ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಾರಾವಿಯಲ್ಲಿ ಕೊರೊನಾ ಸೋಂಕಿಗೆ ವ್ಯಕ್ತಿ ಸಾವು: ಮುಂಬೈನಲ್ಲಿ ಸೋಂಕು ಹರಡುವ ಭೀತಿ

Last Updated 2 ಏಪ್ರಿಲ್ 2020, 10:17 IST
ಅಕ್ಷರ ಗಾತ್ರ
ADVERTISEMENT
""
""

ಮುಂಬೈ: ಧಾರಾವಿ ಕೊಳಗೇರಿಯಲ್ಲಿ ಕೊರೊನಾ ವೈರಸ್ ಸೋಂಕಿನಿಂದ ವ್ಯಕ್ತಿಯೊಬ್ಬ ಮೃತಪಟ್ಟು, ಮತ್ತೊಬ್ಬರಲ್ಲಿ ಸೋಂಕು ಪತ್ತೆಯಾದಹಿನ್ನೆಲೆಯಲ್ಲಿ ಕೋವಿಡ್-19 ಸಮುದಾಯಗಳಿಗೆ ಹಬ್ಬಬಹುದು ಎಂಬ ಭೀತಿ ವ್ಯಕ್ತವಾಗಿದೆ.

ಮುಂಬೈನ ಅತ್ಯಂತ ಜನದಟ್ಟಣೆಯ ಪ್ರದೇಶ ಮತ್ತು ಏ‍ಷ್ಯಾದ ಅತಿದೊಡ್ಡ ಸ್ಲಂ ಎನಿಸಿದ ಧಾರಾವಿಯಲ್ಲಿ ವ್ಯಕ್ತಿಯೊಬ್ಬರು ಸಾವನ್ನಪ್ಪಿರುವುದು ಮಹಾರಾಷ್ಟ್ರ ಅಧಿಕಾರಿಗಳಲ್ಲಿ ಆತಂಕ ಮೂಡಿಸಿದೆ.ಕೊರೊನಾ ವೈರಸ್‌ ಪಾಸಿಟಿವ್‌ ದೃಢಪಟ್ಟ 56 ವರ್ಷದ ರೋಗಿಯೊಬ್ಬರು ಸಿಯೊನ್ ಆಸ್ಪತ್ರೆಯಲ್ಲಿ ಬುಧವಾರ ಮೃತಪಟ್ಟರು.

'ಈವರೆಗೆ ವೈರಸ್‌ ಹಾವಳಿ ಕೇವಲ ಮೇಲ್ವರ್ಗ ಮತ್ತು ಮೇಲ್ಮಧ್ಯಮ ವರ್ಗದವರಲ್ಲಿ ಮಾತ್ರವೇ ಹೆಚ್ಚಾಗಿ ವರದಿಯಾಗುತ್ತಿತ್ತು. ಇದೀಗ ಸೋಂಕು ಸಮುದಾಯಗಳಿಗೆ ಹಬ್ಬುತ್ತಿರುವುದು ದೃಢಪಟ್ಟಿದೆ. ಜನದಟ್ಟಣೆ ಹೆಚ್ಚಾಗಿರುವ ಧಾರಾವಿಯಂಥ ಕೊಳಗೇರಿಯಲ್ಲಿ ಸೋಂಕು ಪತ್ತೆಯಾಗಿರುವುದು ಆತಂಕದ ವಿಚಾರ' ಎಂದು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್‌ ತೊಪೆ ಪ್ರತಿಕ್ರಿಯಿಸಿದ್ದಾರೆ.

ಧಾರಾವಿಯಲ್ಲಿ ಮೃತಪಟ್ಟ ವ್ಯಕ್ತಿ ವಿದೇಶದಿಂದ ಹಿಂದಿರುಗಿರಲಿಲ್ಲ. ಸ್ಥಳೀಯವಾಗಿ ಬಟ್ಟೆಯಂಗಡಿ ನಡೆಸುತ್ತಿದ್ದರು. ಇದೀಗ ಅಧಿಕಾರಿಗಳು ಅಂಗಡಿ ಸೇರಿದಂತೆ ಇಡೀ ಪ್ರದೇಶವನ್ನು ನಿರ್ಬಂಧಿಸಿದ್ದಾರೆ. 300 ಫ್ಲಾಟ್‌ಗಳು ಇರುವ ಈ ಸ್ಥಳದಲ್ಲಿ 90 ಅಂಗಡಿಗಳು ಇವೆ.

ಸೋಂಕು ತಗಲುವ ಸಾಧ್ಯತೆ ಹೆಚ್ಚು ಇರುವವರನ್ನು ಗುರುತಿಸಿ ಸ್ಟಾಂಪ್ ಹಾಕಲಾಗಿದೆ. ಅವರೆಲ್ಲರಿಗೂ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಲಾಗಿದೆ.

ವಿಶ್ರಾಂತಿ ಪಡೆಯುತ್ತಿರುವ ಮುಂಬೈನ ದುಡಿಯುವ ವರ್ಗ

'ಕಟ್ಟಡದ ನಿವಾಸಿಗಳ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳಿಸಲಾಗಿದೆ. ಎಲ್ಲ ಹಿರಿಯ ನಾಗರಿಕರು ಮತ್ತು ಉಸಿರಾಟ ಸಮಸ್ಯೆ ಎದುರಿಸುತ್ತಿರುವವರನ್ನು ತಪಾಸಣೆಗೆ ಒಳಪಡಿಸಲಾಗಿದೆ. ಮಹಾನಗರ ಪಾಲಿಕೆ ವತಿಯಿಂದ ಎಲ್ಲ ನಿವಾಸಿಗಳಿಗೆ ಆಹಾರ ಮತ್ತು ಪಡಿತರ ಒದಗಿಸಲಾಗುತ್ತಿದೆ' ಎಂದು ವಾರ್ಡ್ ಅಧಿಕಾರಿ ಕಿರಣ್ ದಿಘಾವ್‌ಕರ್ ಹೇಳಿದ್ದಾರೆ.

'ಮಹಾರಾಷ್ಟ್ರ ಸರ್ಕಾರವು 'ತ್ರಿ ಟಿ' (ಟ್ರೇಸಿಂಗ್, ಟೆಸ್ಟಿಂಗ್ ಮತ್ತು ಟ್ರೀಟ್‌ಮೆಂಟ್) ಸೂತ್ರವನ್ನು ಅನುಸರಿಸುತ್ತಿದೆ.ಧಾರಾವಿಯಲ್ಲಿ ಆರೋಗ್ಯ ತಪಾಸಣೆಗಾಗಿ 4000 ಆರೋಗ್ಯ ಕಾರ್ಯಕರ್ತರನ್ನು ನೇಮಿಸಲಾಗಿದೆ. ಸೋಂಕಿತರ ಪತ್ತೆಗಾಗಿ ಆರೋಗ್ಯ ಇಲಾಖೆ ಅವಿರತ ಶ್ರಮಿಸುತ್ತಿದೆ. ಎಂದು ಸಚಿವ ತೊಪೆ ತಿಳಿಸಿದ್ದಾರೆ.

ಮಹಾರಾಷ್ಟ್ರದ ಒಟ್ಟು ಸೋಂಕಿತರ ಪೈಕಿ ಶೇ 80ರಷ್ಟು ಜನರಿಗೆ ವಿದೇಶ ಪ್ರವಾಸದ ಇತಿಹಾಸವಿದೆ. ಉಳಿದವರು ಅವರ ಜೊತೆಗೆ ಒಡನಾಟ ಹೊಂದಿದ್ದವರು. ಅದರೆ ಶೇ 20ರಷ್ಟು ಸೋಂಕಿತರಿಗೆ ಹೇಗೆ ಸೋಂಕು ಬಂತು ಎಂಬುದು ಈವರೆಗೆ ಪತ್ತೆಯಾಗಿಲ್ಲ. ಅದನ್ನು ಶೀಘ್ರ ಪತ್ತೆ ಮಾಡುತ್ತೇವೆ ಎಂದು ಅವರು ಹೇಳಿದರು.

ದೆಹಲಿಯ ನಿಜಾಮುದ್ದೀನ್‌ನಲ್ಲಿ ನಡೆದ ತಬ್ಲಿಗಿ ಜಮಾತ್‌ ಕಾರ್ಯಕ್ರಮದದಲ್ಲಿ ಪಾಲ್ಗೊಂಡಿದ್ದ 449 ಮಂದಿಯನ್ನು ಮುಂಬೈನಲ್ಲಿ ಮತ್ತು 136 ಮಂದಿಯನ್ನು ಪುಣೆಯಲ್ಲಿ ಗುರುತಿಸಲಾಗಿದೆ. ಅವರನ್ನು ನಿಗಾದಲ್ಲಿ ಇರಿಸಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು.

ಬಾಯಾರಿ ನೀರು ಕುಡಿಯುತ್ತಿರುವ ಮುಂಬೈ ಸ್ಲಂ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT