ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರಿಗೆದರಿದ ಮಹಾಮೈತ್ರಿ ಚಟುವಟಿಕೆ: ಮಾಯಾವತಿ, ಅಖಿಲೇಶ್‌ ಭೇಟಿಯಾದ ತೇಜಸ್ವಿ

ಬಿಹಾರ ಮೈತ್ರಿಕೂಟದಲ್ಲಿ ಎಸ್‌ಪಿ, ಬಿಎಸ್‌ಪಿ ಸೇರ್ಪಡೆಗೆ ಚಿಂತನೆ
Last Updated 14 ಜನವರಿ 2019, 20:01 IST
ಅಕ್ಷರ ಗಾತ್ರ

ಲಖನೌ: ‘ಈ ಬಾರಿ ಕೇಂದ್ರದಲ್ಲಿ ಯಾರು ಅಧಿಕಾರಕ್ಕೆ ಬರಲಿದ್ದಾರೆ ಎಂಬುದನ್ನು ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳು ನಿರ್ಧರಿಸಲಿವೆ’ ಎಂದು ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ನಾಯಕ ತೇಜಸ್ವಿ ಯಾದವ್‌ ಸೋಮವಾರ ಹೇಳಿದ್ದಾರೆ.

‘ಲೋಕಸಭೆ ಚುನಾವಣೆ ನಂತರ ಅಧಿಕಾರದ ಗದ್ದುಗೆ ಯಾರಿಗೆ ಒಲಿಯಲಿದೆ ಎಂಬುದು ಗೊತ್ತಾಗುತ್ತದೆ. ಉತ್ತರ ಪ್ರದೇಶ ಹಾಗೂ ಬಿಹಾರದ ಜನರು ಈ ಕುರಿತು ನಿರ್ಧರಿಸಲಿದ್ದಾರೆ’ ಎಂದು ಸಮಾಜವಾದಿ ಪಾರ್ಟಿ (ಎಸ್‌ಪಿ) ಅಧ್ಯಕ್ಷ ಅಖಿಲೇಶ್‌ ಯಾದವ್‌ ಅವರನ್ನು ಭೇಟಿ ಮಾಡಿದ ಬಳಿಕ ಅವರು ಪತ್ರಕರ್ತರಿಗೆ ತಿಳಿಸಿದರು.

‘ಉತ್ತರ ಪ್ರದೇಶದದಲ್ಲಿ 80, ಬಿಹಾರದಲ್ಲಿ 40 ಹಾಗೂ ಜಾರ್ಖಂಡ್‌ನಲ್ಲಿ 14 ಲೋಕಸಭಾ ಕ್ಷೇತ್ರಗಳಿದ್ದು, ಕಳೆದ ಬಾರಿ ಬಿಜೆಪಿ ಮೈತ್ರಿಕೂಟವು 115 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಈ ಬಾರಿ 100 ಸ್ಥಾನಗಳನ್ನು ಕಳೆದುಕೊಳ್ಳಲಿದೆ’ ಎಂದು ತೇಜಸ್ವಿ ಭವಿಷ್ಯನುಡಿದರು.

‘ಪ್ರಧಾನಿ ಮೋದಿ ಅವರು ಮಾಡಿದ್ದ ವಿಶೇಷ ಪ್ಯಾಕೇಜ್‌ ಘೋಷಣೆ ಭರವಸೆಯಾಗಿಯೇ ಉಳಿದಿದೆ. ಬಿಹಾರದ ಜನರಿಗೆ ಅವರು ಮೋಸ ಮಾಡಿದ್ದಾರೆ. ನಮ್ಮ ಜತೆಗಿನ ಮೈತ್ರಿ ಮುರಿದುಕೊಂಡು ಸಿ.ಎಂ ಚಾಚಾ (ನಿತೀಶ್‌ ಕುಮಾರ್‌) ಬಿಜೆಪಿ ಜತೆಗೆ ಕೈಜೋಡಿಸಿದ್ದಾರೆ. ಬಿಜೆಪಿ ಬಗ್ಗೆ ಜನರಲ್ಲಿ ತೀವ್ರ ಅಸಮಾಧಾನವಿದೆ’ ಎಂದು ಹೇಳಿದರು.

‘ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ಹಾಗೂ ಎಸ್‌ಪಿ ನಡುವಿನ ಮೈತ್ರಿ ಗಟ್ಟಿಯಾಗಿದ್ದು, ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಹಿಡಿತದಿಂದ ದೇಶವನ್ನು ಮುಕ್ತಗೊಳಿಸಲಿದೆ. ದೇಶದಲ್ಲಿ ಬಿಜೆಪಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣ ಮಾಡಿದೆ. ಸ್ವಹಿತಾಸಕ್ತಿಗೆ ಸಾಂವಿಧಾನಿಕ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಆರ್‌ಎಸ್‌ಎಸ್‌ ನಾಯಕ ಎಂ.ಎಸ್‌.ಗೋಲ್ವಾಳ್ಕರ್‌ ಅವರ ವಿಚಾರಧಾರೆಗಳನ್ನು ಮತ್ತು ನಾಗಪುರದ ಕಾನೂನನ್ನು ಹೇರಲು ಸಂವಿಧಾನವನ್ನೇ ಬದಲಾಯಿಸುವ ಯತ್ನ ನಡೆದಿದೆ’ ಎಂದು ತೇಜಸ್ವಿ ಆರೋಪಿಸಿದರು.

‘ನಕಾರಾತ್ಕವಾಗಿ ಪ್ರಚಾರ ಮಾಡುವ ಮೂಲಕ ವ್ಯಕ್ತಿತ್ವವನ್ನು ದುರ್ಬಲಗೊಳಿಸುವ ಯತ್ನ ನಡೆದಿದೆ. ಚುನಾವಣೆ ನಂತರ ಯಾರು ಅಪ್ರಾಮಾಣಿಕರು ಎಂಬುದು ಗೊತ್ತಾಗಲಿದೆ. ದೇಶದ ಜನರನ್ನು ‘ಚೌಕಿದಾರ್‌’ ಹೇಗೆ ಮೋಸಗೊಳಿಸಿದ್ದಾರೆ ಎಂಬುದು ಸಹ ತಿಳಿಯಲಿದೆ’ ಎಂದು ಹೇಳಿದರು.

‘ನಮ್ಮ ಮೈತ್ರಿಯನ್ನು ತೇಜಸ್ವಿ ಮತ್ತಷ್ಟು ಗಟ್ಟಿಗೊಳಿಸಿದ್ದಾರೆ ನಮ್ಮ ಮೈತ್ರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಬಿಜೆಪಿಯನ್ನು ಕಿತ್ತೆಸೆಯಲು ಜನರು ನಿರ್ಧರಿಸಿದ್ದಾರೆ’ ಎಂದು ಅಖಿಲೇಶ್‌ ಯಾದವ್‌ ಹೇಳಿದರು.

ಮಾಯಾವತಿ ಭೇಟಿ

ಇದಕ್ಕೂ ಮುನ್ನ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ಮುಖ್ಯಸ್ಥೆ ಮಾಯಾವತಿ ಅವರನ್ನು ತೇಜಸ್ವಿ ಯಾದವ್‌ ಭಾನುವಾರ ರಾತ್ರಿ ಭೇಟಿ ಮಾಡಿದರು.

ಉತ್ತರ ಪ್ರದೇಶದಲ್ಲಿ ಮಾಡಿಕೊಂಡಿರುವ ಮೈತ್ರಿಯನ್ನು ಬಿಹಾರಕ್ಕೂ ವಿಸ್ತರಿಸುವ ಆಶಯ ವ್ಯಕ್ತಪಡಿಸಿರುವ ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕರೂ ಆಗಿರುವ ತೇಜಸ್ವಿ ಯಾದವ್‌, ಎಲ್ಲ ವಿರೋಧ ಪಕ್ಷಗಳನ್ನೊಳಗೊಂಡ ಮೈತ್ರಿಗೆ ಒಲವು ಹೊಂದಿದ್ದಾರೆ ಎಂದುಪಕ್ಷದ ಮೂಲಗಳು ತಿಳಿಸಿವೆ.

ಬಿಹಾರದಲ್ಲಿ ಕಾಂಗ್ರೆಸ್‌ ಜೊತೆಗೆ ಮೈತ್ರಿ ಮಾಡಿಕೊಂಡಿದ್ದರೂ, ಎಸ್‌ಪಿ–ಬಿಎಸ್‌ಪಿ ಮೈತ್ರಿಕೂಟಕ್ಕೆ ಕೆಲವು ಸೀಟು ನೀಡಲು ಆರ್‌ಜೆಡಿ ಯೋಚಿಸಿದೆ ಎಂದು ಮೂಲಗಳು ಹೇಳಿವೆ.

‘ಮಾಯಾವತಿ ಅವರ ಹುಟ್ಟುಹಬ್ಬದ ಅಂಗವಾಗಿ ಶುಭಾಶಯ ಕೋರಲು ಬಂದಿದ್ದೆ. ನಾನು ಇನ್ನೂ ಚಿಕ್ಕವನು, ಮಾಯಾವತಿ ಅವರು ಪ್ರಬುದ್ಧ ನಾಯಕಿ. ಅವರಮಾರ್ಗದರ್ಶನದಲ್ಲಿ ಮುನ್ನಡೆಯುತ್ತೇವೆ. ಉತ್ತರ ಪ್ರದೇಶದಲ್ಲಿ ಎಸ್‌ಪಿ–ಬಿಎಸ್‌ಪಿ ಮೈತ್ರಿಕೂಟವನ್ನು ಆರ್‌ಜೆಡಿ ಬೆಂಬಲಿಸಲಿದೆ’ ಎಂದು ತೇಜಸ್ವಿ ತಿಳಿಸಿದ್ದಾರೆ.

ಎಸ್‌ಪಿಗೆ ಬಂಡಾಯದ ಬಿಸಿ

ಬಿಎಸ್‌ಪಿ ಜತೆಗಿನ ಮೈತ್ರಿ ಘೋಷಣೆಯಾದ ಎರಡೇ ದಿನದಲ್ಲಿ ಎಸ್‌ಪಿ ಬಂಡಾಯ ಎದುರಿಸಬೇಕಾಗಿ ಬಂದಿದೆ.

‘ಮಾಯಾವತಿ ಅವರಿಗೆ ಅಖಿಲೇಶ್‌ ಯಾದವ್‌ ಶರಣಾಗಿದ್ದಾರೆ. ಅಲ್ಪಾವಧಿ ಮೈತ್ರಿ ಇದಾಗಿದೆ. ಮುಂಬರುವ ಲೋಕಸಭಾ ಚುನಾವಣೆ ಯಲ್ಲಿ ಈ ಮೈತ್ರಿ ಯಶಸ್ವಿಯಾಗುವುದಿಲ್ಲ’ ಎಂದು ಸಿರ್ಸಗಂಜ್‌ ಕ್ಷೇತ್ರದ ಎಸ್‌ಪಿ ಶಾಸಕ ಹರಿ ಓಂ ಯಾದವ್‌ ಹೇಳಿದ್ದಾರೆ.

ಮುಲಾಯಂ ಸಿಂಗ್‌ ಯಾದವ್‌ ಅವರ ಸಂಬಂಧಿಕರೂ ಆಗಿರುವ ಹರಿ ಓಂ, ‘ಮಾಯಾವತಿ ಅವರ ಷರತ್ತುಗಳನ್ನು ಅಖಿಲೇಶ್‌ ಒಪ್ಪುವವರೆಗೆ ಈ ಮೈತ್ರಿ ಇರಲಿದೆ. ಮಾಯಾವತಿ ಬಗ್ಗೆ ಎಲ್ಲರಿಗೂ ಗೊತ್ತಿದ್ದು, ಅವರು ಏನು ಮಾಡಬಹುದು ಎಂಬುದನ್ನು ಊಹಿಸಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ. ಶಿವಪಾಲ್‌ ಸಿಂಗ್‌ ಯಾದವ್‌ ಜತೆಗೆ ಕೈಜೋಡಿಸುವ ಬಗ್ಗೆಯೂ ಅವರು ಸುಳಿವು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT