ಗುರುವಾರ , ನವೆಂಬರ್ 14, 2019
19 °C
ಬಿಜೆಪಿಯ ಭಾರತ ರತ್ನ ಪ್ರಸ್ತಾವಕ್ಕೆ ಆಕ್ಷೇಪ

ಗಾಂಧಿ ಹತ್ಯೆ ಸಂಚಿನಲ್ಲಿ ಸಾವರ್ಕರ್ ಹೆಸರಿತ್ತು, ಮರೆಯಬೇಡಿ: ದಿಗ್ವಿಜಯ್ ಸಿಂಗ್

Published:
Updated:

ಇಂದೋರ್ (ಮಧ್ಯಪ್ರದೇಶ): ವೀರ ಸಾವರ್ಕರ್ ಅವರಿಗೆ ಭಾರತ ರತ್ನ ನೀಡುವ ಬಿಜೆಪಿಯ ಪ್ರಸ್ತಾವಕ್ಕೆ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಹಾತ್ಮ ಗಾಂಧಿ ಹತ್ಯೆ ಸಂಚಿನಲ್ಲಿ ಸಾವರ್ಕರ್ ಹೆಸರೂ ಇತ್ತು ಎಂಬುದನ್ನು ಬಿಜೆಪಿ ಮರೆಯಬಾರದು ಎಂದು ಅವರು ಹೇಳಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಾವರ್ಕರ್ ಬದುಕಿನಲ್ಲಿ ಎರಡು ಆಯಾಮಗಳಿದ್ದವು. ಒಂದನೆಯದ್ದು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದದ್ದು ಮತ್ತು ಇನ್ನೊಂದು ಬ್ರಿಟಿಷರ ಕ್ಷಮೆ ಕೋರಿ ವಾಪಸಾದದ್ದು. ಗಾಂಧಿ ಹತ್ಯೆ ಸಂಚಿನಲ್ಲಿ ಅವರ ಹೆಸರಿದ್ದುದನ್ನು ಬಿಜೆಪಿ ಮರೆಯಬಾರದು’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಂಬೇಡ್ಕರ್‌ಗೆ ಭಾರತರತ್ನ ನಿರಾಕರಿಸಿದವರಿಂದಲೇ ಸಾವರ್ಕರ್‌ಗೆ ಅವಮಾನ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ವೀರ ಸಾವರ್ಕರ್, ಮಹಾತ್ಮ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರಿಗೆ ಭಾರತ ರತ್ನಕ್ಕೆ ಶಿಫಾರಸು ಪ್ರಸ್ತಾವ ಒಳಗೊಂಡ ಚುನಾವಣಾ ಪ್ರಣಾಳಿಕೆಯನ್ನು ಬಿಜೆಪಿ ಮಂಗಳವಾರ ಬಿಡುಗಡೆ ಮಾಡಿತ್ತು.

ಮಹಾರಾಷ್ಟ್ರದ ಅಕೋಲದಲ್ಲಿ ಬುಧವಾರ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರ ನಿರ್ಮಾಣಕ್ಕಾಗಿ ರಾಷ್ಟ್ರೀಯತೆಯ ಪ್ರೇರಣೆ ನೀಡಿದವರು ವೀರ್ ಸಾವರ್ಕರ್. ಬಾಬಾ ಸಾಹೇಬ್ ಅಂಬೇಡ್ಕರ್‌ಗೆ ದಶಕಗಳ ಕಾಲ ಭಾರತರತ್ನ ನೀಡದೆ ಪ್ರತಿ ಬಾರಿಯೂ ಅವಮಾನ ಮಾಡಿದ ಜನರೇ ಈಗ ಹಿಂದುತ್ವವಾದಿ ವಿ.ಡಿ. ಸಾವರ್ಕರ್‌ನ್ನು ಅವಮಾನ ಮಾಡುತ್ತಿದ್ದಾರೆ ಎಂದು ಹೇಳಿದ್ದರು.

ಇದನ್ನೂ ಓದಿ: ಮಹಾರಾಷ್ಟ್ರ: ಬಿಜೆಪಿ ಪ್ರಣಾಳಿಕೆ ಬಿಡುಗಡೆ, ಸಾವರ್ಕರ್‌ಗೆ ಭಾರತರತ್ನಕ್ಕೆ ಶಿಫಾರಸು

ಪ್ರತಿಕ್ರಿಯಿಸಿ (+)