ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಸಭಾ ಚುನಾವಣೆಗೆ ಉತ್ಸಾಹದ ಹೆಜ್ಜೆ: ಸೋನಿಯಾ

ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯಲ್ಲಿ ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ
Last Updated 13 ಫೆಬ್ರುವರಿ 2019, 12:39 IST
ಅಕ್ಷರ ಗಾತ್ರ

ನವದೆಹಲಿ: ದರ್ಪ, ಸೊಕ್ಕು ಮತ್ತು ಬೆದರಿಕೆಗಳೇ ಮೋದಿ ಸರ್ಕಾರದ ಸಿದ್ಧಾಂತಗಳು ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಆರೋಪಿಸಿದ್ದಾರೆ.

ಕಾಂಗ್ರೆಸ್ ಸಂಸದೀಯ ಪಕ್ಷದ ಸಾಮಾನ್ಯ ಸಭೆ ಉದ್ದೇಶಿಸಿ ಬುಧವರ ಮಾತನಾಡಿದ ಅವರು, ಎದುರಾಳಿಗಳಿಗೆ ತಕ್ಕ ಪ್ರತ್ಯುತ್ತರ ನೀಡುತ್ತಿರುವ ರಾಹುಲ್ ಗಾಂಧಿಯನ್ನು ಪ್ರಶಂಸಿಸಿದರು.

ಕೇಂದ್ರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಸೋನಿಯಾ, ದೇಶದೆಲ್ಲೆಡೆ ಭೀತಿ ಹಾಗೂ ಕಲಹದ ವಾತಾವರಣ ಇದೆ ಎಂದಿದ್ದಾರೆ.

‘ಮುಂಬರುವ ಲೋಕಸಭಾ ಚುನಾವಣೆಗಳಿಗೆ ಹೊಸ ಉತ್ಸಾಹದಿಂದ ಹೋಗುತ್ತಿದ್ದೇವೆ. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸಗಡ ವಿಧಾನಸಭಾ ಚುನಾವಣೆಗಳು ನಮಗೆ ಹೊಸ ಭರವಸೆ ನೀಡಿವೆ’ ಎಂದು ಸೋನಿಯಾ ಹೇಳಿದ್ದಾರೆ.

‘ನಮ್ಮ ಪ್ರಜಾಪ್ರಭುತ್ವ ಹಾಗೂ ಜಾತ್ಯತೀತ ಗಣತಂತ್ರದ ಅಡಿಪಾಯಗಳು ಮೋದಿ ಅವರ ನೀತಿಯಿಂದ ವ್ಯವಸ್ಥಿತ ದಾಳಿಗೊಳಗಾಗುತ್ತಿವೆ’ ಎಂದು ಆರೋಪಿಸಿದ್ದಾರೆ.

ಸಾಂಸ್ಥಿಕ ವ್ಯವಸ್ಥೆಗಳನ್ನು ಹಾಳುಗೆಡವಲಾಗಿದೆ. ರಾಜಕೀಯ ಪ್ರತಿಸ್ಪರ್ಧಿಗಳನ್ನು ವಿಚಾರಣೆ ಹೆಸರಲ್ಲಿ ಹಣಿಯಲಾಗುತ್ತಿದೆ. ವಾಕ್‌ ಸ್ವಾತಂತ್ರ್ಯದ ದನಿಯನ್ನೂ ಮೌನವಾಗಿಸಲಾಗುತ್ತಿದೆ ಎಂದು ಅವರು ದೂರಿದರು.

‘ಮೋದಿ ಆಡಳಿತದಲ್ಲಿ ಸ್ಥಾಯಿ ಸಮಿತಿಗಳು ತಮ್ಮ ರೂಪ ಕಳೆದುಕೊಂಡವು. ಹಣಕಾಸು ಮಸೂದೆಯು ಸದನಗಳಲ್ಲಿ ಕಾನೂನುಬದ್ಧವಾಗಿ ಪರಿಶೀಲನೆಗೊಳಪಡದೇ ಅಂಗೀಕಾರ ಗಿಟ್ಟಿಸಿತು’ ಎಂದು ಸೋನಿಯಾ ಆರೋಪಿಸಿದ್ದಾರೆ.

‘ಜನರನ್ನು ದಾರಿತಪ್ಪಿಸಿ, ಮೋಸ ಹಾಗೂ ಅಪ್ರಾಮಾಣಿಕತೆಯಿಂದ ಜನಾದೇಶ ಪಡೆಯಲಾಗಿದೆ. ತಡವಾಗಿಯಾದರೂ ಮುಖವಾಡ ಬಯಲಾಗುವುದು ಖಚಿತ’ ಎಂದರು.

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್, ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಜ್ಯಸಭೆಯಲ್ಲಿ ಕಾಂಗ್ರೆಸ್ ನಾಯಕ ಗುಲಾಂನಬಿ ಆಜಾದ್ ಅವರು ಸಭೆಯಲ್ಲಿ ಇದ್ದರು.

ಮಗನಿಗೆ ಶಹಬ್ಬಾಸ್‌ಗಿರಿ

ಪಕ್ಷದ ಸಭೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ‘ಅಧ್ಯಕ್ಷರಾಗಿ ರಾಹುಲ್‌ ಗಾಂಧಿ ಅವರು ಪಕ್ಷಕ್ಕೆ ಹೊಸ ಹುರುಪು ತಂದಿದ್ದಾರೆ’ ಎಂದು ಹೊಗಳಿದರು.

‘ಅಜೇಯರು ಎಂದು ಮೊದಲು ತಮ್ಮನ್ನು ಬಿಂಬಿಸಿಕೊಂಡಿದ್ದ ಎದುರಾಳಿಗಳನ್ನು ರಾಹುಲ್ ದಿಟ್ಟತನದಿಂದ ಎದುರಿಸಿದ್ದಾರೆ. ಲಕ್ಷಾಂತರ ಕಾರ್ಯಕರ್ತರನ್ನು ಸಜ್ಜುಗೊಳಿಸಿ, ಅವರಲ್ಲಿ ಸ್ಫೂರ್ತಿ ತುಂಬಿದ್ದಾರೆ’ ಎಂದು ಸೋನಿಯಾ ಶ್ಲಾಘಿಸಿದರು.

‘ರಾಹುಲ್ ಪಕ್ಷದಕ್ಕಾಗಿ ದಣಿವರಿಯದೇ ದುಡಿದಿದ್ದಾರೆ. ಎಲ್ಲ ರಾಜಕೀಯ ಪಕ್ಷಗಳನ್ನೂ ತಲುಪುವ ಯತ್ನವನ್ನು ಅವರು ಮಾಡಿದ್ದಾರೆ. ಕ್ಷಿಪ್ರ ಆರ್ಥಿಕ ಪ್ರಗತಿ, ಸಂಪೂರ್ಣ ಸಾಮಾಜಿಕ ನ್ಯಾಯ, ರೈತರ ಅಭ್ಯುದಯ, ಯುವಜನತೆ, ಕಾರ್ಮಿಕರು, ಮಹಿಳೆಯರ ಏಳಿಗೆ ಕುರಿತಂತೆಇತರ ಪಕ್ಷಗಳ ಜತೆ ನಮ್ಮ ದೃಷ್ಟಿಕೋನವನ್ನು ಅವರು ಹಂಚಿಕೊಂಡಿದ್ದಾರೆ’ ಎಂದು ಹೇಳಿದ್ದಾರೆ.

ಬೆಂಬಲಿಸಿದವರಿಗೆ ರಾಹುಲ್ ಧನ್ಯವಾದ

‘ಸಂಸತ್ ಅವಧಿಯ ಅಂತಿಮ ಘಟ್ಟದಲ್ಲಿ ನಾವಿದ್ದೇವೆ. ಸಂಸತ್ತಿನಲ್ಲಿ ಇಷ್ಟುದಿನ ನನ್ನ ಜೊತೆ ಬೆಂಬಲವಾಗಿ ನಿಂತ ಪಕ್ಷದ ಸದಸ್ಯರಿಗೆ ನಾನು ಅಭಾರಿ. ಅವರ ಕಠಿಣ ಪರಿಶ್ರಮ ಹಾಗೂ ಸಮರ್ಪಣೆಗೆ ಧನ್ಯವಾದ’ ಎಂದು ರಾಹುಲ್ ಫೇಸ್‌ಬುಕ್‌ನಲ್ಲಿ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT