ಮಂಗಳವಾರ, ಮೇ 18, 2021
28 °C
ಆರೋಗ್ಯ ಮೂಲಸೌಲಭ್ಯ ಹೆಚ್ಚಿಸಿಕೊಳ್ಳಲು ರಾಜ್ಯಗಳಿಗೆ ಕೇಂದ್ರದ ಸಂಪುಟ ಕಾರ್ಯದರ್ಶಿ ಸಲಹೆ

ನಾಲ್ಕು ರಾಜ್ಯಗಳಲ್ಲಿ ಕೊರೊನಾ ಸೋಂಕು ಹೆಚ್ಚಳ: ಒಂದೇ ದಿನ 1,975 ಮಂದಿಗೆ ಸೋಂಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಲಾಕ್‌ಡೌನ್ ಇದ್ದರೂ ಮಹಾರಾಷ್ಟ್ರ, ಗುಜರಾತ್‌, ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕೋವಿಡ್‌–19 ಸೋಂಕಿತರ ಸಂಖ್ಯೆಯು ಹೆಚ್ಚುತ್ತಿರುವುದು ಆತಂಕ ಮೂಡಿಸಿದೆ.

ಶನಿವಾರ 1,975 ಮಂದಿಗೆ ಹೊಸದಾಗಿ ಸೋಂಕು ತಗುಲಿದೆ. ಒಂದೇ ದಿನ ಇಷ್ಟೊಂದು ಜನರು ಸೋಂಕಿತರಾಗಿರುವುದು ಇದೇ ಮೊದಲು. ಹಿಂದೆ ಏ. 24ರಂದು ಒಂದೇದಿನ 1,752 ಮಂದಿ ಸೋಂಕಿಗೆ ಒಳಗಾಗಿದ್ದರು.

ದೇಶವು ಲಾಕ್‌ಡೌನ್‌ನ ಕೊನೆಯ ಹಂತದಲ್ಲಿದೆ. ಶನಿವಾರದಿಂದ ಜಾರಿಯಾಗುವಂತೆ ವಸತಿ ಸಂಕೀರ್ಣದಲ್ಲಿರುವ ಮತ್ತು ಪ್ರತ್ಯೇಕವಾಗಿರುವ ಅಂಗಡಿಗಳಿಗೂ ಇದರಿಂದ ವಿನಾಯಿತಿ ನೀಡಲಾಗಿದೆ. ಸೋಂಕು ಹಬ್ಬುವ ಪ್ರಮಾಣ ಕೆಲವು ರಾಜ್ಯಗಳಲ್ಲಿ ನಿಯಂತ್ರಣಕ್ಕೆ ಬಾರದಿರುವುದರಿಂದ ಮೇ 3ರಂದು ಲಾಕ್‌ಡೌನ್‌ ಅನ್ನು ಕೊನೆಗೊಳಿಸುವುದು ಸರಿಯೇ ಎಂಬ ಪ್ರಶ್ನೆ ಉದ್ಭವಿಸಿದೆ.

ವಿವಿಧ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜತೆ ಭಾನುವಾರ ಕೇಂದ್ರದ ಸಂಪುಟ ಕಾರ್ಯದರ್ಶಿ ರಾಜೀವ್‌ ಗೌಬ ಅವರು ವಿಡಿಯೊ ಸಂವಾದ ನಡೆಸಿದ್ದಾರೆ. ಲಾಕ್‌ಡೌನ್‌ ಅನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಮತ್ತು ಐಸಿಯು ಬೆಡ್‌, ವೆಂಟಿಲೇಟರ್‌ಗಳ ಸಂಖ್ಯೆ ಹೆಚ್ಚಿಸುವುದೂ ಸೇರಿದಂತೆ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸುವಂತೆ ಅವರು ಸಲಹೆ ನೀಡಿದ್ದಾರೆ.

ಕಳೆದ 24 ಗಂಟೆಗಳ ಅವಧಿಯಲ್ಲಿ ಕೋವಿಡ್‌–19ಕ್ಕೆ ದೇಶದಾದ್ಯಂತ 45 ಮಂದಿ ಮೃತಪಟ್ಟಿದ್ದಾರೆ ಎಂದು ಕೇಂದ್ರದ ಆರೋಗ್ಯ ಇಲಾಖೆ ತಿಳಿಸಿದೆ. ದೇಶದಲ್ಲಿ ಸೋಂಕು ದೃಢಪಟ್ಟವರ ಒಟ್ಟು ಸಂಖ್ಯೆಯು 19,917ಕ್ಕೆ ಏರಿದ್ದು, 5,914 ಮಂದಿ ಗುಣಮುಖರಾಗಿದ್ದಾರೆ. ಸತ್ತವರ ಸಂಖ್ಯೆಯು 826ಕ್ಕೆ ತಲುಪಿದೆ ಎಂದು ಇಲಾಖೆ ತಿಳಿಸಿದೆ. ಆದರೆ ಬೇರೆಬೇರೆ ರಾಜ್ಯಗಳಿಂದ ಲಭ್ಯವಾಗಿರುವ ಸಂಖ್ಯೆಗಳ ಪ್ರಕಾರ,
ಒಟ್ಟಾರೆ ಸೋಂಕಿತರ ಸಂಖ್ಯೆ 26,917 ಆಗಿದೆ.

ಶನಿವಾರದ ನಂತರ ವರದಿಯಾಗಿರುವ 45 ಸಾವುಗಳಲ್ಲಿ 22 ಮಂದಿ ಮಹಾರಾಷ್ಟ್ರದವರಾಗಿದ್ದಾರೆ. ಮಧ್ಯಪ್ರದೇಶದ 7 ಮಂದಿ, ಗುಜರಾತ್‌, ರಾಜಸ್ಥಾನದಲ್ಲಿ ತಲಾ ಆರು ಮಂದಿ ಮೃತಪಟ್ಟಿದ್ದಾರೆ. ಸೋಂಕು ದೃಢಪಟ್ಟವರ ಸಂಖ್ಯೆಯಲ್ಲೂ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ರಾಜ್ಯದಲ್ಲಿ 7,628 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಗುಜರಾತ್‌, ರಾಜಸ್ಥಾನ, ಮಧ್ಯಪ್ರದೇಶ, ಉತ್ತರಪ್ರದೇಶ, ತಮಿಳುನಾಡು, ಆಂಧ್ರಪ್ರದೇಶ ಕ್ರಮವಾಗಿ ನಂತರದ ಸ್ಥಾನಗಳಲ್ಲಿವೆ.

ಪರಿಶೀಲಿಸಿ ನಿರ್ಧಾರ: ಉದ್ಧವ್‌ ಠಾಕ್ರೆ
ಮುಂಬೈ:
‘ಪರಿಸ್ಥಿತಿಯ ಅವಲೋಕನ ನಡೆಸಿ ಮಹಾರಾಷ್ಟ್ರದಲ್ಲಿ ಲಾಕ್‌ಡೌನ್‌ ಅವಧಿಯನ್ನು ಮೇ 3ರ ನಂತರವೂ ವಿಸ್ತರಿಸಬೇಕೇ ಎಂಬ ಬಗ್ಗೆ 30ರಂದು ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹೇಳಿದ್ದಾರೆ.

‘ರಾಜ್ಯದಲ್ಲಿ ಸಿಲುಕಿಕೊಂಡಿರುವ ವಲಸೆ ಕಾರ್ಮಿಕರಿಗೆ ತಮ್ಮ ಊರಿಗೆ ಮರಳಲು ಅಗತ್ಯ ವ್ಯವಸ್ಥೆ ಮಾಡಲಾಗುವುದು. ಆದರೆ, ರೈಲು ಸಂಚಾರವನ್ನು ಸದ್ಯಕ್ಕೆ ಆರಂಭಿಸುವುದಿಲ್ಲ’ ಎಂದು ಅವರು ಹೇಳಿದ್ದಾರೆ.

‘ರೈಲು ಸೇವೆ ಆರಂಭಿಸಿದರೆ ಜನರು ಗುಂಪು ಸೇರುತ್ತಾರೆ. ಈ ಹಂತದಲ್ಲಿ ಅದಕ್ಕೆ ಅವಕಾಶ ನೀಡಿದರೆ ಅಪಾಯವನ್ನು ಆಹ್ವಾನಿಸಿದಂತಾಗುತ್ತದೆ. ವಲಸೆ ಕಾರ್ಮಿಕರನ್ನು ವಾಪಸ್‌ ಕಳುಹಿಸುವ ವಿಚಾರವಾಗಿ ಇತರ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ಮಾತುಕತೆ ನಡೆಸುತ್ತಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

ನಿರ್ಧಾರ ಹಿಂತೆಗೆತ: ರಾಜ್ಯದ ನಾಲ್ಕು ನಗರಗಳಲ್ಲಿ ಲಾಕ್‌ಡೌನ್‌ಗೆ ನೀಡಿದ್ದ ಸಡಿಲಿಕೆಯನ್ನು ಗುಜರಾತ್‌ ಸರ್ಕಾರವು ಭಾನುವಾರ ಹಿಂತೆಗೆದುಕೊಂಡಿದೆ.

ಕೇಂದ್ರ ಸರ್ಕಾರದ ಸೂಚನೆಯಂತೆ ಗುಜರಾತ್‌ ಸರ್ಕಾರವು ವಸತಿಸಂಕೀರ್ಣಗಳಲ್ಲಿ ಪ್ರತ್ಯೇಕವಾಗಿ ಇರುವ ಅಂಗಡಿಗಳನ್ನು ತೆರೆಯಲು ಅವಕಾಶ ನೀಡಿತ್ತು. ಆದರೆ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆಯೇ ಅಹಮದಾಬಾದ್‌, ವಡೋದರಾ, ಸೂರತ್‌ ಹಾಗೂ ರಾಜ್‌ಕೋಟ್‌ ನಗರಗಳಲ್ಲಿ ನೀಡಿದ್ದ ಸಡಿಲಿಕೆಯನ್ನು ಹಿಂತೆಗೆದುಕೊಳ್ಳಲಾಗಿದೆ. ಮೇ 3ರವರೆಗೂ ಈ ನಗರಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್‌ ಜಾರಿಯಲ್ಲಿರುತ್ತದೆ ಎಂದು ಸರ್ಕಾರ ಹೇಳಿದೆ.

ನಿವೃತ್ತಿ ವಯಸ್ಸು ಇಳಿಕೆ ಇಲ್ಲ

* ಕೇಂದ್ರ ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಇಳಿಸುವ ಯಾವುದೇ ಪ್ರಸ್ತಾವ ಇಲ್ಲ: ಸಚಿವ ಜಿತೇಂದ್ರ ಸಿಂಗ್‌ ಹೇಳಿಕೆ

* ರಾಜ್ಯಕ್ಕೆ ಮರಳಲು ಇಚ್ಛಿಸುವ ಎನ್‌ಆರ್‌ಐಗಳ ಆನ್‌ಲೈನ್‌ ನೋಂದಣಿ (www.norkaroots.org) ಪ್ರಕ್ರಿಯೆಗೆ ಕೇರಳ ಚಾಲನೆ

* ಬೇರೆ ರಾಜ್ಯಗಳಲ್ಲಿರುವ ಕೇರಳ ಮೂಲದವರ ನೋಂದಣಿಗೆ ಶೀಘ್ರ ಚಾಲನೆ

* ನೋಂದಣಿ ಮಾಡಿರುವವರ ಸಂಖ್ಯೆ ಆಧಾರದ ಮೇಲೆ ಕ್ವಾರಂಟೈನ್‌ ಕೇಂದ್ರ ಸ್ಥಾಪನೆ: ಆರೋಗ್ಯ ಸಚಿವೆ .ಕೆ.ಶೈಲಜಾ

* ಸೋಂಕಿತರ ಸಂಖ್ಯೆ ಸಾವಿರ ತಲುಪಿದ ಎಂಟನೇ ರಾಜ್ಯ ಆಂಧ್ರಪ್ರದೇಶ, ಒಂಬತ್ತನೇ ರಾಜ್ಯ ತೆಲಂಗಾಣ

* ಮುಂಬೈ ನಗರದಲ್ಲಿ ಮೃತಪಟ್ಟವರ ಸಂಖ್ಯೆ 204ಕ್ಕೆ ಏರಿಕೆ

* ದೇಶದ 64 ಜಿಲ್ಲೆಗಳಲ್ಲಿ 7 ದಿನಗಳಿಂದ ಹೊಸ ಪ್ರಕರಣಗಳು ದಾಖಲಾಗಿಲ್ಲ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು