ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀಸಲು ಹೆಚ್ಚಿಸಲು ರಾಜ್ಯಗಳ ಪಡಿಪಾಟಲು

Last Updated 7 ಜನವರಿ 2019, 20:21 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ನೌಕರಿ, ಉನ್ನತ ಶಿಕ್ಷಣ ಮತ್ತು ಇತರ ಸೌಲಭ್ಯ ಪಡೆಯಲು ಕೇಂದ್ರ ಸರ್ಕಾರ ಶೇ 27 ಮೀಸಲಾತಿ ಕಲ್ಪಿಸಿದೆ. ಆಯಾ ರಾಜ್ಯಗಳು ತಮಗೆ ಅನುಕೂಲಕರ ಪ್ರಮಾಣದಲ್ಲಿ ಮೀಸಲಾತಿ ಪ್ರಮಾಣ ನಿಗದಿ ಮಾಡಿಕೊಳ್ಳಲು ಅವಕಾಶ ಇದೆ. ಅದು ಶೇ 50ಕ್ಕಿಂತ ಹೆಚ್ಚಿರಬಾರದು ಎಂಬ ನಿರ್ಬಂಧವನ್ನು 1992ರಲ್ಲಿ ಸುಪ್ರೀಂ ಕೋರ್ಟ್‌ ಹೇರಿದೆ.

ಆದರೆ, ಅದಕ್ಕೂ ಮೊದಲಿನಿಂದಲೂ ತಮಿಳು ನಾಡು ಮತ್ತು ಹರಿಯಾಣದಲ್ಲಿ ಮಾತ್ರ ಶೇ 50ಕ್ಕಿಂತ ಹೆಚ್ಚು ಮೀಸಲಾತಿ ನೀತಿ ಜಾರಿಯಲ್ಲಿತ್ತು.

ಕೆನೆಪದರ ತತ್ವ ಹಿಂತೆಗೆದುಕೊಂಡು ಶೇ 69 ಮೀಸಲಾತಿ ನೀಡುತ್ತಿರುವ ತಮಿಳುನಾಡು ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಅದೇ ರೀತಿ, ಮೀಸಲಾತಿಯನ್ನು ಶೇ 67ಕ್ಕೆ ಹೆಚ್ಚಿಸುವ ಹರಿಯಾಣ ಮತ್ತು ಶೇ 54ಕ್ಕೆ ಹೆಚ್ಚಿಸುವ ರಾಜಸ್ಥಾನ ಸರ್ಕಾರಗಳ ಯತ್ನಗಳಿಗೆ ನ್ಯಾಯಾಲಯ ತಡೆಯಾಜ್ಞೆ ನೀಡಿದೆ. ಮತ್ತೊಂದೆಡೆ ಶೇ 50ಕ್ಕಿಂತ ಹೆಚ್ಚು ಮೀಸಲಾತಿ ನೀಡುವ ಆಂಧ್ರ ಪ್ರದೇಶ ಮತ್ತು ತೆಲಂಗಾಣದ ನಿರ್ಧಾರಗಳಿಗೂ ತಡೆ ಬಿದ್ದಿದೆ.

ಮುಸ್ಲಿಮರ ಶೇ 4ರಷ್ಟು ಮೀಸಲನ್ನು ಶೇ 12ಕ್ಕೆ ಹೆಚ್ಚಿಸುವ ತೆಲಂಗಾ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್‌, ಸಂವಿಧಾನ ಪೀಠಕ್ಕೆ ಒಪ್ಪಿಸಿದೆ. ಒಂದು ವೇಳೆ ಮುಸ್ಲಿಮರ ಮೀಸಲು ಪ್ರಮಾಣವನ್ನು ಶೇ 12ಕ್ಕೆ ಹೆಚ್ಚಿಸಿದರೆ ತೆಲಂಗಾಣದಲ್ಲಿ ಒಟ್ಟು ಮೀಸಲಾತಿ ಶೇ 62ಕ್ಕೆ ಏರಲಿದೆ.

ಚುನಾವಣಾ ಗಿಮಿಕ್‌: ಕಾಂಗ್ರೆಸ್‌
ಸಾಮಾನ್ಯ ವರ್ಗದ ಆರ್ಥಿಕವಾಗಿ ಹಿಂದುಳಿದವರಿಗೆ ಶೇ 10ರಷ್ಟು ಮೀಸಲು ನೀಡುವ ಕೇಂದ್ರ ಸರ್ಕಾರದ ನಿರ್ಧಾರ ‘ಚುನಾವಣಾ ಗಿಮಿಕ್‌’ ಎಂದು ಕಾಂಗ್ರೆಸ್‌ ಆರೋಪಿಸಿದೆ.

ನಾಲ್ಕು ವರ್ಷ ಎಂಟು ತಿಂಗಳಲ್ಲಿ ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಯಾವ ಯೋಚನೆಯೂ ಇರಲಿಲ್ಲ. ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಾಗುವುದಕ್ಕೆ ಕೆಲವೇ ತಿಂಗಳು ಮೊದಲು ಮೀಸಲಾತಿ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಸಂವಿಧಾನ ತಿದ್ದುಪಡಿ ಮಾಡುವುದಕ್ಕೆ ಬೇಕಾದ ಸಂಖ್ಯಾ ಬಲವನ್ನು ಸಂಸತ್ತಿನಲ್ಲಿ ಸರ್ಕಾರ ಹೊಂದಿದೆಯೇ ಎಂದು ಕಾಂಗ್ರೆಸ್‌ ವಕ್ತಾರ ಅಭಿಷೇಕ್‌ ಮನು ಸಿಂಘ್ವಿ ಪ್ರಶ್ನಿಸಿದ್ದಾರೆ.

ಮೀಸಲಾತಿ ಪ್ರಮಾಣವು ಶೇ 50ರಷ್ಟನ್ನು ಮೀರಬಾರದು ಎಂಬುದು ಎಲ್ಲರಿಗೂ ಗೊತ್ತಿದೆ. ಹಾಗಿದ್ದರೂ ಸಾಮಾನ್ಯ ವರ್ಗಕ್ಕೆ ಶೇ 10ರಷ್ಟು ಮೀಸಲು ನೀಡುವ ನಿರ್ಧಾರ ಕೈಗೊಳ್ಳಲಾಗಿದೆ. ಅದು ಅಂಗೀಕಾರ ಆಗದು ಎಂಬುದು ಸರ್ಕಾರಕ್ಕೆ ಗೊತ್ತಿದೆ. ಮೀಸಲಾತಿ ನೀಡಲು ಪ್ರಯತ್ನ ಮಾಡಲಾಗಿದೆ ಎಂದು ಚುನಾವಣೆಗೆ ಮೊದಲು ತೋರಿಸಿಕೊಳ್ಳುವುದು ಸರ್ಕಾರದ ಉದ್ದೇಶ ಎಂದು ಅವರು ಹೇಳಿದ್ದಾರೆ.

ಮಹಾರಾಷ್ಟ್ರದ ಐತಿಹಾಸಿಕ ನಿರ್ಧಾರ
ತಮಿಳುನಾಡು ಮಾದರಿಯಲ್ಲಿಯೇ ಮಹಾರಾಷ್ಟ್ರ ಸರ್ಕಾರ ಮರಾಠರಿಗೆ ಸರ್ಕಾರಿ ನೌಕರಿ ಮತ್ತು ಶಿಕ್ಷಣದಲ್ಲಿ ಶೇ 16ರಷ್ಟು ಮೀಸಲಾತಿ ಕಲ್ಪಿಸುವ ಮಸೂದೆಗೆ ನವೆಂಬರ್‌ನಲ್ಲಿ ಅಂಗೀಕಾರ ನೀಡಿದೆ. ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಮೀಸಲಾತಿ ಪ್ರಮಾಣ ಶೇ 52ರಿಂದ ಶೇ 68ಕ್ಕೆ ಏರಿದೆ.

ತಮಿಳುನಾಡು ಮತ್ತು ಹರಿಯಾಣದ ನಂತರ ದೇಶದಲ್ಲಿಯೇ ಹೆಚ್ಚು ಮೀಸಲಾತಿ ನೀಡಿದ ಶ್ರೇಯ ಮಹಾರಾಷ್ಟ್ರಕ್ಕೆ ಸಲ್ಲುತ್ತದೆ. ತಮಿಳುನಾಡು ಶೇ 69ರಷ್ಟು ಮೀಸಲಾತಿ ನೀಡಿದೆ.

ಮರಾಠಿಗರಿಗೆ ಶೇ 16ರಷ್ಟು ಮೀಸಲಾತಿ ಕಲ್ಪಿಸಲು ಮೊದಲ ಬಾರಿಗೆ ಕಾಂಗ್ರೆಸ್‌–ಎನ್‌ಸಿಪಿ ಸರ್ಕಾರ 2014ರಲ್ಲಿ ಸುಗ್ರೀವಾಜ್ಞೆ ಹೊರಡಿಸಿತ್ತು. ಆದರೆ, ಬಾಂಬೆ ಹೈಕೋರ್ಟ್ ಇದಕ್ಕೆ ತಡೆಯೊಡ್ಡಿತ್ತು.

2015ರಲ್ಲಿ ಬಿಜೆಪಿ–ಶಿವಸೇನಾ ನೇತೃತ್ವದ ಸರ್ಕಾರ ಮರಾಠರಿಗೆ ಮೀಸಲಾತಿ ಕಲ್ಪಿಸುವ ಸಂಬಂಧ ಕಾನೂನು ರೂಪಿಸಿತು. ಬಾಂಬೆ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿಯಿತು.

ಮೀಸಲಾತಿಗೆ ಒತ್ತಾಯಿಸಿ ಮರಾಠ ಸಮುದಾಯ ರಾಜ್ಯದ ಹಲವೆಡೆ 58 ಬಾರಿ ಪ್ರತಿಭಟನೆ, ಧರಣಿ, ಮೋರ್ಚಾಗಳನ್ನು ನಡೆಸಿತ್ತು. ಮರಾಠರಿಗೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳು ಎಂಬ ಹೆಸರಿನಲ್ಲಿ ಮೀಸಲಾತಿ ಕಲ್ಪಿಸುವಂತೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಶಿಫಾರಸು ಮಾಡಿತ್ತು. ಅದನ್ನು ರಾಜ್ಯ ಸರ್ಕಾರ ಅಂಗೀಕರಿಸಿತ್ತು. ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಿಗೆ ಮಾತ್ರ ಈ ಮೀಸಲಾತಿ ಅನ್ವಯಿಸಲಿದೆ. ರಾಜಕೀಯ ಪ್ರಾತಿನಿಧ್ಯ ಪಡೆಯಲು ಅವಕಾಶ ನೀಡಿಲ್ಲ.

ತಮಿಳುನಾಡು ಭಿನ್ನ ನೀತಿ
ತಮಿಳುನಾಡಿನ ಮೀಸಲಾತಿ ನೀತಿಯನ್ನು ಸಂವಿಧಾನದ 9ನೇ ಪರಿಚ್ಛೇದದಲ್ಲಿ ಸೇರಿಸಲು ಕೇಂದ್ರ ಸರ್ಕಾರ ಸಮ್ಮತಿಸಿದ್ದರಿಂದ ಸದ್ಯ ಯಾವ ರಾಜ್ಯದಲ್ಲೂ ಇಲ್ಲದ ಮೀಸಲಾತಿ ಕಾನೂನು ಈ ರಾಜ್ಯದಲ್ಲಿದೆ.

1980ರಿಂದಲೇ ತಮಿಳುನಾಡಿನಲ್ಲಿ ಶೇ 69ರಷ್ಟು ಮೀಸಲಾತಿ ಇದೆ.ಹಿಂದುಳಿದ ಮತ್ತು ಅತಿ ಹಿಂದುಳಿದ ವರ್ಗಗಳಿಗೆ ಶೇ 50ರಷ್ಟು ಮತ್ತು ಪರಿಶಿಷ್ಟ ಜಾತಿಗೆ ಶೇ 18ರಷ್ಟು ಮತ್ತು ಪರಿಶಿಷ್ಟ ಪಂಗಡಕ್ಕೆ ಶೇ 1ರಷ್ಟು ಮೀಸಲಾತಿ ನೀಡಲಾಗಿದೆ.

ಫಲ ನೀಡದ ಪಟೇಲ್‌ ಹೋರಾಟ
ಗುಜರಾತ್‌ನಲ್ಲಿ ಪಟೇಲ್‌ ಸಮುದಾಯ ಮೀಸಲಾತಿಗೆ ಒತ್ತಾಯಿಸಿ ನಡೆಸುತ್ತಿರುವ ಪ್ರತಿಭಟನೆ ಯಾವುದೇ ಫಲ ನೀಡಲಿಲ್ಲ.ರಾಜಸ್ಥಾನದಲ್ಲಿ ಒಬಿಸಿ ಕಾಯ್ದೆಗೆ ತಿದ್ದುಪಡಿ ತರುವ ಮೂಲಕ 2017ರಲ್ಲಿ ಜಾಟ್‌ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಿದ ಕಾರಣ ಒಟ್ಟು ಮೀಸಲಾತಿ ಪ್ರಮಾಣ ಶೇ 50ರ ಗಡಿಯನ್ನು ಮೀರಿದೆ.

ಈಶಾನ್ಯ ರಾಜ್ಯಗಳ ಪೈಕಿ ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್‌ ಮತ್ತು ಅರುಣಾಚಲ ಪ್ರದೇಶದಲ್ಲಿ ರಾಜ್ಯ ಸರ್ಕಾರಿ ನೌಕರಿಯಲ್ಲಿ ಪರಿಶಿಷ್ಟ ವರ್ಗಕ್ಕೆ ಶೇ 80ರಷ್ಟು ಮೀಸಲಾತಿ ನೀಡಲಾಗಿದೆ. ಈ ರಾಜ್ಯಗಳಲ್ಲಿರುವ ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಶೇ 60ರಷ್ಟು ಸೀಟು ಮೀಸಲು ಇಡಲಾಗಿದೆ.

ರಾಜಕೀಯ ಲೆಕ್ಕಾಚಾರ
ಸಂವಿಧಾನ ತಿದ್ದುಪಡಿಗೆ ಸಂಸತ್ತಿನ ಎರಡೂ ಸದನಗಳಲ್ಲಿ ಮೂರನೇ ಎರಡಷ್ಟು ಬೆಂಬಲ ಬೇಕು. ರಾಜ್ಯಸಭೆಯಲ್ಲಿ ಮಸೂದೆ ಅಂಗೀಕಾರ ಆಗಬೇಕಾದರೆ ವಿರೋಧ ಪಕ್ಷಗಳ ಬೆಂಬಲ ಬೇಕೇ ಬೇಕು. ವಿರೋಧ ಪಕ್ಷಗಳು ಮಸೂದೆಯ ವಿರುದ್ಧ ಮತ ಹಾಕಿದರೆ ಪ್ರಭಾವಿ ಸಾಮಾನ್ಯ ವರ್ಗದ ಬೆಂಬಲವನ್ನು ಈ ಪಕ್ಷಗಳು ಕಳೆದುಕೊಳ್ಳಬಹುದು ಎಂಬುದು ಆಡಳಿತಾರೂಢ ಬಿಜೆಪಿಯ ಲೆಕ್ಕಾಚಾರ.

ಏಪ್ರಿಲ್‌–ಮೇ ತಿಂಗಳಲ್ಲಿ ಲೋಕಸಭೆಗೆ ಚುನಾವಣೆ ನಡೆಯಲಿದೆ. ಈ ಮಸೂದೆಯನ್ನು ಮುಂದಿಟ್ಟುಕೊಂಡು ಸಾಮಾನ್ಯ ವರ್ಗದ ಬೆಂಬಲ ಕ್ರೋಡೀಕರಣ ಬಿಜೆಪಿಯ ಉದ್ದೇಶ. ಹಿಂದುಳಿದ ವರ್ಗಗಳು ಮತ್ತು ದಲಿತರ ಪರವಾದ ಹಲವು ಕ್ರಮಗಳನ್ನು ಕೇಂದ್ರ ಸರ್ಕಾರ ಕೈಗೊಂಡ ಕಾರಣ ಸಾಮಾನ್ಯ ವರ್ಗ ಬಿಜೆಪಿಯಿಂದ ದೂರ ಸರಿಯುತ್ತಿದೆ. ಈ ವರ್ಗವನ್ನು ಹಿಡಿದಿಟ್ಟುಕೊಳ್ಳಲು ಮೀಸಲು ಪ್ರಸ್ತಾವ ನೆರವಾಗಬಹುದು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ.

ಧರ್ಮ ಆಧರಿತ ಮೀಸಲಾತಿ
* ತಮಿಳುನಾಡಿನಲ್ಲಿ ಮುಸ್ಲಿಂ ಮತ್ತು ಕ್ರೈಸ್ತರಿಗೆ ಶೇ 3.5ರಷ್ಟು ಮೀಸಲಾತಿ ನೀಡಲಾಗಿದೆ. ಇತರ ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಶೇ 30 ರಿಂದ ಶೇ 23ಕ್ಕೆ ಇಳಿಸಲಾಗಿದೆ.
* ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ಮುಸ್ಲಿಮರಿಗೆ ಶೇ 4ರಷ್ಟು ಮೀಸಲಾತಿ ನೀಡಿವೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿದೆ.
*ಕೇರಳ ಲೋಕಸೇವಾ ಆಯೋಗ ಮುಸ್ಲಿಮರಿಗೆ ಶೇ 12ರಷ್ಟು ಮೀಸಲಾತಿ ನೀಡುತ್ತಿದೆ.
* ಧಾರ್ಮಿಕ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ತಮ್ಮ ಧರ್ಮದವರಿಗೆ ಶೇ 50ರಷ್ಟು ಮೀಸಲಾತಿ ನೀಡಲು ಅವಕಾಶವಿದೆ.

***
ಸಂವಿಧಾನದ ಮೂಲ ವಿನ್ಯಾಸಕ್ಕೇ ಪೆಟ್ಟು
ಮೀಸಲಾತಿಯನ್ನು ಸಾಮಾಜಿಕ ಸ್ಥಿತಿಗತಿ ಆಧಾರದ ಮೇಲೆ ನಿರ್ಧರಿಸಬೇಕೇ ಹೊರತು ಆರ್ಥಿಕ ಸ್ಥಿತಿಗತಿ ಒಂದನ್ನೇ ನೋಡುವುದಲ್ಲ ಎನ್ನುವುದು ಸುಪ್ರೀಂ ಕೋರ್ಟ್‌ನ ಸ್ಪಷ್ಟ ನಿರ್ದೇಶನ. ಈ ಆಶಯಕ್ಕೆ ವಿರುದ್ಧವಾದ ಹೆಜ್ಜೆ ಇಟ್ಟಿರುವುದು ಸಂವಿಧಾನಬಾಹಿರ. 15 ಮತ್ತು 16ನೇ ವಿಧಿಗೆ ತಿದ್ದುಪಡಿ ಮಾಡಿದರೆ ಸಂವಿಧಾನದ ಮೂಲ ವಿನ್ಯಾಸಕ್ಕೇ ಪೆಟ್ಟು ನೀಡಿದಂತೆ. ಇಂತಹ ಯತ್ನಗಳು ಊರ್ಜಿತವಾಗುವುದಿಲ್ಲ.
–ಎಚ್‌.ಕಾಂತರಾಜು,ಅಧ್ಯಕ್ಷ, ಹಿಂದುಳಿದ ವರ್ಗಗಳ ಶಾಶ್ವತ ಆಯೋಗ

*
‘ಮೇಲ್ಜಾತಿಯ ಬಡ ಮಕ್ಕಳಿಗೆ ಅನುಕೂಲವಾಗಲಿದೆ’
ಮೇಲ್ಜಾತಿಗಳ ಬಡಮಕ್ಕಳು ಪ್ರತಿಭೆ ಇದ್ದರೂ ತುಂಬಾ ಅನ್ಯಾಯಕ್ಕೆ ಒಳಗಾಗುತ್ತಿದ್ದರು. ಕೇಂದ್ರದ ಈ ನಿರ್ಧಾರದಿಂದ ಇಂತಹವರಿಗೆ ಪ್ರಯೋಜನವಾಗಲಿದೆ. ಈ ನಿರ್ಧಾರ ಸ್ವಾಗತಾರ್ಹ
–ಆರ್‌.ಪಿ.ರವಿಶಂಕರ, ಅಧ್ಯಕ್ಷ, ಕರ್ನಾಟಕ ಆರ್ಯವೈಶ್ಯ ಮಹಾಸಭಾ

*
ಯುವಕರಿಗೆ ಐತಿಹಾಸಿಕ ಕೊಡುಗೆ
ಶೇ 10ರಷ್ಟು ಮೀಸಲಾತಿಯು ಬಡ ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ ಐತಿಹಾಸಿಕ ಕೊಡುಗೆ. ಇದರಿಂದ ಮೇಲ್ವರ್ಗದ ಬಡವರು ಮತ್ತು ಜಾತಿ, ಧರ್ಮ ಆಧಾರಿತ ಮೀಸಲಾತಿ ವಂಚಿತರಾದವರಿಗೆ ಆಶಾವಾದಿಗಳಾಗಿ ಬದುಕಲು ದಾರಿಯಾಗಿದೆ.
–ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ

*
ಮೀಸಲಾತಿ ಸ್ಪಷ್ಟತೆ ಇಲ್ಲ
ಸಚಿವ ಸಂಪುಟದ ಟಿಪ್ಪಣಿಯನ್ನು ನೋಡಿಲ್ಲ. ಯಾವ ರೀತಿಯಲ್ಲಿ ಮೀಸಲಾತಿ ಕೊಡುತ್ತಾರೆ ಎಂಬುದು ಗೊತ್ತಿಲ್ಲ. ಈಗಾಗಲೇ ಜಾತಿ ಆಧಾರಿತವಾಗಿ ಶೇ 50ರಷ್ಟು ಮೀಸಲಾತಿ ನೀಡಲಾಗುತ್ತಿದೆ. ಶೇ 10ರಷ್ಟು ಮೀಸಲಾತಿ ಅದರಲ್ಲೇ ಕೊಡುತ್ತಾರಾ ಅಥವಾ ಮೀಸಲಾತಿ ಪ್ರಮಾಣವನ್ನು ಶೇ 60ಕ್ಕೆ ಹೆಚ್ಚಿಸುತ್ತಾರಾ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ.
–ಪ್ರಿಯಾಂಕ್ ಖರ್ಗೆ, ಸಮಾಜ ಕಲ್ಯಾಣ ಸಚಿವ

*
ಮುಂದುವರಿದ ಸಮುದಾಯದ ಹಿಂದುಳಿದವರಿಗೆ ಅನುಕೂಲ
ಕೇಂದ್ರ ಸರ್ಕಾರದ ತೀರ್ಮಾನ ಸ್ವಾಗತಾರ್ಹ. ಎಲ್ಲರನ್ನೂ ಸಮಾನವಾಗಿ ಕಾಣಬೇಕು ಹಾಗೂ ಹಿಂದುಳಿದ ವರ್ಗದವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂಬುದು ಸಂವಿಧಾನದ ಆಶಯ. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸರ್ಕಾರ ಈಗಾಗಲೇ ನೆರವು ನೀಡಿದೆ. ಅದರ ಜತೆಗೆ, ಮುಂದುವರಿದ ಸಮುದಾಯದ ಆರ್ಥಿಕ ಹಿಂದುಳಿದವರಿಗೆ ನೆರವಾಗಬೇಕು ಎಂಬುದು ನಮ್ಮ ಒತ್ತಾಸೆಯಾಗಿತ್ತು. ಕೇಂದ್ರ ಸರ್ಕಾರದ ನಿರ್ಧಾರದಿಂದ ಈ ಜನರಿಗೆ ಸ್ವಲ್ಪ ಮಟ್ಟಿಗೆ ಆರ್ಥಿಕ ಸಹಾಯ ಸಿಕ್ಕಂತೆ ಆಗುತ್ತದೆ.
–ಕೆ.ಎನ್.ವೆಂಕಟನಾರಾಯಣ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ

*
ಮೇಲ್ಜಾತಿ ಮತ ಭದ್ರಪಡಿಸಿಕೊಳ್ಳುವ ಯತ್ನ
ವರ್ಚಸ್ಸು ಕುಸಿಯುತ್ತಿರುವುದುಇತ್ತೀಚಿನ ಚುನಾವಣೆಗಳಿಂದ ಬಿಜೆಪಿಗೆ ಮನವರಿಕೆಯಾಗಿದೆ. ಮೇಲ್ಜಾತಿ ಮತಗಳನ್ನು ಭದ್ರಪಡಿಸಿಕೊಳ್ಳಲು ಮೀಸಲಾತಿಗೆ ಮುಂದಾಗಿದೆ.
–ಮಾವಳ್ಳಿ ಶಂಕರ್‌, ರಾಜ್ಯ ಸಂಚಾಲಕ, ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್‌ವಾದ)

*
ಘೋರ ಅಪರಾಧ
ಬಹುಸಮುದಾಯಗಳಿಗೆ ಅನುಕೂಲವಾಗುವ ಉದ್ದೇಶಗಳಿಗೆ ಮಾತ್ರ ಸಂವಿಧಾನ ತಿದ್ದಲಿ.ಮೇಲ್ಜಾತಿಯವರು ಸಾಮಾಜಿಕ ಸ್ಥಾನಮಾನದೊಂದಿಗೆ ಸುಸ್ಥಿತಿಯಲ್ಲಿದ್ದಾರೆ. ಅವರಿಗೆ ಮೀಸಲಾತಿ ನೀಡುವುದು ಘೋರ ಅಪರಾಧ.
–ಲಕ್ಷ್ಮಿನಾರಾಯಣ ನಾಗವಾರ, ರಾಜ್ಯ ಸಂಚಾಲಕ, ರಾಜ್ಯ ದಲಿತ ಸಂಘರ್ಷ ಸಮಿತಿ

*
ಸಮಾನತೆಯ ಆಶಯಕ್ಕೆ ವಿರುದ್ಧ
ಈ ಹಿಂದೆ ಪ್ರಧಾನಿ ಪಿ.ವಿ.ನರಸಿಂಹರಾವ್‌ ಸರ್ಕಾರ ಜಾರಿಗೆ ತಂದಿದ್ದ ಇಂತಹುದೇ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು. ಆಗ ಒಂಬತ್ತು ಜನರ ಸಾಂವಿಧಾನಿಕ ನ್ಯಾಯಪೀಠ ಇದನ್ನು ಅನೂರ್ಜಿತಗೊಳಿಸಿತ್ತು. ಈಗ ಮತ್ತೆ ಅಂತಹ ಆದೇಶ ಜಾರಿಗೆ ಕೇಂದ್ರ ಸರ್ಕಾರ ಮುಂದಾಗಿದೆ. ಇದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಇದು ಸಮಾನತೆಯ ಆಶಯ ಹಾಗೂ ನ್ಯಾಯಕ್ಕೆ ವಿರುದ್ಧವಾಗಿದೆ.
–ಪ್ರೊ.ರವಿವರ್ಮ ಕುಮಾರ್,ಹೈಕೋರ್ಟ್‌ನ ಹಿರಿಯ ವಕೀಲ

*
ಕಣ್ಣಿಗೆ ಮಣ್ಣೆರಚಿ ಅಧಿಕಾರಕ್ಕೇರಲು ಪ್ರಯತ್ನ
2014ರ ಚುನಾವಣೆ ವೇಳೆ ವರ್ಷಕ್ಕೆ ಒಂದು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದ್ದರು. ಆದರೆ, ಅವರು ಮಾಡಿಕೊಂಡ ಹಲವು ಅನಾಹುತಗಳಿಂದ ಒಂದು ಕೋಟಿ ಉದ್ಯೋಗಗಳೇ ಕಡಿಮೆಯಾದವು. ಯಥಾಸ್ಥಿತಿ ಕೂಡ ಮುಂದುವರಿಯಲಿಲ್ಲ. ಈಗ ಮತ್ತೊಂದು ಚುನಾವಣೆ ಬರುತ್ತಿದೆ ಎಂಬ ಕಾರಣಕ್ಕೆ ಮತ್ತೊಂದು ಭರವಸೆ ನೀಡುತ್ತಿದ್ದಾರೆ.

ಕಣ್ಣಿಗೆ ಮಣ್ಣೆರಚಿ ಮತ್ತೆ ಅಧಿಕಾರಕ್ಕೆ ಬರುವ ಪ್ರಯತ್ನವಿದು. ಎಲ್ಲರಿಗೂ ಉದ್ಯೋಗ ಇರಬೇಕು. ಉದ್ಯೋಗ ನೀಡದಿದ್ದರೆ ನಿರುದ್ಯೋಗ ಭತ್ಯೆಯನ್ನಾದರೂ ನೀಡಬೇಕು. ಇದು ಸರ್ಕಾರಗಳ ಕರ್ತವ್ಯ.

ಈ ಸರ್ಕಾರಕ್ಕೆ ಉದ್ಯೋಗ ನೀಡುವ ಬದ್ಧತೆ, ಹಿತಾಸಕ್ತಿಯೇ ಇಲ್ಲ. ಬದಲಾಗಿ ಎಲ್ಲವನ್ನೂ ಖಾಸಗಿಯವರಿಗೆ ಒಪ್ಪಿಸಿ ಅವರಿಗೆ ಪ್ರಧಾನಮಂತ್ರಿ ಕಾವಲುಗಾರರಾಗಿದ್ದಾರೆ. ಎಲ್ಲರಿಗೂ ಉದ್ಯೋಗ, ಎಲ್ಲರಿಗೂ ಶಿಕ್ಷಣ ನೀಡುವ ಬದಲು ಖಾಸಗೀಕರಣದತ್ತ ವಾಲಿದ್ದಾರೆ. ಉಳ್ಳವರ ಸಂಪತ್ತು ಕಾಯ್ದುಕೊಂಡಿರುವ ಹಾವಿನ ರೀತಿ ಕೆಲಸ ಮಾಡುತ್ತಿದ್ದಾರೆ. ಉದ್ಯೋಗ ಹೆಚ್ಚಿಸದೆ ಈ ರೀತಿ ಆಶ್ವಾಸನೆ ನೀಡುವುದು ನಿರುದ್ಯೋಗದ ಗಾಯದ ಮೇಲೆ ಬರೆ ಹಾಕಿದಂತೆ.
–ದೇವನೂರ ಮಹಾದೇವ, ಸಾಹಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT