ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ನಿದ್ರೆಗೆಡಿಸಿದ ಎಸ್‌ಪಿ–ಬಿಎಸ್‌ಪಿ ಐತಿಹಾಸಿಕ ಮೈತ್ರಿ

Last Updated 12 ಜನವರಿ 2019, 20:07 IST
ಅಕ್ಷರ ಗಾತ್ರ

ಲಖನೌ: ಉತ್ತರ ಪ್ರದೇಶದಲ್ಲಿ ಪ್ರಭಾವ ಹೊಂದಿರುವ ಸಮಾಜವಾದಿ (ಎಸ್‌ಪಿ) ಮತ್ತು ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಚುನಾವಣಾ ಪೂರ್ವ ಮೈತ್ರಿ ಸಹಜವಾಗಿ ಆಡಳಿತಾರೂಢ ಬಿಜೆಪಿಯ ನಿದ್ದೆಗೆಡಸಿದೆ.

ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳನ್ನು (80) ಹೊಂದಿರುವ ಉತ್ತರ ಪ್ರದೇಶದಲ್ಲಿ ಈ ಎರಡೂ ಪಕ್ಷಗಳು ಹಿಡಿತ ಹೊಂದಿವೆ. ಈ ಪಕ್ಷಗಳು ಕೆಳವರ್ಗದ ಮತದಾರರು ಬಡವರು, ದಲಿತರು, ಶೋಷಿತರು, ಹಿಂದುಳಿದವರ ಬೆಂಬಲ ಹೊಂದಿವೆ.

ಉತ್ತರ ಪ್ರದೇಶದಲ್ಲಿ ಗೆದ್ದವರು ದೆಹಲಿಯಲ್ಲಿ ಅಧಿಕಾರ ಗದ್ದುಗೆ ಹಿಡಿಯುತ್ತಾರೆ ಎಂಬ ಮಾತಿದೆ. ಕಳೆದ ಚುನಾವಣೆಯಲ್ಲಿ ಉತ್ತರ ಪ್ರದೇಶದಲ್ಲಿ 73 ಕ್ಷೇತ್ರಗಳಲ್ಲಿ ಗೆದ್ದಿದ್ದ ಬಿಜೆಪಿ ಮೈತ್ರಿಕೂಟಕ್ಕೆ ಈ ಬಾರಿ ಗೆಲುವು ಸುಲಭದ ತುತ್ತಲ್ಲ. ಎಸ್‌ಪಿ–ಬಿಎಸ್‌ಪಿ ಮೈತ್ರಿಯಿಂದಾಗಿ ಬಿಜೆಪಿಗೆ ಗೆಲುವಿನ ಹಾದಿ ಕಠಿಣವಾಗಲಿದೆ.

ಬಿಎಸ್‌ಪಿ–ಎಸ್‌ಪಿ ಮೈತ್ರಿ ಮಾಡಿಕೊಂಡರೆ ಎನ್‌ಡಿಎಗೆ ಸರಳ ಬಹುಮತಕ್ಕೆ 15–20 ಸ್ಥಾನಗಳ ಕೊರತೆ ಎದುರಾಗಲಿದೆ ಎಂದು ಸಮೀಕ್ಷೆಗಳು ಸುಳಿವು ನೀಡಿವೆ.

ಬದ್ಧ ವೈರಿಗಳು ಮಿತ್ರರಾದದ್ದು ಹೇಗೆ?

‘ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರೂ ಅಲ್ಲ, ಶತ್ರುಗಳೂ ಅಲ್ಲ’ ಎಂಬ ಮಾತಿದೆ. ಅದು ಎಸ್‌ಪಿ–ಬಿಎಸ್‌ಪಿಗೆ ಅಕ್ಷರಶಃ ಅನ್ವಯಿಸುತ್ತದೆ.

ಎಸ್‌ಪಿ–ಬಿಎಸ್‌ಪಿಯ ದ್ವೇಷ ಮತ್ತು ಮೈತ್ರಿ ಹೊಸದೇನಲ್ಲ. ಅದಕ್ಕೆ ಎರಡು ದಶಕಗಳ ಇತಿಹಾಸವಿದೆ.

ಅಯೋಧ್ಯೆಯಲ್ಲಿ ಬಾಬ್ರಿ ಮಸೀದಿ ಧ್ವಂಸದ ನಂತರ ರಾಮ ಮಂದಿರ ನಿರ್ಮಾಣ ಆಂದೋಲನ ನಡೆಸಿದ ಬಿಜೆಪಿಯನ್ನು ಅಧಿಕಾರಕ್ಕೆ ಬರದಂತೆ ತಡೆಯಲು 1993ರಲ್ಲಿ ಬಿಎಸ್‌ಪಿ ನಾಯಕ ಕಾನ್ಶಿರಾಂ ಮತ್ತು ಎಸ್‌ಪಿ ನಾಯಕ ಮುಲಾಯಂ ಸಿಂಗ್‌ ಮೊದಲ ಬಾರಿಗೆ ಕೈಜೋಡಿಸಿದರು.

ಎರಡೂ ಪಕ್ಷಗಳ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂತು. ಆದರೆ, ಅದು ದೀರ್ಘಾಯುಷಿ ಆಗಿರಲಿಲ್ಲ. ಎರಡು ವರ್ಷಗಳಲ್ಲಿ ಸಂಬಂಧ ಮುರಿದು ಬಿದ್ದಿತ್ತು.

ಹುಳಿ ಹಿಂಡಿದ ಅತಿಥಿಗೃಹ ಪ್ರಕರಣ: 1995ರಲ್ಲಿ ಲಖನೌದ ಮೀರಾಬಾಯಿ ಮಾರ್ಗ ಅತಿಥಿ ಗೃಹದಲ್ಲಿ ನಡೆದ ಅಹಿತಕರ ಪ್ರಕರಣವೊಂದು ಎರಡೂ ಪಕ್ಷಗಳ ಸಂಬಂಧಕ್ಕೆ ಹುಳಿ ಹಿಂಡಿತು.

ಅತಿಥಿಗೃಹಕ್ಕೆ ನುಗ್ಗಿದ ಸಮಾಜವಾದಿ ಪಕ್ಷದ ಕಾರ್ಯಕರ್ತರು ಮಾಯಾವತಿ ಅವರ ಮೇಲೆ ಹಲ್ಲೆ ನಡೆಸಿದ್ದರು. ಬಿಎಸ್‌ಪಿ ಶಾಸಕರ ಎದುರೇ ಮಾಯಾವತಿ ಅವರನ್ನು ಥಳಿಸಲಾಗಿತ್ತು.

ಈ ಘಟನೆಯ ನಂತರ ಎರಡೂ ಪಕ್ಷಗಳ ನಡುವಿನ ಸಂಬಂಧ ಸಂಪೂರ್ಣ ಹಳಸಿತ್ತು. ಸಂಬಂಧ ಸುಧಾರಿಸಲು ಕಾನ್ಶಿರಾಂ ನಡೆಸಿದ ಪ್ರಯತ್ನಗಳು ಫಲ ನೀಡಿರಲಿಲ್ಲ. ಬಿಜೆಪಿ ಜತೆ ಕೈಜೋಡಿಸಿದ ಮಾಯಾವತಿ ಸರ್ಕಾರ ರಚಿಸಿದರು.

ಎರಡು ದಶಕದ ನಂತರ ಮೊಳಕೆಯೊಡೆದ ಸ್ನೇಹ: ಅತಿಥಿ ಗೃಹ ಘಟನೆ ನಡೆದ ನಂತರ ಹಳಸಿ ಹೋಗಿದ್ದ ಸಂಬಂಧ ಸುಮಾರು ಎರಡು ದಶಕಗಳ ನಂತರ ಮತ್ತೆ ಮೊಳಕೆಯೊಡೆದಿದೆ.

2018ರಲ್ಲಿ ನಡೆದ ಗೋರಖಪುರ, ಫುಲ್‌ಪುರ ಮತ್ತು ಕೈರಣಾ ಲೋಕಸಭಾ ಉಪ ಚುನಾವಣೆಯಲ್ಲಿ ಎರಡೂ ಪಕ್ಷಗಳ ನಡುವಿನ ಬದ್ಧ ದ್ವೇಷ ಮರೆಯಾಗಿ ಸ್ನೇಹ ಸಂಬಂಧ ಚಿಗರೊಡೆಯಿತು.

ಈ ಕ್ಷೇತ್ರಗಳಲ್ಲಿ ಎಸ್‌ಪಿ ಅಭ್ಯರ್ಥಿಗಳಿಗೆ ಬಿಎಸ್‌ಪಿ ಬೇಷರತ್‌ ಬೆಂಬಲ ನೀಡಿತ್ತು. ರಾಜ್ಯಸಭೆ ಚುನಾವಣೆಯಲ್ಲೂ ಮುಂದುವರಿದ ಸ್ನೇಹ ನಂತರದ ದಿನಗಳಲ್ಲಿ ಮತ್ತಷ್ಟು ಗಟ್ಟಿಗೊಂಡಿತು.

ಈ ಮೈತ್ರಿ ಉತ್ತರ ಪ್ರದೇಶದ ಮುಸ್ಲಿಂ ಮತದಾರರ ಗೊಂದಲ ಬಗೆಹರಿಸಿದೆ. ಪ್ರತಿ ಬಾರಿ ಎರಡೂ ಪಕ್ಷಗಳ ನಡುವೆ ಹಂಚಿ ಹೋಗುತ್ತಿದ್ದ ಮುಸ್ಲಿಂ ಮತಗಳು ಈಗ ಸಾರಾಸಗಟಾಗಿ ಮೈತ್ರಿಕೂಟಕ್ಕೆ ಬರಲಿವೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಕಾಂಗ್ರೆಸ್‌ನಿಂದ ಅಂತರ: ಮಾಯಾವತಿ

‘ಬಿಜೆಪಿ ಮತ್ತು ಕಾಂಗ್ರೆಸ್‌ನಿಂದ ಸಮಾನ ಅಂತರ ಕಾಯ್ದುಕೊಳ್ಳುವುದು ಅಗತ್ಯವಿದೆ. ಕಾಂಗ್ರೆಸ್‌ ತುರ್ತು ಪರಿಸ್ಥಿತಿ ಹೇರಿದರೆ, ಬಿಜೆಪಿ ಅಘೋಷಿತ ತುರ್ತು ಪರಿಸ್ಥಿತಿ ನಿರ್ಮಾಣ ಮಾಡಿದೆ’ ಎಂದು ಮಾಯಾವತಿ ಹೇಳಿದ್ದಾರೆ.

‘ನಮ್ಮ ಮೈತ್ರಿಯು ಬಹಳ ದೂರದವರೆಗೆ ಸಾಗಲಿದೆ. ಲೋಕಸಭೆ ಚುನಾವಣೆ ನಂತರವೂ ಮೈತ್ರಿ ಮುಂದುವರಿಯಲಿದೆ. ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯನ್ನೂ ಸಹ ಮೈತ್ರಿ ಮಾಡಿಕೊಂಡೇ ಎದುರಿಸುತ್ತೇವೆ’ ಎಂದು ಸ್ಪಷ್ಟಪಡಿಸಿದ್ದಾರೆ.

‘1995ರಲ್ಲಿ ಲಖನೌ ಅತಿಥಿಗೃಹದಲ್ಲಿ ಎಸ್‌ಪಿ ಬೆಂಬಲಿಗರು ನಡೆಸಿದ ದಾಳಿಯ ಕಹಿ ಘಟನೆಯನ್ನು ಮರೆತಿದ್ದೇನೆ. ನಾವು ರಾಷ್ಟ್ರೀಯ ಹಿತಾಸಕ್ತಿಗೆ ಆದ್ಯತೆ ನೀಡಿದ್ದೇವೆ. ಈ ಬಾರಿ ಬಿಜೆಪಿ ಸರ್ಕಾರ ರಚಿಸಲು ಸಾಧ್ಯವಿಲ್ಲ’ ಎಂದು ಮಾಯಾವತಿ ಹೇಳಿದರು.

ಬಿಜೆಪಿಯೇತರ ಮತ ವಿಭಜನೆ ಮಾಡಲು ಶಿವಪಾಲ್‌ ಯಾದವ್‌ ನೇತೃತ್ವದ ಪ್ರಗತಿಶೀಲ ಸಮಾಜವಾದಿ ಪಕ್ಷಕ್ಕೆ (ಲೋಹಿಯಾ) ಬಿಜೆಪಿ ಅಪಾರ ಪ್ರಮಾಣದ ಹಣ ನೀಡುತ್ತಿದೆ. ಆದರೆ, ಈ ಹಣ ಚರಂಡಿಯಲ್ಲಿ ನೀರು ಹರಿದಂತೆ ಪೋಲಾಗುತ್ತಿದೆ ಎಂದರು.

ಉತ್ತರ ಪ್ರದೇಶದವರೇ ಪ್ರಧಾನಿ: ಅಖಿಲೇಶ್‌

‘ಉತ್ತರ ಪ್ರದೇಶವು ದೇಶಕ್ಕೆ ಹಲವು ಪ್ರಧಾನಿಗಳನ್ನು ನೀಡಿದೆ. ಮುಂದಿನ ಪ್ರಧಾನಿ ಸಹ ಇಲ್ಲಿಯವರೇ ಆಗುತ್ತಾರೆ’ ಎಂದು ಎಸ್‌ಪಿ ಅಧ್ಯಕ್ಷ ಅಖಿಲೇಶ್‌ ಯಾದವ್‌ ಹೇಳಿದ್ದಾರೆ.

ಮಾಯಾವತಿ ಅವರು ಪ್ರಧಾನಿ ಹುದ್ದೆಯ ಸಂಭವನೀಯ ಅಭ್ಯರ್ಥಿಯೇ ಎಂಬ ಪ್ರಶ್ನೆಗೆ ಅವರು ಈ ರೀತಿ ಉತ್ತರಿಸಿದ್ದಾರೆ.

ಉತ್ತರ ಪ್ರದೇಶದ ಪಶ್ಚಿಮ ಭಾಗದಲ್ಲಿ ಬಲಿಷ್ಠವಾಗಿರುವ ರಾಷ್ಟ್ರೀಯ ಲೋಕ ದಳ (ಆರ್‌ಎಲ್‌ಡಿ) ಜೊತೆಗಿನ ಸ್ಥಾನ ಹೊಂದಾಣಿಕೆ ಕುರಿತ ಪ್ರಶ್ನೆಗೆ, ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ಅವರುಹೇಳಿದರು.

**

ಮೈತ್ರಿ ಹೇಗೆ?

‘ರಾಜ್ಯಸಭಾ ಚುನಾವಣೆಯಲ್ಲಿ ಬಿಎಸ್‌ಪಿ ಅಭ್ಯರ್ಥಿ ಭೀಮರಾವ್‌ ಅಂಬೇಡ್ಕರ್‌ ಅವರನ್ನು ಬಿಜೆಪಿ ಕುತಂತ್ರದಿಂದ ಸೋಲಿಸಿದ ದಿನವೇ ಬಿಎಸ್‌ಪಿ ಜತೆ ಮೈತ್ರಿ ಮಾಡಿಕೊಳ್ಳಲು ನಾನು ನಿರ್ಧರಿಸಿದೆ’ ಎಂದು ಅಖಿಲೇಶ್‌ ಯಾದವ್‌ ತಿಳಿಸಿದ್ದಾರೆ.

‘ನಾನು ಎರಡು ಹೆಜ್ಜೆ ಹಿಂದಿಟ್ಟರೆ ಬಿಎಸ್‌ಪಿ ಜತೆ ಮೈತ್ರಿ ಸಾಧ್ಯ ಎಂದು ನನಗೆ ಆಗಲೇ ಅರಿವಾಯಿತು’ ಎಂದು ಅವರು ತಿಳಿಸಿದ್ದಾರೆ.

**

ಎಸ್‌ಪಿ– ಬಿಎಸ್‌ಪಿ ಮೈತ್ರಿಆ ಪಕ್ಷಗಳಿಗೆ ಬಿಟ್ಟದ್ದು: ಖರ್ಗೆ

ಬೆಂಗಳೂರು: ‘ಉತ್ತರ ಪ್ರದೇಶದಲ್ಲಿ ಎಸ್‌ಪಿ– ಬಿಎಸ್‌ಪಿ ಮೈತ್ರಿ ವಿಚಾರ ಆ ಪಕ್ಷಗಳಿಗೆ ಬಿಟ್ಟದ್ದು. ಆದರೆ, ರಾಷ್ಟ್ರಮಟ್ಟದಲ್ಲಿ ಬಿಜೆಪಿ ವಿರೋಧಿ ಪಕ್ಷಗಳು ಒಂದಾಗಬೇಕು ಎನ್ನುವುದು ನನ್ನ ಉದ್ದೇಶ’ ಎಂದು ಲೋಕಸಭೆ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಶನಿವಾರ ಮಾತನಾಡಿದ ಅವರು, ‘ಒಂದೇ ಸಿದ್ಧಾಂತ ಹೊಂದಿರುವವರೆಲ್ಲ ಒಟ್ಟಾಗಿ ಚುನಾವಣೆಗೆ ಹೋಗಬೇಕೆಂಬುದು ನಮ್ಮ ಉದ್ದೇಶ. ಇನ್ನೂ ಸಮಯವಿದೆ. ಜಾತ್ಯತೀತ ಸಿದ್ಧಾಂತದಲ್ಲಿ ನಂಬಿ ಇರುವ ಎಲ್ಲರೂ ಒಗ್ಗೂಡಿ ಹೋಗುವ ಬಗ್ಗೆ ಪ್ರಯತ್ನ ಮಾಡುತ್ತೇವೆ’ ಎಂದರು.

‘ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ರಾಜಕೀಯ ಶಕ್ತಿಗಳಿವೆ. ಅವುಗಳನ್ನು ನಾವು ಪರಿಗಣಿಸಬೇಕು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ರಾಹುಲ್ ಗಾಂಧಿ ಅಮೇಠಿಯಿಂದಲೇ ಸ್ಪರ್ಧಿಸುತ್ತಾರೆ’ ಎಂದು ಅವರು ಸ್ಪಷ್ಟಪಡಿಸಿದರು.

‘ಸಂಕ್ರಾಂತಿ ಬಳಿಕ ಕ್ರಾಂತಿ ಮಾಡುತ್ತೇವೆ’ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ಪ್ರತಿಕ್ರಿಯಿಸಿದ ಖರ್ಗೆ, ‘ಬಿಜೆಪಿಯವರು ಹಗಲುಗನಸು ಕಾಣುತ್ತಿದ್ದಾರೆ. 18 ಶಾಸಕರು ರಾಜೀನಾಮೆ ಕೊಟ್ಟು ಹೋಗುವುದು ಸಾಧ್ಯವಿದೆಯೇ. ಒಂದು ಪಕ್ಷದಲ್ಲೇ ಸಣ್ಣಪುಟ್ಟ ಸಮಸ್ಯೆಗಳಿರುತ್ತವೆ. ಮೈತ್ರಿ ಸರ್ಕಾರ ಅಂದ ಮೇಲೆ ಸಮಸ್ಯೆಗಳು ಇಲ್ಲದೆ ಇರುತ್ತವೆಯೇ. ಎಲ್ಲವನ್ನೂ ಚರ್ಚಿಸಿ, ಮುಂದುವರಿಯಬೇಕು’ ಎಂದರು.

‘ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ತಮ್ಮ ರಾಜ್ಯದಲ್ಲಿ ಕಾಂಗ್ರೆಸ್‌ ವಿರುದ್ಧ ಸ್ಪರ್ಧೆ ಮಾಡಿದ್ದಾರೆ. ಹೀಗಾಗಿ, ಅವರು ತಮ್ಮ ಶಕ್ತಿ ಪ್ರದರ್ಶನ ಮಾಡಲು ರಾಷ್ಟ್ರಮಟ್ಟದಲ್ಲಿ ಬೇರೆ ಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿದ್ದಾರೆ’ ಎಂದರು.

**

ರಾಜಕೀಯ ಅವಕಾಶವಾದಿತನ

ಸೋಲುವ ಭೀತಿಯಿಂದ ಎಸ್‌ಪಿ–ಬಿಎಸ್‌ಪಿ ಮೈತ್ರಿ ಮಾಡಿಕೊಂಡಿವೆ. ಅಕ್ಕಪಕ್ಕ ನಿಂತರೂ ಪರಸ್ಪರ ಮುಖ ನೋಡಿಕೊಳ್ಳಲು ಇಷ್ಟಪಡದವರು ಮೈತ್ರಿ ಮಾಡಿಕೊಂಡಿದ್ದಾರೆ. ಇದೊಂದು ರಾಜಕೀಯ ಅವಕಾಶವಾದಿತನದಿಂದ ಕೂಡಿದ ಹತಾಶ ಮತ್ತು ವಿಫಲ ಪ್ರಯೋಗ. ವಿರೋಧ ಪಕ್ಷಗಳು ‘ಮಜಬೂರ್‌ ಸರ್ಕಾರ’ (ದುರ್ಬಲ, ಅಸಹಾಯಕ) ಬಯಸುತ್ತಿವೆ. ‘ಮಜ್‌ಬೂತ್‌ ಸರ್ಕಾರ’ (ದೃಢ, ಸ್ಥಿರ) ನೀಡುವುದು ಬಿಜೆಪಿಯ ಉದ್ದೇಶ

– ನರೇಂದ್ರ ಮೋದಿ,ಪ್ರಧಾನಿ

*

ರಾಜಕೀಯ ರಾಸಾಯನ ವಿಜ್ಞಾನ

ಈ ಮೈತ್ರಿ ಲೋಕಸಭೆ ಚುನಾವಣಾ ಫಲಿತಾಂಶದ ಮೇಲೆ ಯಾವ ಪರಿಣಾಮವನ್ನೂ ಬೀರುವುದಿಲ್ಲ. ಚುನಾವಣೆ ಕೇವಲ ಅಂಕಿ–ಸಂಖ್ಯೆಗಳ ಗಣಿತವಲ್ಲ. ಹೊಂದಾಣಿಕೆಯ ರಾಸಾಯನ ವಿಜ್ಞಾನವಿದ್ದಂತೆ

– ರವಿಶಂಕರ್‌ ಪ್ರಸಾದ್‌,ಕೇಂದ್ರ ಸಚಿವ, ಬಿಜೆಪಿ ನಾಯಕ

*

ಅರಾಜಕತೆ, ಅಸ್ಥಿರತೆ ಭೀತಿ

ಈ ಮಹಾಮೈತ್ರಿಯು ಅರಾಜಕತೆ, ಭ್ರಷ್ಟಾಚಾರ, ರಾಜಕೀಯ ಅಸ್ಥಿರತೆ ತರಲಿದೆ. ಪರಸ್ಪರ ಒಬ್ಬರನ್ನು ಒಬ್ಬರು ದ್ವೇಷಿಸುವ ಎರಡು ಪಕ್ಷಗಳು ಮಹಾಮೈತ್ರಿಯ ಬಗ್ಗೆ ಮಾತನಾಡುತ್ತಿರುವುದು ಹಾಸ್ಯಾಸ್ಪದ. ಬಿಜೆಪಿಯ ‘ರಾಮ ಮತ್ತು ರೋಟಿ’ಯ ಮುಂದೆ ಮೈತ್ರಿ ಆಟ ನಡೆಯುವುದಿಲ್ಲ

–ಯೋಗಿ ಆದಿತ್ಯನಾಥ್,ಉತ್ತರ ಪ್ರದೇಶದ ಮುಖ್ಯಮಂತ್ರಿ

*

ಭ್ರಷ್ಟಾಚಾರ, ಗೂಂಡಾಗಿರಿ ಮೈತ್ರಿ

ಇದು ಭ್ರಷ್ಟಾಚಾರ ಮತ್ತು ಗೂಂಡಾಗಿರಿಯ ಮೈತ್ರಿ. ಜನರು ಮೋದಿ ಅವರ ಹಿಂದಿದ್ದಾರೆ. 2014ಕ್ಕಿಂತ ಬಿಜೆಪಿ ಈ ಬಾರಿ ಹೆಚ್ಚು ಸ್ಥಾನ ಗೆಲ್ಲಲಿದೆ

– ಕೇಶವ್‌ ಪ್ರಸಾದ್‌ ಮೌರ್ಯ,ಉತ್ತರ ಪ್ರದೇಶ ಉಪ ಮುಖ್ಯಮಂತ್ರಿ

*

ಮೈತ್ರಿ ಸ್ವಾಗತಾರ್ಹ

ಮುಂಬರುವ ಲೋಕಸಭಾ ಚುನಾವಣೆಗೆ ಎಸ್‌ಪಿ–ಬಿಎಸ್‌ಪಿ ಹೊಂದಾಣಿಕೆ ನಿಜಕ್ಕೂ ಆಶಾದಾಯಕ ರಾಜಕೀಯ ಬೆಳವಣಿಗೆ. ಮೈತ್ರಿ ಖುಷಿ ತಂದಿದ್ದು ಇದನ್ನು ಸ್ವಾಗತಿಸುತ್ತೇನೆ

– ಮಮತಾ ಬ್ಯಾನರ್ಜಿ,ಪಶ್ಚಿಮ ಬಂಗಾಳ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT