆ.

ಮಧ್ಯ ಪ‍್ರದೇಶ ಮತ್ತು ಛತ್ತೀಸಗಡದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನಿಕಟ ಸ್ಪರ್ಧೆ ಇದೆ ಮತ್ತು ರಾಜಸ್ಥಾನದಲ್ಲಿ ಕಾಂಗ್ರೆಸ್‌ ಕೈ ಮೇಲು ಎಂಬ ಸಮೀಕ್ಷಾ ಫಲಿತಾಂಶ ಭದ್ರಕೋಟೆಯಲ್ಲಿಯೇ ಬಿಜೆಪಿಯ ಶಕ್ತಿಗುಂದಿದೆ ಎಂಬ ಚಿತ್ರಣವನ್ನು ಕಟ್ಟಿಕೊಟ್ಟಿದೆ.

ಸಮೀಕ್ಷೆಯ ಫಲಿತಾಂಶವೇ ನಿಜವಾದ ಫಲಿತಾಂಶವೂ ಆಗಿಬಿಟ್ಟರೆ 2019ರ ಲೋಕಸಭಾ ಚುನಾವಣೆ ಬಿಜೆಪಿಗೆ ಸುಲಭವಲ್ಲ. ಪ್ರಾದೇಶಿಕ ಪಕ್ಷಗಳ ಬಲವಾದ ಸವಾಲನ್ನು ಬಿಜೆಪಿ ಎದುರಿಸಬೇಕಾಗುತ್ತದೆ. ಉತ್ತರ ಪ್ರದೇಶ ಮತ್ತು ಬಿಹಾರದಲ್ಲಿ ವಿವಿಧ ಪಕ್ಷಗಳ ಮೈತ್ರಿ ಬಿಜೆಪಿಯನ್ನು ಇನ್ನಷ್ಟು ಸಂಕಷ್ಟಕ್ಕೆ ದೂಡಲಿದೆ. ಉತ್ತರ ಪ್ರದೇಶದಲ್ಲಿ ಮಾಯಾವತಿ ನೇತೃತ್ವದ ಬಿಎಸ್‌ಪಿ ಮತ್ತು ಅಖಿಲೇಶ್‌ ಯಾದವ್‌ ನೇತೃತ್ವದ ಎಸ್‌ಪಿ ಮೈತ್ರಿ, ಬಿಹಾರದಲ್ಲಿ ಲಾಲು ಪ್ರಸಾದ್‌ ಅವರ ಆರ್‌ಜೆಡಿ ಮತ್ತು ಕಾಂಗ್ರೆಸ್‌ ಮೈತ್ರಿಯನ್ನು ಎದುರಿಸುವುದು ಬಿಜೆಪಿಗೆ ಕಷ್ಟವಾಗಲಿದೆ.

ಮತಗಟ್ಟೆ ಸಮೀಕ್ಷೆಯ ರೀತಿಯಲ್ಲಿಯೇ ಫಲಿತಾಂಶ ಬಂದರೆ, ಬಿಜೆಪಿಯೇತರ ಪಕ್ಷಗಳ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ನ ಪಾತ್ರ ಏನು ಎಂಬ ಪ್ರಶ್ನೆಗೂ ಉತ್ತರ ದೊರೆಯಲಿದೆ. ಬಿಜೆಪಿಯ ವಿರುದ್ಧದ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ ಇಲ್ಲದಿದ್ದರೆ ಅದು ಯಶಸ್ವಿಯಾಗದು ಎಂದು ಚಂದ್ರಬಾಬು ನಾಯ್ಡು ಮತ್ತು ಶರದ್‌ ಯಾದವ್‌ ಅವರು ಈಗಾಗಲೇ ಹೇಳಿದ್ದಾರೆ.

ಎಸ್‌ಪಿ ಮತ್ತು ಬಿಎಸ್‌ಪಿ ಜತೆಗೆ ಕಾಂಗ್ರೆಸ್‌ನ ಸಂಬಂಧ ಈಗ ಅಷ್ಟೇನೂ ಚೆನ್ನಾಗಿಲ್ಲ. ಮಧ್ಯ ಪ್ರದೇಶ ಮತ್ತು ಛತ್ತೀಸಗಡದಲ್ಲಿ ಈ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದವು. ಹಿಂದಿ ಭಾಷಿಕ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್‌ ಮುನ್ನಡೆ ಸಾಧಿಸಿದರೆ ಉತ್ತರ ಪ‍್ರದೇಶ ಮತ್ತು ಬಿಹಾರದಲ್ಲಿ ಕಾಂಗ್ರೆಸ್‌ನ ಚೌಕಾಶಿ ಸಾಮರ್ಥ್ಯ ಹೆಚ್ಚಬಹುದು.

ಉತ್ತರ ಪ್ರದೇಶದಲ್ಲಿ 80 ಲೋಕಸಭಾ ಕ್ಷೇತ್ರಗಳಿವೆ. ಎಸ್‌ಪಿ, ಬಿಎಸ್‌ಪಿ ಮತ್ತು ಅಜಿತ್‌ ಸಿಂಗ್‌ ಅವರ ಆರ್‌ಎಲ್‌ಡಿ ಈಗಾಗಲೇ ಮೈತ್ರಿಕೂಟ ರಚಿಸಿಕೊಂಡಿವೆ. ಕಾಂಗ್ರೆಸ್‌ಗೆ ಹೆಚ್ಚಿನ ಸ್ಥಾನಗಳನ್ನು ಬಿಟ್ಟುಕೊಡಲು ಮಾಯಾವತಿ ಅವರಿಗೆ ಮನಸ್ಸಿಲ್ಲ. ಛತ್ತೀಸಗಡದಲ್ಲಿ ಅಜಿತ್‌ ಜೋಗಿ ಅವರ ಜನತಾ ಕಾಂಗ್ರೆಸ್‌ ಜತೆಗೆ ಮಾಯಾವತಿ ಮೈತ್ರಿ ಮಾಡಿಕೊಂಡಿದ್ದಾರೆ. ಅಲ್ಲಿ ನಿರೀಕ್ಷಿತ ಯಶಸ್ಸು ದೊರೆಯದಿದ್ದರೆ ಉತ್ತರ ಪ್ರದೇಶದ ಮೈತ್ರಿಕೂಟದಲ್ಲಿ ಮಾಯಾವತಿ ಅವರ ಕೈಮೇಲಾಗದು. ಯಾಕೆಂದರೆ, ಸತತ ಎರಡು ವಿಧಾನಸಭಾ ಚುನಾವಣೆಯಲ್ಲಿ ಅವರ ಪಕ್ಷ ಸೋತಿದೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಅವರ ಪಕ್ಷ ಒಂದು ಸ್ಥಾನವನ್ನೂ ಗೆದ್ದಿಲ್ಲ.

ಮಯಯಂತ್ರದ ಚಿಂತೆ

ಭೋಪಾಲ್‌: ಮತಯಂತ್ರಗಳನ್ನು ಇಟ್ಟಿರುವ ಕೊಠಡಿಗಳಲ್ಲಿನ ಭದ್ರತಾ ಲೋಪಗಳ ಬಗ್ಗೆ ಕಾಂಗ್ರೆಸ್‌ ಮತ್ತು ಇತರ ಪಕ್ಷಗಳು ಮತ್ತೆ ಮತ್ತೆ ದೂರುಗಳನ್ನು ನೀಡುತ್ತಿರುವುದು ಜಿಲ್ಲಾ ಚುನಾವಣಾಧಿಕಾರಿಗಳ ನಿದ್ದೆಗೆಡಿಸಿದೆ. ಹಾಗಾಗಿಯೇ ಅಭ್ಯರ್ಥಿಗಳು ಮತ್ತು ಎಣಿಕೆ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಅವರ ಏಜೆಂಟ್‌ಗಳ ಜತೆಗೆ ಈ ಅಧಿಕಾರಿಗಳು ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.

ಶಾಂತಿ ಮತ್ತು ಸಾಮರಸ್ಯ ಕಾಪಾಡುವಂತೆ ಹಾಗೂ ಎಣಿಕೆ ಪ್ರಕ್ರಿಯೆ ಸುಲಲಿತವಾಗಿ ನಡೆಯಲು ನೆರವಾಗುವಂತೆ ಅವರನ್ನು ಕೋರುತ್ತಿದ್ದಾರೆ. ರಾಜಕೀಯ ಪಕ್ಷಗಳು ಮತ್ತು ಅವುಗಳ ಪ್ರತಿನಿಧಿಗಳಿಗೆ ಎಣಿಕೆ ಪ್ರಕ್ರಿಯೆಯನ್ನು ವಿವರಿಸಲಾಗುತ್ತಿದೆ.

ಪ್ರತಿ ಸುತ್ತಿನ ಎಣಿಕೆ ಮುಗಿದು ನಂತರದ ಸುತ್ತಿಗೆ ಹೋಗುವ ಮುನ್ನ ಆ ಸುತ್ತಿನ ಎಣಿಕೆಯ ಫಲಿತಾಂಶ ಪ್ರಕಟಿಸಬೇಕು ಎಂದು ಕಾಂಗ್ರೆಸ್‌ ಕೋರಿದೆ. ಚುನಾವಣಾಧಿಕಾರಿಗಳು ಮತ್ತು ಅಭ್ಯರ್ಥಿಗಳಿಬ್ಬರೂ ಬಹುಶಃ ಇದೇ ಮೊದಲ ಬಾರಿ ನಿದ್ದೆಗೆಡುತ್ತಿದ್ದಾರೆ. ಚುನಾವಣಾಧಿಕಾರಿಗಳಿಗೆ ಎಣಿಕೆಯ ಚಿಂತೆಯಾದರೆ, ಅಭ್ಯರ್ಥಿಗಳಿಗೆ ಮತಯಂತ್ರದಲ್ಲಿ ಸಂಗ್ರಹವಾಗಿರುವ ಫಲಿತಾಂಶದ ಚಿಂತೆ.

ಕೂಸು ಹುಟ್ಟುವ ಮೊದಲೇ...

ಛತ್ತೀಸಗಡ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಭೂಪೇಶ್‌ ಬಘೆಲ್‌ ಮತ್ತು ದುರ್ಗ್‌ ಲೋಕಸಭಾ ಕ್ಷೇತ್ರದ ಸಂಸದ ತಾಮ್ರಧ್ವಜ ಸಾಹು ಅವರು ಮಾಧ್ಯಮ ಸಂಸ್ಥೆಗಳ ಕಚೇರಿಗಳಿಗೆ ಭೇಟಿ ನೀಡುತ್ತಿದ್ದಾರೆ. ಹಿಂದುಳಿದ ವರ್ಗಕ್ಕೆ ಸೇರಿದ ಈ ಇಬ್ಬರೂ ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಗಳು.

ಛತ್ತೀಸಗಡದಲ್ಲಿ ಕಾಂಗ್ರೆಸ್‌ ಗೆಲ್ಲಬಹುದು ಎಂದು ಮತಗಟ್ಟೆ ಸಮೀಕ್ಷೆಗಳು ಹೇಳಿರುವುದರಿಂದ ಆ ಪಕ್ಷದ ಮುಖಂಡರಲ್ಲಿ ಕಾತರ ಹೆಚ್ಚಾಗಿದೆ. 15 ವರ್ಷ ಬಳಿಕ ಛತ್ತೀಸಗಡದಲ್ಲಿ ಅಧಿಕಾರಕ್ಕೆ ಏರುವ ಕನಸು ಕಾಂಗ್ರೆಸಿಗರಲ್ಲಿ ಚಿಗುರೊಡೆದಿದೆ. ಆದರೆ, ಮುಖ್ಯಮಂತ್ರಿ ಹುದ್ದೆ ಮತ್ಯಾರ ಮಡಿಲಿಗಾದರೂ ಬೀಳಬಹುದೇ ಎಂಬ ಆತಂಕ ಈ ಇಬ್ಬರಲ್ಲಿಯೂ ಮನೆ ಮಾಡಿದೆ.

ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಬೇಕು ಎಂಬ ಆಕಾಂಕ್ಷೆಯೂ ಹಲವರಲ್ಲಿ ಮೂಡಿದೆ. ಅದಕ್ಕಾಗಿ ಲಾಬಿ ಕೂಡ ಆರಂಭಿಸಿದ್ದಾರೆ. ಹಗಲುಗನಸುಗಳು ಏನೇ ಇದ್ದರೂ ಜನಮತ ತಿಳಿಯಲು ಮಂಗಳವಾರದವರೆಗೆ ಕಾಯಲೇಬೇಕು. ಈ ಮಧ್ಯೆ, ಕೆಲವು ಮುಖಂಡರು ದೇವಸ್ಥಾನ ಭೇಟಿಯನ್ನೂ ಆರಂಭಿಸಿದ್ದಾರೆ.

ಮರು ಮತದಾನ

ಜೈಪುರ (ಪಿಟಿಐ): ರಾಜಸ್ಥಾನದ ಶ್ರೀಗಂಗಾನಗರ ಜಿಲ್ಲೆಯ ಕರಣ್‌ಪುರ ಕ್ಷೇತ್ರದ ಒಂದು ಮತಗಟ್ಟೆಯಲ್ಲಿ ಸೋಮವಾರ ಮರುಮತದಾನ ನಡೆಯಲಿದೆ.

ಮತದಾನ ಆರಂಭಕ್ಕೆ ಮೊದಲು ನಡೆಸಿದ ಅಣಕು ಮತದಾನದಲ್ಲಿ ದಾಖಲಾದ ಮತಗಳನ್ನು ಅಳಿಸದೆಯೇ ಮತದಾನಕ್ಕೆ ಅವಕಾಶ ಕೊಟ್ಟ ಕಾರಣ ಮರುಮತದಾನ ನಡೆಯಲಿದೆ.

ಇಂದು ಬಿಜೆಯೇತರ ಪಕ್ಷಗಳ ಸಭೆ

* ಸಮೀಕ್ಷಾ ಫಲಿತಾಂಶದಿಂದಾಗಿ ಬಿಜೆಪಿಯೇತರ ಪಕ್ಷಗಳ ಮುಖಂಡರ ಸಭೆಗೆ ಹೆಚ್ಚಿನ ಮಹತ್ವ

* ಡಿಎಂಕೆ ಮುಖ್ಯಸ್ಥ ಸ್ಟಾಲಿನ್‌, ಎಎಪಿ ಮುಖ್ಯಸ್ಥ ಅರವಿಂದ ಕೇಜ್ರಿವಾಲ್‌, ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಇದೇ ಮೊದಲ ಬಾರಿ ಒಟ್ಟಾಗಲಿದ್ದಾರೆ

* ಮಾಯಾವತಿ ಸಭೆಗೆ ಬರಲಿದ್ದಾರೆಯೇ ಎಂಬುದು ಇನ್ನೂ ಖಚಿತವಾಗಿಲ್ಲ

* ಸಭೆಗೆ ನಿರ್ದಿಷ್ಟ ಕಾರ್ಯಸೂಚಿ ಇಲ್ಲ. ಲೋಕಸಭೆ ಚುನಾವಣಾ ಕಾರ್ಯತಂತ್ರ ಮುಖ್ಯವಾಗಿ ಚರ್ಚೆಯಾಗಬಹುದು

***

ಮಹಿಳೆ ಮುಂದೆ

ರಾಜಸ್ಥಾನದಲ್ಲಿ ಶುಕ್ರವಾರ ನಡೆದ ಮತದಾನ ಪ್ರಮಾಣದಲ್ಲಿ ಮಹಿಳೆಯರು ಗಂಡಸರನ್ನು ಮೀರಿಸಿದ್ದಾರೆ.

74.66%

ಮಹಿಳೆಯರು ಮತದಾನ ಪ್ರಮಾಣ

73.80%

ಗಂಡಸರ ಮತದಾನ ಪ್ರಮಾಣ

74.21%

ಒಟ್ಟು ಮತದಾನ ಪ್ರಮಾಣ

===

2019ರ ಲೋಕಸಭಾ ಚುನಾವಣೆಯಲ್ಲಿ ನಾವು ಯಾವುದೇ ಮಹಾಮೈತ್ರಿಯ ಭಾಗವಾಗು ವುದಿಲ್ಲ. ನಮ್ಮ ರಾಜಕಾರಣದ ಗುರಿ ಅಧಿಕಾರ ಅಲ್ಲ. ಇದರಿಂದಾಗಿ ಹಾಳಾ ದವರಿಗೆ ಪಾಠ ಕಲಿಸುವುದು ನಮ್ಮ ಬಯಕೆ

-ಸ್ವರಾಜ್‌ ಇಂಡಿಯಾ ಅಧ್ಯಕ್ಷ

ನಮ್ಮಲ್ಲಿ ಸಮನ್ವಯ ಇರಲಿಲ್ಲ ಎಂಬುದೇ ಕಳೆದೆರಡು ಚುನಾವಣೆಗಳಲ್ಲಿ ಮಧ್ಯ ಪ್ರದೇಶದಲ್ಲಿ ನಾವು ಸೋಲಲು ಕಾರಣ. ಅದು ಈಗ ಹಳೆಯ ಕತೆ. ಈ ಬಾರಿ ನಾವು ಒಂದಾಗಿ ಕೆಲಸ ಮಾಡಿದ್ದೇವೆ

-ಜ್ಯೋತಿರಾದಿತ್ಯ ಸಿಂಧಿಯಾ, ಮಧ್ಯ ಪ್ರದೇಶದ ಕಾಂಗ್ರೆಸ್‌ ಮುಖಂಡ

ಮತಗಟ್ಟೆ ಸಮೀಕ್ಷೆ ಫಲಿತಾಂಶಕ್ಕೆ ಯಾವ ಪ್ರತಿಕ್ರಿಯೆಯನ್ನೂ ಕೊಡುವುದಿಲ್ಲ. ಮಂಗಳವಾರ ಫಲಿತಾಂಶ ಬರಲಿದೆ. ಬಿಜೆಪಿ ಬಹುಮತದಿಂದ ಸರ್ಕಾರ ರಚಿಸಲಿದೆ

-ವಸುಂಧರಾ ರಾಜೇ , ರಾಜಸ್ಥಾನ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT