ಶನಿವಾರ, ಜುಲೈ 24, 2021
27 °C

ಕೋವಿಡ್‌–19 ಭೀತಿ | ಸಿಲೆಬಸ್‌, ಶಾಲೆ ಅವಧಿಗೆ ಕತ್ತರಿ ಸಾಧ್ಯತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಕೋವಿಡ್‌ ಪಿಡುಗು ಏರುತ್ತಲೇ ಇರುವುದರಿಂದಾಗಿ 2020–21ನೇ ವರ್ಷದ ಪಠ್ಯಕ್ರಮ (ಸಿಲೆಬಸ್‌) ಮತ್ತು ತರಗತಿ ಅವಧಿಯನ್ನು ಕಡಿಮೆ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತಿಸುತ್ತಿದೆ. 

ಪಿಡುಗಿನ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕಲಿಯಲು ಸಾಧ್ಯವಾಗುವ ರೀತಿಯಲ್ಲಿ ಪಠ್ಯಕ್ರಮವನ್ನು ಕಡಿಮೆ ಮಾಡಬೇಕು ಎಂದು ಹೆತ್ತವರು ಮತ್ತು ಶಿಕ್ಷಕರು ತಮ್ಮನ್ನು ಕೋರಿದ್ದಾರೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ (ಎಚ್‌ಆರ್‌ಡಿ) ರಮೇಶ್‌ ನಿಶಾಂಕ್ ಪೋಖ್ರಿಯಾಲ್‌ ಹೇಳಿದ್ದಾರೆ. 

‘ಶಿಕ್ಷಕರು, ಶಿಕ್ಷಣ ತಜ್ಞರು ಮತ್ತು ವಿದ್ವಾಂಸರು ಈ ವಿಚಾರದಲ್ಲಿ ತಮ್ಮ ನಿಲುವುಗಳನ್ನು ತಿಳಿಸಬೇಕು. ಸಚಿವಾಲಯ ಅಥವಾ ನನ್ನ  ಟ್ವಿಟರ್‌ ಅಥವಾ ಫೇಸ್‌ಬುಕ್‌ ಖಾತೆಗೆ ಈ ಹ್ಯಾಷ್‌ಟ್ಯಾಗ್ (#SyllabusForStudents2020)‌ ಬಳಸಿ ಅಭಿಪ್ರಾಯ ತಿಳಿಸಿ. ಎಲ್ಲರ ಅಭಿಮತವನ್ನು ಗಣನೆಗೆ ತೆಗೆದುಕೊಂಡು ನಿರ್ಧಾರಕ್ಕೆ ಬರಬಹುದು’ ಎಂದು ಪೋಖ್ರಿಯಾಲ್‌ ಹೇಳಿದ್ದಾರೆ. 

ಕೋವಿಡ್‌ ಪಿಡುಗಿನಿಂದಾಗಿ ಮಾರ್ಚ್‌ನಲ್ಲಿಯೇ ಶಾಲಾ ಕಾಲೇಜುಗಳನ್ನು ಮುಚ್ಚಲಾಗಿದೆ. ಇವುಗಳನ್ನು ತೆರೆಯುವ ಬಗ್ಗೆ ರಾಜ್ಯಗಳು ಮತ್ತು ಸಂಬಂಧಪಟ್ಟ ಇತರರ ಜತೆಗೆ ಸಚಿವಾಲಯವು ಸೋಮವಾರದಿಂದಲೇ ಸಮಾಲೋಚನೆ ಆರಂಭಿಸಿದೆ. 

ಶಾಲಾ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಅನಿತಾ ಕರ್ವಾಲ್‌ ಅವರು ರಾಜ್ಯಗಳ ಶಿಕ್ಷಣ ಕಾರ್ಯದರ್ಶಿಗಳ ಜತೆಗೆ ಸಭೆ ನಡೆಸಿದ್ದಾರೆ. ವಿದ್ಯಾರ್ಥಿಗಳ ಸುರಕ್ಷೆ, ಶಾಲೆಯಲ್ಲಿ ನೈರ್ಮಲ್ಯ, ಆನ್‌ಲೈನ್‌ ಮತ್ತು ಡಿಜಿಟಲ್‌ ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳು ಈ ಸಭೆಯಲ್ಲಿ ಚರ್ಚೆಗೆ ಬಂದಿವೆ.

ರಾಜ್ಯಗಳ ಅಭಿ‍‍ಪ್ರಾಯಗಳನ್ನು ಪರಿಶೀಲಿಸಿ, ಬಳಿಕ ಅವುಗಳನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಗೃಹ ಸಚಿವಾಲಯಕ್ಕೆ ಕಳುಹಿಸಲಾಗುವುದು. ಈ ಸಚಿವಾಲಯಗಳ ಸಲಹೆಯನ್ನು ಆಧರಿಸಿ, ಶಿಕ್ಷಣ ಸಂಸ್ಥೆಗಳ ಪುನರಾರಂಭಕ್ಕೆ ಸಂಬಂಧಿಸಿ ಮಾರ್ಗಸೂಚಿ ಪ್ರಕಟಿಸಲಾಗುವುದು  ಎಂದು ಪೋಖ್ರಿಯಾಲ್‌ ಹೇಳಿದ್ದಾರೆ. ಶಾಲಾ ಶಿಕ್ಷಣದ ಬಗ್ಗೆ ರಾಜ್ಯ ಸರ್ಕಾರಗಳ ಅಭಿಮತ ಸಂಗ್ರಹಿಸಲಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರ ಸುರಕ್ಷೆಯೇ ನಮ್ಮ ಆದ್ಯತೆ ಎಂದು ಅವರು ತಿಳಿಸಿದ್ದಾರೆ. 

ಹಂತ ಹಂತವಾಗಿ ತರಗತಿಗಳನ್ನು ಆರಂಭಿಸಬೇಕು, ಹಾಜರಾತಿಯನ್ನು ಕಡ್ಡಾಯ ಮಾಡಬಾರದು ಮತ್ತು ದಿನ ಬಿಟ್ಟು ದಿನ ವಿದ್ಯಾರ್ಥಿಗಳು ಶಾಲೆಗೆ ಬರುವ ವ್ಯವಸ್ಥೆ ಮಾಡಬೇಕು ಎಂಬುದು ರಾಜ್ಯಗಳಿಂದ ಬಂದ ಮುಖ್ಯ ಸಲಹೆಗಳಾಗಿವೆ.

ಸರ್ಕಾರಿ ಶಾಲೆಗಳಲ್ಲಿ ಹಲವನ್ನು ಕೋವಿಡ್‌ ಕೇಂದ್ರಗಳು ಮತ್ತು ವಲಸೆ ಕಾರ್ಮಿಕರ ಆಶ್ರಯ ಶಿಬಿರಗಳಾಗಿ ಪರಿವರ್ತಿಸಲಾಗಿದೆ. ಹಾಗಾಗಿ ಇವು ಸದ್ಯಕ್ಕೆ ತರಗತಿ ಆರಂಭಿಸಲು ಲಭ್ಯವಾಗುವುದಿಲ್ಲ ಎಂಬ ವಿಚಾರವೂ ಇದೆ. 

**
ಶಾಲಾ ಶಿಕ್ಷಣದ ಬಗ್ಗೆ ರಾಜ್ಯ ಸರ್ಕಾರಗಳ ಅಭಿಮತ ಸಂಗ್ರಹಿಸಲಾಗಿದೆ. ವಿದ್ಯಾರ್ಥಿಗಳು, ಶಿಕ್ಷಕರ ಸುರಕ್ಷೆಯೇ ನಮ್ಮ ಆದ್ಯತೆ.
-ರಮೇಶ್‌ ನಿಶಾಂಕ್‌ ಪೋಖ್ರಿಯಾಲ್, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು