ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನ್ಯಾಸಿ ಶಾಪದಿಂದ ಸಚಿವರ ಬೆದರಿಕೆವರೆಗೆ...

ಮತ ಸಳೆಯಲು ಕಸರತ್ತು; ರಾಜಕೀಯ ನಾಯಕರ ವಾಗ್ಝರಿಗಿಲ್ಲ ಕಡಿವಾಣ
Last Updated 14 ಏಪ್ರಿಲ್ 2019, 1:14 IST
ಅಕ್ಷರ ಗಾತ್ರ

ನವದೆಹಲಿ: ‘ಮತ ನೀಡದಿದ್ದರೆ ಶಾಪ ಸುತ್ತಿಕೊಳ್ಳಲಿದೆ’ ಎಂಬ ಸನ್ಯಾಸಿಯ ಹೇಳಿಕೆ; ‘ಮುಸ್ಲಿಮರೇ, ನನಗೆ ಮತ ನೀಡದಿದ್ದರೆ ಚೆನ್ನಾಗಿರುವುದಿಲ್ಲ’ ಎಂಬ ಸಚಿವರ ಬೆದರಿಕೆಯಿಂದ ‘ವಯನಾಡ್‌ ಪಾಕಿಸ್ತಾನವೇ?’ ಎಂದು ಪ್ರಶ್ನಿಸುವಲ್ಲಿಯವರೆಗೆ ರಾಜಕೀಯ ನಾಯಕರ ವಾಗ್ಝರಿಗೆ ಈ ಬಾರಿಯ ಚುನಾವಣೆ ಸಾಕ್ಷಿಯಾಗಿದೆ.

ಲೋಕಸಭಾ ಚುನಾವಣೆಯ ಮೊದಲ ಹಂತ ಮುಕ್ತಾಯವಾಗಿದ್ದು, ಇನ್ನುಳಿದ ಆರು ಹಂತ ಮುಕ್ತಾಯವಾಗುವ ಹೊತ್ತಿಗೆ ಮಾತಿನ ಸಮರ ಮತ್ತೊಂದು ಮಜಲಿಗೆ ಹೊರಳಿಕೊಳ್ಳುವ ಸಾಧ್ಯತೆಯಿದೆ.

ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಅಮಿತ್ ಶಾ, ಬಿಎಸ್‌ಪಿ ನಾಯಕಿ ಮಾಯಾವತಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಸೇರಿದಂತೆ ಹಲವು ನಾಯಕರು ನೀಡಿದ ವಿವಾದಾತ್ಮಕ ಹೇಳಿಕೆಗಳಿಂದಾಗಿ ಚುನಾವಣಾ ಆಯೋಗಕ್ಕೆ ದೂರುಗಳು ಸುರಿಮಳೆಯಾಗುತ್ತಿದೆ.

ವಿವಾದಾತ್ಮಕ ಹೇಳಿಕೆಗಳಿಗೆ ಹೊಸ ಸೇರ್ಪಡೆ ಎಂದರೆ ಕೇಂದ್ರ ಸಚಿವರಾದ ಮೇನಕಾ ಗಾಂಧಿ ಮತ್ತು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್.

ಸಚಿವರ ಬೆದರಿಕೆ:‘ಈ ಬಾರಿ ನಾನು ಗೆಲ್ಲುವುದು ಖಚಿತ. ಮುಸ್ಲಿಮರು ನನಗೆ ಮತ ನೀಡದಿದ್ದರೆ ಸರಿಯಿರುವುದಿಲ್ಲ. ತಮ್ಮ ಕೆಲಸ ಮಾಡಿಸಿಕೊಳ್ಳಲು ಮುಸ್ಲಿಮರು ನನ್ನ ಬಳಿ ಬರುವಾಗ ಯೋಚಿಸಬೇಕಾಗುತ್ತದೆ’ ಎಂದು ಕೇಂದ್ರ ಸಚಿವೆ ಮೇನಕಾ ಗಾಂಧಿ ಹೇಳಿಕೆ ನೀಡಿದ್ದರು.

ಸಚಿವರು ಈ ರೀತಿ ಬೆದರಿಕೆ ಹಾಕಿದ್ದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಸನ್ಯಾಸಿಯ ಶಾಪ: ‘ಒಬ್ಬ ಸನ್ಯಾಸಿ ನಿಮ್ಮ ಮನೆ ಬಾಗಿಲಿಗೆ ಬಂದು ಮತ ನೀಡುವಂತೆ ಮನವಿ ಮಾಡುತ್ತಾನೆ. ಅವನ ಮಾತುಗಳನ್ನು ನೀವು ನಿರ್ಲಕ್ಷಿಸಿದರೆ, ಅವನು ಶಾಪ ನೀಡುತ್ತಾನೆ’ ಎಂದು ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್ ಅವರು ರ‍್ಯಾಲಿಯೊಂದರಲ್ಲಿ ಹೇಳಿದ್ದರು.

ಮೊದಲ ಮತ ಸೈನಿಕರಿಗೆ: ‘ಉಗ್ರರ ಶಿಬಿರ ನಾಶಪಡಿಸಿದ ಸೈನಿಕರ ಶೌರ್ಯಕ್ಕೆ ನಿಮ್ಮ ಮೊದಲ ಮತ ಮೀಸಲಾಗಿರಲಿ’ ಎಂದು ಮೋದಿ ಅವರು ಮೊದಲ ಬಾರಿಗೆ ಮತ ಚಲಾಯಿಸುವ ಯುವಜನತೆಗೆ ಕರೆ ನೀಡಿದ್ದರು. ಈ ಹೇಳಿಕೆಯೂ ವಿವಾದ ಸೃಷ್ಟಿಸಿತ್ತು. ಈ ಹೇಳಿಕೆಯನ್ನು ಪರಿಗಣಿಸಿದ್ದ ಚುನಾವಣಾ ಆಯೋಗ, ಪ್ರಚಾರದ ವೇಳೆ ಸೇನೆಯನ್ನು ಎಳೆದು ತರದಂತೆ ಸೂಚನೆ ನೀಡಿತ್ತು.

ಬಿರಿಯಾನಿ ಮತ್ತು ಬಜರಂಗಬಲಿ’:ಪ್ರತಿಪಕ್ಷ ಕಾಂಗ್ರೆಸ್ ಅನ್ನು ಟೀಕಿಸುವ ಭರದಲ್ಲಿ ಯೋಗಿ ಆದಿತ್ಯನಾಥ ವಿವಾದ ಸೃಷ್ಟಿಸಿದ್ದರು. ‘ಕಾಂಗ್ರೆಸ್ ಪಕ್ಷವು ಉಗ್ರರಿಗೆ ಬಿರಿಯಾನಿ ಪೂರೈಸಿದರೆ, ಮೋದಿ ಸೇನೆಯು ಉಗ್ರರಿಗೆ ಗುಂಡು, ಬಾಂಬ್‌ಗಳಿಂದ ಎದಿರೇಟು ನೀಡಿದೆ’ ಎಂದಿದ್ದರು. ಕಾಂಗ್ರೆಸ್ ಬದಲಾಗಿ ಮಹಾಘಟಬಂಧನದ ಪರವಾಗಿ ಮತ ಹಾಕುವಂತೆ ಮುಸ್ಲಿಮರಿಗೆ ಮಾಯಾವತಿ ಮಾಡಿದ್ದ ಮನವಿಗೂ ಟೀಕೆ ಮಾಡಿದ್ದ ಯೋಗಿ, ‘ನಿಮಗೆ ಅಲಿ ಇದ್ದರೆ, ನಮ್ಮ ಜೊತೆ ಬಜರಂಗ ಬಲಿ’ ಇದ್ದಾರೆ ಎಂದು ಹೇಳಿದ್ದರು.

ವಿವಾದಾತ್ಮಕ ಹೇಳಿಕೆಗಳಿಂದ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರೂ ಹೊರತಾಗಿಲ್ಲ.

‘ಪಾಕಿಸ್ತಾನ ಹಾಗೂ ಇಮ್ರಾನ್ ಖಾನ್ ಅವರು ಬಹಿರಂಗವಾಗಿ ಮೋದಿ ಅವರನ್ನು ಬೆಂಬಲಿಸುತ್ತಿರುವುದನ್ನು ಗಮನಿಸಿದರೆ, ಮೋದಿ ಜೊತೆ ಆ ದೇಶ ರಹಸ್ಯ ಒಪ್ಪಂದ ಮಾಡಿಕೊಂಡಿರುವುದು ಸ್ಪಷ್ಟವಾಗುತ್ತಿದೆ. ಚುನಾವಣೆ ಘೋಷಣೆಗೆ ಸ್ವಲ್ಪದಿನ ಮುನ್ನ ಪುಲ್ವಾಮಾದಲ್ಲಿ ನಮ್ಮ ವೀರ ಯೋಧರನ್ನು ಹತ್ಯೆ ಮಾಡುವ ಮೂಲಕ ಪಾಕಿಸ್ತಾನವು ಮೋದಿ ಅವರಿಗೆ ಸಹಾಯ ಮಾಡಿದೆಯೇ ಎಂದು ಎಲ್ಲರೂ ಕೇಳುತ್ತಿದ್ದಾರೆ’ ಎಂದು ಕೇಜ್ರಿವಾಲ್ ಹೇಳಿದ್ದರು.

ಮೊದಲ ಹಂತದ ಮತದಾನದ ವೇಳೆ ಮತದಾರರ ಪಟ್ಟಿಯಿಂದ ‘ಬಿಜೆಪಿ ವಿರೋಧಿಗಳ’ ಹೆಸರುಗಳು ಡಿಲೀಟ್ ಆಗಿರುವುದಕ್ಕೂಕೇಜ್ರಿವಾಲ್ ಟೀಕಾಪ್ರಹಾರ ನಡೆಸಿದ್ದರು.

ವಯನಾಡ್ ಎಲ್ಲಿದೆ?
ರಾಹುಲ್ ಗಾಂಧಿ ಅವರು ವಯನಾಡ್‌ನಲ್ಲಿ ನಾಮಪತ್ರ ಸಲ್ಲಿಕೆ ವೇಳೆ ಕಂಡುಬಂದ ಇಂಡಿಯನ್ ಮುಸ್ಲಿಂ ಲೀಗ್‌ನ ಹಸಿರು ಬಣ್ಣದ ಧ್ವಜ ಉಲ್ಲೇಖಿಸಿ ಬಿಜೆಪಿ ಅಧ್ಯಕ್ಷ ಅಮಿತ್ ಶಾ ನೀಡಿದ್ದ ಹೇಳಿಕೆಯೂ ವಿವಾದದ ಸ್ವರೂಪ ಪಡೆದಿತ್ತು. ‘ವಯನಾಡ್‌ ಪಾಕಿಸ್ತಾನದಲ್ಲಿದೆಯೇ’? ಎಂದು ಶಾ ಪ್ರಶ್ನಿಸಿದ್ದರು. ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ದೇಶದಾದ್ಯಂತ ವಿಸ್ತರಿಸುವ ಅವರ ಹೇಳಿಕೆ ಕೂಡಾ ಸಾಕಷ್ಟು ಟೀಕೆಗೆ ಕಾರಣವಾಗಿತ್ತು.

ರಫೇಲ್ ಒಪ್ಪಂದವನ್ನು ಗುರಿಯಾಗಿಸಿಕೊಂಡು ಮೋದಿ ಅವರನ್ನು ‘ಚೌಕೀದಾರ್ ಚೋರ್’ ಎಂದು ಕರೆದಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೂ ತಮ್ಮ ಹೇಳಿಕೆಯ ಬಿಸಿ ತಟ್ಟಿದೆ. ರಫೇಲ್‌ಗೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನು ಪರಿಗಣಿಸುವುದಾಗಿ ಸುಪ್ರೀಂಕೋರ್ಟ್ ಹೇಳಿತ್ತು. ಕೋರ್ಟ್ ಆದೇಶದಲ್ಲಿ ತಮ್ಮ ಹೇಳಿಕೆಯನ್ನುಉಲ್ಲೇಖಿಸಲಾಗಿದೆ ಎಂದು ಹೇಳಿದ್ದ ರಾಹುಲ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT