ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷೇಧಾಜ್ಞೆ ನಡುವೆಯೂ ವಿಜಯೋತ್ಸವ

ಗೆದ್ದವರ ನಗು, ಸೋತವರ ನಿರಾಸೆ: ಪೊಲೀಸರ ವಿರುದ್ಧ ಕಾರ್ಯಕರ್ತರ ಆಕ್ರೋಶ
Last Updated 16 ಮೇ 2018, 6:16 IST
ಅಕ್ಷರ ಗಾತ್ರ

ಬೆಳಗಾವಿ: ಆಯಾ ಪಕ್ಷಗಳ ಬೆಂಬಲಿಗರಿಂದ ವಿಜಯೋತ್ಸವ, ಗುಲಾಲ ಮತ್ತು ಕೇಸರಿ ಬಣ್ಣಗಳ ಎರಚಾಟ, ಬಿಜೆಪಿ ಮತ್ತು ಭಗವಾಧ್ವಜಗಳ ಹಾರಾಟ, ಮುಗಿಲು ಮುಟ್ಟಿದ ಪಟಾಕಿ ಸದ್ದು, ಗೆದ್ದವರ ಹರ್ಷ, ಜೈಕಾರದ ಘೋಷಣೆಗಳು, ನಿರಾಸೆಯಿಂದ ಹೊರಟ ಸೋತವರು...

ವಿಧಾನಸಭೆಗೆ ಚುನಾವಣೆಯ ಫಲಿತಾಂಶ ಪ್ರಕಟವಾಗುತ್ತಿದ್ದಂತೆಯೇ ಬೆಳಗಾವಿ ನಗರದಲ್ಲಿ ಮಂಗಳವಾರ ಕಂಡುಬಂದ ಚಿತ್ರಣ ಇದು. ಆರ್‌ಪಿಡಿ ಕಾಲೇಜಿನಲ್ಲಿ ಸೂರ್ಯೋದಯದೊಂದಿಗೆ ಆರಂಭವಾದ ಮತಎಣಿಕೆ ಪ್ರಕ್ರಿಯೆ, ಅಭ್ಯರ್ಥಿಗಳ ಬೆಂಬಲಿಗರ ಆಗಮನ, ಮತಎಣಿಕೆ ಏಜೆಂಟರು, ಭದ್ರತೆಗೆ ನಿಯೋಜಿಸಲ್ಪಟ್ಟ ಪೊಲೀಸರನ್ನು ಒಳಗೊಂಡಂತೆ ಇಡೀ ನಗರ ಜಾತ್ರೆಯ ಸ್ವರೂಪ ತಾಳಿತ್ತು.

ಬಸವೇಶ್ವರ ವೃತ್ತ, ಮಹಾತ್ಮ ಪುಲೆ ರಸ್ತೆ, ರೇಲ್ವೆ ಪ್ರಥಮ ಗೇಟ್‌ ಕಡೆ ಹೋಗುವ ರಸ್ತೆ, ಲೆಲೆ ಮೈದಾನದ ಸುತ್ತಲಿನ ಭಾಗಗಳಲ್ಲಿ ಮಣಗಟ್ಟಲೆ ಗುಲಾಲ, ಕೇಸರಿ ಬಣ್ಣದ ಪುಡಿ ಎರಚಿ ಸಂಭ್ರಮ ಪಟ್ಟರು. ಗಟಾಟೆಗೆ ಅವಕಾಶ ಆಗಬಾರದು ಎಂಬ ಕಾರಣದಿಂದ ವಿಧಿಸಿದ್ದ ನಿಷೇಧಾಜ್ಞೆಯ ನಡುವೆಯೂ ಸಾಗರೋಪಾದಿಯಾಗಿ ಬಂದ ಕಾರ್ಯಕರ್ತರು ಪೊಲೀಸರ ಎದುರಲ್ಲಿಯೇ ಬೈಕ್‌, ಇತರ ವಾಹನಗಳ ಮೇಲೆ ಗಲ್ಲಿಗಲ್ಲಿಗಳಲ್ಲಿ ಸಂಚರಿಸಿದರು.

ಬೆಳಗಾವಿ ಉತ್ತರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಿಲ ಬೆನಕೆ ಆಯ್ಕೆ ಪ್ರಕಟವಾಗುತ್ತಿದ್ದಂತೆಯೇ ಇಡೀ ನಗರದ ಚಿತ್ರಣವೇ ಬೇರೆಯಾಗಿತ್ತು. ಬಿಜೆಪಿ ಬೆಂಬಲಿಗರು ಆಳೆತ್ತರದ ಭಗವಾಧ್ವಜಗಳೊಂದಿಗೆ ಬೀದಿಗೆ ಇಳಿದರು. ದಕ್ಷಿಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಭಯ ಪಾಟೀಲ ಅವರು ಹೆಚ್ಚಿನ ಮತಗಳ ಅಂತರದಿಂದ ಮುಂದಿದ್ದಾರೆ ಎಂಬ ಸುದ್ದಿ ಮೈಕ್‌ಗಳಲ್ಲಿ ಘೋಷಣೆಯಾಗುತ್ತಿದ್ದಂತೆ ಕಾರ್ಯಕರ್ತರ ಉತ್ಸಾಹಕ್ಕೆ ಮಿತಿಯೇ ಇರಲಿಲ್ಲ.

ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಲಕ್ಷ್ಮಿ ಹೆಬ್ಬಾಳಕರರ ಸಾವಿರಾರು ಬೆಂಬಲಿಗರು ಚುನಾವಣೆ ಫಲಿತಾಂಶಕ್ಕೆ ಕಾತರದಿಂದ ಕಾದು ನಿಂತಿದ್ದರು. ಆದರೆ ಎಣಿಕೆ ನಿಧಾನಗೊಳ್ಳುತ್ತಿದ್ದಂತೆಯೇ ಕಾರ್ಯಕರ್ತರು ಬಸವೇಶ್ವರ ಸರ್ಕಲ್‌, ಮಹಾತ್ಮಾ ಫುಲೆ ರಸ್ತೆಗಳಲ್ಲಿ ಫಲಿತಾಂಶದ ಮೊದಲೇ ಘೋಷಣೆ ಜಯಕಾರ ಹಾಕಿ, ಮೆರವಣಿಗೆ ಆರಂಭಿಯೇ ಬಿಟ್ಟರು.

ಉತ್ತರ ಕ್ಷೇತ್ರದ ಅನಿಲ ಬೆನಕೆ ಬೆಂಗಲಿಗರು ಖಡೇಬಜಾರ್‌, ಬಡಕಲ ಗಲ್ಲಿ, ದರ್ಬಾರ್‌ ಗಲ್ಲಿಗಳಲ್ಲಿ ಬೈಕ್‌ ಮೆರವಣಿಗೆ ನಡೆಸಲು ಆಗಮಿಸಿದಾಗ ಪೊಲೀಸರು ಬಿಡಲಿಲ್ಲ. ಇಲ್ಲಿನ ಮಸೀದಿಗಳಿಗೆ ಭಾರೀ ಭದ್ರತೆ ಒದಗಿಸಲಾಗಿತ್ತು. ಮೆರವಣಿಗೆದಾರರು ಕ್ಷೇತ್ರದಲ್ಲಿ ಸಂಚರಿಸಲು ಅವಕಾಶ ಕೊಡಲಿಲ್ಲ ಎಂದು ಕಾರ್ಯಕರ್ತರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಮುನ್ನೆಚ್ಚರಿಕೆಯಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಭಾರೀ ಭದ್ರತೆ ಒದಗಿಸಿದ್ದರು.

ಮತಎಣಿಕೆ ಕೇಂದ್ರದಿಂದ ಹೊರ ಬಂದ ಶಾಸಕರು ಬೆಂಬಲಿಗರಿಗೆ ಕೈ ಬೀಸಿ ವಿಜಯದ ಸಂಕೇತ ತೋರಿಸಿದರು. ಸೋತವರು ನಿರಾಸೆಯಿಂದ ವಾಪಸಾದರು.

ಅಭ್ಯರ್ಥಿಗಳು ಹೀಗೆಂದರು...

ಇದು ಜನರ ತೀರ್ಪು: ಚುನಾವಣೆಯಲ್ಲಿ ಸೋತ ರಾಜು ಕಾಗೆ ಪ್ರತಿಕ್ರಿಯಿಸಿ ‘ಈ ಸೋಲು ಮತದಾರರು ಕೊಟ್ಟ ತೀರ್ಪು, ಅದಕ್ಕೆ ನಾನು ಬದ್ಧ’ ಎಂದು ಚುಟುಕಾಗಿ ಹೇಳಿ ತೆರಳಿದರು.

ಮತದಾರರ ಗೆಲುವು: ‘ಗ್ರಾಮೀಣ ಕ್ಷೇತ್ರದಲ್ಲಿ ಸೌಲಭ್ಯ ವಂಚಿತರಾದ ಮತದಾರರು ಈ ಸಲ ನನ್ನನ್ನು ಗೆಲ್ಲಿಸಿದ್ದಾರೆ. ಅವರಿಗೆ ನಿರಾಸೆ ಮಾಡುವುದಿಲ್ಲ. ಇದು ಮತದಾರರ ಗೆಲುವು’ ಎಂದು ಬೆಳಗಾವಿ ಗ್ರಾಮೀಣ ಕ್ಷೇತ್ರದ ಲಕ್ಷ್ಮಿ ಹೆಬ್ಬಾಳಕರ ಪ್ರತಿಕ್ರಿಯಿಸಿದರು.

ಜನರೊಂದಿಗೆ ಇರುತ್ತೇನೆ: ‘ಜನಪರ ಕೆಲಸ ಮಾಡಲು ಮತದಾರರು ಅವಕಾಶ ನೀಡಿದ್ದಾರೆ. ಅವರ ಜತೆಯಲ್ಲಿದ್ದು ಕೆಲಸ ಮಾಡುತ್ತೇನೆ’ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಅಭಯ ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT