ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

CBSE: ಶಿಕ್ಷಕರ ಮನೆಗೆ 10,12ನೇ ತರಗತಿ ಉತ್ತರ ಪತ್ರಿಕೆಗಳು, ನಾಳೆಯಿಂದ ಮೌಲ್ಯಮಾಪನ

Last Updated 9 ಮೇ 2020, 13:57 IST
ಅಕ್ಷರ ಗಾತ್ರ

ನವದೆಹಲಿ: ಉತ್ತರ ಪತ್ರಿಕೆಗಳ ಮೌಲ್ಯಮಾಪಕ ಪ್ರಕ್ರಿಯೆ ಭಾನುವಾರದಿಂದ ಆರಂಭಿಸಲು ಸಿಬಿಎಸ್‌ಇ ಸಜ್ಜಾಗಿದೆ. ಈ ಬಗ್ಗೆ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ನೀಡಿದ್ದ ಪ್ರಸ್ತಾವನೆಗೆ ಗೃಹ ವ್ಯವಹಾರಗಳ ಸಚಿವಾಲಯ ಸಮ್ಮತಿ ನೀಡಿದೆ.

ನಿಗದಿತ 3,000 ಶಾಲೆಗಳಿಂದ ಉತ್ತರ ಪತ್ರಿಕೆಗಳನ್ನು ಮೌಲ್ಯಮಾಪಕರ ಮನೆಗಳಿಗೆ ತಲುಪಿಸಲಾಗುತ್ತದೆ. ಮನೆಯಲ್ಲಿಯೇ ಮೌಲ್ಯಮಾಪನ ನಡೆಸಲಿದ್ದು, 50 ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳ್ಳುವುದಾಗಿ ಅಂದಾಜಿಸಲಾಗಿದೆ.

10 ಮತ್ತು 12ನೇ ತರಗತಿಯ ಸಿಬಿಎಸ್‌ಇ ಪಠ್ಯಕ್ರಮದ ಹಲವು ಶಾಲೆಗಳಲ್ಲಿ ಪರೀಕ್ಷೆ ಪೂರ್ಣಗೊಂಡಿದೆ. 10ನೇ ತರಗತಿಯ ಸುಮಾರು 18 ಲಕ್ಷ ವಿದ್ಯಾರ್ಥಿಗಳು ಹಾಗೂ 12ನೇ ತರಗತಿಯ ಸುಮಾರು 12 ಲಕ್ಷ ವಿದ್ಯಾರ್ಥಿಗಳು ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ. ಕೋವಿಡ್‌–19 ಲಾಕ್‌ಡೌನ್‌ನಿಂದಾಗಿ ಮೌಲ್ಯಮಾಪನ ಪ್ರಕ್ರಿಯೆ ಅನುಮತಿ ಮುಂದೂಡಲಾಗಿದೆ.

3,000 ಶಾಲೆಗಳಲ್ಲಿ ಮೌಲ್ಯಮಾಪನ ನಡೆಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ.ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಅನುಮತಿ ನೀಡಿರುವುದಾಗಿ ತಿಳಿಸಿದ್ದಾರೆ. 173 ವಿಷಯಗಳ 1.5 ಕೋಟಿ ಉತ್ತರ ಪತ್ರಿಕೆಗಳ ಮೌಲ್ಯಮಾಪಕ ಶೀಘ್ರದಲ್ಲಿಯೇ ನಡೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

'3,000 ಶಾಲೆಗಳಿಂದ ಉತ್ತರ ಪತ್ರಿಕೆಗಳು ಮೌಲ್ಯಮಾಪಕರಿಗೆ ತಲುಪಲಿದೆ ಹಾಗೂ ನಾಳೆಯಿಂದ ಮೌಲ್ಯಮಾಪನ ಶುರುವಾಗಲಿದೆ. ಶಿಕ್ಷಕರು ಮನೆಯಿಂದ ಮೌಲ್ಯಮಾಪನ ನಡೆಸಲಿದ್ದು, 50 ದಿನಗಳಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಬಹುದಾಗಿದೆ. ಬಾಕಿ ಉಳಿದಿರುವ 29 ವಿಷಯಗಳ 10ನೇ ಮತ್ತು 12ನೇ ತರಗತಿ ಪರೀಕ್ಷೆಗಳನ್ನು ನಿಗದಿ ಪಡಿಸಿರುವ ದಿನಾಂಕದಂದು ನಡೆಸಲಾಗುತ್ತದೆ' ಎಂದಿದ್ದಾರೆ.

10ನೇ ಮತ್ತು 12ನೇ ತರಗತಿಯ ಬಾಕಿ ಉಳಿದಿರುವ ವಿಷಯಗಳಿಗೆ ಜುಲೈ 1ರಿಂದ 15ರವರೆಗೂ ಪರೀಕ್ಷೆ ನಡೆಸುವುದಾಗಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT